ಎರಡೆರಡು ಸಲ ಬಿಗ್ಬಾಸ್ ಶೋಗೆ ಹೋಗಿ ಬಂದು, ಅಲ್ಲಿಯೂ ನಾನಾ ರಂಖಲುಗಳನ್ನು ಸೃಷ್ಟಿಸಿಕೊಂಡಿದ್ದಾತ ಪ್ರಶಾಂತ್ ಸಂಬರ್ಗಿ. ಹಾಗೆ ನೋಡಿದರೆ, ಈ ಆಸಾಮಿಗೆ ಇಂಥಾದ್ದಲ್ಲದೇ ಬೇರ್ಯಾವ ರೀತಿಯಲ್ಲಿಯೂ ಸುದ್ದಿ ಮಾಡುವ ಕಿಮ್ಮತ್ತಿಲ್ಲ. ಒಂದೋ ಬಿಗ್ ಬಾಸ್ನಂಥಾ ಶೋಗಳಿಗೆ ಸ್ಪರ್ಧಿಯಾಗಿ ಹೋಗಬೇಕು, ಇಲ್ಲದಿದ್ದರೆ ಬಾಯಿಗೆ ಬಂದಂತೆ ಒದರಾಡುತ್ತಾ ತನ್ನನ್ನು ತಾನೇ ಹೋರಾಟಗಾರನೆಂಬಂತೆ ಬಿಂಬಿಸಿಕೊಳ್ಳಬೇಕು. ಇದೀಗ ಬಿಗ್ಬಾಸ್ ಶೋ ನಂತರ ಪ್ರಚಾರಕ್ಕೆ ತತ್ವಾರ ಅನುಭವಿಸಿದ್ದ ಸಂಬರ್ಗಿ ಮತ್ತೊಂದು ವಿವಾದದ ಮೂಲಕ ಸುದ್ದಿಯಾಗಿದ್ದಾನೆ; ಯಾರನ್ನೋ ಹಣಿಯಲು ಹೋಗಿ, ಮತ್ಯಾರ ಹೆಸರನ್ನೋ ಬಳಸಿಕೊಂಡು, ಒಂದಿಡೀ ಸಮುದಾಯದ ವಿರೋಧ ಕಟ್ಟಿಕೊಳ್ಳುವ ಮೂಲಕ!
ಪ್ರಧಾನಿ ಮೋದಿಯನ್ನು ಹಳಿದ ಕಾರಣಕ್ಕೆ ರಾಹುಲ್ ಗಾಂಧಿಗೆ ಎರಡು ವರ್ಷ ಶಿಕ್ಷೆಯಾಗಿದ್ದು, ಆತನ ಸಂಸತ್ ಸದಸ್ಯತ್ವವನ್ನು ಕೇಂದ್ರ ಸರ್ಕಾರ ಅನರ್ಹಗೊಳಿಸಿದ ವಿಚಾರ ಗೊತ್ತೇ ಇದೆ. ಅದರ ಸುತ್ತ ಪರ ವಿರೋಧಗಳ ಚರ್ಚೆ ಕಾವೇರಿಕೊಂಡಿದೆ. ಅದರ ನಡುವೆ ನಂದೆಲ್ಲಿಡ್ಲಿ ಎಂಬಂತೆ ಟ್ವಿಟರ್ ಮೂಲಕ ಪ್ರತ್ಯಕ್ಷನಾದಾತ ಪ್ರಶಾಂತ್ ಸಂಬರ್ಗಿ. ಇಂಥಾ ಸರಕು ಸಿಕ್ಕಾಕ್ಷಣ ಥೇಟು ವೀರಾಗ್ರಣಿಯಂತೆ ಎಂಟ್ರಿ ಕೊಟ್ಟು, ತಲೆಬುಡವಿಲ್ಲದ ಪ್ರಲಾಪ ಮಾಡೋದು ಸಂಬರ್ಗಿಯ ಪುರಾತನ ಸ್ಟೈಲು. ರಾಹುಲ್ ವಿಚಾರದಲ್ಲಿಯೂ ಅದೇ ನಡೆ ಪ್ರದರ್ಶಿಸಿರುವ ಸಂಬರ್ಗಿ, `ಈ ಕೇಸ್ ಬಗ್ಗೆ ಸಿಂಪಲ್ ಆಗಿ ಹೇಳಬೇಕು ಎಂದರೆ, ದೇವೇಗೌಡ ಕಳ್ಳ ಅನ್ನೋದಕ್ಕೂ ಗೌಡರು ಅನ್ನೋರೆಲ್ಲ ಕಳ್ಳರೇ ಯಾಕಿರ್ತಾರೆ ಅನ್ನೋದಕ್ಕೂ ವ್ಯತ್ಯಾಸವಿದೆ. ಮೊದಲನೆಯದ್ದಕ್ಕೆ ದೇವೇಗೌಡರು ಕೇಸ್ ಹಾಕಬೇಕು. ಎರಡನೇದಕ್ಕೆ ಅವನ ಮಗನೋ, ಮೊಮ್ಮಗನೋ ಅಥವಾ ಯಾರಾದರೂ ಗೌಡ ಕೇಸ್ ಹಾಕಬಹುದು. ಇದು ಸುಮ್ಮನೆ ಒಂದು ಉದಾಹರಣೆ ಕೊಟ್ಟೆ ಅಷ್ಟೇ. ಯಾರೂ ಸೀರಿಯಸ್ ಆಗಿ ತಗೋಬೇಡಿ’ ಅಂತ ಟ್ವೀಟ್ ಮಾಡಿ ಕಾರಿಕೊಂಡಿದ್ದಾನೆ.
