ಒಂದು ಕಡೆಯಲ್ಲಿ ಮೂಢ ನಂಬಿಕೆಗಳು (superstition) ಈ ಸಮಾಜದ (society) ಆಳದಲ್ಲಿ ಬೇರೂರಿಕೊಂಡಿವೆ. ಅದರ ವಿಡುದ್ಧ ಸಾಕಷ್ಟು ವರ್ಷಗಳಿಂದಲೂ ನಾನಾ ಜಾಗೃತಿಗಳು ಅವ್ಯಾಹತವಾಗಿ ನಡೆಯುತ್ತಿವೆ. ಇದೇ ಸಮಾಜದ ಮತ್ತೊಂದು ಮಗ್ಗುಲಲ್ಲಿ ಪ್ರಾಕೃತಿಕ ಅಚ್ಚರಿಗಳು, ನಾಸ್ತಿಕ ನಂಬಿಕೆಗಳು ಎಲ್ಲವಕ್ಕೂ ಸವಾಲೊಡ್ಡುವಂತೆ ಪ್ರಜ್ವಲಿಸುತ್ತಲೇ ಇದ್ದಾವೆ. ಹುಡುಕಿದರೆ ನಮ್ಮಲ್ಲಿ ವಿಜ್ಞಾನಕ್ಕೇ ನೇರ ಸವಾಲೆಸೆಯುವಂಥಾ, ಬರಿಗಣ್ಣಿಗೆ ಕಾಣಿಸಿದ್ದನ್ನು ನಂಬಲು ಸಾಧ್ಯವಾಗದಂಥಾ ಅಚ್ಚರಿಗಳಿದ್ದಾವೆ.
ಅಂಥಾ ಅಚ್ಚರಿಗಳಲ್ಲಿ ಹಿಮಾಚಲ ಪ್ರದೇಶದಲ್ಲಿರೋ ಜ್ವಾಲಾಜಿ ಮಾತಾ ಮಂದಿರ ಪ್ರಮುಖವಾದದ್ದು. ಇದು ಭಾರತೀಯ ಆಧ್ಯಾತ್ಮಿಕ ವಲಯದಲ್ಲಿಯೇ ಪ್ರಧಾನವಾದ ಶಕ್ತಿ ಪೀಠಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ. ಸಾಮಾನ್ಯವಾಗಿ ಯಾವುದೇ ದೇವಸ್ಥಾನಗಳಲ್ಲಿತಯಾದ್ರೂ ದೇವರ ವಿಗ್ರಹಗಳಿಗೆ ಪೂಜೆ ಸಲ್ಲಿಸಲಾಗುತ್ತೆ. ಆದರೆ ಈ ದೇವಳದಲ್ಲಿ ಒಂದು ಬೆಂಕಿಯ ಜ್ವಾಲೆಯನ್ನೇ ಆರಾಧಿಸಲಾಗುತ್ತೆ.
ಹಾಗಂತ ಅದು ಮನುಷ್ಯರ್ಯಾರೋ ಹಚ್ಚಿಟ್ಟ ದೀಪವಲ್ಲ. ದೊಂದಿಯೂ ಅಲ್ಲ. ಅದು ಅದೆಷ್ಟೋ ಶತಮಾನಗಳ ಹಿಂದಿನಿಂದಲೂ ಸಣ್ಣ ಕಿಂಡಿಯ ಮೂಲಕ ಭೂಗರ್ಭದಿಂದ ಹೊರ ಹೊಮ್ಮುತ್ತಿರೋ ಜ್ವಾಲೆ. ಇದರ ಮಗ್ಗುಲಲ್ಲಿಯೇ ಕುದಿಯೋ ನೀರಿನ ಒರತೆಯೂ ಇದೆ ಅನ್ನೋದು ಈ ಸ್ಥಳದ ಮತ್ತೊಂದು ವಿಶೇಷ.
ಈ ಜ್ವಾಲೆಯನ್ನು ವೈಜ್ಞಾನಿಕವಾಗಿ ವಿಶ್ಲೇಷಣೆ ಮಾಡೋ ಸಾಕಷ್ಟು ಪ್ರಯತ್ನಗಳು ನಡೆದಿವೆ. ಇದು ದೈವ ಪವಾಡವಲ್ಲ, ಪ್ರಾಕೃತಿಕ ವಿಸ್ಮಯ ಮಾತ್ರ ಎಂದೂ ಹೇಳಲಾಗುತ್ತಿದೆ. ಆದರೆ ಅದ್ಯಾವುದೂ ಜ್ವಾಲಾ ಮಾತೆಯ ಕಾರಣನೀಕಗಳನ್ನು ಮಂಕಾಗಿಸಿಲ್ಲ. ಈ ಹಿಂದೆ ಅಕ್ಬರನ ಕಾಲದಲ್ಲಿಯೂ ಈ ಜ್ವಾಲೆಯನ್ನು ನಂದಿಸಲು ಪ್ರಯತ್ನ ಪಟ್ಟಿದ್ದನಂತೆ. ಆದರೆ ಅದೇನೇ ಸರ್ಕಸ್ಸು ನಮಡೆಸಿದರೂ ಈ ಜ್ವಾಲೆ ಜಗ್ಗದೆ ಉರಿಯುತ್ತಲೇ ಇದೆ.