ಅಪರೂಪದ ಕಥೆ ಹುಟ್ಟಿದ್ದೇ ಒಂದು ಅಚ್ಚರಿ!
ಸಿನಿಮಾವೊಂದು ಯಾವುದೇ ಪ್ರಚಾರದ ಪಟ್ಟುಗಳಿಲ್ಲದೆ, ಹೈಪುಗಳಿಲ್ಲದೆ ತಾನೇ ತಾನಾಗಿ ತನ್ನ ಕಂಟೆಂಟಿನ ಸುಳಿವಿನ ಮೂಲಕ ತಾಕುವುದಿದೆಯಲ್ಲಾ? ಅದು ಅತ್ಯಂತ ಅಪರೂಪದ ರೋಮಾಂಚಕ ವಿದ್ಯಮಾನ. ಕೆಲವೇ ಕೆಲ ಚಿತ್ರಗಳು ಮಾತ್ರವೇ ಇಂಥಾದ್ದೊಂದು ಮ್ಯಾಜಿಕ್ ಮಾಡಿ ಬಿಡುತ್ತವೆ. ಅಂಥಾ ಮ್ಯಾಜಿಕ್ಕಿಗೆ ತಾಜಾ ಉದಾಹರಣೆಯಾಗಿ ನಿಲ್ಲುವ ಚಿತ್ರ ವೀಲ್ಚೇರ್ ರೋಮಿಯೋ. ನಟರಾಜ್ ಚೊಚ್ಚಲ ನಿರ್ದೇಶನದ ಈ ಸಿನಿಮಾ ಈಗಾಗಲೇ ಎಲ್ಲಾ ವರ್ಗದ ಪ್ರೇಕ್ಷಕರನ್ನು ಪರಿಣಾಮಕಾರಿಯಾಗಿ ಹಿಡಿದಿಟ್ಟುಕೊಂಡಿದೆ. ಟ್ರೈಲರ್, ಹಾಡುಗಳ ಮೂಲಕ ಗಾಢ ಪರಿಣಾಮ ಬೀರಿರುವ ವೀಲ್ಚೇರ್ ರೋಮಿಯೋನ ಆಟ ಈ ವಾರ ರಾಜ್ಯಾದ್ಯಂತ ಶುರುವಾಗಲಿದೆ.
ಈಗಾಗಲೇ ಕನ್ನಡ ಚಿತ್ರರಂಗದಲ್ಲಿ ಸಹನಿರ್ದೇಶಕರಾಗಿ, ಯಶಸ್ವೀ ಸಂಬಾಷಣೆಕಾರರಾಗಿ ನೆಲೆ ಕಂಡುಕೊಂಡಿರುವವರು ನಟರಾಜ್. ಹದಿನೈದು ವರ್ಷಗಳಿಗೂ ಹೆಚ್ಚುಕಾಲದ ಅನುಭವದೊಂದಿಗೆ ಅವರೀಗ ಸ್ವತಂತ್ರ ನಿರ್ದೇಶಕರಾಗಿ ಅಡಿಯಿರಿಸಿದ್ದಾರೆ. ಈಗಾಗಲೇ ಟ್ರೈಲರ್ ಮತ್ತು ಚಿತ್ರತಂಡವೇ ಬಿಟ್ಟು ಕೊಟ್ಟಿರುವ ಸಣ್ಣ ಸಣ್ಣ ಕ್ಲೂಗಳ ಮೂಲಕ ರೋಮಿಯೋನ ಕಥೆ ಎಂಥಾದ್ದೆಂಬುದರ ಸುಳಿವು ಸಿಕ್ಕಿದೆ. ಅದುವೇ ಅಗಾಧ ಪ್ರಮಾಣದಲ್ಲಿ ನಿರೀಕ್ಷೆ ಹರಳುಗಟ್ಟುವಂತೆ ಮಾಡಿಬಿಟ್ಟಿದೆ. ತೀರಾ ಈ ಸಿನಿಮಾವನ್ನು ಒಂದು ಸಲ ಕ್ಣುಂಬಿಕೊಳ್ಳಲೇ ಬೇಕೆಂಬಂಥ ತೀವ್ರ ಆಸೆ ಎಲ್ಲರೊಳಗೂ ಮನೆ ಮಾಡಿದೆ. ಅಲ್ಲಿಗೆ ವೀಲ್ಚೇರ್ ರೋಮಿಯೋ ಮೊದಲ ಹಂತದ ಗೆಲುವು ಪಡೆದುಕೊಂಡಿದ್ದಾನೆ.
ಇಂಥಾ ಸಿನಿಮಾಗಳ ಸುಳಿವು ಸಿಕ್ಕಾಕ್ಷಣ ಇಂಥಾದ್ದೊಂದು ಕಥೆ ಹುಟ್ಟಿದ್ದು ಹೇಗೆಂಬ ಕುತೂಹಲ ಶುರುವಾಗುತ್ತೆ. ಈ ಸಂಬಂಧವಾಗಿ ನಿರ್ದೇಶಕರು ಒಂದಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಮನಸೊಳಗೊಂದು ಬೆರಗು ಚಾಲ್ತಿಯಲ್ಲಿದ್ದರೆ ಕಥೆಯ ಎಳೆ ಎಲ್ಲಿಯಾದರೂ ಪ್ರತ್ಯಕ್ಷವಾಗಬಹುದು. ತಾನು ಒಂದೊಳ್ಳೆ ಕಥೆಯ ಮೂಲಕವೇ ನಿರ್ದೇಶಕನಾಗಿ ಎಂಟ್ರಿ ಕೊಡಬೇಕೆಂಬ ಇರಾದೆಯಿಂದಿದ್ದ ನಟರಾಜ್ ಕೂಡಾ ಅಂಥಾ ಕಥಾ ಎಳೆಯ ಹುಡುಕಾಟದಲ್ಲಿದ್ದರು. ಅಂಥಾ ಹೊತ್ತಿನಲ್ಲಿ ಅವರಿಗೆ ವರವಾಗಿ ಅವತರಿಸಿದ್ದು ಪ್ರಸಿದ್ಧ ನ್ಯಾಷನಲ್ ಜಿಯಾಗ್ರಫಿ ಚಾನೆಲ್. ಅದರಲ್ಲಿ ಪ್ರಸಾರವಾಗಿದ್ದ ಒಂದು ಎಪಿಸೋಡ್ ಪೂರ್ತಿಯಾಗಿ ನಟರಾಜ್ ಅವರನ್ನು ಆವರಿಸಿಕೊಂಡು ಬಿಟ್ಟಿತ್ತು.
