ಸದ್ಯದ ಮಟ್ಟಿಗೆ ಬಿಜೆಪಿ (bjp) ಎಂಬುದು ಅಕ್ಷರಶಃ ಮುರಿದ ಮನೆಯಂತಾಗಿದೆ. ಉತ್ತರದ ಬಿಜೆಪಿ ದೊರೆಗಳ ಸಾರಥ್ಯದಲ್ಲಿ ಅದೆಂಥಾದ್ದೋ ಕ್ರಾಂತಿ ಮಾಡಲು ಹೋಗಿ, ಬಿಜೆಪಿ ಬುಡದಲ್ಲೇ ಕ್ಷಣಕ್ಕೊಂದು ಬಾಂಬುಗಳು ಭಡಾರೆನ್ನಲಾರಂಭಿಸಿವೆ. ಹಾಗೆ ನೋಡಿದರೆ, ದಶಕಗಳ ಹಿಂದಿದ್ದ ಸ್ಥಿತಿಯತ್ತಲೇ ಬಿಜೆಪಿ (bjp) ಭಾರೀ ವೇಗದಿಂದ ಹಿಮ್ಮುಖ ಚಲನೆ ಮಾಡುತ್ತಿರುವಂತೆಯೂ ಭಾಸವಾಗುತ್ತಿದೆ. ಇಂಥಾ ಹೊತ್ತಿನಲ್ಲಿ ಮುರಿದ ಮನೆಯ ಮ್ಲಾನ ವದನದ ಹಿರೀಕನಂತೆ ಕಾಣಿಸುತ್ತಿರುವರು (yadiyurappa) ಯಡಿಯೂರಪ್ಪ. ತಾವೇ ಶ್ರಮ ಪಟ್ಟು ಬೆಳೆಸಿದ ಬಿಜೆಪಿ ತನ್ನ ಕಣ್ಣೆದುರೇ ಮುರುಟಿಕೊಳ್ಳುತ್ತಿರುವ ಧಾರುಣ ಕಂಡು ಮರುಗಲೂ ಆಗದೆ, ಸಂಭ್ರಮಿಸಲೂ ಆಗದೆ ಯಡ್ಡಿ (yadiyurappa) ವಿಲಗುಡುತ್ತಿದ್ದಾರೆ!
ಕಳೆದ ಬಾರಿ ಆಪರೇಷನ್ನಿನ ಮೂಲಕವೇ ಮತ್ತೆ ಸಿಎಂ ಆಗೋ ಆಸೆಯನ್ನು ಪೂರೈಸಿಕೊಂಡಿದ್ದವರು ಯಡಿಯೂರಪ್ಪ. ಈ ಬಾರಿಯಾದರೂ ಕೊಂಚ ನಿರಾಳವಾಗಿ ಅಧಿಕಾರ ನಡೆಸಬೇಕೆಂಬ ಅವರ ಕನಸಿಗೆ ಬಹಳ ಬೇಗನೆ ತಣ್ಣೀರೆರಚಿದಂತಾಗಿತ್ತು. ಖುದ್ದು ಬಿಜೆಪಿಯಲ್ಲಿಯೇ ಅವರನ್ನು ಅಧಿಕಾರದಿಂದಿಳಿಸುವಂಥಾ ಕಸರತ್ತುಗಳು ಚಾಲನೆ ಪಡೆದುಕೊಂಡಿದ್ದವು. ಕಡೆಗೂ ವರ್ಷ ಬಾಕಿ ಇರುವಾಗಲೇ ಯಡಿಯೂರಪ್ಪ ಕಣ್ಣೀರುಗರೆಯುತ್ತಾ ಸಿಎಂ ಕುರ್ಚಿಯಿಂದ ಇಳಿದು ಹೋಗುವಂತಾಗಿತ್ತು. ಈ ಬಾರಿ ವಿಧಾನ ಸಭಾ ಚುನಾವಣೆಯ ಹೊಸ್ತಿಲಿನಲ್ಲಿಯೇ ಯಡ್ಡಿಗೆ ಪಕ್ಷದ ವರಿಷ್ಠರ ಕಡೆಯಿಂದಲೇ ಮತ್ತೊಂದು ಆಘಾತ ಎದುರಾಗಿತ್ತು. ಅದರ ಫಲವಾಗಿಯೇ ಅವರು ಚುನಾವಣಾ ರಾಜಕಾರಣದಿಂದ ದೂರ ಸರಿಯುವ ಘೋಷಣಭೆ ಮಾಡುವಂತಾಗಿತ್ತು. ಈ ಬಾರಿಯೂ ಯಡ್ಡಿ ಮಕ್ಕಳನ್ನು ಬಲಿಪಶುವಾಗಿಸುವ ಹುನ್ನಾರಗಳೂ ಕೂಡಾ ನಡೆದಿದ್ದವು.
