ಇದೀಗ ದಕ್ಷಿಣ ಭಾರತದ ಚಿತ್ರಗಳನೇಕವು ದೇಶ ವಿದೇಶಗಳಲ್ಲಿ ಸದ್ದು ಮಾಡುತ್ತಿವೆ. ಭಾರತೀಯ ಚಿತ್ರ ರಂಗವೆಂದರೆ ಬಾಲಿವುಡ್ ಮಾತ್ರ ಎಂಬಂತೆ ಬಿಂಬಿಸಿಕೊಳ್ಳುತ್ತಿದ್ದ ಮಂದಿ ಈ ಬೆಳವಣಿಗೆಗಳ ವಿರುದ್ಧ ಕುದ್ದು ಹೋಗಿದ್ದಾರೆ. ಆದರೆ ಕ್ವಾಲಿಟಿ ಕಂಟೆಂಟಿನ ಮೂಲಕವಷ್ಟೇ ಸಾಬೀತಾಗಬೇಕಿರೋ ಈ ವಿಚಾರದ ಮುಂದೆ ಒಣ ಮಾತುಗಳು, ದೌಲತ್ತಿನ ಹೇಳಿಕೆಗಳೆಲ್ಲವೂ ಮಂಕು ಹೊಡೆಯುತ್ತಿವೆ. ಒಂದು ಕಾಲದಲ್ಲಿ ದಕ್ಷಿಣ ಭಾರತೀಯ ಚಿತ್ರರಂಗಗಳನ್ನು ಕಾಲ ಕಸಕ್ಕಿಂತಲೂ ಕಡೆಯಾಗಿ ನೋಡುತ್ತಿದ್ದವರೆಲ್ಲ ಪ್ರತಿಭೆಯ ಮೂಲಕವೇ ಕಂಡು ಬರುತ್ತಿರುವ ಪ್ರತಿರೋಧಗಳನ್ನು ಕಂಡು ಕಂಗಾಲಾಗಿದ್ದಾರೆ. ಹೀಗೆ ಭಾಷೆ ಭಾಷೆಗಳ ನಡುವೆ ಸಿನಿಮಾ ಮಾಧ್ಯಮದಲ್ಲಿಯೂ ಬೆಂಕಿ ಬಿದ್ದಿರುವ ಈ ಘಳಿಗೆಯಲ್ಲಿ ಪ್ರಸ್ತುತ ಸನ್ನಿವೇಶದ ಬಗ್ಗೆ ಮಂಗಳೂರು ಮೂಲದ ನಟಿ ಪೂಜಾ ಹೆಗ್ಡೆ ತನ್ನ ಅಭಿಪ್ರಾಯ ಮಂಡಿಸಿದ್ದಾಳೆ.
ಹಿಂದಿ ಮತ್ತು ದಕ್ಷಿಣ ಭಾರತೀಯ ಚಿತ್ರಗಳ ಬಗ್ಗೆ ಇದೀಗ ಚರ್ಚೆಗಳು ನಡೆಯುತ್ತಿವೆಯಲ್ಲಾ? ಈ ಬಗ್ಗೆ ಪೂಜಾ ಹೆಗ್ಡೆ ಬಿಡುಬೀಸಾಗಿ ಮಾತಾಡಿದ್ದಾಳೆ. ನಾವೆಲ್ಲರೂ ಒಂದೇ ದೇಶದವರು ಮತ್ತು ಇದು ಎಲ್ಲವೂ ಒಗ್ಗೂಡಿರುವ ಭಾರತೀಯ ಚಿತ್ರರಂಗ ಎಂಬ ಅಭಿಪ್ರಾಯ ಹೊರಹಾಕಿದ್ದಾಳೆ. ಹೀಗಹೆ ಭಾಷೆಗಳ ಆಧಾರದಲ್ಲಿ ಇಬ್ಬಾಗವಾಗೋದನ್ನು ನಿಲ್ಲಿಸಬೇಕು. ಇದೆಲ್ಲವನ್ನೂ ಮೀರಿ ಎಲ್ಲ ಭಾಷೆಗಳ ಚಿತ್ರರಂಗದ ಮಂದಿಯೂ ಭಾರತೀಯ ಚಿತ್ರರಂಗವೆಂಬ ಪರಿಕಲ್ಪನೆಯ ಅಡಿಯಲ್ಲಿ ಮುಂದುವರೆಯಬೇಕು ಎಂಬ ಅನಿಸಿಕೆಯನ್ನೂ ಕೂಡಾ ಪೂಜಾ ಚರ್ಚೆಯೊಂದರಲ್ಲಿ ಹಂಚಿಕೊಂಡಿದ್ದಾಳೆ.
