ಕಳೆದ ವರ್ಷದ ಕಡೇಯ ಭಾಗದಿಂದ ಮೊದಲ್ಗೊಂಡು, ಇಲ್ಲಿಯ ವರೆಗೂ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಾ, ಅಡಿಗಡಿಗೆ ಪ್ರೇಕ್ಷಕರನ್ನು ಸೆಳೆಯುತ್ತಾ ಸಾಗಿ ಬಂದಿದ್ದ ಚಿತ್ರ `ಪೆಂಟಗನ್’. ಖ್ಯಾತ ನಿರ್ದೇಶಕ ಗುರು ದೇಶಪಾಂಡೆ ತಮ್ಮದೇ ಸ್ವಂತ ಬ್ಯಾನರಿನಡಿಯಲ್ಲಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಹೊಸತನದ ಕಥೆಗಳಿಗೆ ದೃಷ್ಯರೂಪ ಕೊಡುವ ಸದುದ್ದೇಶದೊಂದಿಗೆ ನಿರ್ಮಾಣ ಸಂಸ್ಥೆ ಆರಂಭಿಸಿದ್ದ ಗುರು ದೇಶಪಾಂಡೆ ಅವರ ಇಂಗಿತವನ್ನು ಸಾರ್ಥಕಗೊಳಿಸುವಂತೆ ಮೂಡಿ ಬಂದಿರುವ ಚಿತ್ರ `ಪೆಂಟಗನ್’. ಇದೀಗ ಈ ಚಿತ್ರದ ಪೊಗದಸ್ತಾದ ಟ್ರೈಲರ್ ಲಾಂಚ್ ಆಗಿದೆ. ನಿಗಿನಿಗಿಸುತ್ತಿದ್ದ ನಿರೀಕ್ಷೆಗಳೆಲ್ಲ ಖುಷಿಗೊಂಡು ಧಗಧಗಿಸುವಂತೆ ಮಾಡುವ ಕಂಟೆಂಟಿನ ಸುಳಿವೊಂದು, ಈ ಟ್ರೈಲರ್ ಮೂಲಕ ಸ್ಪಷ್ಟವಾಗಿಯೇ ಸಿಕ್ಕಿದೆ!
ಅದೆಂಥಾದ್ದೇ ಅಲೆಯಿರಲಿ; ಒಂದೊಳ್ಳೆ ಕಂಟೆಂಟು ಹೊಂದಿರುವ, ಪ್ರಯೋಗಾತ್ಮಕ ಗುಣಗಳಿಂದ ಮೈ ಕೈ ತುಂಬಿಕೊಂಡಿರುವ ಸಿನಿಮಾಗಳತ್ತ ಕತ್ತನಡ ಪ್ರೇಕ್ಷಕರು ಸದಾ ಕಾಲವೂ ಕಣ್ಣಿಟ್ಟಿರುತ್ತಾರೆ. ಅಂಥಾ ಚಿತ್ರಗಳನ್ನು ವಿಶೇಷವಾದ ಅಕ್ಕರಾಸ್ಥೆಗಳಿಂದ ಗೆಲ್ಲಿಸುತ್ತಾರೆ. ಈ ಮಾತಿಗೆ ಉದಾಹರಣೆಯಂಥಾ ಅದೆಷ್ಟೋ ಚಿತ್ರಗಳಿದ್ದಾವೆ. ಆ ಸಾಲಿಗೆ ಪೆಂಟಗನ್ ಕೂಡಾ ಸೇರ್ಪಡೆಗೊಳ್ಳುವಂಥಾ ಸ್ಪಷ್ಟ ಕುರುಹುಗಳು ಈ ಟ್ರೈಲರ್ ಮೂಲಕ ನಿಖರವಾಗಿಯೇ ಗೋಚರಿಸಿವೆ. ಸಾಮಾನ್ಯವಾಗಿ ಒಂದು ಸಿನಿಮಾದಲ್ಲಿ ಒಂದೇ ಕಥೆಯಿರೋದು ಮಾಮೂಲು. ಆದರೆ ಪೆಂಟಗನ್ ಐದು ಭಿನ್ನ ಕಥಾನಕಗಳ ಗುಚ್ಛ. ಆ ಐದೂ ಕಥೆಗಳನ್ನು ಕುತೂಹಲ ಮೂಡುವಂತೆ ಟ್ರೈಲರ್ನಲ್ಲಿ ಕಟ್ಟಿ ಕೊಡುವುದಿದೆಯಲ್ಲಾ? ಅದೊಂದು ಸಾಹಸ. ಗುರು ದೇಶಪಾಂಡೆ ಸಾರಥ್ಯದಲ್ಲಿ ಆ ಸಾಹಸವನ್ನು ಸಮರ್ಥವಾಗಿಯೇ ಮಾಡಲಾಗಿದೆ.
