ಒಂದಷ್ಟು ಹಿಟ್ ಸಿನಿಮಾಗಳ ಮೂಲಕ ಬಾಲಿವುಡ್ಡಿನಲ್ಲಿ ತನ್ನದೇ ಆದ ಸ್ಥಾನವನ್ನು ಭದ್ರಪಡಿಸಿಕೊಂಡಿರುವಾಕೆ ಕಿಯಾರಾ ಅಡ್ವಾಣಿ. ಆಗಾಗ ಪಕ್ಕಾ ಗ್ಲಾಮರಸ್ ಆಗಿ ಕಾಣಿಸಿಕೊಳ್ಳುವ ಕಿಯಾರಾ, ಒಂದೇ ಒಂದು ಕೆಸುವಿನೆಲೆಯನ್ನು ಅಡ್ಡ ಹಿಡಿದುಕೊಂಡು ಬೋಲ್ಡ್ ಆಗಿ ಫೋಟೋ ಶೂಟ್ ಮಾಡಿಸಿಕೊಂಡಿದ್ದೂ ಇದೆ. ಆದರೆ ಸಂದರ್ಶನವೊಂದರಲ್ಲಿ ಆಕೆ ತನ್ನೊಳಗಿನ ಅಸಲೀ ತುಮುಲವನ್ನು ಹೇಳಿಕೊಂಡಿದ್ದಾಳೆ. ತಾನು ಇದುವರೆಗೂ ಹೇಗೇ ಕಾಣಿಸಿಕೊಂಡಿದ್ದರೂ ಕೂಡಾ ಮುಂದಿನ ದಿನಗಳಲ್ಲಿ ಕುಟುಂಬಸ್ಥರೆಲ್ಲ ಒಟ್ಟಿಗೆ ಕೂತು ನೋಡುವ ಚಿತ್ರಗಳೇ ತನ್ನ ಪ್ರಧಾನ ಆದ್ಯತೆ ಎಂದಿದ್ದಾಳೆ.
ಕಿಯಾರಾ ಅಡ್ವಾಣಿ ಈ ಮೂಲಕ ತನ್ನೊಳಗಿನ ಪ್ರೌಢಿಮೆಯನ್ನು ಜಾಹೀರು ಮಾಡಿದ್ದಾಳೆ. ಕೆಲ ನಟಿಯರು ಯಶಸ್ಸು ಸಿಗುತ್ತಲೇ ಲಂಗು ಲಗಾಮಿಲ್ಲದಂತಾಡುತ್ತಾರೆ. ಆದರೆ ಪರಿಪೂರ್ಣ ನಟಿಯರು ಮಾತ್ರ ಕಾಲದ ಜೊತೆಗೆ, ಯಶಸ್ವಿನ ಜೊತೆಗೆ ಮಾಗುತ್ತಾ, ಪಕ್ವವಾಗುತ್ತಾ ಸಾಗುತ್ತಾರೆ. ಕಿಯಾರಾ ಕೂಡಾ ಆ ಹಾದಿಯಲ್ಲಿರುವಂತಿದೆ. ಸಂದರ್ಶನವೊಂದರಲ್ಲಿ ಆಕೆ ಅಂಥಾದ್ದೊಂದು ಸ್ಪಷ್ಟತೆಯೊಂದಿಗೆ ಮಾತಾಡುತ್ತಾ ಅಭಿಮಾನಿಗಳ ಮನ ಗೆದ್ದಿದ್ದಾಳೆ.
ಕಿಯಾರಾ ಅಡ್ವಾಣಿ ಹಾಸ್ಯ ಪ್ರಧಾನ ಚಿತ್ರವಾದ ಫಗ್ಲಿಯ ಮೂಲಕವೇ ಬಾಲಿವುಡ್ಡಿಗೆ ಪ-ಆದಾರ್ಪಣೆ ಮಾಡಿದ್ದಾಕೆ. ಆ ಮೊದಲ ಚಿತ್ರದಲ್ಲಿಯೇ ನಟನಾ ಚಾತುರ್ಯ ತೋರಿಸಿದ್ದ ಕಿಯಾರಾಗೆ ನಂತರದಲ್ಲಿ ಅಚ್ಚರಿದಾಯಕವಾಗಿ ಅವಕಾಶಗಳು ಒದಗಿ ಬರಲಾರಂಭಿಸಿದ್ದವು. ಆ ನಂತರದಲ್ಲಿ ಕ್ರಿಕೆಟಿಗ ಧೋನಿ ಜೀವನಾಧಾರಿತ ಚಿತ್ರದಲ್ಲಿ ಧೋನಿಯ ಮಡದಿಯಾಗಿ ನಟಿಸಿ ಸೈ ಅನ್ನಿಸಿಕೊಂಡಿದ್ದಳು. ಇದೀಗ ಆಕೆಯ ಮುಂದೆ ಹಲವಾರು ಅವಕಾಶಗಳಿದ್ದಾವೆ. ಹೆಚ್ಚಿನ ಮಂದಿ ಕಿಯಾರಾಳನ್ನು ಬೋಲ್ಡ್ ಲುಕ್ಕಿನಲ್ಲಿ ತೋರಿಸಲು ತುದಿಗಾಲಿನಲ್ಲಿ ನಿಂತಿದ್ದರೂ ಆಕೆ ಮಾತ್ರ ತನ್ನ ನಿಲುವನ್ನು ಸ್ಪಷ್ಟಪಡಿಸಿದ್ದಾಳೆ. ಅಂದಹಾಗೆ ಈಕೆಯ ಮೊದಲ ಹೆಸರು ಆಲಿಯಾ ಅಡ್ವಾಣಿ. ಅದಾಗಲೇ ಮತ್ತೊಬ್ಬಳು ಆಲಿಯಾ ಬಾಲಿವುಡ್ಡಿನಲ್ಲಿ ಇದ್ದುದ್ದರಿಂದಲೋ ಏನೋ; ಕಿಯಾರಾ ಅಂತ ಹೆಸರು ಬದಲಿಸಿಕೊಂಡಿದ್ದಳು.