ಚಿತ್ರೀಕರಣ ಮುಗಿಸಿಕೊಂಡ ೧೯-೨೦-೨೧!
ಇದುವರೆಗೂ ನೆಲದ ಘಮಲಿನ ಚಿತ್ರಗಳ ಮೂಲಕವೇ ಮತ್ತೆ ಮತ್ತೆ ಗೆಲ್ಲುತ್ತಾ, ಪ್ರೇಕ್ಷಕರಿಗೆ ಹತ್ತಿರಾಗಿರುವವರು ನಿರ್ದೇಶಕ ಮಂಸೋರೆ. ಆಕ್ಟ್ ೧೯೭೯ ಚಿತ್ರದ ಬಳಿಕ ಮಂಸೋರೇ ಮುಂದಿನ ಹೆಜ್ಜೆಯೇನೆಂಬ ಪ್ರಶ್ನೆಗೆ ಉತ್ತರವಾಗಿ ಘೋಶಣೆಯಾಗಿದ್ದದ್ದು ೧೯ ೨೦ ೨೧ ಟೈಟಲ್. ಆ ಚಿತ್ರದ ಕಥೆ ಏನಿರಬಹುದು? ಈ ಬಾರಿ ಮಂಸೋರೇ ಯಾವ ರೀತಿಯಲ್ಲಿ ಪ್ರೇಕ್ಷಕರನ್ನು ತಾಕುತ್ತಾರೆ ಅಂತೆಲ್ಲ ಹತ್ತಾರು ಪ್ರಶ್ನೆಗಳೆದ್ದು, ಕುತೂಹಲವೆಂಬುದು ಪ್ರೇಕ್ಷಕರ ಮನಸಲ್ಲಿ ಕಿಕ್ಕಿರಿದಿತ್ತು. ಹೊರ ಜಗತ್ತಿನಲ್ಲಿ ಇಂಥಾ ಚರ್ಚೆಗಳು ನಡೆಯುತ್ತಿರುವಾಗ ತಮ್ಮ ಪಾಡಿಗೆ ತಾವು ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದ ಮಂಸೋರೆ, ಇದೀಗ ಸಂಪೂರ್ಣ ಚಿತ್ರೀಕರಣವನ್ನು ಮುಗಿಸಿಕೊಂಡಿದ್ದಾರೆ.
ಒಂದು ಕಥೆ ಅವರೊಳಗೆ ಊಟೆಯೊಡೆಯಿತೆಂದರೆ ಅದು ಸ್ಕ್ರಿಪ್ಟ್ ರೂಪಕ್ಕಿಳಿದ, ಮತ್ತೊಂದಷ್ಟು ತಯಾರಿ ನಡೆದು ಚಿತ್ರೀಕರಣ ಕಂಪ್ಲೀಟಾಗೋವರೆಗೂ ಮಂಸೋರೆ ವಿರಮಿಸೋದಿಲ್ಲ. ಅದು ಅವರ ಸ್ಪಷಾಲಿಟಿ. ಬಹುಶಃ ಅವರ ಗೆಲುವಿನ ಗುಟ್ಟೂ ಕೂಡಾ ಅದರಲ್ಲಿಯೇ ಅಡಗಿದ್ದೀತೇನೋ. ಅಂಥಾ ಮನಃಸ್ಥಿತಿ ಇಲ್ಲದೇ ಹೋಗಿದ್ದರೆ ಇಷ್ಟು ಬೇಗನೆ ಚಿತ್ರೀಕರಣ ಮುಗಿಸಿಕೊಂಡ ಶುಭ ಸುದ್ದಿ ಕೊಡಲು ಸಾಧ್ಯವಾಗುತ್ತಿರಲಿಲ್ಲ. ಅವರು ನಿರಂತರವಾಗಿ ಕರ್ನಾಟಕದ ನಾನಾ ಲೊಕೇಷನ್ನುಗಳಲ್ಲಿ ಯಶಸ್ವಿಯಾಗಿ ಚಿತ್ರೀಕರಣ ಮಾಡಿದ್ದಾರೆ. ಸುದೀರ್ಘವಾಗಿ ಐವತ್ತೊಂದು ದಿನ ಕಳೆಯುತ್ತಲೇ ಚಿತ್ರೀಕರಣ ಕಂಪ್ಲೀಟಾಗಿದೆ. ಅಲ್ಲಿಗೆ ೧೯-೨೦-೨೧ ಚಿತ್ರದ ಮೊದಲ ಹಂತದ ಕೆಲಸ ಕಾರ್ಯ ಮುಕ್ತಾಯಗೊಂಡಿದೆ.
ಇಂಥಾದ್ದೊಂದು ಖುಷಿಯ ಸುದ್ದಿ ಹೇಳಿರುವ ಮಂಸೋರೆ, ಅದಕ್ಕೆ ಕಾರಣವಾದ ಚಿತ್ರತಂಡ ಮತ್ತು ಹೋದ ಊರುಗಳಲ್ಲೆಲ್ಲ ಸಹಕರಿಸಿದ ಸಮಾನಮನಸ್ಕರಿಗೂ ಕೃತಜ್ಞತೆ ಸಲ್ಲಿಸಿದ್ದಾರೆ. ಜೊತೆಗೆ ಅದಕ್ಕೆ ಪ್ರಧಾನ ಕಾರಣರವಾದ ನಿರ್ಮಾಪಕ ದೇವರಾಜ್ ಅವರನ್ನೂ ಅಭಿನಂದಿಸಿದ್ದಾರೆ. ಬಹು ಬೇಗನೆ ಉಳಿಕೆ ಕೆಲಸ ಕಾರ್ಯ ಮುಗಿಸಿಕೊಂಡು ಪ್ರೇಕ್ಷಕರೆದುರು ಬರೋದಾಗಿಯೂ ಮಂಸೋರೆ ಹೇಳಿಕೊಂಡಿದ್ದಾರೆ. ಇದರ ಬೆನ್ನಲ್ಲಿಯೇ ಈ ಚಿತ್ರದ ಬಗ್ಗೆ ಮತ್ತೊಂದು ಸುತ್ತಿನ ಚರ್ಚೆ ಕಾವೇರಿಕೊಂಡಿದೆ. ನಮ್ಮ ನಡುವಿನ ನೆಲದ ಕಥೆಯನ್ನೇ ಚಿತ್ರವಾಗಿಸೋದು ಮಂಸೋರೆ ಅವರ ಹೆಚ್ಚುಗಾರಿಕೆ. ಈ ಬಾರಿ ಅವರು ಈ ನೆಲದಲ್ಲಿಯೇ ನಡೆದ ಘಟನಾವಳಿಗಳನ್ನಿಟ್ಟುಕೊಂಡು ಹೊಸಾ ಬಗೆಯ ಚಿತ್ರ ಮಾಡ ಹೊರಟಿದ್ದಾರೆ. ಅದರ ಚಿತ್ರೀಕರಣ ಮುಗಿದಿರುವ ಈ ಹೊತ್ತಿನಲ್ಲಿ ತೀವ್ರ ನಿರೀಕ್ಷೆ ಚಾಲೂ ಆಗಿದೆ.