ನ್ಯಾಷನಲ್ ಜಿಯಾಗ್ರಫಿಯ ಒಂದು ಎಪಿಸೋಡಿನಲ್ಲಿ ಆಸ್ಟ್ರೇಲಿಯಾದ ಅಪ್ಪನೊಬ್ಬ ತನ್ನ ಮಗನನ್ನು ವೇಶ್ಯಾ ಗೃಹಕ್ಕೆ ಕರೆದೊಯ್ಯುವ ಸತ್ಯ ಘಟನೆಯೊಂದು ಪ್ರಸಾರವಾಗಿತ್ತು. ಅದನ್ನು ನೋಡಿದಾಕ್ಷಣವೇ ನಟರಾಜ್ರೊಳಗೆ ಕಥೆಯ ಹೊಳಹೊಂದು ಮಿನುಗಿದಂತಾಗಿತ್ತು. ಆದರೆ, ಅದು ಭಾರತೀಯ ಸಮಾಜ ಅರಗಿಸಿಕೊಳ್ಳುವ ವಿಚಾರವಲ್ಲ. ಅಂಥಾದ್ದೊಂದು ಆಲೋಚನೆಯೂ ಅಸಹ್ಯ ಎಂಬಂಥಾ ಮಡಿವಂತಿಕೆ ನಮ್ಮಲ್ಲಿದೆ. ಹೀಗಿರೋದರಿಂದಲೇ ಈ ಕಥಾ ಎಳೆಯ ಚುಂಗು ಹಿಡಿದು ಬೇರೊಂದು ದಿಕ್ಕಿನಲ್ಲಿ ಆಲೋಚಿಸಿ ಚೆಂದ ಕಥೆಯೊಂದನ್ನು ನಟರಾಜ್ ಸಿದ್ಧಪಡಿಸಿದ್ದರಂತೆ. ಅದುವೇ ಮೈ ಕೈ ತುಂಬಿಕೊಂಡು ಇದೀಗ ವೀಲ್ಚೇರ್ ರೋಮಿಯೋ ಆಗಿ ಪ್ರೇಕ್ಷಕರ ಮುಂದೆ ಅವತರಿಸುವ ಸನ್ನಾಹದಲ್ಲಿದೆ.
ಕಿರುತೆರೆ ಧಾರಾವಾಹಿಗಳ ಮೂಲಕ ಮನೆ ಮಾತಾಗಿರುವ ರಾಮ್ ಚೇತನ್ ನಾಯಕನಾಗಿ ನಟಿಸಿದ್ದಾರೆ. ಅಶ್ವಿನಿ ನಕ್ಷತ್ರ ಖ್ಯಾತಿಯ ಮಯೂರಿ ನಟಿಸಿದ್ದಾರೆ. ಸುಚೇಂದ್ರಪ್ರಸಾದ್, ರಂಗಾಯಣ ರಘು, ತಬಲಾ ನಾಣಿ ಮುಂತಾದವರು ಬಹುಮುಖ್ಯ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಸಿನಿಮಾ ಮಂದಿರದಾಚೆಗೂ ಕಾಡಿ ಕಚಗುಳಿ ಇಡುವಂಥಾ ಪಾತ್ರಗಳು ಈ ಚಿತ್ರದಲ್ಲಿವೆ. ಮೇಲುನೋಟಕ್ಕೆ ಇದೊಂದು ಗಂಭಿರವಾದ ಕಥಾನಕದಂತೆ ಕಾಣಿಸುತ್ತದೆ. ಆದರೆ ಹಾಸ್ಯವೇ ಪ್ರಧಾನವಾಗಿರುವಂತೆ ಈ ಚಿತ್ರವನ್ನು ರೂಪಿಸಲಾಗಿದೆಯಂತೆ. ಕೆಲ ಸನ್ನಿವೇಶಗಳು ಕಣ್ಣಂಚನ್ನು ತೇವಗೊಳಿಸಿದರೆ, ಅದರ ಬೆನ್ನಲ್ಲಿಯೇ ತುಟಿಯಂಚಲ್ಲಿ ನಗೆ ಹೊಮ್ಮಿಸುವ ಚಾಕಚಕ್ಯತೆಯೊಂದಿಗೆ ದೃಷ್ಯ ಕಟ್ಟಲಾಗಿದೆಯಂತೆ. ಅದೆಲ್ಲದರ ಅಸಲೀ ರೂಪುರೇಷೆ ಈ ವಾರವೇ ನಿಮ್ಮೆದುರು ತೆರೆದುಕೊಳ್ಳಲಿದೆ.