ರಾಜ್ಯದಲ್ಲೀಗ ಉರಿಗೌಡ ಮತ್ತು ನಂಜೇಗೌಡನೆಂಬ ಕಲ್ಪಿತ ವೀರರ ಕಥನಗಳು ಎಗ್ಗಿಲ್ಲದೆ ಹರಿದಾಡುತ್ತಿವೆ. ಈ ಬಗ್ಗೆ ವಾಟ್ಸಪ್ ಯುನಿರ್ಸಿಟಿಯ ಕಸುಬಿಲ್ಲದ ಸಂಶೋಧಕರೊಂದಷ್ಟು ಮಂದಿ ಎಗ್ಗಿಲ್ಲದೆ ಸಂಶೋಧನೆ ನಡೆಸುತ್ತಿದ್ದಾರೆ. ರಾಜಕೀಯ ನೆರಳಿನಲ್ಲಿ ಹಾಯಾಗಿರುವ ಮತ್ತೊಂದಷ್ಟು ಮಂದಿ, ಅದಕ್ಕೆ ಪೂರಕವಾದ ಆಕರ ವಿಚಾರಗಳನ್ನು ಹರಿಯಬಿಡುತ್ತಿದ್ದಾರೆ. ಸನ್ಮಾನ್ಯ ಸಿ.ಟಿ ರವಿಯಂತೂ ಥೇಟು ಇತಿಹಾಸ ತಜ್ಞನಂತೆ ದಿನಕ್ಕೊಂದೊಂದು ವಿಚಾರಗಳನ್ನು ಹರಿಯಬಿಡುತ್ತಿದ್ದಾರೆ. ಹೀಗೆ ಬಿಜೆಪಿ ಮಂದಿ ಚುನಾವಣಾ ದಾಳವಾಗಿಸಿಕೊಂಡಿದ್ದ ಉರಿ ಗೌಡ, ನಂಜೇಗೌಡ ಯಾರು? ಅಷ್ಟಕ್ಕೂ ಅವರು ವೀರರಾ? ಅವರಿಬ್ಬರೂ ಟಿಪ್ಪು ಸುಲ್ತಾನನನ್ನು ಕೊಂದಿದ್ದ ನಿಜವಾ? ಹೀಗೇ ನಾನಾ ದಿಕ್ಕಿನಲ್ಲಿ ಚರ್ಚೆಗಳು ಚಾಲ್ತಿಯಲ್ಲಿವೆ!
ಇದೇ ಹೊತ್ತಿನಲ್ಲಿ ಸದ್ದೇ ಇಲ್ಲದೆ ಉರಿಗೌಡ ಮತ್ತು ನಂಜೇಗೌಡನ ಇರುವಿಕೆಗೆ ಅಧಿಕೃತ ಮುದ್ರೆಯೊತ್ತಿವ ಕೆಲಸವೂ ನಡೆದಿತ್ತು; ಅವರಿಬ್ಬರ ಬಗೆಗೊಂದು ಸಿನಿಮಾ ಮಾಡುವ ತಯಾರಿಯೊಂದಿಗೆ. ಒಂದು ಕಲ್ಪಿತ ಕಥೆಯನ್ನು ನಿಜ ಇತಿಹಾಸವೆಂಬಂತೆ ಬಿಂಬಿಸುವುದು, ಆ ಮೂಲಕ ಜನಮಾನಸದಲ್ಲಿ ಸುಳ್ಳನ್ನು ಸತ್ಯವೆಂಬಂತೆ ಪ್ರತಿಷ್ಠಾಪಿಸುವುದೆಲ್ಲ ಅಕ್ಷಮ್ಯ ಅಪರಾಧ. ಆದರೆ, ಅದೇಕೋ ಈ ಬಿಜೆಪಿ ಮಂದಿ ಮಾತ್ರ ಆಗಾಗ ಕಪೋಲ ಕಲ್ಪಿತ ಸರಕುಗಳನ್ನು ಕೈಗೆತ್ತಿಕೊಳ್ಳುತ್ತಾರೆ. ಆ ಮೂಲಕ ತಮ್ಮ ಆಡಳಿತ ವೈಫಲ್ಯವನ್ನು ಬಚ್ಚಿಟ್ಟುಕೊಳ್ಳಲು ಪ್ರಯತ್ನಿಸುತ್ತಾರೆಂಬ ಆರೋಪವಿದೆ. ಆರಂಭದಲ್ಲಿ ವಿರೋಧ ಪಕ್ಷಗಳ ಅಭಿಪ್ರಾಯದಂತಿದ್ದ ಆ ಆರೋಪಗಳೀಗ, ಸಾರ್ವಜನಿಕರನ್ನೂ ಆವರಿಸಿಕೊಂಡಿದೆ.
