ಇಡೀ ವಿಶ್ವವೇ ಇದೀಗ ಆಧುನೀಕರಣದತ್ತ ವಾಲಿಕೊಂಡಿದೆ. ಎಲ್ಲರೂ ತಂತಮ್ಮ ಗುರಿಗಳತ್ತ ನಾಗಾಲೋಟ ಆರಂಭಿಸಿರುವ ಈ ದಿನಮಾನದಲ್ಲಿ ಪ್ರಕೃತಿಯ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಯುತ್ತಿದೆ. ಅದೆಷ್ಟೋ ಕಾಡುಗಳು ಮನುಷ್ಯರ ಶೋಕಿಗೆ ಬಲಿಯಾಗಿವೆ. ಯಾವುದೋ ಮತ್ತಿನಲ್ಲಿರುವ ಮಂದಿಗೆ ತಮ್ಮ ನೆಮ್ಮದಿಯಲ್ಲಿ ಕಾಡು, ಮೇಡು, ಪ್ರಕೃತಿಯ ಪಾಲೆಷ್ಟಿದೆ ಎಂಬ ಅರಿವೇ ಇಲ್ಲ. ಹಾಗೆ ನೋಡಿದರೆ ಇಂಥಾ ದೌರ್ಜನ್ಯಕ್ಕೆ ಅದೆಷ್ಟೋ ವರ್ಷಗಳ ಇತಿಹಾಸವಿದೆ. ಇಂಥಾದ್ದರ ನಡುವೆಯೂ ಒಂದಷ್ಟು ಮಂದಿ ಪ್ರಕೃತಿಯೊಂದಿಗೆ ಅವಿನಾಭಾವ ಸಂಬಂಧವಿಟ್ಟುಕೊಂಡಿದ್ದಾರೆ. ಅಂಥಾ ಮನಸುಗಳೇ ವಿಶ್ವದಲ್ಲಿಯೇ ಅತೀ ಹೆಚ್ಚು ವಯಸ್ಸಿನ ಪುರಾತನ ಮರವೊಂದನ್ನು ಪತ್ತೆಹಚ್ಚಿ ಜಗತ್ತಿಗೆ ಪರಿಚಯಿಸಿದ್ದಾರೆ.
ಹೀಗೆ ವಿಶ್ವದಲ್ಲಿಯೇ ಅತ್ಯಂತ ಹಿರಿಯ ಮರವಾಗಿ ಗುರುತಿಸಿಕೊಂಡಿರುವ ಈ ಮರ ದೂರದ ಚಿಲಿ ದೇಶದಲ್ಲಿದೆ. ಈ ಹಳೇ ಮರವನ್ನು ಆಲರ್ಸ್ ಪ್ರಬೇಧದ್ದೆಂದು ಗುರುತಿಸಲಾಗಿದೆ. ಇದರ ವಯಸ್ಸು ಸರಿಸುಮಾರು ೫.೫೦೦ ವರ್ಷವೆಂದು ತಜ್ಞರು ಗುರುತಿಸಿದ್ದಾರೆ. ಈ ಮರ ಫಿಟ್ರೋಝಾ ಎಂಬ ಪ್ರಬೇಧಕ್ಕೆ ಸೇರಿದ ಸಸ್ಯ ಸಂಕುಲದ್ದು. ಈ ಜಾತಿಯ ಮರಗಳು ಅತೀ ಹೆಚ್ಚು ವರ್ಷಗಳ ಕಾಲ ಬದುಕುವ ಗುಣ ಹೊಂದಿದೆಯಂತೆ.
ಇಂಥಾ ಮರಗಳು ಸಮಶೀತೋಷ್ಣ ಮಳೆಕಾಡುಗಳ ಗರ್ಭದಲ್ಲಿ ಕಂಡು ಬರುತ್ತವಂತೆ. ಸದ್ಯಕ್ಕೆ ಚಿಲಿಯ ಕಾಡುಗಳಲ್ಲಿಯೂ ಇದರ ಅಸ್ತಿತ್ವ ಇದೆ. ಇಂಥಾ ಮರಗಳನ್ನು ಅದರ ತಿರುಳನ್ನಾಧರಿಸಿ ಪತ್ತೆಹಚ್ಚಲಾಗುತ್ತದೆ. ತಿರುಳಿನ ವೃತ್ತಗಳ ಆಧಾರದಲ್ಲಿ ವಯಸ್ಸನ್ನು ಅಳೆಯಲಾಗುತ್ತದೆ. ಆದರೆ ಇದರ ಕಾಂಡ ಬೃಹದಾಕಾರವಾಗಿರುವುದರಿಂದ ಬೇರೆ ಮಾದರಿಯಲ್ಲಿ ತಜ್ಞರು ವಯಸ್ಸನ್ನು ಅಂದಾಜಿಸಿದ್ದಾರೆ. ಇದುವರೆಗೆ ಕ್ಯಾಲಿಫೋರ್ನಿಯಾದ ಬ್ರಿಸ್ಟಲ್ ಕೋನ್ ಎಂಬ ಪ್ರಬೇಧದ ಮರವೇ ಹಳೆಯದೆಂದು ಹೇಳಲಾಗಿತ್ತು. ಆದರೆ ಚಿಲಿಯ ಈ ಮರ ಆದಾಖಲೆಯನ್ನು ಮುರಿದು ಸುದ್ದಿ ಮಾಡಿದೆ.