ಚೆನ್ನೈನಲ್ಲಿ ಸಿಗೋದು ಕಾಗೆ ಕಂ ಚಿಕನ್ ಬಿರಿಯಾನಿ!
ಇತ್ತೀಚಿನ ದಿನಗಳಲ್ಲಿ ಅಪರಾಧ ಪ್ರಪಂಚವೆಂಬುದು ನಾನಾ ಸ್ವರೂಪದಲ್ಲಿ ಪೊಲೀಸ್ ಇಲಾಖೆಗೇ ಸವಾಲಾಗಿ ಬೆಳೆದು ನಿಂತಿದೆ. ಇದು ಎಲ್ಲ ಕ್ಷೇತ್ರಗಳನ್ನು ಸುತ್ತುವರೆದು ತಿನ್ನುವ ಆಹಾರವನ್ನೂ ಬಿಡದಂತೆ ವ್ಯಾಪಿಸಿಕೊಂಡಿದೆ. ಇದರಿಂದಾಗಿಯೇ ಈವತ್ತು ಯಾವುದೂ ಕೂಡಾ ವಿಶ್ವಾಸಾರ್ಹತೆ ಉಳಿಸಿಕೊಂಡಿಲ್ಲ. ಅದರಲ್ಲಿಯೂ ಈಮಾಂಸಾಹಾರವಂತೂ ಅತ್ಯಂತ ಅಪಾಯಕಾರಿಯಾಗಿಯೇ ರೂಪಾಂತರಗೊಂಡಿದೆ. ನೀವೊಂದು ಚಿಕನ್ ಬಿರಿಯಾನಿ ಆರ್ಡರ್ ಮಾಡಿದರೆ ಅದನ್ನು ನೆಮ್ಮದಿಯಿಂದ ಚಪ್ಪರಿಸುವ ಯೋಗವನ್ನೂ ಕೂಡಾ ಈ ದಂಧೆಯ ಜಗತ್ತು ಕಿತ್ತುಕೊಂಡಿದೆ. ಯಾಕೆಂದರೆ, ಕೋಳಿ ಮಾಂಸವೆಂದು ನಂಬಿಕೊಂಡ ಆ ಬಿರಿಯಾನಿಯಲ್ಲಿ ನಾಯಿ ನರಿಗಳ ಮಾಂಸ ಮಿಕ್ಸ್ ಆಗಿದ್ದರೂ ಅಚ್ಚರಿ ಪಡುವಂತಿಲ್ಲ!
ಇಂಥಾದ್ದೊಂದು ಅನುಮಾನಕ್ಕೆ ಮತ್ತಷ್ಟು ಪುಷ್ಠಿ ಕೊಡುವಂಥಾ ಪ್ರಕರಣವೊಂದು ತಮಿಳುನಾಡಿನಲ್ಲಿ ನಡೆದಿದೆ. ಅಲ್ಲಿ ಕೋಳಿ ಮಾಂಸದೊಂದಿಗೆ ಕಾಗೆ ಮಾಂಸವನ್ನು ಬೆರೆಸಿ ಮಾರಾಟ ಮಾಡುವ ಇಬ್ಬರು ದಂಧೆಕೋರರನ್ನು ಬಂಧಿಸುವ ಮೂಲಕ ಕಾಗೆ ಮಾಂಸದ ಮಾಫಿಯಾಯಾ ಎಲ್ಲರೂ ಅವಕ್ಕಾಗುವಂತೆ ಜಾಹೀರಾಗಿದೆ. ಹಿಂದಿ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಕಾಗೆ ಬಿರಿಯಾನಿಯೆಂಬುದು ಕಾಮಿಡಿ ಝಲಕ್ಕುಗಳಾಗಿ ಹರಿದಾಡಿದ್ದವು. ಆದರೆ ತಮಿಳುನಾಡಿನಲ್ಲಿ ಅದು ಭಯಾನಕ ದಂಧೆಯಾಗಿ ಕಾಲಾಂತರಗಳಿಂದಲೂ ಚಾಲ್ತಿಯಲ್ಲಿದೆ ಅನ್ನೋದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.
