ಈ ಸೃಷ್ಟಿಯಲ್ಲಿ ಅದೆಂತೆಂಥಾ ಅದ್ಭುತಗಳಿವೆಯೋ ಹೇಳಲು ಬರುವುದಿಲ್ಲ. ಅದರಲ್ಲಿಯೂ ಈ ಮನುಷ್ಯನ ಚಿತ್ರವಿಚಿತ್ರ ನಡವಳಿಕೆಗಳು, ವಿಭನ್ನ ಅಕಾರಗಳೆಲ್ಲವೂ ಎಣಿಕೆಗೆ ನಿಲುಕದಂಥಾ ಅಚ್ಚರಿಗಳು. ಇದೆಲ್ಲವನ್ನೂ ಮೀರಿಸುವಂತೆ ಮನುಷ್ಯ ಜೀವಿ ಒಮ್ಮೊಮ್ಮೆ ಚಿತ್ರವಿಚಿತ್ರವಾದ ರೂಪಗಳಲ್ಲಿ ಜನಿಸೋದುಂಟು. ಎರಡು ದೇಹ ಬೆಸೆದುಕೊಂಡ ಸಯಾಮಿ ಅವಳಿಗಳಿಂದ ಹಿಡಿದು ಇದಕ್ಕೊಂದಷ್ಟು ಉದಾಹರಣೆಗಳಿದ್ದಾವೆ. ಆದರೆ ಮಗುವೊಂದು ಶಾಶ್ವತವಾದ ನಗು ಧರಿಸಿಕೊಂಡೇ ಹುಟ್ಟುತ್ತದೆಂದರೆ ಅದಕ್ಕಿಂತಲೂ ಅಚ್ಚರಿ ಬೇರೇನಿದೆ? ಸದ್ಯ ದೂರದ ಆಸ್ಟ್ರೇಲಿಯಾದಲ್ಲಿ ಅಂಥಾದ್ದೊಂದು ಮಗು ಜನಿಸಿದೆ.
ನಾವೆಲ್ಲ ನಕ್ಕಾಗ ಮುಖ ಹಿಗ್ಗಿಲಿಸಿಕೊಂಡು, ತುಟಿಯ ಎರಡೂ ಅಂಚು ಅರಳಿಕೊಳ್ಳುತ್ತದಲ್ಲಾ? ನಾವೆಲ್ಲ ನಕ್ಕಾಗ ಮಾತ್ರವೇ ಹಾಗಾಗುತ್ತೆ. ಆದರೆ ಈ ಮಗುವಿನ ಮುಖದ ರಚನೆಯೇ ಸದಾ ಕಾಲವೂ ನಗುತ್ತಿರುವಂತಿದೆ. ಇದಕ್ಕೆ ವೈದ್ಯಕೀಯ ವಿಜ್ಞಾನ ಮ್ಯಾಕ್ರೋಸ್ಟೋಮಿಯಾ ಅಂತ ಹೆಸರಿಟ್ಟಿದೆ. ಇದೊಂದು ಅಪರೂಪದಲ್ಲೇ ಅಪರೂಪದ ದೈಹಿಕ ರಚನೆ. ಈ ಥರದ ದೈಹಿಕ ರಚನೆ ಹೊಂದಿರುವ ಮಕ್ಕಳು ಹುಟ್ಟುವುದೇ ಅಪರೂಪ. ಹೆಚ್ಚೆಂದರೆ ಒಂದು ಲಕ್ಷದಲ್ಲಿ ಒಂದು ಮಗು ಹೀಗೆ ಹುಟ್ಟಿದರದಷ್ಟೇ ಹೆಚ್ಚು. ಈ ಕಾರಣದಿಂದಲೇ ಆಸ್ಟ್ರೇಲಿಯಾದ ಈ ಮಗುವೀಗ ಇಡೀ ವಿಶ್ವದ ಅಚ್ಚರಿಯ ಕೇಂದ್ರಬಿಂದುವಾಗಿದೆ.
ಇದೊಂದು ಜನ್ಮಜಾತ ಲಕ್ಷಣ. ಇದನ್ನು ಈ ಹಿಂದೆ ವೈದ್ಯಕೀಯ ಪದ್ಧತಿಯಲ್ಲಿ ಸರಿ ಪಡಿಸುವಂಥಾ ಯಾವ ದಾರಿಗಳೂ ಇರಲಿಲ್ಲ. ಆದರೆ ವೈದ್ಯಕೀಯ ವಿಜ್ಞಾನ ಬೆಳೆದಂತೆಲ್ಲ ನಮ್ಮಲ್ಲಿ ಸೀಳು ತುಟಿಗೆ ಆಪರೇಷನ್ನು ಮಾಡುವಂತೆ ಅದಕ್ಕೂ ಕೂಡಾ ಶಸ್ತ್ರ ಚಿಕಿತ್ಸೆಯನ್ನು ಮಾಡಲಾಗುತ್ತದೆ. ಇದೀಗ ಆಸ್ಟ್ರೇಲಿಯಾದಲ್ಲಿ ಜನಸಿರುವ ಕೂಸಿಗೂ ಕೂಡಾ ಆಪರೇಷನ್ ಮಾಡಿ ಸರಿ ಪಡಿಸಲು ಸಕಲ ಸಿದ್ಧತೆಗಳನ್ನೂ ಮಾಡಿಕೊಳ್ಳಲಾಗುತ್ತದೆಯಂತೆ. ಒಟ್ಟಾರೆಯಾಗಿ ಇಂಥಾದ್ದೊಂದು ಕೂಸು ಹುಟ್ಟುತ್ತದೆಂಬುದೇ ಎಲ್ಲರ ಅಚ್ಚರಿಗೆ ಕಾರಣವಾಗಿದೆ.