ಬ್ರಹ್ಮ ಮಾಡಿದ್ದು ತಪ್ಪೆಂದ ರೋಮಿಯೋ ಅಪ್ಪ!
ಇದೀಗ ಅಷ್ಟದಿಕ್ಕುಗಳಲ್ಲಿಯೂ ಕುತೂಹಲ ಹುಟ್ಟುಹಾಕಿ ಇದೇ ತಿಂಗಳ ಇಪ್ಪತ್ತೇಳರಂದು ತೆರೆಗಾಣಲು ಸಜ್ಜಾಗಿರುವ ಚಿತ್ರ ವೀಲ್ಚೇರ್ ರೋಮಿಯೋ. ಕೆಲ ಕಥಾನಕಗಳ ಸುಳಿವು ಸಿಕ್ಕಾಕ್ಷಣ ಈ ಪರಿಯಾಗಿಯೂ ಕಥೆಯೊಂದು ರೂಪುತಳೆಯಬಹುದಾ ಎಂಬಂಥ ಅಚ್ಚರಿ ಕಾಡುತ್ತೆ. ಅಂಥಾ ಭವಗಳನ್ನು ಪ್ರತೀ ಮನಸುಗಳಲ್ಲಿಯೂ ತುಂಬಿರುವ ಈ ಚಿತ್ರ ಅದಾಗಲೇ ಆರಂಭಿಕ ಗೆಲುವು ಪಡೆದಾಗಿದೆ. ವರ್ಷದ ಹಿಂದೆ ಬಿಡುಗಡೆಗೊಂಡಿದ್ದ ಟ್ರೈಲರ್, ಇತ್ತೀಚೆಗೆ ಲಾಂಚ್ ಆಗಿದ್ದ ವೀಡಿಯೋ ಸಾಂಗ್ ವೀಲ್ಚೇರ್ ರೋಮಿಯೋ ಮಿನುಗುವಂತೆ ಮಾಡಿದೆ. ಈ ಪ್ರಭೆಯಲ್ಲಿಯೇ ಇದೀಗ ಈ ಚಿತ್ರದ ಆತ್ಮಕಥೆಯಂಥಾ ಮತ್ತೊಂದು ವೀಡಿಯೋ ಸಾಂಗ್ ಬಿಡುಗಡೆಗೊಂಡಿದೆ. ನಾನಾ ದಿಕ್ಕಿನಲ್ಲಿ ಆಲೋಚಿಸುವಂತೆ ಮಾಡಿ ಭಾವುಕವಾಗಿಸುವ ಈ ಹಾಡಿನ ಮೂಲಕ ವೀಲ್ಚೇರ್ ರೋಮಿಯೋ ಎಲ್ಲರೆದೆಯೊಳಗೂ ಇಳಿದುಬಿಟ್ಟಿದ್ದಾನೆ.
ಹಾಡುಗಳಿಗೆ ಒಂದಿಡೀ ಸಿನಿಮಾದ ಸೆಳೆತವನ್ನು ಕೇಳುಗರೆದೆಗೆ ನಾಟಿಸುವ ಶಕ್ತಿಯಿದೆ. ಆದರೆ ಅದನ್ನು ಪರಿಣಾಮಕಾರಿಯಾಗಿ ಬಳಿಸಿಕೊಳ್ಳುವುದು ಭಲೇ ಕಷ್ಟದ ಕೆಲಸ. ನಿರ್ದೇಶಕ ನಟರಾಜ್ ಬಲು ಆಸ್ಥೆಯಿಂದಲೇ ಅದರಲ್ಲಿ ಗೆದ್ದಿದ್ದಾರೆ. ಇಡೀ ಚಿತ್ರದ ಆತ್ಮವನ್ನು ಒಂದು ಹಾಡಿನಲ್ಲಿ ಹಿಡಿದಿಡುವಂಥಾ ಮ್ಯಾಜಿಕ್ಕು ಮಾಡಿದ್ದಾರೆ. ‘ಆ ಬ್ರಹ್ಮನೆಂಬ ಈ ಜಗದ ಅಪ್ಪ ಮಾಡಿದನು ತಪ್ಪಾ ಹೀಗೇತಕೋ’ ಅಂತ ಆರಂಭವಾಗುವ ಈ ಹಾಡು ಕಣಕಣದಲ್ಲಿಯೂ ಕಾಡುತ್ತದೆ. ಹುಟ್ಟಿದ ಕೂಸೊಂದು ವಿಕಲಾಂಗ ಅಂತ ಗೊತ್ತಾದೇಟಿಗೆ ಆಗೋ ಆಘಾತ, ಆಮೇಲದನ್ನು ನೋಡಿಕೊಳ್ಳೋ ಸವಾಲು, ವಿಕಲಾಂಗ ಮಗುವಿನ ಕದಲಿಕೆಯಲ್ಲಿಯೇ ಬ್ರಹ್ಮಾಂಡವನ್ನು ಎದೆತುಂಬಿಸಿಕೊಳ್ಳೋ ತಂದೆಯ ಭಾವುಕ ತುಮುಲ… ಹೀಗೆ ಸಲೀಸಾಗಿ ಪದಗಳ ನಿಲುಕಿಗೆ ಸಿಗದಂಥಾ ಭಾವಗಳನ್ನು ಈ ಹಾಡು ಬಚ್ಚಿಟ್ಟುಕೊಂಡಿದೆ.
