ಶೋಧ ನ್ಯೂಸ್ ಡೆಸ್ಕ್: ಬಿಜೆಪಿ ಪ್ರಣೀತ ಮಸಲತ್ತುಗಳಿಂದಾಗಿ ದೇಶಾದ್ಯಂತ ಪಕ್ಷಾಂತರಿಗಳ ಹಾವಳಿ ಮೇರೆ ಮೀರಿಕೊಂಡಿದೆ. ಕಾಂಗ್ರೆಸ್ ಮುಕ್ತ ಭಾರತವೆಂಬ ಸಂವಿಧಾನ ವಿರೋಧಿ ಘೋಷಣೆಯೊಂದಿಗೆ ಒಂದು ಕಡೆಯಿಂದ ಕಾಂಗ್ರೆಸ್ಸಿನ ಮಂದಿಯನ್ನು ತಂದು ತುಂಬಿಕೊಳ್ಳುತ್ತಿರುವ ವರಿಷ್ಟರ ನಡೆ ಪಕ್ಷದ ಕಾರ್ಯಕರ್ತರ ಅಸಮಾಧಾನಕ್ಕೆ ಕಾರಣವಾಗಿದೆ. ಈ ಪಕ್ಷಾಂತರ ಪರ್ವದ ಭಾಗವಾಗಿಯೇ ಪಶ್ಚಿಮ ಬಂಗಾಳ ತೃಣಮೂಲ ಕಾಂಗ್ರೆಸ್ಸಿನ ಅರ್ಜುನ್ ಸಿಂಗ್ ಬಿಜೆಪಿ ಸೇರಿಕೊಂಡಿದ್ದರು. ಭಾರೀ ಹುಮ್ಮಸ್ಸಿನಿಂದ ಬಿಜೆಪಿ ಸೇರಿಕೊಂಡಿದ್ದ ಅವರೀಗ ಹಠಾತ್ತನೆ ಮತ್ತೆ ಹಳೇ ದೊಡ್ಡಿ ಸೇರಿಕೊಂಡಿದ್ದಾರೆ!
ಕಳೆದ ಲೋಕಸಭಾ ಚುನಾವಣೆಯ ಹೊತ್ತಿಗೆಲ್ಲ ಅರ್ಜುನ್ ಸಿಂಗ್ ಏಕಾಏಕಿ ಬಿಜೆಪಿ ಪಾಳೆ ಸೇರಿಕೊಂಡಿದ್ದರು. ಹೀಗೆಯೇ ಅನೇಕ ಮಂದಿ ಟಿಎಂಸಿಯಿಂದ ಬಿಜೆಪಿಗೆ ನೆಗೆದಿದ್ದರು. ಇದಕ್ಕೆ ಫಲವಾಗಿ ಅರ್ಜುನ್ರನ್ನು ಬಿಜೆಪಿ ವೈಸ್ ಪ್ರೆಸಿಡೆಂಟ್ ಕೂಡಾ ಮಾಡಿತ್ತು. ಆದರೆ ಸ್ವಪಕ್ಷದಿಂದಲೇ ಅವರಿಗೆ ಹೇಳಿಕೊಳ್ಳುವಂಥಾ ಸಹಕಾರ ಸಿಕ್ಕಿರಲಿಲ್ಲ. ಅದಾಗಿ ಸ್ವಲ್ಪ ದಿನ ಕಳೆಯೋದರೊಳಗೆ ಮಮತಾ ಬ್ಯಾನರ್ಜಿ ಬಿಜೆಪಿಗೆ ಸೆಡ್ಡು ಹೊಡೆದು ಗೆದ್ದು ಬಂದಿದ್ದಾರೆ. ಆ ಪಲ್ಲಟದಿಂದಾಗಿ ಬಿಜೆಪಿ ಸೇರಿದ್ದ ಒಂದಷ್ಟು ಮಂದಿ ಮತ್ತೆ ಟಿಎಂಸಿ ಸೇರಿಕೊಂಡಿದ್ದರು.
ಅರ್ಜುನ್ ಸಿಂಗ್ಗೂ ಕೂಡಾ ಮಮತಾ ದೀದಿಗೆ ಸೆಡ್ಡು ಹೊಡೆದು ಏನನ್ನೂ ಮಾಡಲಾಗೋದಿಲ್ಲ ಎಂಬಂಥಾ ಜ್ಞಾನೋದಯವಾಯ್ತೋ ಏನೋ… ಅವರೀಗ ಸಮಯ ನೋಡಿಕೊಂಡು ಬಿಜೆಪಿ ತೊರೆದು ಮತ್ತೆ ತೃಣಮೂಲ ಕಾಂಗ್ರೆಸ್ಗೆ ಮರಳಿದ್ದಾರೆ. ಈಗಾಗಲೇ ಮೋದಿ ಹವಾ ಆಗಲಿ, ಅಮಿತ್ ಶಾರಂಥವರ ಅಬ್ಬರ ಆರ್ಭಟಗಳಾಗಲಿ ಪಶ್ಚಿಮ ಬಂಗಾಳದಲ್ಲಿ ವರ್ಕೌಟ್ ಆಗೋದಿಲ್ಲವೆಂಬುದು ಸಾಬೀತಾಗಿದೆ. ಅದರ ಭಾಗವಾಗಿಯೇ ಅರ್ಜುನ್ ಸಿಂಗ್ರಂಥಾ ನಾಯಕರು ಮತ್ತೆ ಹಳೇ ದೊಡ್ಡಿ ಸೇರಿಕೊಂಡು ಸೇಫ್ ಆಗುವ ತಂತ್ರಕ್ಕೆ ಕಟ್ಟುಬಿದ್ದಿದ್ದಂತಿದೆ.