ತಾಯಿಯನ್ನು ದೇವರೆಂದೇ ಆರಾಧಿಸಿ, ಗೌರವಿಸುವಂಥಾ ಸಂಪ್ರದಾಯ ನಮ್ಮೆಲ್ಲದ ಜೀವನಕ್ರಮದಲ್ಲಿಯೇ ಅಡಗಿದೆ. ಅಮ್ಮನ ಬಗ್ಗೆ ಅಂಥಾದ್ದೊಂದು ಪ್ರೀತಿ ಪ್ರತಿಯೊಬ್ಬರಿಗೂ ಇದ್ದೇ ಇರುತ್ತೆ. ಅದರ ನಡುವಲ್ಲಿಯೇ ಹೆತ್ತಮ್ಮನನ್ನು ಬೀದಿಯಲ್ಲಿ ಬಿಟ್ಟು ಹೋಗುವ ಮಕ್ಕಳಿದ್ದಾರೆ. ಕನಿಷ್ಠ ಗೌರವವನ್ನೂ ಕೊಡದಂತೆ ಹೀನಾಯವಾಗಿ ನಡೆಸಿಕೊಳ್ಳುವವರಿದ್ದಾರೆ. ಇಂಥವರ ಸಾಲಿಗೆ ಸೇರುವ ರಕ್ಕಸನೋರ್ವ ಎಂಥವರೂ ಬೆಚ್ಚಿ ಬೀಳುವಂಥಾದ್ದೊಂದು ಕೃತ್ಯವೆಸಗಿದ್ದಾನೆ. ಸಣ್ಣ ಪುಟ್ಟದಕ್ಕೂ ತಾಯಿಯೊಂದಿಗೆ ತಗಾದೆ ತೆಗೆದು ಜಗಳ ಮಾಡುತ್ತಿದ್ದ ಮಗನೋರ್ವ ಮೊನ್ನೆದಿನ ಹಲಗೆಯಿಂದ ಹೊಡೆದು ಕೊಂದು ಬಿಟ್ಟಿದ್ದಾನೆ.
ಇಂಥಾದ್ದೊಂದು ರಾಕ್ಷಸೀಯ ಕೃತ್ಯ ನಡೆದಿರೋದು ಒಡಿಶಾದ ಕಂದಮಾಲ್ ಜಿಲ್ಲೆಯಲ್ಲಿ. ಮೂವತ್ತು ವರ್ಷ ವಯಸ್ಸಿನ ಜಿತೇಂದ್ರ ಕನರ್ ಎಂಬಾತ ಇಂಥಾದ್ದೊಂದು ಬೀಭತ್ಸ ಕೃತ್ಯವನ್ನೆಸಗಿದ್ದಾನೆ. ಆ ತಾಯಿ ಬಹಳಷ್ಟು ಕಷ್ಟ ಪಟ್ಟು ಮಗನನ್ನು ಬೆಳೆಸಿದ್ದಳು. ಗಂಡ ವರ್ಷಾಂತರಗಳ ಹಿಂದೆಯೇ ತೀರಿಕೊಂಡು ಬದುಕಿಗೆ ಆಸರೆ ಇಲ್ಲದಿದ್ದಾಗಲೂ ತನ್ನ ಮಗನಿಗಾಗಿ ಜೀವವಿಟ್ಟುಕೊಂಡಿದ್ದ ಮಹಾ ತಾಯಿ ಆಕೆ. ಆದರೆ ಮಗ ಮಾತ್ರ ಸಣ್ಣ ವಯಸ್ಸಿನಲ್ಲಿಯೇ ಹಾದಿ ಬಿಟ್ಟಿದ್ದ. ಕುಡಿತದ ಚಟವನ್ನೂ ಆರಂಭಿಸಿದ್ದ. ಹಾಗೆ ಕುಡಿದು ಬಂದನೆಂದರೆ ಬಡಪಾಯಿ ತಾಯಿಗೆ ಕಾಟ ಖಾಯಂ ಎಂಬಂತಿತ್ತು.
ಅಷ್ಟಕ್ಕೂ ತಾಯಿಗೆ ಕಾಟ ಕೊಡಲೇನು ಘನಂಧಾರಿ ಕಾರಣವೇ ಬೇಕಿರಲಿಲ್ಲ. ದಿನಾ ಒಂದಿಲ್ಲೊಂದು ರೀತಿಯಲ್ಲಿ ಕಾಟ ಕೊಡುತ್ತಿದ್ದ ಪಾಪಿ ಮಗ ಇತ್ತೀಚೆಗೆ ಕಂಠಮಟ್ಟು ಕುಡಿದು ಬಂದಿದ್ದಾನೆ. ಸುಖಾ ಸುಮ್ಮನೆ ರೊಳ್ಳೆ ತೆಗೆದರೂ ಪಾಪದ ತಾಯಿ ಮಾತ್ರ ಸುಮ್ಮನಿದ್ದಳು. ಆದರೂ ಅದೇಕೋ ಸೈಕೋನಂತಾಡಿದ ಮಗ ವಿನಾ ಕಾರಣ ಅಮ್ಮನನ್ನು ಎಳೆದಾಡಿದ್ದಾನೆ. ನಂತರ ಕೈಗೆ ಸಿಕ್ಕ ಹಲಗೆಯೊಂದರಿಂದ ತಲೆಗೆ ಹೊಡೆದಿದ್ದಾನೆ. ಅರವತ್ತೊಂದು ವರ್ಷದ ಅಮ್ಮ ಸ್ಥಳದಲ್ಲಿಯೇ ಅಸುನೀಗಿದ್ದಾಳೆ. ಇಂಥಾದ್ದೊಂದು ಪಾಪ ಕೃತ್ಯವೆಸಗಿದ ಮಗನನ್ನು ಪೊಲೀಸರು ಬಂಧಿಸಿದ್ದಾರೆ. ಆತನಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.