ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಎಲ್ಲ ಪಕ್ಷಗಳಲ್ಲಿಯೂ ಇದೀಗ ಟಿಕೆಟ್ ಹಂಚಿಕೆಯ ಭರಾಟೆ ಮೇರೆ ಮೀರಿದೆ. ಬಹುತೇಕ ಎಲ್ಲ ಪಕ್ಷಗಳಲ್ಲಿಯೂ ಕೂಡಾ ಈ ಅಭ್ಯರ್ಥಿ ಆಯ್ಕೆಯ ವಿಚಾರದಲ್ಲಿ ಪ್ರಧಾನವಾಗಿ ಮಾನದಂಡವಾಗಿರುವುದು ಜಾತಿ ಲೆಕ್ಕಾಚಾರವೇ ಎಂಬುದು ದುರಂತ ಸತ್ಯ. ಅದೆಷ್ಟೋ ಶತಮಾನಗಳಿಂದಲೂ ಜಾತಿ ವಿಮೋಚನೇ ಚಳುವಳಿಗಳು ನಾನಾ ರೂಪ ಧರಿಸಿ ಹೋರಾಟ ನಡೆಸಿದ್ದವಲ್ಲಾ? ಅಂಥಾ ಎಲ್ಲ ಚಳವಳಿಗೂ ರಾಜಕೀಯ ಲೆಕ್ಕಾಚಾರಗಳ ನಡುವೆ ಉಸಿರುಗಟ್ಟಿ ಒದ್ದಾಡುತ್ತಿವೆ. ಬೇರೆಲ್ಲ ಪಕ್ಷಗಳ ಕಥೆ ಹಾಗಿರಲಿ; ಸಮಾಜನತೆ, ಜಾತ್ಯಾತೀತತೆ ಮತ್ತು ಪ್ರಗತಿಪರ ಆಶಗಳನ್ನು ಹೊಂದಿರುವಂತೆ ಪೋಸು ಕೊಡುವ ಕಾಂಗ್ರೆಸ್ ಪಡಸಾಲೆಯಲ್ಲಿಯೇ ಜಾತಿ ಕೇಂದ್ರಿತ ರಾಜಕಾರಣ ಮೇರೆ ಮೀರಿದೆ. ಕಾಂಗ್ರೆಸ್ ಮಂದಿಗೆ ಅದ್ಯಾವ ಪರಿಯಾಗಿ ಜಾತಿ ಪಿತ್ಥ ಅಡರಿಕೊಂಡಿದೆಯೆಂದರೆ, ಟಿಕೆಟಿನ ವಿಚಾರ ಬಂದಾಗ ತೊಂಬತ್ತೆರಡರ ಹಣ್ಣಣ್ಣು ಮುದುಕರೂ ನವ ಯುವಕರಂತೆ ಕಾಣಿಸಲಾರಂಭಿಸಿದ್ದಾರೆ!
ಹಾಗೊಂದು ವ್ಯಾಧಿ ಕಾಂಗ್ರೆಸ್ ನರನಾಡಿಗಳಿಗೆ ಹಬ್ಬಿಕೊಳ್ಳದೇ ಹೋಗಿದ್ದರೆ, ಶಾಮನೂರು ಶಿವಶಂಕರಪ್ಪನವರಿಗೆ ಈ ಬಾರಿ ಟಿಕೆಟು ಸಿಗಲು ಸಾಧ್ಯವಾಗುತ್ತಿರಲಿಲ್ಲ. ಅಷ್ಟಕ್ಕೂ ಎಲ್ಲವನ್ನು ದಾಟಿಕೊಂಡು ಬಂದು ಜಾತಿ ಕೊಚ್ಚೆಯಲ್ಲಿ ಲಂಗರು ಹಾಕುವುದು ರಾಜಕಾರಣಕ್ಕೇನು ಹೊಸತಲ್ಲ. ಈ ಬಾರಿ ವಿಶೇಷವಾಗಿ ಕರ್ನಾಟಕದಲ್ಲಿ ಆ ಪಡಿಪಾಟಲು ಉತ್ತುಂಗ ಸ್ಥಿತಿ ತಲುಪಿಕೊಂಡಿದೆ. ಅತ್ತ ಲಿಂಗಾಯತರಿಗೆ ಪ್ರಾತಿನಿಧ್ಯ ಕೊಡುವ ಬಗ್ಗೆ ಬಿಜೆಪಿ ನಾಯಕರು ನಾಲಿಗೆ ಹರಿಯಬಿಡುತ್ತಿದ್ದಾರೆ. ಈ ಮೂಲಕ ಲಿಂಗಾಯತ ಸಮುದಾಯ ಕೊಂಚ ಅಸಮಾಧಾನಗೊಳ್ಳುತ್ತಲೇ, ಅದನ್ನು ಓಟಾಗಿ ಪರಿವರ್ತಿಸಿಕೊಳ್ಳುವ ದರ್ದಿಗೆ ಕಾಂಗ್ರೆಸ್ ನಾಯಕರು ಬಿದ್ದಂತಿದೆ. ಅದರ ಭಾಗವಾಗಿಯೇ ಶಾಮನೂರು ಶಿವಶಂಕರಪ್ಪನವರಿಗೆ ಈ ಬಾರಿ ಸೀಟು ಸಿಕ್ಕಿದೆ.
