ಈ ಈಶ್ವರಪ್ಪನಿಗೆ ಅದೇಕೋ ವಿವಾದಗಳನ್ನೆಬ್ಬಿಸದಿದ್ದರೆ ಉಂಡ ಅನ್ನ ಅರಗುವುದಿಲ್ಲ ಅನ್ನಿಸುತ್ತೆ. ಬಾಯಿಗೆ ಬಂದದ್ದನ್ನು ಮಾತಾಡುತ್ತಾ ಹರುಕು ಬಾಯಿ ಈಶ್ವರಪ್ಪ ಎಂದೇ ಖ್ಯಾತರಾಗಿರುವ ಸನ್ಮಾನ್ಯರು, ಇತ್ತೀಚೆಗಷ್ಟೇ ಫಾರ್ಟಿ ಪರ್ಸೆಂಟ್ ಕಮಿಷನ್ ತಿಂದ ಆರೋಪದಲ್ಲಿ ಮಂತ್ರಿಗಿರಿ ಕಳಕೊಂಡು ಮನೆ ಸೇರಿದ್ದರು. ಹಾಗೆ ಸುಮ್ಮನೆ ಮನೆಯೊಳಗಿದ್ದರೆ ಜನ ಮರೆಹು ಹೋಗುತ್ತಾರೆಂದೋ, ನಾಲಿಗೆ ಚಪಲವನ್ನು ಹತ್ತಿಕ್ಕಿಕೊಳ್ಳಲಾಗದೆಯೋ ಮತ್ತೊಮ್ಮೆ ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದಾರೆ. ಅದಕ್ಕೆ ಈಗ ಮತ್ತೆ ದಾಳವಾಗಿರೋದು ಭಗವಾಧ್ವಜ. ಈ ಹಿಂದೆ ಭಗವಾಧ್ವಜವೇ ರಾಷ್ಟ್ರದ ಬಾವುಟವಾಗುತ್ತದೆಂದು ಪುಂಗಿಯೂದಿದ್ದ ಈಶ್ವರಪ್ಪ ಇದೀಗ ಮತ್ತದೇ ಮಾತುಗಳನ್ನಾಡಿದ್ದಾರೆ!
ಒಂದಿಲ್ಲೊಂದು ದಿನ ಕೇಸರಿ ಧ್ವಜ ಈ ದೇಶದ ಬಾವುಟವಾಗುತ್ತದೆ. ಅದಕ್ಕೆ ಅದೆಷ್ಟೋ ಶತಮಾನಗಳ ಇಹಿಹಾಸ, ಗೌರವವಿದೆ. ಭವಿಷ್ಯದಲ್ಲಿ ಅದೇ ರಾಷ್ಟ್ರ ಧ್ವಜವಾಗೋದರಲ್ಲಿ ಯಾವ ಸಂದೇಹವೂ ಇಲ್ಲ ಅನ್ನೋದು ಈಶ್ವರಪ್ಪನ ಬಡಬಡಿಕೆಯ ಸಾರಾಂಶ. ಈ ಆಸಾಮಿಗೆ ಅದ್ಯಾವ ದೆವ್ವ ಮೆಟ್ಟಿಕೊಂಡಿದೆಯೋ ಗೊತ್ತಿಲ್ಲ. ಫಾರ್ಟಿ ಪರ್ಸೆಂಟ್ ಕಮೀಷನ್ ದಂಧೆಗೆ ಗುತ್ತಿಗೆದಾರನ ಹೆಣ ಹಾಕಿದ ಗಂಭೀರ ಆರೋಪ ಈತನ ಮೇಲಿದೆ. ಅದಕ್ಕೆಂದೇ ಸಚಿವಗಿರಿ ಕಳೆದುಕೊಂಡಿರುವ ಈಶ್ವರಪ್ಪ ಮಾನ ಮರ್ಯಾದೆಗಳನ್ನೂ ಕಳೆದುಕೊಂಡಿದ್ದಾರೆ.
ಆದರೂ ಕೂಡಾ ತಮ್ಮ ಹಳೇ ಚಾಳಿ ಬಿಟ್ಟಿಲ್ಲ. ಕೋಟ್ಯಂತರ ಭಾರತೀಯರ ಅಭಿಮಾನ ಹೆಮ್ಮೆಯ ಪ್ರತೀಕವಾದ ರಾಷ್ಟ್ರ ಧ್ವಜವನ್ನು ಅವಮಾನಿಸೋದನ್ನು ಈಶ್ವರಪ್ಪ ಯಥಾ ಪ್ರಕಾರವಾಗಿ ಮುಂದುವರೆಸಿದ್ದಾರೆ. ಅಲ್ಲಾ ಸ್ವಾಮಿ, ಈ ನೆಲದ ಬಡ ಬಗ್ಗರು ಬೆಲೆಯೇರಿಕೆಯಿಂದ ಕಂಗಾಲಾಗಿದ್ದಾರೆ. ನಿಮ್ಮದೇ ಬಿಜೆಪಿ ಸರ್ಕಾರ ಜನ ಹಾಕೋ ಕಾಚಾದ ಬೆಲೆಯನ್ನೂ ಏರಿಸಿದ್ದಾರೆ. ಇಂಥಾ ಹೊತ್ತಿನಲ್ಲಿ ಯಾವ ಪುರುಷಾರ್ಥಕ್ಕಾಗಿ ಇಂಥಾ ಭಳಾಂಗು ಮಾತುಗಳನ್ನಾಡುತ್ತೀರಿ ಅಂತ ಜನ ಸಾಮಾನ್ಯರು ಪ್ರಶ್ನಿಸುತ್ತಿದ್ದಾರೆ. ಈಶ್ವರಪ್ಪನಿಗೆ ಉತ್ತರಿಸುವ ವ್ಯವಧಾನವಾಗಲಿ, ನೈತಿಕತೆಯಾಗಲಿ ಇದ್ದಂತಿಲ್ಲ!