ಇಂಥಾದ್ದೊಂದು ದಂಧೆ ಬಯಲಾಗಿದ್ದು ತಮಿಳುನಾಡಿನ ರಾಮೇಶ್ವರಂನಲ್ಲಿ. ಇಲ್ಲಿನ ಸ್ಥಳೀಯ ದೇವಸ್ಥಾನವೊಂದರಲ್ಲಿ ಕಾಗೆಗಳ ದಂಡಿಗೆ ಆಹಾರ ಹಾಕೋ ಪದ್ಧತಿ ರೂಢಿಯಲ್ಲಿತ್ತು. ಆದರೆ ಕೆಲ ಐನಾತಿ ದಂಧೆಕೋರರು ಭಕ್ತಿಯ ಭಾಗವಾಗಿದ್ದ ಆ ಆಚಾರವನ್ನು ದಂಧೆಗೆ ಬಳಸಿಕೊಳ್ಳುತ್ತಿದ್ದರು. ಮಧ್ಯದೊಂದಿಗೆ ಕೆಲ ರಾಸಾಯನಿಕ ಲೇಪಿತವಾದ ಅಕ್ಕಿಯನ್ನು ಕಾಗೆಗಳಿಗೆ ಹಾಕಿ ಕೊಂದು ಅದನ್ನು ಮಾಂಸ ಮಾಡುವ ಮಾಫಿಯಾ ಒಳಗೊಳಗೇ ಹಲವಾರು ವರ್ಷಗಳಿಂದ ನಡೆಯುತ್ತಾ ಬಂದಿತ್ತು. ಹೀಗೆ ಕಾಗೆಗಳೆಲ್ಲ ಸತ್ತು ಬಿದ್ದು ಅದರ ಸಂತತಿಯೇ ಕಡಿಮೆಯಾಗುತ್ತಿರೋದರಿಂದ ಈ ಬಗ್ಗೆ ಅನುಮಾನಗೊಂಡ ಕೆಲ ಸ್ಥಳೀಯರು ಈ ವಿಚಾರವನ್ನು ಪೊಲೀಸರ ಗಮನಕ್ಕೂ ತಂದಿದ್ದರು.
ಈ ಬಗ್ಗೆ ತನಿಖೆಗಿಳಿದ ಪೊಲೀಸರಿಗೆ ಅಕ್ಕಿಗೆ ಮದ್ದು ಬೆರೆಸಿ ಕಾಗೆಗಳ ಮಾರಣ ಹೋಮ ನಡೆಸುತ್ತಿರೋ ವಿಚಾರ ಅರಿವಿಗೆ ಬಂದಿತ್ತು. ಈ ಬಗ್ಗೆ ಆಳವಾಗಿ ತನಿಖೆ ನಡೆಸಿದಾಗ ಹಾಗೆ ದೇವಸ್ಥಾನದ ಆವರಣದಲ್ಲಿ ಸತ್ತ ಕಾಗೆಗಳೆಲ್ಲ ಚಿಕನ್ನಿನ ನಡುವೆ ಬೆರೆಸಲ್ಪಟ್ಟು ಮಾರಾಟವಾಗುತ್ತಿರೋ ಅಂಶವೂ ಗಮನಕ್ಕೆ ಬಂದಿತ್ತು. ಈ ಸಂಬಂಧವಾಗಿ ಆ ಪ್ರದೇಶದ ಚಿಕನ್ ಸ್ಟಾಲುಗಳ ಮೇಲೆ ಅಧಿಕಾರಿಗಳು ಒಂದು ಕಣ್ಣಿಟ್ಟಿದ್ದರು. ಇತ್ತೀಚೆಗೆ ಕೋಳಿ ಅಂಗಡಿಯಲ್ಲಿ ಕೋಳಿ ಮಾಂಸದೊಂದಿಗೆ ಕಾಗೆ ಮಾಂಸ ಬೆರೆಸಿ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಪೊಲೀಸರ್ ರೆಡ್ಹ್ಯಾಂಡಾಗಿಯೇ ಹಿಡಿದಿದ್ದಾರೆ. ಹಾಗೆ ಅವರು ಮಾರುತ್ತಿದ್ದ ಕಾಗೆ ಮಾಂಸ ಬಿರಿಯಾನಿಗೆ ಬಳಕೆಯಾಗುತ್ತಿತ್ತಂತೆ!
