shodha news desk: ಕರ್ನಾಟಕದಲ್ಲಿ ಆಗಾಗ, ಅಲ್ಲಲ್ಲಿ ಸಣ್ಣಗೆ ಮಳೆ (rain) ಹನಿದರೂ ರಣ ಬೇಸಗೆಯ (summer) ರೌದ್ರಾವತಾರ ಯಥಾ ಪ್ರಕಾರ ಮುಂದುವರೆದಿದೆ. ಮತ್ತೊಂದು ಕಡೆಯಿಂದ ಈ ಬಾರಿ ಮುಂಗಾರು, ಹಿಂಗಾರುಗಳೆಲ್ಲವೂ ಕ್ಷೀಣಿಸಿ ದೇಶದಲ್ಲಿ ಬರಗಾಲ ತಾಂಡವವಾಡುತ್ತದೆಂಬಂಥಾ ಹವಾಮಾನ ವರದಿಗಳೂ ಹಬ್ಬಿಕೊಳ್ಳುತ್ತಿವೆ. ಆದರೆ, ಇದೆಲ್ಲದರ ನಡುವಲ್ಲಿಯೇ ನಮ್ಮದೇ ದೇಶದ (assam) ಅಸ್ಸಾಂನಲ್ಲಿ ಮಳೆ ಮತ್ತು ಭೀಕರ ಚಂಡಮಾರುತದ ಜುಗಲ್ಬಂಧಿಯಿಂದ ದೊಡ್ಡ ಮಟ್ಟದಲ್ಲಿ ದುರಂತಗಳು ಸಂಭವಿಸುತ್ತಿವೆ. ಪ್ರಾಕೃತಿಕ ವಿಪತ್ತುಗಳಿಂದ ಸದಾ ಜರ್ಝರಿತಗೊಳ್ಳುತ್ತಿರುವ ಅಸ್ಸಾಂ, ಸದ್ಯ ಶುರುವಾಗಿರೋ ಚಂಡಮಾರುತದಿಂದ (thunderstorm) ಅಕ್ಷರಶಃ ತತ್ತರಿಸಿದೆ!
ಹಲವಾರು ಬಾರಿ ನಮ್ಮಲ್ಲಿ ಹವಾಮಾನ ವರದಿಗಳು ತಲೆ ಕೆಳಗಾಗೋದಿದೆ. ಈ ಬಗ್ಗೆ ದೇಶಾದ್ಯಂತ ನಾನಾ ನಮೂನೆಯ ಜೋಕುಗಳೂ ಹಬ್ಬಿಕೊಂಡಿವೆ. ಅದೆಷ್ಟೋ ಸಾರಿ ಹವಾಮಾನ ಇಲಾಖೆಯ ಮುನ್ಸೂಚನೆಗಳು ಇಂಥಾ ಜೋಕುಗಳ ನಡುವೆ ಕಳೆದು ಹೋಗುತ್ತವೆ. ಮತ್ತೆ ಕೆಲ ಬಾರಿ ಇಂಥಾ ಮನ್ಸೂಚನೆಗಳೂ ಕೂಡಾ ನಿಸ್ಸಹಾಯಕ ಸ್ಥಿತಿಗಳ ಎದುರು ಗೌಣವಾಗುತ್ತವೆ. ಅಸ್ಸಾಂ ಎಂಬ ಪ್ರಾಕೃತಿಕ ಶ್ರೀಮಂತಿಕೆಯ, ಬಡತನದಲ್ಲಿ ಬೇಯುವ ರಾಜ್ಯದಲ್ಲಿ ಅದೆಲ್ಲದರ ದಾರುಣು ಸ್ಥಿತಿಯೀಗ ಚಾಲ್ತಿಯಲ್ಲಿದೆ. ಯಾಕೆಂದರೆ, ಏಕಾಏಕಿ ಬೀಸಿ ಬಂದ ಚಂಡ ಮಾರುತದ ಹೊಡೆತಕ್ಕೆ ಸಿಕ್ಕು 428ರಷ್ಟು ಕುಟುಂಬಗಳು ಬೀದಿ ಪಾಲಾಗಿವೆ.
ಕರೀಗಂಜ್ ಜಿಲ್ಲೆಯ ಪತ್ತಾರಪಂಡಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಇಂಥಾದ್ದೊಂದು ಅವಘಡ ಸಂಭವಿಸಿದೆ. ಇದ್ದಕ್ಕಿದ್ದಂತೆ ಶುರುವಾದ ಮಳೆ ಮತ್ತು ಅತೀ ವೇಗದ ಚಂಡಮಾರುತ ಈ ಭಾಗದ ಅದೆಷ್ಟೋ ಮನೆಗಳನ್ನು ಧರೆಗುರುಳಿಸಿದೆ. ಏಳು ವರ್ಷದ ಪುಟ್ಟ ಕೂಸೊಂದು ಮನೆಯ ಗೋಡೆ ಕುಸಿದು ಸಾವನ್ನಪ್ಪಿದೆ. ಅದೆಷ್ಟೋ ಜನರು ತೀವ್ರವಾಗಿ ಗಾಯಗೊಂಡಿದ್ದಾರೆ. ಒಟ್ಟಾರೆಯಾಗಿ, ಪತ್ತಾರಪಂಡಿ ಪ್ರದೇಶವೆಂಬುದೀಗ ಅಕ್ಷರಶಃ ಮಸಣದಂತಾಗಿದೆ. ಅಸ್ಸಾಂ ಅಗಾಧ ಪ್ರಾಕೃತಿಕ ಸಂಪತ್ತಿದ್ದರೂ ಬಡತನದ ಬೇಗೆಯಲ್ಲಿ ಬೇಯುತ್ತಿರುವ ಪ್ರದೇಶ. ಅಲ್ಲಿಂದ ದೇಶದ ನಾನಾ ರಾಜ್ಯಗಳಿಗೆ ಜನ ಗುಳೇ ಹೋಗಿ ಹೊಟ್ಟೆ ಹೊರೆದುಕೊಳ್ಳುತ್ತಾರೆ. ಹಾಗೆ ಕಷ್ಟಪಟ್ಟು ಕಟ್ಟಿಕೊಂಡ ಬದುಕು ಆಗಾಗ ಹೀಗೆ ಪ್ರಾಕೃತಿಕ ವಿಕೋಪಗಳಿಗೆ ಸಿಕ್ಕು ಕಂಗಾಲಾಗುತ್ತಿರೋದು ನಿಜಕ್ಕೂ ದುರಂತ…