ಐದು ವರ್ಷಗಳ ಬಳಿಕ ಸೆರೆಸಿಕ್ಕ ಹಂತಕರು!
ಕೊಲೆಗಡುಗರು, ಪಾತಕಿಗಳು ಅದೆಷ್ಟೇ ಬುದ್ಧಿವಂತರಾದರೂ ಕಾನೂನಿನ ಪರಿಧಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ… ಇದು ಸಿನಿಮಾ ಡೈಲಾಗಿನಂತೆ ಕಂಡರೂ ವಾಸ್ತವವಾಗಿಯೂ ಪದೇ ಪದೆ ಸಾಬೀತಾಗುತ್ತಿರುವ ಸತ್ಯ. ಅದನ್ನು ಸುಳ್ಳಾಗದಂತೆ ಕಾಪಿಟ್ಟುಕೊಳ್ಳುವ ನಿಟ್ಟಿನಲ್ಲಿ ಖಾಕಿ ಪಡೆ ಹಗಲಿರುಳೆನ್ನದೆ ಶ್ರಮಿಸುತ್ತಿದೆ. ಕೊಲೆಗಡುಕರು ಅದೆಷ್ಟೇ ಪಟ್ಟು ಹಾಕಿದರೂ ಯಾವುದಾದರೊಂದು ರೂಪದಲ್ಲಿ ಕೆಡವಿಕೊಂಡೇ ತೀರೋದು ಪೊಲೀಸರ ಸ್ಪೆಷಾಲಿಟಿ. ಅದಕ್ಕೆ ಸೂಕ್ತ ಉದಾಹರಣೆಯೊಂದು ಇದೀಗ ಸಿಕ್ಕಿದೆ; ಹಳೇಯ ಚಿನ್ನಾಭರಣ ಖರೀದಿಸುವ ನೆಪದಲ್ಲಿ ಓರ್ವನನ್ನು ಕೊಂದಿದ್ದ ಹಂತಕ ಐದು ವರ್ಷಗಳ ನಂತರ ಸಿಕ್ಕಿ ಬೀಳುವ ಮೂಲಕ!
ಆಡುಗೋಡಿ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಮೈಸೂರಿನ ಹೆಬ್ಬಾಳ ಮೂಲದ ಮಧು ಎಂಬಾತನನ್ನು ಬಂಧಿಸಲಾಗಿದೆ. ಇಷ್ಟರಲ್ಲಿಯೇ ಆ ಕೊಲೆಯಲ್ಲಿ ಭಾಗಿಯಾಗಿದ್ದ ಇನ್ನುಳಿದ ಐವರನ್ನೂ ಬಂಧಿಸುವ ವಿಶ್ವಾಸವನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಇದು ೨೦೧೪ರಲ್ಲಿ ನಡೆದಿದ್ದ ಕೊಲೆ ಪ್ರಕರಣ. ಮಧು ತನ್ನ ಐವರು ಸ್ನೇಹಿತರೊಂದಿಗೆ ಸೇರಿಕೊಂಡು ಆಡುಗೋಡಿಯ ಶ್ರೀಮಂತರಾದ ಉದಯ ರಾಜ್ ಸಿಂಗ್ರ ಮನೆಗೆ ಭೇಟಿ ನೀಡಿದ್ದರು. ಅದು ಹೇಗೋ ಅವರಿಗೆ ಮಾತಲ್ಲಿಯೇ ಮಂಕುಬೂದಿ ಎರಚಿ ಮನೆ ಸೇರಿಕೊಂಡಿದ್ದರು.
ತಾವು ಹಳೇಯ ಚಿನ್ನಾಭರಣಗಳನ್ನು ಖರೀದಿಸುವವರೆಂಬ ಪೋಸು ಕೊಟ್ಟ ಇವರ ಮುಂದೆ ಹಿಂದೆ ಮುಂದೆ ನೋಡದ ಉದಯ್ರಾಜ್ ಸಿಂಗ್ ತಮ್ಮ ಬಳಿಯಿದ್ದ ಹಳೇಯ, ಬೆಲೆ ಬಾಳುವ ಚಿನ್ನಾಭರಣಗಳನ್ನು ಹರವಿಕೊಂಡಿದ್ದರು. ನಂತರ ಒಂದು ಬೆಲೆ ಮಾತಾಡಿದಂತೆ ಮಾಡಿ, ಅದಕ್ಕೆ ಉದಯ್ ರಾಜ್ ಒಪ್ಪದೇ ಇದ್ದಾಗ ಮಧು ಡ್ರ್ಯಾಗರ್ನಿಂದ ಏಕಾಏಕಿ ಅವರ ಕುತ್ತಿಗೆ ಸೀಳಿದ್ದ. ನಂತರ ಹದಿನೆಂಟು ಲಕ್ಷಕ್ಕೂ ಹೆಚ್ಚು ಬೆಲೆಬಾಳುವ ಚಿನ್ನಾಭರಣ ಮತ್ತು ೨.೫ ಲಕ್ಷ ನಗದಿನೊಂದಿಗೆ ಈ ಗ್ಯಾಂಗು ಕಾಲ್ಕಿತ್ತಿತ್ತು.
ಅಲ್ಲಿಂದೀಚೆಗೆ ಮಧು ಮತ್ತು ಸಂಗಡಿಗರು ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಓಡಾಡಲಾರಂಭಿಸಿದ್ದರು. ಮುಖ್ಯ ಆರೋಪಿ ಮಧು ಕೂಡಾ ರಾಹುಲ್ ಎಂಬಾತನೊಟ್ಟಿಗೆ ಬಿಹಾರಕ್ಕೆ ಹೋಗಿ ನೆಲೆಸಿದ್ದ. ಇಂಥಾ ಮಧು ಮೊನ್ನೆದಿನ ಯಾರಿಗೂ ಗೊತ್ತಾಗೋದಿಲ್ಲ ಅಂತ ತಿಳಿದು ಎಫ್ಬಿಯಲ್ಲಿ ಒಂದು ಸೆಲ್ಫಿ ಅಪ್ಲೋಡ್ ಮಾಡಿದ್ದ. ಅದರ ಜಾಡು ಹಿಡಿದು ಹೋದ ಆಡುಗೋಡಿ ಪೊಲೀಸರು ಪ್ರಳಯಾಂತಕ ಹಂತಕ ಮಧುವನ್ನು ಬಂಧಿಸಿದ್ದಾರೆ. ಈ ಮೂಲಕ ಮತ್ತೊಂದಷ್ಟು ಕೊಲೆ ಸುಲಿಗೆಗಳಿಗೆ ಬ್ರೇಕ್ ಹಾಕಿದಂತಾಗಿದೆ. ಇಷ್ಟೊಂದು ಚಾಣಾಕ್ಷತನದಿಂದ ಆರೋಪಿಗಳನ್ನು ಬಂಧಿಸಿದ ಆಡುಗೋಡಿ ಪೊಲೀಸರು ನಾಗರಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.