live bridges: ನಮ್ಮ ಕಣ್ಣು, ಕೈಯಳತೆಯಲ್ಲಿರೋದರ ಬಗ್ಗೆ ನಮ್ಮಲ್ಲೊಂದು ಸದರವಾದ ಭಾವನೆ ಇರುತ್ತೆ. ಅದು ಮನುಷ್ಯ ಸಹಜವಾದ ಗುಣ ಇದ್ದಿರಬಹುದೇನೋ. ಏನಾದರೂ ಸುಂದರವಾದ ಸ್ಥಳಗಳು, ಕುತೂಹಲ ಕರವಾದ ಅಂಶಗಳೆದುರಾದರೆ ಅವೆಲ್ಲ ಯಾವುದೋ ಬೇರೆ ದೇಶದ್ದಿರಬಹುದೆಂದೇ ಅಂದುಕೊಳ್ಳುತ್ತೇವೆ. ಆದರೆ ನಾವು ಸಾಮಾಜಿಕ ಜಾಲತಾಣಗಳಲ್ಲಿಯೋ, ಇತರೇ ಮೂಲಗಳಿಂದಲೇ ಕಣ್ತುಂಬಿಕೊಳ್ಳುವ ಅದೆಷ್ಟೋ ವೈಶಿಷ್ಟ್ಯಗಳು ನಮ್ಮ ಸುತ್ತಲಿನದ್ದೇ ಆಗಿರುತ್ತದೆ ಅನ್ನೋದು ನಿಜವಾದ ಮಜದ ಸಂಗತಿ.
ಜೀವಂತ ಮರದ ಬೇರುಗಳಿಂದಲೇ ರಚನೆಯಾದ ಮೋಹಕ ಸೇತುವೆಗಳನ್ನು ಆಗಾಗ ನೋಡುತ್ತಿರುತ್ತೇವೆ. ಅವುಗಳ ರಚನೆ ಎಂಥವರನ್ನೂ ಅರೆಕ್ಷಣ ಸೆಳೆದುಕೊಂಡು ಅದರ ಸುತ್ತಲೇ ಆಲೋಚನೆಗೆ ಹಚ್ಚುವಂತಿರುತ್ತವೆ. ನಿಖರವಾಗಿ ಹೇಳಬೇಕಂದ್ರೆ ಅಂಥಾ ಸಜೀವ ಪ್ರಾಕೃತಿಕ ಸೇತುವೆಗಳಿರೋದು ನಮ್ಮದೇ ನೆಲವಾದ ಚಿರಾಪುಂಜಿಯಲ್ಲಿ!
ಚಿರಾಪುಂಜಿ ಸದಾ ಮಳೆಯಿಂದಲೇ ಮಾಘಸ್ನಾನ ಮಾಡಿಸಿಕೊಳ್ಳುವ ಪ್ರದೇಶ. ಅದಕ್ಕೆ ಅತೀ ಹೆಚ್ಚು ಮಳೆ ಬೀಳುವ ಪ್ರದೇಶವೆಂಬ ಹೆಗ್ಗಳಿಕೆಯೂ ಇದೆ. ಹೀಗೆ ಮಳೆ ಬೀಳೋದರಿಂದಲೇ ಈ ಪ್ರದೇಶದಲ್ಲಿ ಅಗಾಧವಾದ ಸಸ್ಯರಾಶಿಗಳಿ, ಯಾವ ಕಾಲಕ್ಕೂ ಬತ್ತದ ಜೀವತೊರೆಗಳಿವೆ. ಅಂಥಾ ತೊರೆಗಳ ಸಮೀಪ ಎರಡು ಪ್ರದೇಶಗಳನ್ನು ಎರಡೂ ಬಸಿಯ ಮರದ ಬೇರುಗಳೇ ಸೇತುವೆಯಂತೆ ಹೊಸೆದುಕೊಂಡು ಬೆಸೆದಿರುತ್ತವೆ. ಅದರ ರಚನೆ ಆಧುನಿಕ ಸೇತುವೆಗಳಿಗೇ ಸವಾಲೆಸೆಯುವಂತಿರುತ್ತವೆ.