ಆಳುವವರ ಚಿತ್ರ ಕೆಲಸಕ್ಕೆ ಬಾರದ ವಿಚಾರಗಳತ್ತ ಹೊರಳಿಕೊಂಡಿರೋದರಿಂದ ದೇಶಾದ್ಯಂತ ನಿರುದ್ಯೋಗ ಸಮಸ್ಯೆ ಮೇರೆ ಮೀರಿಕೊಂಡಿದೆ. ದರೋಡೆ, ಕಳ್ಳತನದಂಥಾ ಸಮಾಜ ಕಂಟಕ ಕೃತ್ಯಗಳು ದೇಶಾದ್ಯಂತ ವಿಜೃಂಭಿಸುತ್ತಿವೆ. ಇದೀಗ ಹೊಸದಾಗಿ ವೃತ್ತಿ ಆರಂಭಿಸಿರುವ ಹೊಸಾ ಕಳ್ಳರಂತೂ ಆಗಾಗ ಎಲ್ಲರೂ ಬೆರಗಾಗುವಂತೆ ವರ್ತಿಸೋದಿದೆ. ಅಂಥಾದ್ದೇ ಒಂದು ಪ್ರಕರಣ ಗೋವಾದಲ್ಲಿ ನಡೆದಿದೆ. ಅದು ಏಕಕಾಲದಲ್ಲಿಯೇ ಕಾಸು ಕಳೆದುಕೊಂಡ ಮಾಲೀಕರು ಮತ್ತು ಪೊಲೀಸರನ್ನು ಬೇಸ್ತು ಬೀಳಿಸಿವೆ.
ಗೋವಾದ ಜನನಿಭಿಡ ಪ್ರದೇಶದಲ್ಲಿಯೇ ಈ ಚಾಲಾಕಿ ಕಳ್ಳರು ಕೈಚಳಕ ತೋರಿಸಿದ್ದಾರೆ. ಅಲ್ಲಿನ ಭಾರೀ ಗಾತ್ರದ ಬಂಗಲೆಯಂಥಾ ಮನೆಯೊಂದನ್ನು ಆಯ್ಕೆ ಮಾಡಿಕೊಂಡಿದ್ದ ಈ ಖದೀಮರು, ಮಾಮೂಲಿ ಕಳ್ಳರು ಉಪಯೋಗಿಸುವಂಥಾ ಟ್ರಿಕ್ಸನ್ನೇ ಬಳಕೆ ಮಾಡಿಕೊಂಡಿದ್ದರು. ಸಾಮಾನ್ಯವಾಗಿ ನಮ್ಮಲ್ಲಿನ ಕಳ್ಳರೂ ಕೂಡಾ ಯಾವ ಮನೆಯವರು ಬೀಗ ಹಾಕಿಕೊಂಡು ಹೊರಡುತ್ತಾರೆಂಬ ಮಾಹಿತಿ ಕಲೆ ಹಾಕಿಯೇ ಕನ್ನ ಹಾಕುತ್ತಾರೆ. ಈ ಕಳ್ಳರೂ ಕೂಡಾ ಆ ಮನೆಯವರು ಎರಡು ದಿನ ಬೇರೆಡೆಗೆ ಹೋಗುತ್ತಾರೆಂಬುದನ್ನು ಪಕ್ಕಾ ಮಾಡಿಕೊಂಡೇ ಅಖಾಡಕ್ಕಿಳಿದಿದ್ದರು.
ಹಾಗೆ ಅವರು ನುಗ್ಗಿದ ಮನೆಯಲ್ಲಿ ಸಂಪತ್ತಿನ ಖಜಾನೆಯೇ ಇತ್ತು. ಕ್ಯಾಶು, ಚಿನ್ನಾಭರಣ ಸೇರಿದಂತೆ ಇಪ್ಪತ್ತು ಲಕ್ಷಕ್ಕೂ ಹೆಚ್ಚು ಮೌಲ್ಯದ ವಸ್ತುಗಳು ಕಳ್ಳರಿಗೆ ಸಿಕ್ಕಿದ್ದವು. ಒಂದೇ ಮನೆಯಲ್ಲಿ ಈ ಪಾಟಿ ಲಾಭವಾದದ್ದನ್ನು ಕಂಡು ಆ ಮನೆಯವರ ಮೇಲೆ ಆ ಕಳ್ಳರಿಗೆಲ್ಲ ಲವ್ವು ಉಕ್ಕಿ ಬಂದಿತ್ತೇನೋ. ಇಡೀ ಮನೆಯನ್ನು ಸಪಾಟು ದೋಚಿಕೊಂಡು ಹೊರಡುವ ಮುನ್ನ ದೊಡ್ಡ ಪರದೆಯ ಟೀವಿಯ ಮೇಲೆ ದಪ್ಪಕ್ಷಕರಗಳಲ್ಲಿ ಐ ಲವ್ ಯೂ ಅಂತ ಬರೆದು ಪೇರಿ ಕಿತ್ತಿದ್ದರು. ಎರಡು ದಿನದ ನಂತರ ವಾಪಾಸಾದ ಮನೆ ಮಂದಿಗೆ ಕಳ್ಳರ ಬರಹ ಕಣ್ಣಿಗೆ ಬಿದ್ದಿದೆ. ಕಳ್ಳತನವಾಗಿದ್ದೂ ಖಾತರಿಯಾಗಿದೆ. ಪೊಲೀಸರೀಗ ಈ ಖದೀಮರನ್ನು ಹಿಡಿಯಲು ಹರಸಾಹಸ ಪಡುತ್ತಿದ್ದಾರೆ!