ಚುನಾವಣೆಯ ಹೊಸ್ತಿಲಲ್ಲಿ ಬಿಜೆಪಿಯನ್ನು ಅಂಥಾದ್ದೊಂದುಬ ಸಂದಿಗ್ಧ ಸ್ಥಿತಿಗೆ ತಳ್ಳಿದ್ದರಲ್ಲಿ ಉರಿಗೌಡ ಮತ್ತು ನಂಜೇಗೌಡರ ಪಾಲು ಬೆಟ್ಟದಷ್ಟಿದೆ. ಯಾವಾಗ, ಸಿ.ಟಿ ರವಿಯೆಂಬ ಆಸಾಮಿ ಪದೇ ಪದೆ ಈ ಎರಡು ಹೆಸರುಗಳನ್ನಿಟ್ಟುಕೊಂಡು ಪುಂಗಲು ಶುರುವಿಟ್ಟರೋ, ಆಗ ಅದೊಂದು ವಿವಾದದ ಸ್ವರೂಪ ಪಡೆದುಕೊಂಡಿತ್ತು. ಚುನಾವಣೆಯ ಹಂತದಲ್ಲಿ ಉರಿಗೌಡ ಮತ್ತು ನಂಜೇಗೌಡರನ್ನು ಮತ್ತಷ್ಟು ಮುನ್ನೆಲೆಗೆ ತರುವ ಸಲುವಾಗಿಯೇ ಸಿನಿಮಾಕ್ಕೂ ತಯಾರಿ ನಡೆದಿತ್ತು. ಕುರುಕ್ಷೇತ್ರದಂಥಾ ಸಿನಿಮಾ ಮಾಡಿ ಜಯಿಸಿಕೊಂಡಿದ್ದ ಮುನಿರತ್ನ ಸಿಟಿ ರವಿಯ ಪುಂಗಿಗೆ ಮನಸಾರೆ ತಲೆದೂಗಿದ್ದರು.
ಹಾಗೆ ರವಿಯ ಪ್ರವರ ಕೇಳಿ ಬಂದವರೇ, ಉರಿಗೌಡ ಮತ್ತು ನಂಜೇಗೌಡರೆಂಬ ವೀರರ ಬಗ್ಗೆ ಸಿನಿಮಾ ಮಾಡೋದಾಗಿ ಘೋಷಣೆ ಮಾಡಿ ಬಿಟ್ಟಿದ್ದರು. ಅಷ್ಟರಲ್ಲಿ ಅವರಿಗೆ ನಿರ್ಮಲಾನಂದ ಶ್ರೀಗಳಿಂದ ಬುಲಾವು ಬಂದಿದೆ. ಹಾಗೆ ಸ್ವಾಮಿಗಳ ಮುಂದೆ ಹೋಗಿ ಕೂತ ಮುನಿತ್ನಗೆ ಜ್ಞಾನೋದಯವಾಗಿದೆ. ಯಾಕೆಂದರೆ, ನಿರ್ಮಲಾನಂದರು ಅತ್ಯಂತ ನಿಷ್ಟುರವಾಗಿ, ನ್ಯಾಯಸಮ್ಮತವಾಗಿ ಮಾತಾಡಿದ್ದಾರೆ. ಕಲ್ಪಿಸಿಕೊಂಡು ಬರೆಯೋದು ಕಾದಂಬರಿಯಾಗುತ್ತದೇ ಹೊರತು ಇಹಿತಾಸವಾಗಲಾರದೆಂಬ ಕಾಮನ್ಸೆನ್ಸಿನ ಪಾಠ ಮಾಡಿದ್ದಾರೆ. ಇದರೊಂದಿಗೆ ಸಿಟಿ ರವಿ ಬಿಟ್ಟಿದ್ದ ಹಾವು ಹೇಳ ಹೆಸರಿಲ್ಲದಂತೆ ಮಾಯವಾಗಿದೆ. ಹಾಗೆ ಹೊರ ಬಂದ ಮುನಿರತ್ನ, ಇನ್ನು ಮುಂದೆ ಉರಿಗೌಡ ನಂಜೇಗೌಡರ ಬಗ್ಗೆ ಸಿನಿಮಾ ಮಾಡೋದಿರಲಿ; ಆ ಹೆಸರನ್ನೂ ಎತ್ತೋದಿಲ್ಲ ಎಂಬರ್ಥದಲ್ಲಿ ಮಾತಾಡಿದ್ದಾರೆ.
