ಶೋಧ ನ್ಯೂಸ್ ಡೆಸ್ಕ್: ಕೊರೋನಾದ ನಾಲ್ಕನೇ ಅಲೆ ಅಲ್ಲಲ್ಲಿ ವಿಶ್ವದ ನಾನಾ ದೇಶಗಳನ್ನು ಬಾಧಿಸಲಾರಂಭಿಸಿದೆ. ಬೇರೇನೂ ಸರಕು ಸಿಕ್ಕದೇ ಹೋದರೆ ಭಾರತೀಯ ದೃಷ್ಯ ಮಾಧ್ಯಮಗಳೂ ಕೂಡಾ ಆ ಬಗ್ಗೆ ಗಂಟಲು ಹರಿದುಕೊಂಡು ಬಯಬೀಳಿಸಲು ಸನ್ನದ್ಧವಾಗಿವೆ. ಇಂಥಾ ಹೊತ್ತಿನಲ್ಲಿ ಮತ್ತೊಂದು ಮಾರಕ ಸಾಂಕ್ರಾಮಿಕ ಜಗತ್ತನ್ನು ಕಂಗಾಲು ಮಾಡಿದೆ. ಮಂಕಿಪಾಕ್ಸ್ ಎಂಬ ಈ ಸಾಂಕ್ರಾಮಿಕ ಕಾಯಿಲೆ ಈಗಾಗಲೇ ವಿಶ್ಯಾದ್ಯಂತ ಹಬ್ಬಿಕೊಂಡು ಭಾರತಕ್ಕೂ ನುಸುಳಿದೆ.
ಈ ಹಿಂದೆ ಚೀನಾದ ವುಹಾಂಗ್ನಲ್ಲಿಯೂ ಕೊರೋನಾ ವೈರಸ್ಸು ಇದೇ ರೀತಿ ಕಾಣಿಸಿಕೊಂಡಿತ್ತು. ಆ ಘಳಿಗೆಯಲ್ಲಿ ಅದು ಮುಂದೊಂದು ದಿನ ವಿಶ್ವಕ್ಕೇ ಹಬ್ಬಿಕೊಂಡು ನಮ್ಮನ್ನೂ ಕಾಡುತ್ತದೆಂಬ ಕಲ್ಪನೆ ಯಾರಿಗೂ ಇದ್ದಿರಲಿಕ್ಕಿಲ್ಲ. ಇದೀಗ ಮಂಕಿಪಾಕ್ಸ್ ಕೂಡಾ ಅಂಥಾದ್ದೇ ಡೇಂಜರಸ್ ರೂಪ ಧರಿಸಿಕೊಂಡು ಮುಂದುವರೆಯುತ್ತಿದೆ. ವಿಶೇಷವೆಂದರೆ ಈ ಬಾರಿ ಬಹುತೇಕ ದೇಶಗಳು ಆರಂಭಿಕವಾಗಿಯೇ ಬಿಗಿ ಕ್ರಮಗಳನ್ನು ಕೈಗೊಳ್ಳುತ್ತಿವೆ. ಅದರಲ್ಲಿಯೂ ಬಾಂಗ್ಲಾ ದೇಶದಲ್ಲಿಯಂತೂ ಬೇರೆ ದೇಶಗಳಿಗೂ ಮಾದರಿಯೆಂಬಂಥಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
ಬಾಂಗ್ಲಾದಲ್ಲಿ ಇದುವರೆಗೂ ಒಂದೇ ಒಂದು ಮಂಕಿಪಾಕ್ಸ್ ಕೇಸುಗಳು ದಾಖಲಾಗಿಲ್ಲ. ಆದರೆ ಅದಾಗಲೇ ಅಲ್ಲಿನ ಸರ್ಕಾರ ಮಂಕಿಪಾಕ್ಸ್ ಬಗ್ಗೆ ಎಚ್ಚರಿಕೆಯ ಸಂದೇಶ ರವಾನಿಸಿದೆ. ಕಟ್ಟು ನಿಟ್ಟಿನ ಕ್ರಮಗಳನ್ನೂ ತೆಗೆದುಕೊಂಡಿದೆ. ಈ ವೈರಸ್ಸು ಕಂಡು ಬಂದಿರುವ ದೇಶಗಳಿಂದ ಬರುತ್ತಿರುವ ಪ್ರಯಾಣಿಕರನ್ನು ನಾನಾ ತಪಾಸಣೆಗೊಳಪಡಿಸಲಾಗುತ್ತಿದೆ. ವಿಮಾನ, ನೌಕೆ ಸೇರಿದಂತೆ ಎಲ್ಲ ಮಾರ್ಗಗಳಿಂದ ಆಗಮಿಸುವವರನ್ನೂ ಕೂಡಾ ಪರೀಕ್ಷೆಗೊಳಪಡಿಸಿಯೇ ಬಿಟ್ಟುಕೊಳ್ಳಲಾಗುತ್ತಿದೆ. ಇದು ನಿಜಕ್ಕೂ ಎಲ್ಲ ದೇಶಗಳಿಗೂ ಮಾದರಿಯಾಗುವಂಥಾ ನಡೆ.