ಸುಂದರ ಪತಂಗದ ಬಗೆಗೊಂದು ಬೆರಗು ಮೂಡಿಸೋ ವಿಚಾರ!
ಈ ಜೀವ ಜಗತ್ತು ಮತ್ತು ಅದಕ್ಕೆ ಪ್ರಕೃತಿಯೇ ಕೊಡಮಾಡಿರೋ ಸೌಕರ್ಯಗಳು ಯಾವ ನಿಲುಕಿಗೂ ಸಿಗುವಂಥಾದ್ದಲ್ಲ. ಅದರಲ್ಲೊಂದಷ್ಟನ್ನು ಒಂದಷ್ಟು ಅಧ್ಯಯನಗಳು ಜಾಹೀರು ಮಾಡಿವೆಯಷ್ಟೆ. ಇಡೀ ಜಗತ್ತು ಯಾವುದೋ ಸ್ಪರ್ಧೆಗೆ ಬಿದ್ದಿರುವಾಗ ಒಂದಷ್ಟು ಜೀವಗಳು ಜೀವಜಗತ್ತಿನ ಸೂಕ್ಷ್ಮಗಳಿಗೆ ಕಣ್ಣಾಗಿವೆ. ಪುಟ್ಟ ಜೀವಿಗಳ ಮಿಸುಕಾಟವನ್ನೂ ಮನನ ಮಾಡಿಕೊಳ್ಳೋ ಉತ್ಸಾಹವೇ ಜೀವಜಾಲದ ಒಂದಷ್ಟು ಅಚ್ಚರಿಗಳನ್ನು ನಮ್ಮೆದುರಿಗೆ ತೆರೆದಿಟ್ಟಿವೆ. ಅದರ ಫಲವಾಗಿಯೇ ನೋಡಿದಾಕ್ಷಣ ಮನಸನ್ನು ಪ್ರಫುಲ್ಲಗೊಳಿಸೋ ಚಿಟ್ಟೆಗಳ ಬಗ್ಗೆಯೂ ಅಧ್ಯಯನಗಳು ನಡೆದಿವೆ. ಅದು ಅನಾವರಣಗೊಳಿಸಿರೋ ಸತ್ಯ ನಿಜಕ್ಕೂ ಆಹ್ಲಾದಕರವಾಗಿದೆ. ನಮಗೆಲ್ಲ ಸಿಹಿ, ಕಹಿ, ಒಗರಿನಂಥಾ ಎಲ್ಲ ರುಚಿಗಳನ್ನೂ ಗ್ರಹಿಸೋ ಏಕೈಕ ಅಂಗ ನಾಲಗೆ. ರುಚಿಯನ್ನು ಆಘ್ರಾಣಿಸೋ ಗಂಥಿಗಳೆಲ್ಲ ಇರೋದು ನಮ್ಮ ನಾಲಗೆಯಲ್ಲಿಯೇ. ಒಂದು ವೇಳೆ ನಮ್ಮ ಕೈನಲ್ಲೋ, ಪಾದದಲ್ಲೋ ರುಚಿಯ ಗ್ರಂಥಿ ಇದ್ದಿದ್ದರೆ ಗ್ರಹಿಸಬಾರದ ರುಚಿಗಳನ್ನೆಲ್ಲ ಗ್ರಹಿಸಿ ವಾಂತಿ ಮಾಡಿಕೊಳ್ಳಬೇಕಾಗ್ತಿತ್ತೇನೋ. ನಮ್ಮ ಪಾಲಿಗೆ ಅಸಾಧ್ಯ ಅನ್ನಿಸೋ ಅಂಗದಲ್ಲಿಯೇ ಚಿಟ್ಟೆಗೆ ಪ್ರಕೃತಿ ರುಚಿಯ ಗಂಥಿಯನ್ನಿಟ್ಟಿದೆ. ವಿಶೇಷ ಅಂದ್ರೆ, ಈ ಚಿಟ್ಟೆಗಳು ರುಚಿಯನ್ನು ಗ್ರಹಿಸೋದು ಅವುಗಳ ಕಾಲಿನ ಮೂಲಕ. ಅದು ಸುಮ್ಮನೆ ಎಲ್ಲಿ ಹೋಗಿ ಕೂತರೂ ಅದರ ಹಿಂದೆ ಆಹಾರ ಅರಸೋ ಉದ್ದೇಶವಿರುತ್ತೆ. ಒಂದು ಎಲೆಯ ಮೇಲೆ ಅದು ಹಾರಿ ಕೂತರೂ ಅದರ ರುಚಿಯನ್ನದು ಬೇಗನೆ ಪತ್ತೆ ಹಚ್ಚುತ್ತೆ.
ಹೀಗಿರೋದರಿಂದಲೇ ಚೆಂದದ ಪರಾಗ ಹೊದ್ದು ಹಾರಾಡೋ ಈ ಮುದ್ದಾದ ಜೀವಿ ಆಹಾರಕ್ಕೆ ತತ್ವಾರ ಪಡೋದಿಲ್ಲ. ತನಗಿಷ್ಟವಾದ ಆಹಾರದಾಚೆಗೂ ಕೆಲವೊಮ್ಮೆ ಕಾಂಪ್ರೋಮೈಸ್ ಮಾಡಿಕೊಂಡು ಉದರ ತುಂಬಿಸಿಕೊಳ್ಳುತ್ತೆ. ಹೀಗೆ ಬೇಗನೆ ತನ್ನ ಆಹಾರ ಪತ್ತೆಹಚ್ಚೋ ಚಿಟ್ಟೆ ಅದನ್ನು ಕಬಳಿಸಲು ನಾಲಗೆಯನ್ನೇ ಆಶ್ರಯಿಸಿದೆ. ಆಹಾರ ಸಿಕ್ಕಾಕ್ಷಣವೇ ತನ್ನ ಕೊಳವೆಯಾಕಾರದ ನಾಲಗೆಯ ಮೂಲಕ ಅದನ್ನು ಹೊಟ್ಟೆಗಿಳಿಸಿಕೊಳ್ಳುತ್ತೆ. ನಾವೆಲ್ಲ ಚಿಟ್ಟೆಗಳು ಹಾದು ಹೋದಾಗೆಲ್ಲ ಉಲ್ಲಸಿತರಾಗುತ್ತೇವೆ. ಕಣ್ಣೆದುರಲ್ಲಿ ಚೆಂದದ ಚಿಟ್ಟೆ ಹಾರಾಡಿದರೂ ಜೀವ ಚೈತನ್ಯ ನರನಾಡಿಗಳಲ್ಲಿ ತುಂಬಿಕೊಂಡಂತಾಗುತ್ತೆ. ಆದರೆ ಪ್ರಕೃತಿ ಅದರ ಉದರ ತುಂಬಿಸಲು ಬೇರೆಯದ್ದೇ ಸೌಕರ್ಯ ಕಲ್ಪಿಸಿದೆ. ಅದು ಎಲ್ಲರನ್ನೂ ಚಕಿತಗೊಳಿಸುವಂತಿದೆ.