ಥೇಟರ್ ತುಂಬಾ ಕಬ್ಜಾ ಕಜ್ಜಾಯ ಸೀದು ಹೋದ ಘಾಟು!
ಹೊಸಾ ವರ್ಷ ಆಗಮಿಸುತ್ತಲೇ ಕನ್ನಡ ಚಿತ್ರರಂಗದಲ್ಲಿ ಬಹುದೊಡ್ಡ ಕ್ರೇಜ್ ಸೃಷ್ಟಿಸಿದ್ದ ಚಿತ್ರ `ಕಬ್ಜಾ’. ಆರಂಭದಲ್ಲಿ ಇಂಥಾದ್ದೊಂದು ರಗಡ್ ಟೈಟಲ್ಲಿನೊಂದಿಗೆ ನಿರ್ದೇಶಕ ಆರ್.ಚಂದ್ರು ಪ್ರತ್ಯಕ್ಷರಾದಾಗ ಹೇಳಿಕೊಳ್ಳುವಂಥಾ ನಿರೀಕ್ಷೆಗಳಿರಲಿಲ್ಲ. ಯಾಕೆಂದರೆ, ನಾಕಾಣೆ ಕೆಲಸ ಮಾಡಿ ಹನ್ನೆರಡಾಣೆ ಪೋಸು ಕೊಡೋದು ಕೇಶಾವರ ಚಂದ್ರುವಿನ ಹುಟ್ಟು ಜಾಯಮಾನ. ಆದರೆ, ಆರಂಭದಿಂದ ಇಲ್ಲಿಯವರೆಗೂ ಲವ್ ಸ್ಟೋರಿಗಳ ಗುಂಗು ಹತ್ತಿಸಿಕೊಂಡಂತಿದ್ದ ಚಂದ್ರು, ಏಕಾಏಕಿ ರಾ ಸಬ್ಜೆಕ್ಟಿನ ಸುಳಿವು ನೀಡಿದಾಗ ಒಂದು ಥರದ ಸಂಚಲನ ಸೃಷ್ಟಿಯಾಗಿದ್ದು ನಿಜ. ಆ ನಂತರ ಟೀಸರ್ ಮತ್ತು ಟ್ರೈಲರ್ಗಳು ಲಾಂಚ್ ಆದವು ನೋಡಿ? ಚಂದ್ರು ಕಡೆ ಒಂದಷ್ಟು ಮಂದಿ ಅಚ್ಚರಿಯಿಂದ ನೋಡಿದ್ದರು. ಕೆಲ ಮಂದಿ `ಅರರರೇ ಇದು ಚಂದ್ರು ಸಿನಿಮಾನಾ’ ಎಂಬಂತೆ ಶಾಕ್ ಆಗಿದ್ದರು. ಅದರ ಬೆನ್ನಲ್ಲಿಯೇ ಇದು ಕೆಜಿಎಫ್ ಸರಣಿಯ ಮಕ್ಕಿಕಾಮಕ್ಕಿ ಕಾಪಿ ವರ್ಷನ್ ಎಂಬಂಥಾ ಆರೋಪಗಳೂ ಕೇಳಿ ಬಂದಿದ್ದವು. ಇಂಥಾ ವಾತಾವರಣದಲ್ಲಿಯೇ ಇದೀಗ ಕಬ್ಜಾ ಬಿಡುಗಡೆಗೊಂಡಿದೆ!