ಅಲ್ಲಿಗೆ ಸುಳ್ಳನ್ನೇ ಸತ್ಯವೆಂಬಂತೆ ಒದರುತ್ತಾ ಬಂದಿದ್ದ ರವಿಗೆ ಮುಖಭಂಗವಾದಂತಾಗಿದೆ. ಅದರ ಜೊತೆಗೆ ಒಂದು ಕಂಟಕವೂ ಕಳೆದಂತಾಗಿದೆ. ಯಾಕೆಂದರೆ. ಕಾಶ್ಮೀರ್ ಫೈಲ್ನಂಥಾ ಸಿನಿಮಾದ ಮೂಲಕ ಒನ್ಸೈಡೆಡ್ ವಿಚಾರ ಮಂಡಿಸಿ, ಬಿಜೆಪಿ ಬೇಳೆ ಬೇಯಿಸಿಕೊಂಡಿದೆ ಎಂಬಂಥಾ ಆರೋಪವಿದೆ. ನಂಜೇಗೌಡ ಉರಿಗೌಡರ ವಿಚಾರದಲ್ಲಿ ಪೂರಕ ದಾಖಲೆ ಒದಗಿಸುವ ಯೋಗ್ಯತೆ ಇಲ್ಲದ ಮಂದಿ, ಸಿನಿಮಾ ಮೂಲಕ ಆ ಕಲ್ಪಿತ ಪಾತ್ರಗಳಿಗೊಂದು ಕಾಯಕಲ್ಪ ಕೊಡಲು ಮುಂದಾಗಿದ್ದರು. ಅದಕ್ಕೀಗ ನಿರ್ಮಲಾನಂದರ ಸಾನಿಧ್ಯದಲ್ಲಿ ಬ್ರೇಕ್ ಬಿದ್ದಿದೆ. ಈ ಮೂಲಕ ಬಿಜೆಪಿಗರ ಸುಳ್ಳುಗಳು ಮಂಡ್ಯ ಸೀಮೆಯ ಒಕ್ಕಲಿಗರು ಎಚ್ಚೆತ್ತುಕೊಂಡಿದ್ದಾರೆ. ಇಂಥಾ ಸುಳ್ಳಿನ ಸಾರಥ್ಯದಲ್ಲಿ ಚುನಾವಣೆ ಗೆಲ್ಲುವ ಭ್ರಮೆ ಹೊಂದಿದ್ದ ಬಿಜೆಪಿಗೆ ಹಿನ್ನಡೆಯಾಗಿದೆ. ಬಿಜೆಪಿ ಪಾಳೆಯದ ಭಯಾನಕ ಇತಿಹಾಸ ತಜ್ಞರಾದ ಸಿ.ಟಿ ರವಿ ಸಾಹೇಬರು ಅದೇಕೋ ಥಂಡಾ ಹೊಡೆದಂತಿದ್ದಾರೆ!