ಮಂಗಳೂರಿನ ಹುಡುಗಿ ಪೂಜಾ ಹೆಗ್ಡೆಯೀಗ ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಬಹು ಬೇಡಿಕೆಯ ನಟಿಯಾಗಿ ಮಿಂಚುತ್ತಿದ್ದಾಳೆ. ಬಾಲಿವುಡ್ ಸ್ಟಾರ್ ಹೃತಿಕ್ ರೋಷನ್ ಜೋಡಿಯಾಗಿ ಮೊಹೆಂಜದಾರೋ ಚಿತ್ರದ ಮೂಲಕ ಬಾಲಿವುಡ್ಗೆ ಎಂಟ್ರಿ ಕೊಟ್ಟಿದ್ದ ಪೂಜಾ ಈಗ ತೆಲುಗಿನಲ್ಲಿ ಬಹಳಷ್ಟು ಅವಕಾಶಗಳೊಂದಿಗೆ ಸ್ಟಾರ್ ನಟಿಯಾಗಿ ಗುರುತಿಸಿಕೊಂಡಿದ್ದಾಳೆ. ಮಂಗಳೂರು ಮೂಲದ ಕನ್ನಡದ ಹುಡುಗಿ ಪೂಜಾ ಚಿತ್ರವೊಂದಕ್ಕೆ ಪಡೆಯುತ್ತಿರೋ ಸಂಭಾವನೆ ಎಂಥವರೂ ಅಚ್ಚರಿಗೀಡಾಗುವಂತಿದೆ.
ಪೂಜಾ ಇದೀಗ ಬೇರೊಂದು ಚಿತ್ರವನ್ನು ಒಪ್ಪಿಕೊಂಡಿದ್ದಾಳೆ. ಆ ಚಿತ್ರಕ್ಕಾಗಿ ಪಡೆದುಕೊಂಡಿರೋ ಸಂಭಾವನೆಯ ಮೂಲಕವೇ ಪೂಜಾ ಸದ್ದು ಮಾಡಿದ್ದಾಳೆ. ಅದಕ್ಕಾಗಿ ಈಕೆ ಪಡೆದುಕೊಂಡಿರೋದು ಭರ್ತಿ ಒಂದು ಕೋಟಿ. ಕನ್ನಡದ ಹುಡುಗಿಯ ಈ ಖದರ್ ಕಂಡು ತೆಲುಗು ನಟಿಯರೇ ಹೌಹಾರುವಂತಾಗಿದೆ. ಮಹೇಶ್ ಬಾಬು ಸೇರಿದಂತೆ ಹಲವಾರು ಸ್ಟಾರ್ ನಟರೊಂದಿಗೆ ನಟಿಸಿರೋ ಪೂಜಾ ಮಹರ್ಶಿ ಚಿತ್ರದ ಮೂಲಕವೂ ಹೆಸರು ಮಾಡಿದ್ದಳು. ಈಗಂತೂ ಆಕೆಯ ಬೇಡಿಕೆ ಏರಿಕೊಳ್ಳುತ್ತಲೇ ಇದೆ. ಆದ್ದರಿಂದಲೇ ತೆಲುಗು ಬಿಟ್ಟು ಬೇರ್ಯಾವ ಭಾಷೆಗಳತ್ತಲೂ ಪೂಜಾ ಹೊರಳಿ ನೋಡುತ್ತಿರಲಿಲ್ಲ. ಈಗ ಮತ್ತೆ ಮೆಲ್ಲಗೆ ಬಾಲಿವುಡ್ ಸಿನಿಮಾಗಳತ್ತ ಮುಖ ಮಾಡಿರುವ ಪೂಜಾಳ ಈ ಹೇಳಿಕೆಯ ಬಗ್ಗೆಯೂ ನಾನಾ ದಿಕ್ಕಿನ ಚರ್ಚೆಗಳು, ಮೆಚ್ಚುಗೆಯ ಮಾತುಗಳು ಕೇಳಿ ಬರುತ್ತಿವೆ.