ಕನ್ನಡವೂ ಸೇರಿದಂತೆ ಒಂದಷ್ಟುಯ ಭಾಷೆಗಳಲ್ಲಿ ತಯಾರಾಗಿ, ಏಕಕಾಲದಲ್ಲಿಯೇ ಬಿಡುಗಡೆಗೊಂಡಿರುವ ಪ್ಯಾನಿಂಡಿಯಾ ಚಿತ್ರ ಕಬ್ಜಾ. ಇದರ ಆರಂಭಿಕ ಅಬ್ಬರ ನೋಡಿದವರು ಒಂದು ಭರಪೂರ ಅನುಭೂತಿಯ ಕಜ್ಜಾಯ ಗ್ಯಾರೆಂಟಿ ಅಂದುಕೊಂಡಿದ್ದರು. ಅಂಥಾ ಅಗಾಧ ನಿರೀಕ್ಷೆಯನ್ನಿಟ್ಟುಕೊಂಡು ಸಿನಿಮಾ ಮಂದಿರ ಹೊಕ್ಕವರನ್ನೆಲ್ಲ ಚಂದ್ರು ಅಕ್ಷರಶಃ ಬೆಚ್ಚಿ ಬೀಳಿಸಿದ್ದಾರೆ. ಹಾಗಂತ, ಕಬ್ಜಾವನ್ನು ಹಾರರ್ ಬಸಿನಿಮಾ ಅಂತಂದುಕೊಳ್ಳಬೇಕಿಲ್ಲ. ಇಲ್ಲಿ ಹಾರರ್ ಅಂಶ ಇಲ್ಲದಿದ್ದರೂ ಹಾರಿಬಲ್ ಅನ್ನಿಸುವ ದೃಷ್ಯಾವಳಿಗಳ ಸರಣಿಯೇ ಇದೆ. ಅದರ ಸೆಳವಿಗೆ ಸಿಕ್ಕ ಪಾತ್ರಗಳೆಲ್ಲ ಗೊತ್ತು ಗುರಿಯಿಲ್ಲದಂತೆ ಚೆದುರಿಕೊಂಡಿವೆ. ಅಂಥಾ ನ್ಯೂನತೆಗಳೆಲ್ಲ ಪ್ರೇಕ್ಷಕರ ಕಣ್ಣಿಗೆ ಕಾಣದಂತೆ ಮರೆಮಾಚಲು ಚಂದ್ರು, ಡಾರ್ಕ್ ಶೇಡ್ ತಂತ್ರ ಅನುಸರಿಸಿದ್ದಾರೆ. ಆದರೆ ಅವೆಲ್ಲವೂ ನಮ್ಮದೇ ಕೆಜಿಎಫ್ ಚಿತ್ರವನ್ನು ಕಿತ್ತು ತಂದು ಪೋಣಿಸಿದಂತೆಯೇ ಭಾಸವಾಗುತ್ತದೆ!
ಹಿನ್ನೆಲೆ ಧ್ವನಿ, ಯಾವುದೋ ಪಾತ್ರದ ನಿರೂಪಣೆಯ ಮೂಲಕ ಕದಲುವ ಕಥೆಯ ತಂತ್ರಗಾರಿಕೆ ಕೆಜಿಎಫ್ ಸರಣಿಯಲ್ಲಿಯೇ ಬೋರು ಹೊಡೆದಿತ್ತು. ಅದಕ್ಕೊಂದು ಪರಿಣಾಮಕಾರಿ ಪರ್ಯಾಯ ದಾರಿ ಹುಡುಕುವಲ್ಲಿ ಸೋತಿರುವ ಚಂದ್ರು, ಮತ್ತದೇ ತಂತ್ರಕ್ಕೆ ಮೊರೆ ಹೋಗಿದ್ದಾರೆ. ಅದರ ಭಾಗವಾಗಿಯೇ ಇನ್ಸ್ಪೆಕ್ಟರ್ ಭಕ್ಷಿಯಾಗಿ, ಸುದೀಪ್ರ ನಿರೂಪಣೆಯಲ್ಲಿ ಕಥೆ ಬಿಚ್ಚಿಕೊಳ್ಳುತ್ತೆ. ಖಡಕ್ ಆಫಿಸರ್ ಭಕ್ಷಿ ರೌಡಿ ಎಲಿಮೆಂಟುಗಳನ್ನು ಗುಡ್ಡೆ ಹಾಕಿಕೊಂಡು ಕಥೆ ಹೇಳಲಾರಂಭಿಸಿದಾಗ ಉಪೇಂದ್ರನ ಪಾತ್ರ ತೆರೆದುಕೊಳ್ಳುತ್ತೆ. ಅಂದಹಾಗೆ ಇದು ಸ್ವಾತಂತ್ರ್ಯ ಸಿಗುವ ಆಚೀಚೆಗೆ ನಡೆಯೋ ಕಥೆ. ಅದರಲ್ಲಿ ಸ್ವಾತಂತ್ರ್ಯ ಹೋರಾಟಗಾರನಾಗಿದ್ದ ಅಮರೇಶ್ವರನ ಮಗ ಅರ್ಕೇಶ್ವರನಾಗಿ ಉಪೇಂದ್ರ ಕಾಣಿಸಿಕೊಂಡಿದ್ದಾರೆ. ಸಹೋದರ ಸಂಕೇಶ್ವರನಾಗಿ ಸುನೀಲ್ ಪುರಾಣಿಕ್ ನಟಿಸಿದ್ದಾರೆ.