ಅದು ಪೆಂಟಗನ್ ಟ್ರೈಲರಿನ ನಿಜವಾದ ಸಾರ್ಥಕ್ಯ. ಇಲ್ಲಿ ಐದು ಕಥೆಗಳನ್ನು ಗುರು ದೇಶಪಾಂಡೆಯೂ ಸೇರಿದಂತೆ ಐವರು ನಿರ್ದೇಶಕರು ನಿರ್ದೇಶನ ಮಾಡಿದ್ದಾರೆ. ಆ ಕಥೆಗಳೆಲ್ಲದರ ಬಗ್ಗೆ ಈವರೆಗೆ ಸಣ್ಣ ಸಣ್ಣ ಸುಳಿವುಗಳನ್ನು ಬಿಟ್ಟು ಕೊಡಲಾಗಿತ್ತು. ಇದೀಗ ಈ ಟ್ರೈಲರಿನಲ್ಲಿ ಒಂದಕ್ಕೊಂದು ತಟಿಕೆ ಹಾಕಿಕೊಂಡಂಥಾ, ಅಗಾಧ ಪ್ರಮಾಣದಲ್ಲಿ ರೋಮಾಂಚನ ಮೂಡಿಸುವ ರೀತಿಯಲ್ಲಿ ಕಟ್ಟಿ ಕೊಡಲಾಗಿದೆ. ಈ ಮೂಲಕವೇ ಈ ಐದೂ ಕಥನಗಳು ಒಂದನ್ನೊಂದು ಮೀರಿಸುವಂತಿವೆ ಎಂಬ ನಂಬಿಕೆಯೂ ಮೂಡಿಕೊಂಡಿದೆ. ಇದರಲ್ಲಿನ ಪಾತ್ರಗಳು ಅಚ್ಚರಿ ಮೂಡಿಸುತ್ತವೆ. ಎಲ್ಲ ವರ್ಗಗಳಿಗೂ ಇಷ್ಟವಾಗುವ, ಎಲ್ಲರನ್ನೂ ಸೆಳೆಯುವ ಗುಣ ಕಥೆಯಲ್ಲಿ ಅಡಕವಾಗಿರುವ ಅಂಶ ವಿಶೇಷವಾಗಿ ಸೆಳೆಯುತ್ತದೆ.
ಒಟ್ಟಾರೆಯಾಗಿ, ಪೆಂಟಗನ್ ಕಡೆಯಿಂದ ಬಂದಿರೋದು ಈ ವರ್ಷದ ಅತ್ಯಂತ ಪ್ರಾಮಿಸಿಂಗ್ ಅನ್ನಬಹುದಾದ ಟ್ರೈಲರ್. ಇದು ಎಲ್ಲ ವರ್ಗದ ಪ್ರೇಕ್ಷಕರನ್ನೂ ಕೂಡಾ ಬೇಷರತ್ತಾಗಿ ಸಿನಿಮಾ ಮಂದಿರದತ್ತ ಸೆಳೆಯುವಷ್ಟು ಶಕ್ತವಾಗಿದೆ. ಬಿಡುಗಡೆಗೊಂಡ ಬಳಿಕ ಅತ್ಯಂತ ಕಡಿಮೆ ಅವಧಿಯಲ್ಲಿಯೇ ಹೆಚ್ಚೆಚ್ಚು ವೀಕ್ಷಣೆ, ಪ್ರೋತ್ಸಾಹದ ಮಾತುಗಳನ್ನೂ ಸಹ ಈ ಟ್ರೈಲರ್ ತನ್ನದಾಗಿಸಿಕೊಳ್ಳುತ್ತಿದೆ. ಅಂದಹಾಗೆ, ಇಲ್ಲಿನ ಐದು ಕಥೆಗಳನ್ನು ಶಿವಾಜಿ ಸುರತ್ಕಲ್ ಖ್ಯಾತಿಯ ಆಕಾಶ್ ಶ್ರೀವತ್ಸ, ಚಂದ್ರಮೋಹನ್, ರಾಘು ಶಿವಮೊಗ್ಗ, ಕಿರಣ್ ಕುಮಾರ್ ಮತ್ತು ಗುರು ದೇಶಪಾಂಡೆ ತಲಾ ಒಂದೊಂದು ಕಥಾನಕಗಳನ್ನು ನಿರ್ದೇಶನ ಮಾಡಿದ್ದಾರೆ. ಘಟಾನುಘಟಿ ಕಲಾವಿದರ ತಾರಾಂಗಣ, ಪ್ರತಿಭಾನ್ವಿತ ತಂತ್ರಜ್ಞರ ಸಾಥ್ನೊಂದಿಗೆ ಪೆಂಟಗನ್ ತಯಾರುಗೊಂಡಿದೆ. ಅದರ ಅಸಲೀ ಖದರ್ ಏನೆಂಬುದನ್ನು ಸದರಿ ಟ್ರೈಲರ್ ಪರಿಣಾಮಕಾರಿಯಾಗಿ ತೋರಿಸಿಕೊಟ್ಟಿದೆ!