ಕುರುಡಿ ವೇಶ್ಯೆಯನ್ನು ಆವಾಹಿಸಿಕೊಂಡು…
ಬಹುತೇಕ ಎಲ್ಲ ನಟನಟಿಯರ ಪಾಲಿಗೂ ಒಂದಷ್ಟು ಪಾತ್ರಗಳನ್ನು ಮಾಡಿದ ನಂತರವೂ ಕನಸಿನ ಪಾತ್ರವೊಂದು ಕೈ ಹಿಡಿದು ಜಗ್ಗುತ್ತಿರುತ್ತೆ. ಆದರೆ ಅದು ಅಷ್ಟು ಸಲೀಸಾಗಿ ಒಲಿದು ಬರುವಂಥಾದ್ದಲ್ಲ. ಮತ್ತೆ ಕೆಲ ಮಂದಿ ಅಪರೂಪದ ಪಾತ್ರವೊಂದು ಮನೆ ಬಾಗಿಲಿಗೇ ಹುಡುಕಿ ಬಂದರೂ ಕದ ಹಾಕಿಕೊಳ್ಳುತ್ತಾರೆ. ಆ ಪಾತ್ರವನ್ನ ಬೇರೊಬ್ಬರು ಮಾಡಿದ ನಂತರ ಹೊಟ್ಟೆ ಉರಿದುಕೊಳ್ಳುತ್ತಾರೆ. ಆದರೆ, ಅಶ್ವಿನಿ ನಕ್ಷತ್ರ ಖ್ಯಾತಿಯ ನಟಿ ಮಯೂರಿ ಅವರೆಲ್ಲರಿಗಿಂತಲೂ ಭಿನ್ನ. ಅವರಿಗೆ ಪಾತ್ರವೊಂದನ್ನು ಯಾವ ದೃಷ್ಟಿಕೋನದಲ್ಲಿ ದಿಟ್ಟಿಸಬೇಕು, ಅದು ತಂದೊಡ್ಡುವ ಸವಾಲುಗಳನ್ನು ಯಾವ್ಯಾವ ರೀತಿಯಲ್ಲಿ ಎದುರಿಸಬೇಕೆಂಬ ಪ್ರೌಢಿಮೆಯಿದೆ. ಅದಿಲ್ಲದೇ ಹೋಗಿದ್ದರೆ ಅವರು ವೀಲ್ಚೇರ್ ರೋಮಿಯೋ ಚಿತ್ರದ ಕಣ್ಣು ಕಾಣದ ವೇಶ್ಯೆಯ ಪಾತ್ರವನ್ನು ಆವಾಹಿಸಿಕೊಂಡು ಈ ಪರಿಯಾದ ಮೆಚ್ಚುಗೆಗೆ ಪಾತ್ರರಾಗಲು ಸಾಧ್ಯವಾಗುತ್ತಿರಲಿಲ್ಲ.
ಈ ಚಿತ್ರದ ಟ್ರೈಲರ್ ಸೇರಿದಂತೆ ಒಂದಷ್ಟು ಸುಳಿವುಗಳನ್ನು ಗಮನಿಸಿದವರೆಲ್ಲ ಮಯೂರಿ ನಿರ್ವಹಿಸಿರೋ ಪಾತ್ರದ ಬಗ್ಗೆ ಅಚ್ಚರಿಗೀಡಾಗಿದ್ದಾರೆ. ಯಾಕೆಂದರೆ, ಅಂಥಾ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುವಾಗ ಗಟ್ಟಿಯಾದ ಮನಸ್ಥಿತಿ ಹೊಂದಿರಬೇಕು. ನಿಜವಾದ ಕಲಾಸಕ್ತಿ, ಗೌರವ ಇರುವವರು ಮಾತ್ರವೇ ಅಂಥಾ ಪಾತ್ರಗಳನ್ನು ಒಪ್ಪಿಕೊಳ್ಳಲು ಸಾಧ್ಯ. ಈ ನಿಟ್ಟಿನಲ್ಲಿ ಹೇಳೋದಾದರೆ ಕಣ್ಣು ಕಾಣದ ವೇಶ್ಯೆಯ ಪಾತ್ರ ನಿರ್ವಹಿಸಿರುವ ಮಯೂರಿ ನಿಜಕ್ಕೂ ಪರಿಪೂರ್ಣ ನಟಿಸೀ ಚಿಒತ್ರದಲ್ಲಿ ಅವರು ಎದೆಯಲ್ಲಿ ನೋವಿಟ್ಟುಕೊಂಡೇ ಅಪಾರ ಪ್ರಮಾಣದಲ್ಲಿ ಜೀವನಪ್ರೇಮ ಹೊಂದಿರುವ ಡಿಂಪಲ್ ಎಂಬ ಪಾತ್ರವನ್ನು ನಿರ್ವಹಿಸಿದ್ದಾರೆ. ಈ ಪಾತ್ರ ತನ್ನ ವೃತ್ತಿ ಬದುಕಿನ ಮೈಲಿಗಲ್ಲಾಗುತ್ತೆ, ದಿಕ್ಕುದೆಸೆಗಳನ್ನು ಬದಲಿಸುತ್ತೆಂಬ ಗಾಂಢ ನಂಬಿಕೆ ಮಯೂರಿಯದ್ದು.