ಈ ಹೋರಾಟದಲ್ಲಿ ಅಮರೇಶ್ವರ ಬಲಿಯಾದ ನಂತರದಲ್ಲಿ ಆತನ ಮಡದಿ ಮಕ್ಕಳಿಬ್ಬರನ್ನು ಅವುಚಿಕೊಂಡು ಅಮರಾಪುರಕ್ಕೆ ಬರುತ್ತಾಳೆ. ಅಲ್ಲಿ ಕೂಲಿನಾಲಿ ಮಾಡಿ ಮಕ್ಕಳಾದ ಅರ್ಕೇಶ್ವರ ಮತ್ತ ಸಂಕೇಶ್ವರನನ್ನು ಸಾಕಿ ಸಲಹುತ್ತಾಳೆ. ಮುಂದೆ ಅರ್ಕೇಶ್ವರ ಪೈಲಟ್ ತರಬೇತಿ ಪಡೆದರೆ, ಸಂಕೇಶ್ವರ ತಾಯಿಯನ್ನು ನೋಡಿಕೊಳ್ಳುವ ಜವಾಬ್ದಾರಿ ಹೊರುತ್ತಾನೆ. ತರಬೇತಿ ಪಡೆದ ಅರ್ಕೇಶ್ವರ ಊರಿಗೆ ವಾಪಾಸಾಗುವ ಹೊತ್ತಿಗೆಲ್ಲ ಸಹೋದರ ಸಂಕೇಶ್ವರ ಕೊಲೆಕೇಸಲ್ಲಿ ಜೈಲು ಪಾಲಾಗಿರುತ್ತಾನೆ. ಆತ ಸಾಯಲು ಕಾರಣವೇನು? ಅದಕ್ಕೆ ಅರ್ಕೆಶ್ವರ ಹೇಗೆ ರಿವೇಂಜು ತೀರಿಸಿಕೊಳ್ಳುತ್ತಾನೆಂಬುದನ್ನು ಹಲವಾರು ಕೊಂಬೆ ಕೋವೆಗಳ ಕಥಾನಕದ ಮೂಲಕ ಚಂದ್ರು ನಿರೂಪಿಸಲು ನೋಡಿದ್ದಾರೆ.