ಈ ಎಲ್ಲ ವಿಚಾರದಲ್ಲಿ ಖುದ್ದು ಯಡ್ಡಿಗೆ ಸ್ವಪಕ್ಷೀಯರ ಮೇಲೆ ಅಸಾಧ್ಯ ಸಿಟ್ಟಿರುವುದು ಸತ್ಯ. ಆದರೆ ಅದನ್ನು ರೆಬೆಲ್ ಆಗಿ ತೋರ್ಪಡಿಸಿಕೊಳ್ಳಲು ಇಡಿ ಭಯವಿದೆ ಅನ್ನುವವರೂ ಇದ್ದಾರೆ. ಇದೀಗ ಸ್ವಂತ ಪಕ್ಷದವರ ಮೇಲೆಯೇ ಒಳಗೊಳಗೆ ಸಿಟ್ಟಿಟ್ಟುಕೊಂಡು ಕುದಿಯುತ್ತಿರುವ ಯಡ್ಡಿಗೆ, ತನ್ನಂತೆಯೇ ಸಿಟ್ಟಾಗಿ ಪಕ್ಷ ಬಿಟ್ಟು ನಡೆದವರ ವಿರುದ್ಧ ಮಾತಾಡುವ ಅನಿವಾರ್ಯತೆ ಎದುರಾಗಿ ಬಿಟ್ಟಿದೆ. ಆ ಕುದಿತವನ್ನು ಎದೆಯಲ್ಲಿಟ್ಟುಕೊಂಡೇ ಅವರು ಗಂಭೀರವಾಗಿ ಕಾಮಿಡಿ ಮಾಡುತ್ತಿದ್ದಾರೆ. ಈ ಮೂಲಕ ಗೊಂದಲದ ಗೂಡಾಗಿರುವ ಬಿಜೆಪಿ ಮತ್ತಷು ನಗೆಪಾಟಲಿಗೀಡಾಗುವಂತಾಗಿಬಿಟ್ಟಿದೆ!
ಈ ಬಾರಿಯ ಪರಿಸ್ಥಿತಿ ನೋಡಿದರೆ, ಚುನಾವಣಾ ಪೂರ್ವದಲ್ಲಿಯೇ ಬಿಜೇಪಿಯ ಸೋಲು ನಿಚ್ಛಳವಾದಂತಾಗಿದೆ. ಆರಂಭಿಕ ಸಮೀಕ್ಷೆಗಳಲ್ಲಿ ಬಿಜೆಪಿ ಅರವತ್ತರ ಗಡಿ ತಲುಪುವ ಭವಿಷ್ಯ ವಾಣಿ ಕೇಳಿ ಬಂದಿತ್ತು. ಆದರೀಗ ಬಿಜೆಪಿಯ ಸೀಟುಗಳು ನಲವತ್ತರಾಚೆ ಹೊರಳಿಕೊಳ್ಳೋದೂ ಕಷ್ಟ ಎಂಬಥಾ ವಾತಾವರಣವಿದೆ. ಹೀಗಿರುವಾಗ ಯಡಿಯೂರಪ್ಪ ಈ ಬಾರಿ ಬಿಜೆಪಿ ಬಹುಮತ ಪಡೆಯೋದು ನೂರಾ ಒಂದು ಪರ್ಸೆಂಟ್ ಸತ್ಯ ಅಂದುಬಿಟ್ಟರೆ ಅದು ಕಾಮಿಡಿಯಂತೆ ಕೇಳಿಸದಿದ್ದೀತಾ? ಒಂದು ಕಾಲದಲ್ಲಿ ರೆಬೆಲ್ ಆಗಿ ಬಿಜೆಪಿ ತೊರೆದು ಕೆಜೆಪಿ ಕಟ್ಟಿ ಕರ್ನಾಟಕದಲ್ಲಿ ಭಾಜಪದ ಅಸಲೀ ಯೋಗ್ಯತೆಯನ್ನು ಜಾಹೀರು ಮಾಡಿದ್ದವರು ಯಡಿಯೂರಪ್ಪ. ಅಂಥಾ ಯಡ್ಡಿಯೀಗ ಪಕ್ಷ ತೊರೆದ ಬಿಜೆಪಿ ಹಿರಿಯ ನಾಯಕ ಜಗದೀಶ್ ಶೆಟ್ಟರ್ ವಿರುದ್ಧ ಸಿಡಿದು ಬೀಳುತ್ತಿರೋದು ಕೂಡಾ ಪಕ್ಕಾ ಕಾಮಿಡಿ ಅನ್ನಿಸುತ್ತಿದೆ. ನಿಜ, ಪಕ್ಷಾಂತರವೆಂಬುದು ತಪ್ಪೇ. ಆದರೆ ಈ ಬಿಜೆಪಿ ಮಂದಿ ಅದನ್ನೂ ಕೂಡಾ ಅನೈತಿಕ ಮಾರ್ಗದಲ್ಲಿ ಸಕ್ರಮ ಮಾಡಿದ್ದರು. ಕಾಂಗ್ರೆಸ್ನಲ್ಲಿ ನಾನಾ ಅಧಿಕಾರ ಅನುಭವಿಸಿದ್ದ ಎಸ್ ಎಂ ಕೃಷ್ಣರನ್ನೇ ಹೈ ಜಾಕ್ ಮಾಡಿಕೊಂಡಿದ್ದವರಿಗೆ ಜಗದೀಶ್ ಶೆಟ್ಟರ್ ನಡೆಯನ್ನು ಖಂಡಿಸುವ ಯಾವ ನೈತಿಕತೆ ಉಳಿದುಕೊಳ್ಳಲು ಸಾಧ್ಯ?