ಶೋಧ ನ್ಯೂಸ್ ಡೆಸ್ಕ್: ಅದೆಷ್ಟೋ ಮಂದಿ ಜೀವ ಉಳಿಸಿಕೊಳ್ಳುವುದಕ್ಕಾಗಿ, ಬದುಕೋದಕ್ಕಾಗಿ ಸಾಕಷ್ಟು ಕಸರತ್ತುಗಳನ್ನು ನಡೆಸುತ್ತಾರೆ. ಅದೇ ಹೊತ್ತಿನಲ್ಲಿ ಮತ್ತೊಂದಷ್ಟು ಮಂದಿ ಇರೋ ಗಟ್ಟಿಮುಟಾದ ದೇಹದ ಮೂಳೆ ಮುರಿಸಿಕೊಳ್ಳಲು, ನಡು ಬೀದಿಯಲ್ಲಿ ಕಣ್ಮುಚ್ಚಿ, ಮತ್ತೊಂದಷ್ಟು ಮಂದಿಯ ಜೀವ ತೆಗೆಯಲು ಮಾಡಬಾರದ ಸರ್ಕಸ್ಸು ನಡೆಸುತ್ತಾರೆ. ಪೊಲೀಸ್ ವ್ಯವಸ್ಥೆ ಅದೆಷ್ಟೇ ಕಣ್ಗಾವಲಿಟ್ಟರೂ ಇಂಥಾ ಕಚೇಷ್ಟೆಗಳು ಮಾತ್ರ ಕೊಂಚವೂ ತಗ್ಗುತ್ತಿಲ್ಲ.
ಇದರ ಭಾಗವಾಗಿಯೇ ಹಾದಿ ಬೀದಿಗಳಲ್ಲಿ ವೀಲಿಂಗ್ ಮಾಡುವಂಥಾ ಹುಚ್ಚು ಆಗಾಗ ಕೆದರಿಕೊಳ್ಳುತ್ತೆ. ಆದರೆ ನೋಯ್ಡಾದಲ್ಲೊಬ್ಬ ಇಂಥಾ ತಿರ್ಕೆ ಶೋಕಿಯ ಉಚ್ಛ್ರಾಯ ಸ್ಥಿತಿ ತಲುಪಿಕೊಂಡಿದ್ದಾನೆ. ಈ ಆಸಾಮಿ ಬೈಕ್ನಲ್ಲಿ ವೀಲಿಂಗ್ ನಡೆಸಿ ಹುಚ್ಚಾಟ ನಡೆಸುವ ವಿಡಿಯೋ ಮತ್ತು ಎರಡು ಚಲಿಸುವ ಎಸ್ಯುವಿ ಕಾರುಗಳ ಬಾನೆಟ್ಟಿನಲ್ಲಿ ನಿಂತು ಸವಾರಿ ಮಾಡೋ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ವಾಹನಗಳು ಅತಿಯಾಗಿ ಓಡಾಡೋ ರಸ್ತೆಯಲ್ಲಿ ನಡೆದ ಈ ಹುಚ್ಚಾಟ ಕಂಡು ಕಾಳಜಿಯುಳ್ಳ ನೆಟ್ಟಿಗರೆಲ್ಲ ಗರಂ ಆಗಿದ್ದರು.
ಅದು ನಿಜಕ್ಕೂ ಅತ್ಯಂತ ಅಪಾಯಕರವಾದ ಸ್ಟಂಟು. ನಡು ರಸ್ತೆಯಲ್ಲಿ ಚಲಿಸುತ್ತಿರುವ ಎರಡು ಕಾರುಗಳ ಮೇಲೆ ನಿಂತು ಶೋಕಿ ಪ್ರದರ್ಶಿಸೋದೇನು ಸಾಮಾನ್ಯದ ಅಪರಾಧವಾ? ಆ ಆಸಾಮಿ ತಾನು ಸಾಯೋದಲ್ಲದೆ, ಕೊಂಚ ಯಾಮಾರಿದರೂ ಬಡಪಾಯಿಗಳ ಪ್ರಾಣ ಪಕ್ಷಿಯೂ ಹಾರಿ ಹೋಗತ್ತದೆ. ಯಾವಾಗ ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಲಾರಂಭಿಸಿತೋ ಆ ಕ್ಷಣವೇ ನೋಯ್ಡಾ ಪೊಲೀಸರು ಅಖಾಡಕ್ಕಿಳಿದಿದ್ದಾರೆ. ಆ ಸ್ಟಂಟು ಮಾಡಿದಾತನನ್ನು ಬಂಧಿಸಿ ದ್ವಿಚಕ್ರ ವಾಹನ ಮತ್ತು ಎರಡು ಎಸ್ಯುವಿ ಕಾರುಗಳನ್ನು ಸೀಜ್ ಮಾಡಿದ್ದಾರೆ. ಪೊಲೀಸರ ಈ ಕ್ಷಿಪ್ರ ಕಾರ್ಯಾಚರಣೆಗೆ ನಾಗರಿಕರ ಕಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.