ಈ ಜಗತ್ತಿನಲ್ಲಿ ಎಂತೆಂಥಾ ರಕ್ಕಸರಿದ್ದಾರೋ, ಸಿಟ್ಟಿನ ಕೈಗೆ ಆ ಕ್ಷಣ ಬುದ್ಧಿ ಕೊಟ್ಟು ಎಂತೆಂಥಾ ಅನಾಹುತಗಳನ್ನ ಮಾಡಿಬಿಡುತ್ತಾರೋ ಹೇಳಲು ಬರುವುದಿಲ್ಲ. ಇಂಥಾ ಮಂದಿ ಆ ಕ್ಷಣದಲ್ಲಿ ಯಾರ ಜೀವ ತೆಗೆಯಲೂ ಹೇಸುವುದಿಲ್ಲ. ಸದ್ಯ ಥಾಣೆಯ ಭಿವಂಡಿ ಎಂಬ ಊರಿನಲ್ಲಿ ಅಂಥಾದ್ದೇ ಒಂದು ಘಟನೆ ನಡೆದಿದೆ. ತನಗೆ ಬಾಕಾದ ಸಮಯಕ್ಕೆ ಅನ್ನ ಮಾಡಲಿಲ್ಲ ಎಂಬೊಂದೇ ಕಾರಣ ಮುಂದಿಟ್ಟುಕೊಂಡ ಆಸಾಮಿಯೋರ್ವ ತನ್ನ ಮಡದಿಯನ್ನು ಕೋಲಿನಿಂದ ಹೊಡೆದು ಸಾಯಿಸಿದ್ದಾನೆ!
ಭಿವಂಡಿಯಲ್ಲಿ ನಡೆದ ಈ ಘಟನೆ ಕಂಡು ದೇಶದ ನಾನಾ ಭಾಗಗಳ ಮಂದಿ ಕಂಗಾಲಾಗಿ ಹೋಗಿದ್ದಾರೆ. ಎಣ್ಣೆ ಪಾರ್ಟಿಯಾದ ಶಂಕರ್ ವಾಘಮಾರೆ ಎಂಬ ಇಪ್ಪತ್ಮೂರು ವರ್ಷದ ಯುವಕ ಇಂಥಾದ್ದೊಂದು ಅಮಾನವೀಯ ಕೃತ್ಯವೆಸಗಿದ್ದಾನೆ. ಶಂಕರ್ ವಾಘಮಾರೆ ಮಹಾನ್ ಕೋಪಿಷ್ಠ. ಆತನಿಗೆ ಹೊಟ್ಟೆ ತುಂಬಾ ಎಣ್ಣೆ ಸುರುವಿಕೊಳ್ಳುವ ಚಟವೂ ಇತ್ತು. ಈ ಕಾರಣದಿಂದಲೇ ಪ್ರತೀ ದಿನ ಮಡದಿ ಜ್ಯೋತ್ಸ್ನಾಳೊಂದಿಗೆ ಜಗಳ ಕಾಯುತ್ತಿದ್ದ. ಇಂಥವನು ಮೊನ್ನೆ ದಿನ ತಡ ರಾತ್ರಿ ಮನೆಗೆ ಬಂದಾಗ ಅನ್ನವಿನ್ನೂ ರೆಡಿಯಾಗಿರಲಿಲ್ಲ.
ಅಷ್ಟಕ್ಕೇ ಕೆಂಡಾಮಂಡಲನಾದ ಶಂಕರ್ ಬೇಗನೆ ಅನ್ನ ಮಾಡಿ ಕೊಡುವಂತೆ ಆವಾಜು ಹಾಕಿದ್ದಾನೆ. ಪ್ರತೀ ದಿನವೂ ಪತಿರಾಯನ ಕಿರಿಕಿರಿ ನೋಡಿ ಸಾಕಾದ ಆಕೆ ಒಲ್ಲೆ ಅಂದಿದ್ದಾಳೆ. ಅಷ್ಟು ಹೇಳಿದೇಟಿಗೆ ಉಗ್ರ ರೂಪ ತಾಳಿದ ಶಂಕರ್ ದೊಣ್ಣೆ ಹುಡುಕಿ ತಂದು ಮಡದಿಯನ್ನು ಸಾಯ ಬಡಿದಿದ್ದಾನೆ. ಆ ಏಟು ತಾಳಲಾದ ಜ್ಯೋತ್ಸ್ನಾ ಸ್ಥಳದಲ್ಲಿಯೇ ಪ್ರಾಣ ಬಿಟ್ಟಿದ್ದಾಳೆ. ಈಗ್ಗೆ ಎರಡು ವರ್ಷಗಳ ಹಿಂದಷ್ಟೇ ಜ್ಯೋತ್ಸ್ನಾಳನ್ನು ಮದುವೆಯಾಗಿದ್ದ ಶಂಕರ ಸಣ್ಣ ಪುಟ್ಟದಕ್ಕೂ ಕಿರಿಕ್ಕು ಮಾಡುತ್ತಾ ಕೈಯಾರೆ ತನ್ನ ಸಂಸಾರವನ್ನು ಹಾಳು ಮಾಡಿಕೊಂಡಿದ್ದ. ಇದೀಗ ಆತನ ಕೆಟ್ಟ ಮನಸ್ಥಿತಿ ಒಂದು ಜೀವವನ್ನೇ ಕಿತ್ತುಕೊಂಡಿದೆ.