ಈ ಕಾಗೆ ಮಾಂಸವೆಂಬುದೇ ಅಸಹ್ಯವಾಗಿ, ವಿಚಿತ್ರವಾಗಿ ಕಾಣ ಬಹುದು. ಆದರೆ ತಮಿಳುನಾಡಿನ ಚೆನೈ ಮುಂತಾದ ಪ್ರದೇಶಗಳಲ್ಲಿ ದಂಡಿ ದಂಡಿ ಕಾಗೆ ಮಾಂಸ್ ಕೋಳಿ ಮಾಂಸದೊಂದಿಗೆ ಲಕ್ಷಾಂತರ ಮಂದಿಯ ಉದರ ಸೇರಿಸಬಹುದು. ಅಷ್ಟಕ್ಕೂ ಕಾಗೆ ಮಾಂಸ ಮಾರಾಟ ದಂಧೆ ಇಂದು ನಿನ್ನೆಯದ್ದಲ್ಲ. ಅದರ ಮಾಂಸ ತಮಿಳು ನಾಡಿಂದ ಬೇರೆಡೆಗೂ ಸಾಗಿಸಲ್ಪಡುತ್ತಿತ್ತಂತೆ. ಬೇರೆ ಪ್ರದೇಶದಿಂದ ತಮಿಳುನಾಡಿಗೂ ಬರುತ್ತಿತ್ತೆಂಬ ಮಾತಿದೆ. ೨೦೧೮ರಲ್ಲಿ ಚೆನೈನ ರೈಲ್ವೇ ಸ್ಟೇಷನ್ನಿನಲ್ಲಿ ಕೇಜಿಗಟ್ಟಲೆ ಕಾಗೆ ಮಾಂಸವನ್ನು ಪೊಲೀಸರು ಪತ್ತೆಹಚ್ಚಿ ವಶ ಪಡಿಸಿಕೊಂಡಿದ್ದರು. ಅದರ ಮುಂದುವರೆದ ಭಾಗದಂತೆ ರಾಮೇಶ್ವರಂನಲ್ಲಿ ಈ ಪ್ರಕರಣ ನಡೆದಿದೆ.
ತಮಿಳು ನಾಡಿನ ಕಥೆ ಏನೋ ಗೊತ್ತಿಲ್ಲ. ಆದರೆ ಕರ್ನಾಟಕದಲ್ಲಿ ಕಳೆದ ಕೆಲ ವರ್ಷಗಳಿಂದ ಕಾಗೆಗಳ ಸಂತತಿ ಗಣನೀಯವಾಗಿ ಇಳಿಕೆಯಾಗಿದೆ. ಕೆಲ ಪ್ರದೇಶಗಳಲ್ಲಿಯಂತೂ ಹುಡುಕಾಡಿದರೂ ಕಾಗೆಗಳು ಸಿಗುವಂತಿಲ್ಲ. ತೀರಾ ತಿಣುಕಾಡಿದರೂ ಪಿಂಡಪ್ರಧಾನ ಮಾಡೋದಕ್ಕೂ ಕಾಗೆಗಳು ಸಿಗದೆ ಅದೆಷ್ಟೋ ಮಂದಿ ಹೈರಾಣಾಗಿದ್ದಾರೆ. ಈ ಕಾರಣದಿಂದಲೇ ಪಿತೃಪಕ್ಷದಂದು ಪಿಂಡ ತಿನ್ನಲೆಂದೇ ಕಾಗೆಗಳನ್ನು ಬಾಡಿಗೆಗೆ ಬಿಡುವ ಮಂದಿಯೂ ಹುಟ್ಟಿಕೊಂಡಿದ್ದಾರೆ. ಇದೆಲ್ಲವೂ ಕಾಗೆ ಮಾಂಸದ ಮಾಫಿಯಾದ ಪರಿಣಾಮವಾಗಿದ್ದರೂ ಅಚ್ಚರಿಯೇನಿಲ್ಲ!