ದೇವೇಗೌಡರನ್ನು ಹೀಗೆ ಏಕವಚನದಲ್ಲಿ ಹಳಿದಿದ್ದ ಸಂಬರ್ಗಿಯ ಬುಡಕ್ಕೆ ಕ್ಷಣಾರ್ಧದಲ್ಲಿಯೇ ಬಿಸಿನೀರು ಹಾದು ಬಂದಿದೆ. ಒಂದು ವೇಳೆ ಆತನಿಗೆ ತಾಕತ್ತಿದ್ದಿದ್ದರೆ, ತನ್ನ ಹೇಳಿಕೆಗೆ ಬದ್ಧನಾಗಿರುತ್ತಿದ್ದ. ಆದರ ಯಾವಾಗ ದೇವೇಗೌಡರ ಬಳಗದವರು ರೊಚ್ಚಿಗೆದ್ದು, ತನ್ನ ಬುಡಕ್ಕೊಂದು ಕೇಸು ಜಡಿದುಕೊಳ್ಳುವ ಸೂಚನೆ ಸಿಕ್ಕಿತೋ, ಆಗ ಸಂಬರ್ಗಿ ಬೆವರಾಡಲಾರಂಭಿಸಿದ್ದಾನೆ. ನಂತರ ಯಾವ ಸಾಮಾಜಿಕ ಜಾಲತಾಣದಲ್ಲಿ ಕಾರಿಕೊಂಡಿದ್ದನೋ, ಅದೇ ಪ್ಲಾಟ್ಫಾರ್ಮಿನಲ್ಲಿ ಲಜ್ಜೆಗೆಟ್ಟವನಂತೆ ಕ್ಷಮೆ ಯಾಚಿಸಿದ್ದಾನೆ. ದೇವೇಗೌಡರನ್ನು ಏಕವಚನದಲ್ಲಿ ಜರಿದಿದ್ದ ಸಂಬರ್ಗಿ, ನಾಚಿಕೆಗೆಟ್ಟು ದೇವೇಗೌಡರು ತನ್ನ ಅಪ್ಪ ಇದ್ದಂತೆ. ಅವರಿಗೆ ಅಗೌರವ ಕೊಡೋದಿಲ್ಲ, ಕ್ಷಮಿಸಿ ಅಂತೆಲ್ಲ ಅಲವತ್ತುಕೊಂಡಿದ್ದಾನೆ.
ಈ ಸಂಬರ್ಗಿ ಬಹು ಕಾಲದಿಂದಲೂ ಇಂಥಾ ನೌಟಂಕಿ ನಾಟಕಗಳನ್ನು ಮಾಡಿಕೊಂಡೇ ಬರುತ್ತಿದ್ದಾನೆ. ಡ್ರಗ್ಸ್ ಕೇಸ್ ನಡೆದಾಗ ಅಲ್ಲಿಯೂ ಕೂಡಾ ಮೂಗು ತೂರಿಸಿ ತನಗೇನೋ ಮಹಾನ್ ಮಾಹಿತಿ ಇದೆ ಎಂಬಂತೆ ಪೋಸು ಕೊಟ್ಟಿದ್ದವನು ಇದೇ ಸಂಬರ್ಗಿ. ಆ ನಂತರದಲ್ಲಿ ರಾಜಕೀಯ ದಲ್ಲಾಳಿಕೆ ನಡೆಸುವ ಮೂಲಕ ಸದ್ದು ಮಾಡಿದ್ದವನು, ನಂತರದ ದಿನಗಳಲ್ಲಿ ಹಿಂದೂ ಪರ ಹೋರಾಟಗಾರನಂತೆ ಬಿಂಬಿಸಿಕೊಂಡಿದ್ದ. ಆದರೆ ಈತನದ್ದು ಹಿಂದುಮುಂದಿಲ್ಲದ ಹೋರಾಟ ಎಂಬುದು ಯಾವತ್ತೋ ಜನರಿಗೆ ಅರ್ಥವಾಗಿ ಹೋಗಿದೆ. ಇಲ್ಲಿ ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕು ಎಲ್ಲರಿಗೂ ಇದೆ. ಹಾಗಂತ ಯಾರನ್ನೋ ಹಳಿಯಲು ಹೋಗಿ ಮತ್ಯಾರನ್ನೋ ನಿಂದಿಸುವಂಥಾದ್ದು ಶೋಭೆ ತರುವ ನಡೆಯಲ್ಲ. ಇದೀಗ ಸಂಬರ್ಗಿಗೂ ಸರಿಯಾಗಿ ಅರ್ಥವಾದಂತಿದೆ. ತಿಮಿರು ತೋರಿಸಿದರೆ ಒಕ್ಕಲಿಗ ಸಮುದಾಯದಿಂದ ನಡ ಮುರಿಸಿಕೊಳ್ಳಬೇಕಾಗುತ್ತದೆಂಬ ಭಯದಿಂದಲೇ ಆತ ಏಕಾಏಕಿ ಯೂ ಟರ್ನ್ ಹೊಡೆದಿದ್ದಾನೆ. ಈ ಮೂಲಕ ಮತ್ತೆ ಬಫೂನ್ ಆಗಿ ತನ್ನ ಮಾನವನ್ನು ತಾನೇ ಹರಾಜು ಹಾಕಿಕೊಂಡಿದ್ದಾನೆ!