ನಮ್ಮೆಲ್ಲರ ದುರಾಸೆಯ ದೆಸೆಯಿಂದಾಗಿ ಒಂದು ಕಡೆಯಿಂದ ಕಾಡುಗಳೆಲ್ಲ (forrest) ನಾಶವಾಗುತ್ತಿವೆ. ಅದೆಷ್ಟೋ ಶತಮಾನಗಳಿಂದ ತಂತಾನೇ ಧ್ಯಾನಸ್ಥವಾಗಿ ಬೆಳೆದಿದ್ದ ಕಾಡು, ಅದರೊಳಗಿರುವ ಅಂದಾಜಿಗೆ ನಿಲುಕದ ಅಸಂಖ್ಯ ಜೀವ ಸಂಕುಲಗಳೆಲ್ಲವೂ ಅವಸಾನ ಹೊಂದಿವೆ. ದುರಂತವೆಂದರೆ, ಒಂದು ಕಡೆಯಿಂದ ಹೊಸ ಹೊಸಾ ಜೀವಿಗಳನ್ನು ಪತ್ತೆಹಚ್ಚುವ ಕಾರ್ಯ ನಡೆಯುತ್ತಿದ್ದರೆ, ಮತ್ತೊಂದು ಕಡೆಯಲ್ಲಿ ಚಿರಪರಿಚಿತ ಜೀವಿಗಳೇ ಶಾಶ್ವತವಾಗಿ ಇನ್ನಿಲ್ಲವಾಗುತ್ತಿವೆ. ಹಾಗೆ ಮರೆಯಾದ, ಅದರ ಅಂಚಿನಲ್ಲಿರುವ ಜೀವಿಗಳಿಗೆ ಸಾವಿರ ಉದಾಹರಣೆಗಳನ್ನು ಕೊಡಬಹುದು. ಆ ಸಾಲಿನಲ್ಲಿ ಪ್ರಧಾನವಾಗಿ ಗುರುತಿಸಿಕೊಳ್ಳೋದು (rafael voltur) ರಾಫೆಪ್ ಗ್ರಿಫನ್!
ಇದು ಭಯಾನಕವಾದ ರಣಹದ್ದುಗಳ ಸಂಕುಲಕ್ಕೆ ಸೇರಿದ್ದೊಂದು ವಿಶಿಷ್ಟ ಪ್ರಬೇಧ. ಯಾವುದೇ ಭೂಭಾಗಗಳಲ್ಲಾದರೂ ಆಹಾರ ಸರಪಳಿಯ ಮತೋಲನ ಕಾಯ್ದುಕೊಳ್ಳುವ ಕ್ರಿಯೆಯಲ್ಲಿ ಹದ್ದುಗಳ ಪಾತ್ರ ಮಹತ್ವದ್ದು. ಆದರೆ, ನಮ್ಮ ದೇಶವೂ ಸೇರಿದಂತೆ ವಿಶ್ವಾದ್ಯಂತ ನಾನಾ ಪ್ರಬೇಧಗಳ ರಣ ಹದ್ದುಗಳು ಅವಸಾನಗೊಂಡಿವೆ. ಆ ಹಂತದ ಅಂಚಿನಲ್ಲಿರುವ ರಾಫೆಲ್ ಗ್ರಿಫನ್ ರಣಹದ್ದುಗಳು ಲಂಡನ್ನಲ್ಲಿವೆ. ಈ ಬಗೆಯ ರಣ ಹದ್ದಿನ ಸಂತತಿ ಬೆರಳೆಣಿಕೆಯಷ್ಟಿತ್ತು. ಆದ್ದರಿಂದಲೇ ಅದೆಷ್ಟೋ ವರ್ಷಗಳ ಹಿಂದೆಯೇ ಈ ರಣಹದ್ದುಗಳನ್ನು ಲಂಡನ್ನಿನ ಮೃಗಾಲಯವೊಂದರಲ್ಲಿ ಜತನದಿಂದ ಕಾಪಾಡಿಕೊಂಡು ಬರಲಾಗಿತ್ತು. ಕಡೆಗೂ ಆ ಶ್ರಮವೀಗ ಫಲ ಕೊಟ್ಟಿದೆ; ಕೃತಕ ಕಾವಿನ ಮೂಲಕ ರಾಫೆಲ್ ಗ್ರಿಫನ್ ರಣಹದ್ದಿನ ಮರಿ ಮೊಟ್ಟೆಯೊಡೆದು ಹೊರ ಬರುವ ಮೂಲಕ!
