ಕೊರೋನಾ ಮರೆಯಾದ ಮೇಲೆ ನಾಯಿ ಬಾಲ ಡೊಂಕು!
ಶೋಧ ನ್ಯೂಸ್ ಡೆಸ್ಕ್: ಈ ಮನುಷ್ಯ ಪ್ರಾಣಿಗಳು ಕೊರೋನಾದಂಥಾ ಸಾಂಕ್ರಾಮಿಕ ಕಾಯಿಲೆ ಬಂದು ಎಂತೆಂಥಾ ಪಾಠ ಕಲಿಸಿದರೂ ಬುದ್ಧಿ ಕಲಿಯುವುದಿಲ್ಲ. ಮುಂದ್ಯಾವತ್ತಾದರೂ ಕಲಿಯಬಹುದೆಂಬ ನಿರೀಕ್ಷೆಗಳೂ ತಪ್ಪೇನೋ. ಕೊರೋನಾ ಬಂದಾಗ ಆಕ್ಸಿಜನ್ನಿಗೂ ಗತಿಯಿಲ್ಲದೆ ಜನರೆಲ್ಲ ಹುಳುಗಳಿಗಿಂತಲೂ ಕಡೆಯಾಗಿ ನರಳಿ ಸತ್ತಿದ್ದರು. ಮನೆಯೊಳಗೇ ಕುಂತು ಅದನ್ನು ಕಂಡ ಮಂದಿಗೆ ನಖಶಿಖಾಂತ ಪರಿಸರ ಪ್ರೇಮ ಉಕ್ಕಿ ಹರಿದಿತ್ತು. ಪರಿಸರದ ಬಗ್ಗೆ ಕಾಳಜಿಯೇನು? ಅದರ ಬಗ್ಗೆ ಕೂತಲ್ಲಿಂದಲೇ ಮಾಡಿದ ತಿಳಿವು ಮೂಡಿಸುವ ಯಾರ್ಯ ನಡೆಸಿದ್ದೇನು… ಇದೀಗ ಕೋವಿಡ್ ರುದ್ರನರ್ತನ ಕೊಂಚ ಕಡಿಮೆಯಾಗಿದೆ. ಮನುಷ್ಯರ ಬುದ್ಧಿಯೆಂಬೋ ನಾಯಿ ಬಾಲ ಮತ್ತೆ ಡೊಂಕಾಗಿದೆ.
ಕೊರೋನಾ ಅಮರಿಕೊಂಡಾಗ ಆಕ್ಸಿಜನ್ನು ಸಿಗದೆ ನರಳಾಡಿದೆವಲ್ಲಾ? ಆಗ ನಮಗೆಲ್ಲ ಪ್ರಕೃತಿ ಪುಕ್ಕಟೆ ಕೊಡುವ ಆಕ್ಸಿಜನ್ನಿನ ಬಗ್ಗೆ ಅರಿವಾಗಿತ್ತು. ಪ್ರಕೃತಿಯನ್ನು ಕಲುಷಿತಗೊಳಿಸದೆ ಅದರ ಪಾಡಿಗದನ್ನು ಬಿಡಬೇಕೆಂಬ ಬುದ್ಧಿಯೂ ಬಂದಿತ್ತು. ಆದರೆ ಜನ ಎಂಥಾ ದುಷ್ಟತನ ಹೊಂದಿದ್ದಾರೆಂಬುದಕ್ಕೆ ಪ್ರವಾಸಿ ತಾಣಗಳಲ್ಲಿ ರಾಶಿ ಬಿದ್ದಿರುವ ಕಸ, ಪ್ಲಾಸ್ಟಿಕ್ಕು ಐಟಮ್ಮುಗಳಿಗಿಂತಲೂ ಬೇರೆ ಉದಾಹರಣೆ ಬೇಕಿಲ್ಲ. ಭಕ್ತಿಯ ಸಂಕೇತವಾಗಿರೋ ಕೇದಾರನಾಥ ದೇವಾಲಯದ ಆಸುಪಾಸಲ್ಲಿ ಬಿದ್ದಿರುವ ಕಸವಂತೂ ಮನುಷ್ಯನ ಕೊಳಕು ಮನಸಿನ ಪ್ರತೀಕದಂತೆಯೇ ಭಾಸವಾಗುತ್ತದೆ.
ಕೋವಿಡ್ ದಯೆಯಿಂದ ಎರಡು ವರ್ಷಗಳ ಕಾಲ ಕೇದಾರನಾಥ ಯಾತ್ರೆಯನ್ನು ರದ್ದುಗೊಳಿಸಲಾಗಿತ್ತು. ಆ ಅವಧಿಯಲ್ಲಿ ಆ ಪರಿಸರ ಮತ್ತೆ ಸ್ವಚ್ಛಗೊಂಡು ನಳನಳಿಸಿತ್ತು. ಇದೀಗ ಮತ್ತೆ ಯಾತ್ರೆ ಚಾಲೂ ಆಗಿದೆ. ಚಾರ್ ಧಾಮ್ ಯಾತ್ರೆಯ ನಡುವೆ ಕೇದಾರನಾಥ ಯಾತ್ರಿಗಳ ಕ್ಯಾಂಪ್ಗಳಲ್ಲೀಗ ಕಸ ಗುಡ್ಡೆ ಬಿದ್ದಿದೆ. ಈ ಬಗೆಗಿನ ಫೋಟೋಗಳು ಮತ್ತು ವಿಡಿಯೋಗಳನ್ನು ಮಾಧ್ಯಮಗಳು ಪ್ರಸಾರ ಮಾಡಿದ ನಂತರ ಸಾಮಾಜಿಕ ಜಾಲತಾಣಗಳಲ್ಲಿಯೂ ವೈರಲ್ ಆಗಿವೆ. ಅಲ್ಲೆಲ್ಲೋ ಕೇದಾರನಾಥ ದೇವಾಲಯದಲ್ಲಿ ದೇವರಿದ್ದಾನೆಂದು ನಂಬಿ ಹೋಗೋ ಮಂದಿಗೆ ಆ ವಾತಾವರಣ ಮಾತ್ರ ಕಸದ ತೊಟ್ಟಿಯಂತೆ ಕಾಣುತ್ತಿರೋದು ನಿಜಕ್ಕೂ ನಾಚಿಕೆಗೇಡಿನ ಸಂಗತಿ. ಕಣಕಣದಲ್ಲಿಯೂ ದೇವರಿದ್ದಾನೆಂಬ ಪರಿಪೂರ್ಣ ಭಕ್ತಿ ಹೊಂದಿರುವ ಯಾರೇ ಆದರೂ ಇಂಥಾ ಗಲೀಜು ಸೃಷ್ಟಿಸೋದಿಲ್ಲ. ಭಕ್ತಿಯ ಹೆಸರಲ್ಲಿ ಯಾತ್ರೆ ಹೋಗಿ ಪ್ರಕೃತಿಯನ್ನು ಹಾಳುಗೆಡವಿ ಬರುವ ಮುಠ್ಠಾಳರನ್ನು ಯಾವ ದೇವರೂ ಕ್ಷಮಿಸುವುದಿಲ್ಲ!