ನಿಖರವಾಗಿ ಹೇಳಬೇಕೆಂದರೆ, ಈ ಹಾಡು ಇಡೀ ಸಿನಿಮಾದ ಸಾರ. ಇದನ್ನೇ ಇಷ್ಟೊಂದು ಪರಿಣಾಮಕಾರಿಯಾಗಿ ರೂಪಿಸಿರೋದರಿಂದ ಇಡೀ ಸಿನಿಮಾ ಹೇಗಿರಬಹುದೆಂಬ ಕೌತುಕ ಎಲ್ಲರಲ್ಲಿಯೂ ಮೂಡಿಕೊಂಡಿದೆ. ಈಗ ಜಾಹೀರಾಗಿರುವ ಒಂದಷ್ಟು ವಿಚಾರಗಳನ್ನು ಆಧರಿಸಿ ಹೇಳೋದಾದರೆ ವೀಲ್ಚೇರ್ ರೋಮಿಯೋ ಹಾಸ್ಯ ಪ್ರಧಾನ ಚಿತ್ರ. ಹಾಗಂತ ನಗುವಿಗೆ ಮಾತ್ರವೇ ಸೀಮಿತವಲ್ಲ. ಇಲ್ಲಿ ಗಹನವಾದ ವಿಚಾರಗಳಿವೆ. ಗುಂಗು ಹಿಡಿಸುವಂಥಾ ಸನ್ನಿವೇಶಗಳಿವೆ. ಅದೆಲ್ಲವನ್ನೂ ಮನೋರಂಜನೆ ಮುಕ್ಕಾಗದಂತೆ ನಿರ್ದೇಶಕರು ಕಟ್ಟಿ ಕೊಟ್ಟಿದ್ದಾರಂತೆ. ಅದರ ಆಂತರ್ಯ ಎಂಥಾದ್ದಿರಬಹುದು ಎಂಬುದಕ್ಕೆ ಈ ಹಾಡಿಗಿಂತಲೂ ಬೇರೆ ಉದಾಹರಣೆಗಳು ಬೇಕಿಲ್ಲವೇನೋ.
ಹೀಗೆ ಪ್ರತೀ ಹೆಜ್ಜೆಯಲ್ಲಿಯೂ ಸದ್ದು ಮಾಡುತ್ತಾ ಸಾಗುತ್ತಿರುವ ವೀಲ್ಚೇರ್ ರೋಮಿಯೋ, ನಟರಾಜ್ ನಿರ್ದೇಶನದ ಚೊಚ್ಚಲ ಚಿತ್ರ. ಕಿರುತೆರೆ ಧಾರಾವಾಹಿಗಳ ಮೂಲಕ ಮನೆ ಮಾತಾಗಿರುವ ರಾಮ್ ಚೇತನ್ ನಾಯಕನಾಗಿ ನಟಿಸಿದ್ದಾರೆ. ಅಶ್ವಿನಿ ನಕ್ಷತ್ರ ಖ್ಯಾತಿಯ ಮಯೂರಿ ನಟಿಸಿದ್ದಾರೆ. ಸುಚೇಂದ್ರಪ್ರಸಾದ್, ರಂಗಾಯಣ ರಘು, ತಬಲಾ ನಾಣಿ ಮುಂತಾದವರು ಬಹುಮುಖ್ಯ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಈಗಾಗಲೇ ಎಲ್ಲ ವರ್ಗದ ಪ್ರೇಕ್ಷಕರನ್ನೂ ಸೆಳೆದುಕೊಂಡಿರುವ ವೀಲ್ಚೇರ್ ರೋಮಿಯೋ ಇದೇ ತಿಂಗಳ ೨೭ರಂದು ನಿಮ್ಮೆದುರು ಬರಲಿದ್ದಾನೆ.