froug vomit: ನಮಗೆ ಗೊತ್ತಿರೋ ಒಂದಷ್ಟು ಪ್ರಬೇಧದ ಜೀವಿಗಳ ಬದುಕಿನ ಕ್ರಮದ ಬಗ್ಗೆ ನಮಗೆಲ್ಲ ತೆಳುವಾಗಿ ಗೊತ್ತಿರುತ್ತೆ. ಅವುಗಳ (food culture) ಆಹಾರ ಕ್ರಮ, ಅವುಗಳ ವರ್ತನೆ, ಅವುಗಳಿಂದ ನಮಗಾಗಬಹುದಾದ ಅಪಾಯಗಳ ಬಗ್ಗೆ ಮಾತ್ರವೇ ನಮ್ಮ ದೃಷಿ ನೆಟ್ಟಿರುತ್ತೆ. ಆದರೆ ನಮ್ಮ ಕಣ್ಣಿಗೆ ಕಾಣಿಸೋ ಅದೆಷ್ಟೋ ಜೀವಿಗಳ ಬಗ್ಗೆ ನಮಗೆಲ್ಲ ಏನೆಂದರೆ ಏನೂ ಗೊತ್ತಿರೋದಿಲ್ಲ. ಅದೇನಿದ್ದರೂ ಅಸೀಮ ಕುತೂಹಲ, ತಪಸ್ಸಿನಂಥಾ ಅಧ್ಯಯನಗಳಿಗೆ ಮಾತ್ರವೇ ದಕ್ಕುವಂಥಾದ್ದು.
ಈ ಮಾತಿಗೆ ಕಪ್ಪೆಗಳಿಗಿಂತಲೂ ಬೇರೆ ಉದಾಹರಣೆ ಬೇಕಿಲ್ಲ. ಕಪ್ಪೆಗಳಲ್ಲಿ ನಾನಾ ಪ್ರಬೇಧಗಳಿದ್ದಾವೆ. ಮನುಷ್ಯರು ವಾಸವಿರೋ ಪ್ರದೇಶಗಳಲ್ಲಿಯೇ ಒಂದಷ್ಟು ಜಾತಿಯ ಕಪ್ಪೆಗಳು ವಾಸಿಸುತ್ತವೆ. ಮಲೆನಾಡಿನ ಪ್ರದೇಶಗಳಲ್ಲಿಯಂತೂ ಅವೂ ಕೂಡಾ ಮನುಷ್ಯರ ಸಹಜೀವಿಗಳಂತಿರುತ್ತವೆ. ಆದರೆ ಹಾಗೆ ಕಪ್ಪೆಗಳನ್ನು ದಿನನಿತ್ಯ ನೋಡುವವರಿಗೂ ಕೂಡಾ ಅವುಗಳ ಬಗ್ಗೆ ಏನೂ ಗೊತ್ತಿರೋದಿಲ್ಲ. ಅದೆಷ್ಟೋ ವರ್ಷಗಳ ಕಾಲ ಇಂಥಾ ಕಪ್ಪೆಗಳ ಬಗ್ಗೆ ಜೀವ ಶಾಸ್ತ್ರಜ್ಞರು ಅಧ್ಯಯನ ನಡೆಸುತ್ತಾ ಬಂದಿದ್ದಾರೆ. ಜಗತ್ತಿನ ನಾನಾ ಭಾಗಗಳಲ್ಲಿ ನಡೆದಿರೋ ಇಂಥಾ ಅಧ್ಯಯನಗಳು ಕಪ್ಪೆಗಳ ಜೀವನಕ್ರಮದ ಬಗ್ಗೆ ಅಚ್ಚರಿಯ ಸಂಗತಿಗಳನ್ನ ಬಯಲಾಗಿಸಿವೆ.
ಅದೆಲ್ಲದರಲ್ಲಿ ಯಾರೇ ಆದರೂ ಅಚ್ಚರಿಗೀಡಾಗೋವಂಥಾ ಒಂದು ವಿಚಾರವಿದೆ. ಅದು ಕಪ್ಪೆಗಳ ವಾಂತಿಗೆ ಸಂಬಂಧಿಸಿದ್ದು. ತಿಂದಿದ್ದು ಪಥ್ಯವಾಗದೆ, ಹೆಚ್ಚಾದರೆ ವಾಂತಿ ಮಾಡಿಕೊಳ್ಳೋದು ಮಾಮೂಲು. ಆದರೆ ಕಪ್ಪೆಗಳಿಗೆ ಮಾತ್ರ ನಮ್ಮ ಹಾಗೆ ಬಾಯಿಂದ ವಾಂತಿ ಮಾಡಿಕೊಳ್ಳಲು ಸಾಧ್ಯವಿಲ್ಲ. ಒಂದು ವೇಳೆ ತಿಂದ ಆಹಾರ ಜೀರ್ಣವಾಗದೇ ಇದ್ದರೆ ಹೊಟ್ಟೆಯನ್ನೇ ಹೊರತೆಗೆಯುತ್ತವೆ. ನಂತರ ಕಾಲುಗಳ ಸಹಾಯದಿಂದ ಹೊಟ್ಟೆಯೊಳಗೆ ಅಪಥ್ಯವಾಗಿ ಜೀರ್ಣವಾಗದ ವಸ್ತುಗಳನ್ನು ಹೊರ ತಳ್ಳುತ್ತವೆ. ಹಾಗೆ ಸಮಾಧಾನವಾದ ನಂತರ ಮತ್ತೆ ಹೊಟ್ಟೆಯನ್ನು ಒಳಗೆ ತಳ್ಳಿಕೊಳ್ಳುತ್ತವೆಯಂತೆ.