ದಾವಣಗೆರೆ ಉತ್ತರ ಕ್ಷೇತ್ರದಿಂದ ಎಸ್.ಎಸ್ ಮಲ್ಲಿಕಾರ್ಜುನ್ಗೆ ಕಾಂಗ್ರೆಸ್ ಟಿಕೇಟು ಸಿಕ್ಕಿದೆ. ಅದರಲ್ಲೇನೂ ಅಚ್ಚರಿಯಿಲ್ಲ. ಆದರೆ ಅವರ ತಂದೆ, ವಯೋವೃದ್ಧ ಶಾಮನೂರು ಶಿವಶಂಕರಪ್ಪನವರಿಗೆ ದಾವಣಗೆರೆ ದಕ್ಷಿಣ ಕ್ರೇತ್ರದ ಟಿಕೆಟು ನಿಕ್ಕಿಯಾಗಿದೆ. ಅಷ್ಟಕ್ಕೂ ಶಾಮನೂರು ಶಿವಶಂಕರಪ್ಪ ಕಾಂಗ್ರೆಸ್ನ ಹಿರಿಯ ನಾಯಕ. ಈವರೆಗೂ ಸಾಕಷ್ಟು ಸಲ ಗೆದ್ದು, ಆಯಕಟ್ಟಿನ ಅಧಿಕಾರ ಗಿಟ್ಟಿಸಿಕೊಂಡು ತಮ್ಮ ಸಾಮ್ರಾಜ್ಯವನ್ನು ವಿಸ್ತರಿಸಿಕೊಂಡಿರುವವರು. ಇದು ಅವರು ವಿಶ್ರಾಂತಿಗೆ ತೆರಳುವ ಹೊತ್ತು. ಅಷ್ಟಕ್ಕೂ ಅವರಿಗೆ ಈ ಬಾರಿ ಟಿಕೇಟು ಕೊಡುವ ಯಾವ ದರ್ದೂ ಇರಲಿಲ್ಲ. ಇದರ ಬಗ್ಗೆ ಬಿಜೆಪಿಗರು ಟೀಕೆ ಮಾಡೋದು ಮಾಮೂಲು. ಆದರೆ, ಇಂಥಾ ವೃದ್ಧರಿಗೆ ಮಣೆ ಹಾಕುವ ತಮ್ಮ ನಾಯಕರ ಮನಃಸ್ಥಿತಿಯ ವಿರುದ್ಧ ಖುದ್ದು ಕಾಂಗ್ರೆಸ್ ಕಾರ್ಯಕರ್ತರೇ ಕುದ್ದು ಹೋಗಿದ್ದಾರೆ.
ಒಂದು ಕಾಲದಲ್ಲಿ ಯಾವ ಕಾಲಕ್ಕೂ ಅದುರದೆ ಮುಂದುವರೆಯುವ ಖದರ್ ಹೊಂದಿದ್ದ ಪಕ್ಷ ಕಾಂಗ್ರೆಸ್. ಆದರೀಗ ದೇಶಾದ್ಯಂತ ಅದರ ಬೇರುಗಳು ಸಡಿಲಗೊಂಡಿವೆ. ಒಂದಷ್ಟು ನಾಯಕರು ಬಿಜೆಪ ಪಾಲಾಗಿದ್ದರೆ, ಮಿಕ್ಕುಳಿದ ಮಂದಿ ಮತ್ತದೇ ಫ್ಯೂಡಲ್ ಗತ್ತು ಗೈರತ್ತುಗಳಿಗೆ ಅಂಟಿಕೊಂಡಿದ್ದಾರೆ. ಇಂಥಾ ನಾಯಕರಿಗೆ ತನ್ನದೇ ಅಂಡು ಸುಟ್ಟು ಕರಕಲಾಗಿದ್ದರೂ ಕೂಡಾ ಇನ್ನೂ ಬುದ್ಧಿ ಬಂದಂತಿಲ್ಲ. ಅತ್ತ ಬಿಜೆಪಿ ಮಂದಿ ಯುವಕರಿಗೆ ಮಣೆ ಹಾಕುವ ಮಾತಾಡುತ್ತಿದ್ದಾರೆ. ಆದರೆ ಅದಕ್ಕೆ ಸೆಡ್ಡು ಹೊಡೆದು ಯುವ ನಾಯಕರನ್ನು ಮುನ್ನೆಲೆಗೆ ತರಬೇಕಿದ್ದ ಕಾಂಗ್ರೆಸ್ ಮಾತ್ರ ಶಾಮನೂರು ಶಿವಶಂಕರಪ್ಪನಂಥಾ ವಯೋ ವೃದ್ಧರೇ ಗತಿಯೆಂಬಂತೆ ವರ್ತಿಸುತ್ತಿದೆ. ಇದು ಕಾಂಗ್ರೆಸ್ ತಯನ್ನ ಶವಪೆಟ್ಟಿಗೆಗೆ ತಾನೇ ಹೊಡೆದುಕೊಳ್ಳುತ್ತಿರುವ ಮೊಳೆ ಎಂಬುದರಲ್ಲಿ ಯಾವ ಸಂದೇಹವೂ ಇಲ್ಲ.