ಇದು ಮಯೂರಿ ಪಾಲಿಗೆ ಚಾಲೆಂಜಿಂಗ್ ಪಾತ್ರ. ಇಂಥಾ ಪಾತ್ರಗಳು ಬಂದಾಗ ಅನೇಕ ನಟಿಯರು ಒಪ್ಪಿಕೊಳ್ಳಲು ಹಿಂದೇಟು ಹಾಕುತ್ತಾರೆ. ಮುಂದೆ ಸಮಾಜ ತನ್ನನ್ನು ಹೇಗೆ ನೋಡುತ್ತದೋ ಎಂಬ ಭಯ ಮತ್ತು ಇಮೇಜೆಂಬ ಭ್ರಮೆಯನ್ನು ದಾಟಿಕೊಳ್ಳಲಾರದ ಮನಸ್ಥಿತಿ ಅದಕ್ಕೆ ಕಾರಣ. ಆದರೆ ಮಯೂರಿಗೆ ಓರ್ವ ಕಲಾವಿದೆಯಾಗಿ ಅವರ ಮೇಲಿರುವ ಸಾಮಾಜಿಕ ಜವಾಬ್ದಾರಿಯ ಅರಿವಿದೆ. ಆ ಕಾರಣದಿಂದ ಮತ್ತು ಕಥೆ ತುಂಬಾನೇ ಇಷ್ಟವಾಗಿದ್ದರಿಂದ ನಟಿಸಲು ಒಪ್ಪಿಕೊಂಡಿದ್ದಾರೆ. ಇದೀಗ ಈ ಸಿನಿಮಾ ಬಿಡುಗಡೆಯ ಹೊಸ್ತಿಲಿನಲ್ಲಿರುವ ಈ ಹೊತ್ತಿನಲ್ಲಿ ಒಂದೊಳ್ಳೆ ಪಾತ್ರಕ್ಕೆ ಜೀವ ತುಂಬಿದ ತೃಪ್ತ ಭಾವ ಅವರಲ್ಲಿದೆ.
ನಿರ್ದೇಶಕ ನಟರಾಜ್ ಅವರು ಆರಂಭಿಕವಾಗಿ ಅಪ್ರೋಚ್ ಮಾಡಿ ಕಥೆ ಹೇಳಿದಾಗಲೇ ಮಯೂರಿ ಥ್ರಿಲ್ ಆಗಿದ್ದರಂತೆ. ಅದರಲ್ಲಿನ ಒಂದಷ್ಟು ಡೈಲಾಗುಗಳ ಸ್ಯಾಂಪಲ್ ಅವಕ್ಕಾಗುವಂತೆ ಮಾಡಿದ್ದವಂತೆ. ಈ ಎಲ್ಲ ಕಾರಣಗಳಿಂದ ಸ್ಕ್ರಿಪ್ಟ್ ಕೊಡಿ ಎಂಬ ಬೇಡಿಕೆ ಮುಂದಿಟ್ಟಿದ್ದರಂತೆ. ಅದನ್ನು ನಿರ್ದೇಶಕರು ಪೂರೈಸಿದ ಕೆಲವೇ ದಿನಗಳಲ್ಲಿ ಸ್ಕ್ರಿಪ್ಟ್ ಓದಿದ ಮಯೂರಿಗೆ ತನಗೆಂತಾ ಅದ್ಭುತ ಅವಕಾಶ ಒಲಿದು ಬಂದಿದೆಯೆಂಬ ಅರಿವಾಗಿತ್ತು. ಆ ನಂತರದಲ್ಲಿ ಡಿಂಪಲ್ ಎಂಬ ವೇಶ್ಯೆಯ ಪಾತ್ರವನ್ನು ಒಳಗಿಳಿಸಿಕೊಳ್ಳಲು ನಾನಾ ಕಸರತ್ತು ನಡೆಸಿದ್ದರು. ಲೀಲಾಜಾಲವಾಗಿಯೇ ಚಿತ್ರೀಕರಣವನ್ನೂ ಕೂಡಾ ಮುಗಿಸಿಕೊಂಡಿದ್ದರು.
ಆನ ಈ ಪಾತ್ರವನ್ನು ಹೇಗೆ ಸ್ವಾಗತಿಸುತ್ತಾರೆಂಬ ಕುತೂಹಲ ಈಗ ಮಯೂರಿಯಲ್ಲಿದೆ. ಈ ಹಿಂದೆಯೂ ಒಂದಷ್ಟು ಕಲಾವಿದೆಯರು ಇಂಥಾ ಚಾಲೆಂಜಿಂಗ್ ಪಾತ್ರಗಳನ್ನು ಮಾಡಿ ಸೈ ಅನ್ನಿಸಿಕೊಂಡಿದ್ದರು. ಈ ಪಾತ್ರವೂ ಕೂಡಾ ಕನ್ನಡ ಚಿತ್ರತರಂಗದ ಇಹಿತಾಸದಲ್ಲಿ ಅಚ್ಚಾಗುತ್ತೆ, ಪ್ರೇಕ್ಷಕರನ್ನು ಆವರಿಸಿಕೊಳ್ಳುತ್ತೆ ಎಂಬ ನಂಬಿಕೆ ಮಯೂರಿ ಅವರಲ್ಲಿದೆ. ಆರಂಭದಿಂದಲೂ ಸವಾಲಿನ ಪಾತ್ರಗಳನ್ನು ಧೇನಿಸುತ್ತಾ, ಈವರೆಗೂ ಥರ ಥರದ ಪಾತ್ರಗಳನ್ನು ನಿರ್ವಹಿಸಿರುವವರು ಮಯೂರಿ. ಮುದ್ದಾದ ಪಾತ್ರಗಳ ಮೂಲಕ ಪ್ರೇಕ್ಷಕರ ಮನಗೆದ್ದಿರುವ ಅವರು ಈ ಪಾತ್ರ ಹೊಸಾ ತಿರುವ ಕೊಡುವ ನಿರೀಕ್ಷೆಯಿಂದಿದ್ದಾರೆ.