ಒಳ್ಳೆಯದ್ದು ಸಂಭವಿಸಿದೆ ಅಂದರೇಕೆ ವರ್ಮಾ?
ಖ್ಯಾತ ನಿರ್ದೇಶಕ ರಾಮ್ಗೋಪಾಲ್ ವರ್ಮಾ ಅನ್ನಿಸಿದ್ದನ್ನು ಯಾವುದೇ ಫಿಲ್ಟರ್ ಇಲ್ಲದೆ ಹೇಳೋದರಲ್ಲಿ ಭಾರೀ ಪ್ರಸಿದ್ಧರು. ಕೆಲವೊಮ್ಮೆ ಅವರ ನೇರವಂತಿಕೆಯ ಮಾತುಗಳು ಬೆಂಕಿ ಹಚ್ಚುತ್ತವೆ. ಮತ್ತೆ ಕೆಲವೊಮ್ಮೆ ಹೊಸಾ ದಿಕ್ಕಿನಲ್ಲಿ ಆಲೋಚನೆಗೆ ಹಚ್ಚುತ್ತವೆ. ಮೇಲು ನೋಟಕ್ಕೆ ಪಕ್ಷಪಾತದಂತೆ ಕಂಡರೂ, ಆಂತರ್ಯದಲ್ಲಿ ಏನೋ ಅಡಗಿರುವಂತೆಯೂ ವರ್ಮಾ ಒಮ್ಮೊಮ್ಮೆ ಮಾತಾಡುತ್ತಾರೆ. ಇದೀಗ ಅವರ ಕಡೆಯಿಂದ ತೂರಿ ಬಂದಿರೋದು ಅಂಥಾದ್ದೇ ಮಾತು. ಅದಕ್ಕೆ ನೆಪವಾಗಿರುವುದು ಶಾರೂಕ್ ಖಾನ್ ಪುತ್ರನಿಗೆ ಡ್ರಗ್ಸ್ ಕೇಸಿನಲ್ಲಿ ಕ್ಲೀನ್ ಚಿಟ್ ಸಿಕ್ಕಿರೋ ವಿಚಾರ.
ಮುಂಬೈನ ಕ್ರೂಸ್ ಡ್ರಗ್ಸ್ ಕೇಸ್ ವಿಚಾರದಲ್ಲಿ ಶಾರೂಖ್ ಖಾನ್ ಪುತ್ರ ಆರ್ಯಾನ್ ಖಾನ್ ಬಂಧಿತನಾಗಿದ್ದ. ಆತನನ್ನು ಬಲೆಗೆ ಕೆಡವಿಕೊಂಡಿದ್ದ ಎನ್ಸಿಬಿ ಅಧಿಕಾರಿಗಳು ನಾನಾ ದಿಕ್ಕಿನಲ್ಲಿ ತಿಂಗಳುಗಟ್ಟಲೆ ತನಿಖೆ ನಡೆಸಿದ್ದರು. ಈ ಹೊತ್ತಿನಲ್ಲಿ ಆರ್ಯಾನ್ ಬಗ್ಗೆ ನಾನಾ ಊಹಾಪೋಹಗಳು, ಅಂತೆಕಂತೆಗಳು ಸರಿದಾಡಿದ್ದವು. ಆದರೀಗ ಆತನಿಗೆ ಕ್ಲೀನ್ ಚಿಟ್ ಸಿಕ್ಕಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ವರ್ಮಾ, ಇದು ಎನ್ಸಿಬಿಯ ಅಸಾಮರ್ಥ್ಯ ಮತ್ತು ವೈಫಲ್ಯವನ್ನು ಸಾರುತ್ತದೆ ಅಂದಿದ್ದಾರೆ.
ಈ ಬಗ್ಗೆ ಟ್ವೀಟ್ ಮೂಲಕ ಪ್ರತಿಕ್ರಿಯಿಸಿರುವ ವರ್ಮಾ ಒಳ್ಳೆಯದ್ದೇ ಸಂಭವಿಸಿದೆ. ಆತನೊಬ್ಬ ಸೆಲೆಬ್ರಿಟಿಯ ಮಗ. ಅದು ಈ ಪ್ರಕರಣದಿಂದ ಕ್ಲೀನ್ ಚಿಟ್ ಪಡೆದುಕೊಂಡು ಹೊರ ಬರಲು ಸಹಾಯವಾಯಿತು. ಆದರೆ ಇಂಥಾ ಪ್ರಕರಣಗಳಲ್ಲಿ ತಗುಲಿಕೊಳ್ಳುವ ಜನ ಸಾಮಾನ್ಯರ ಸ್ಥಿತಿ ಏನು? ಈ ಪ್ರಕರಣ ಮುಗ್ಧ ಜನರನ್ನು ಕಿರುಕುಳಕ್ಕೊಳಪಡಿಸುವಂಥಾ ತನಿಕಾ ಸಂಸ್ಥೆಗಳ ಆಂತರ್ಯವನ್ನು ಜಾಹೀರು ಪಡಿಸುತ್ತದೆ ಎಂದಿದ್ದಾರೆ. ಆರ್ಯನ್ ಖಾನ್ ಶಾರುಖ್ ಖಾನನ ಮಗ. ಅಪ್ಪನ ಪ್ರಭೆ ಆತನನ್ನು ಬಚಾವು ಮಾಡಿರಬಹುದು. ಆದರೆ ಸಾಮಾನ್ಯರ ಮಕ್ಕಳ ಮೇಲೆ ಹೀಗೆ ಗೂಬೆ ಕೂರಿಸಿದರೆ ಗತಿಯೇನೆಂಬ ಬಗ್ಗೆ ದೇಶಾದ್ಯಂತ ಚರ್ಚೆಗಳಾಗುತ್ತಿವೆ.