ಕಾಂಗ್ರೆಸ್ನಲ್ಲಿ ಯುವ ನಾಯಕರಿದ್ದಾರೆ. ಆದರೆ ಅಂಥವರನ್ನೆಲ್ಲ ತೊಪ್ಪೆ ಬಾಚುವುದಕ್ಕೇ ಸೀಮಿತವಾಗಿಸಿಕೊಂಡಿರುವ ಮುಖ್ಯ ನಾಯಕರು, ತಮ್ಮ ಮಕ್ಕಳು ಮರಿಮಕ್ಕಳ ಅದಿಕಾರಕ್ಕಾಗಿ ಬಕಪಕ್ಷಿಗಳಂತಾಗಿದ್ದಾರೆ. ಅದೇ ಮಾಸಲು ಮುಖಗಳು, ಕುಂತರೆ ಮೇಲೇಳಲೂ ಬೇರೆಯವರ ಸಹಾಯ ಬೇಡುವ ಶಾಮನೂರರಂಥಾ ಅಭ್ಯರ್ಥಿಗಳು… ಕಾಂಗ್ರೆಸ್ ಪಕ್ಷ ಕಳೆಗುಂದಲು ಮತ್ತೇನು ಬೇಕು? ರಾಜ್ಯದ ಮಟ್ಟಿಗೆ ಹೇಳೋದಾದರೆ, ಕಾಂಗ್ರೆಸ್ಗೆ ಈ ಕ್ಷಣಕ್ಕೂ ಒಂದಷ್ಟು ಹೋಪ್ಗಳಿದ್ದಾವೆ. ಬಿಜೆಪಿಯ ಆಡಳಿತ ವೈಫಲ್ಯವನ್ನು ಸರಿಯಾದ ದಿಕ್ಕಿನಲ್ಲಿ ಬಳಸಿಕೊಳ್ಳುವ ಛಾತಿಯೇ ಇಲ್ಲಿನ ನಾಯಕರಲ್ಲಿ ಕಾಣಿಸುತ್ತಿಲ್ಲ. ಮುದಿ ಎತ್ತುಗಳಂತಾಗಿ ದೊಡ್ಡಿ ಸೇರಿರುವ ನಾಯಕರೂ ಕೂಡಾ ಮುಖ್ಯಮಂತ್ರಿ ಗಾದಿಯ ರೇಸಿನಲ್ಲಿದ್ದಾರೆ. ಅವರ ಮಕ್ಕಳು ಅದಾಗಲೇ ಅಧಿಕಾರ ಅನುಭವಿಸಿ ಮರಿಮಕ್ಕಳು ರೆಡಿಯಾಗುತ್ತಿದ್ದಾರೆ. ಕಾರ್ಯಕರ್ತರದ್ದೇನಿದ್ದರೂ ಅವರ ಚಾಕರಿ ಮಾಡಿ ಗೆಲ್ಲಿಸುವ ಕೆಲಸವಷ್ಟೇ. ಇಂಥಾ ಧೋರಣೆಯೇ ಮುಂದುವರೆದರೆ ಕಾಂಗ್ರೆಸ್ ಮಾತ್ರವಲ್ಲ; ಯಾವ ಪಕ್ಷವೂ ಬರಖತ್ತಾಗೋದಿಲ್ಲ. ಗೆಲುವಿನ ಹತ್ತಿರ ಸುಳಿಯೋ ಮುನ್ನವೇ ಮುಖ್ಯಮಂತ್ರಿಯಾಗಲು ಸೂಟು ಹೊಲೆಸಿಕೊಂಡವರಿಗೆಲ್ಲ ಈ ಸೂಕ್ಷ್ಮ ಅರ್ಥವಾಗಲು ಸಾಧ್ಯವೇ?