ಗ್ರಿಫನ್ ಹದ್ದಿನ ಸಂತತಿಯನ್ನು ವೃದ್ಧಿಸಬೇಕೆಂಬ ಕಾರಣದಿಂದಲೇ ಸರಿ ಮೃಗಾಲಯದಲ್ಲಿ ಅವುಗಳನ್ನು ಸಂರಕ್ಷಿಸಲಾಗಿತ್ತು. ಆದರೆ ಅದೆಷ್ಟೇ ಎಚ್ಚರದಿಂದ ಕಾದರೂ ಕೂಡಾ ಅವುಗಳು ಮೊಟ್ಟೆಯೊಡೆದು ಮರಿ ಮಾಡುತ್ತಿರಲಿಲ್ಲ. ಒಂದಲ್ಲ ಎರಡಲ್ಲ… ಭರ್ತಿ ನಲವತ್ತು ವರ್ಷಗಳಷ್ಟು ಕಾಲನ ಈ ಝೂನ ಸಿಬ್ಬಂದಿಗಳು, ತಜ್ಞರು ಕಣ್ಣಲ್ಲಿ ಕಣ್ಣಿಟ್ಟು ಕಾದರೂ ಮರಿ ಮಾಡಸಲು ಸಾಧ್ಯವಾಗಿರಲಿಲ್ಲ. ಕಡೆಗೂ ಹ್ಯಾಚರ್ ಮೂಲಕ ಮೊಟ್ಟೆಯೊಡೆಸಲಾಗಿದೆ. ಕಡೆಗೂ ನಲವತ್ತು ವರ್ಷಗಳ ನಂತರ ರಾಫೆಲ್ ಗ್ರಿಫನ್ ರಣಹದ್ದಿನ ಮರಿಯೊಂದು ಹೊರ ಬಂದಂತಾಗಿದೆ.
ಹುಟ್ಟುತ್ತಲೇ 112 ಗ್ರಾಂನಷ್ಟಿದ್ದ ಈ ಮರಿಯನ್ನು ಅತ್ಯಂತ ಸೂಕ್ಷ್ಮವಾಗಿ ಕಾಪಾಡಿಕೊಳ್ಳಲಾಗುತ್ತಿದೆ. ಆರೋಗ್ಯವಂತವಾಗಿರುವ ಈ ಮರಿ ಬದುಕುಳಿಯುತ್ತದೆಂದು ತಜ್ಞರು ಭರವಸೆ ನೀಡಿದ್ದಾರಂತೆ. ಅಂದಹಾಗೆ, ರಾಫೆಲ್ ಗ್ರಿಫನ್ ರಣಹದ್ದು ಹದ್ದುಗಳ ಅಷ್ಟೂ ಪ್ರಬೇಧಗಳಲ್ಲಿ ಅತ್ಯಂತ ಬಲಿಷ್ಟವಾಗಿವೆ. ಅವು ಲಂಡನ್ನನ್ನು ಹೊರತು ಪಡಿಸಿ ಬೇರ್ಯಾವ ಭೂಭಾಗಗಳಲ್ಲಿಯೂ ಕಂಡು ಬರುವುದಿಲ್ಲ. ಅವು ಸಮುದ್ರ ಮಟ್ಟದಿಂದ 11.300 ಮೀಟರ್ ಎತ್ತರ ಹಾರಬಲ್ಲವು. ಅಲ್ಲಿಂದಲೇ ಬೇಟೆಯನ್ನು ಹುಡುಕಿ, ಕ್ಷಣಾರ್ಧದಲ್ಲಿ ಮೇಲೆರಗಿ ಆಹಾರ ಕಂಡುಕೊಳ್ಳಬಲ್ಲ ಜಾಣ್ಮೆ ರಾಫೆಲ್ಗಳಿಗಿದೆ. ಇಂಥಾ ಅಪರೂಪದ ಪ್ರಬೇಧವನ್ನು ಸಂರಕ್ಷಣೆ ಮಾಡಿದ ಖುಷಿ ಲಂಡನ್ನಿನ ಝೂನ ಸಿಬ್ಬಂದಿ ಮತ್ತು ತಜ್ಞ ವರ್ಗಕ್ಕಿದೆ. ಅದು ಜಗತ್ತಿನ ಎಲ್ಲ ಪಕ್ಷಿ ಪ್ರೇಮಿಗಳು, ಪರಿಸರ ಪ್ರೇಮಿಗಳ ಪಾಲಿಗೂ ಖುಷಿಯ ಸಂಗತಿ ಎಂದರೂ ತಪ್ಪೇನಿಲ್ಲ!