ಈ ನಡುವೆ ಮತ್ತೊಂದಷ್ಟು ಪಾತ್ರಗಳು ಕಬ್ಜಾ ಕ್ವಾನ್ವಾಸಿನಲ್ಲಿ ಕಾಣಿಸಿಕೊಳ್ಳುತ್ತವೆ. ಶ್ರೀಯಾ ಶರಣ್ ರಾಜಮನೆತನದ ಮಧುಮತಿಯಾಗಿ ಅರ್ಕೇಶ್ವರನ ಬದುಕಿಗೆ ಪ್ರವೇಶಿಸುತ್ತಾಳೆ. ಆಮೇಲೇ ಏನೇನಾಗುತ್ತದೆಂಬ ಪ್ರಶ್ನೆಗೆ ಖುದ್ದು ಚಂದ್ರು ಅವರಲ್ಲಿಯೂ ಗೊಂದಲಗಳಿರಬಹುದು. ಆ ಗೊಂದಲಗಳೇ ಸ್ಕ್ರಿಫ್ಟುಉ, ಸ್ಕ್ರೀನ್ ಪ್ಲೇ, ಪಾತ್ರ ಸೃಷ್ಟಿ ಮುಂತಾದ ಮಹತ್ವದ ಅಂಶಗಳನ್ನು ಆವರಿಸಿಕೊಂಡಿವೆ. ಹೆಜ್ಜೆ ಹೆಜ್ಜೆಗೂ ಪ್ರೇಕ್ಷಕರನ್ನು ಕೊರತೆಗಳು ಎದುರಾಗುತ್ತವೆ. ಗೊಂದಲಗಳು ಕಾಡುತ್ತವೆ. ಕೆಲ ಪಾತ್ರಗಳ ಚಹರೆಗಳೇ ಅಬಾಸದಂತಿವೆ. ಅಮ್ಮನ ಪಾತ್ರ ನಿರ್ವಹಿಸಿದವರು ಅಕ್ಕ ತಂಗಿಯರಂತೆ ಕಾಣಿಸುತ್ತಾರೆ. ಕೆಲವೊಮ್ಮೆ ಆರ್ಭಟವೂ ಕಾಮಿಡಿಯಂತೆ ಭಾಸವಾಗುತ್ತದೆ. ಶ್ರೀಯಾ ಶರಣ್ ಪಾತ್ರದ ಅಮ್ಮನ ಕ್ಯಾರೆಕ್ಟರ್ ಖಾಸಾ ಅಕ್ಕನಂತೆ ಕಾಣಿಸುತ್ತೆ. ಅಳುವನ್ನು ಬಿಟ್ಟರೆ ಆ ಪಾತ್ರದ ಬಾಯಿಂದ ಒಂದೇ ಒಂದು ಡೈಲಾಗೂ ಹೊರಬರುವುದಿಲ್ಲ!
ಇನ್ನು ಬಿ ಸುರೇಶ್ಗೆ ಕೆಜಿಎಫ್ನಲ್ಲಿರುವಂಥಾದ್ದೇ ಪಾತ್ರ ಸಿಕ್ಕಿದೆ. ಬಹುಶಃ ಗೊಂದಲದಲ್ಲಿದ್ದ ಚಂದ್ರುಗೆ ಆ ಪಾತ್ರದ ಕಾಸ್ಟ್ಯೂಮ್ ಬದಲಿಸಲೂ ಪುರಸೊತ್ತು ಸಿಕ್ಕಂತಿಲ್ಲ. ನಿಖರವಾಗಿ ಹೇಳಬೇಕೆಂದರೆ, ಕೆಜಿಎಫ್ ಸರಣಿಯ ಪಾತ್ರಗಳೇ ಹೆಸರು ಬದಲಿಸಿಕೊಂಡು ಪ್ರತ್ಯಕ್ಷವಾಗಿವೆಯೇನೋ ಎಂಬಂಥಾ ಫೀಲ್ ಪದೇ ಪದೆ ಹುಟ್ಟುವಂತಿದೆ. ಊರಿನ ಹೆಸರು, ಪಾತ್ರಗಳ ಹೆಸರು ಮತ್ತು ಕಥಾ ಎಳೆ ಮಾತ್ರವೇ ಬದಲಾದಂತೆ ಕಾಣಿಸುತ್ತದೆ. ಇನ್ನುಳಿದಂತೆ ಮೇಕಿಂಗ್ನಲ್ಲಿ ಮಾತ್ರ ಚಂದ್ರು ಅಚ್ಚರಿ ಮೂಡಿಸುತ್ತಾರೆ. ಎಲ್ಲಿಯೂ, ಯಾವುದಕ್ಕೂ ಕೊರತೆಯಾಗದಂತೆ ಅದ್ದೂರಿಯಾಗಿ ದೃಷ್ಯ ಕಟ್ಟಿದ್ದಾರೆ. ಆದರೆ ಕಥೆಯ ಸೂತ್ರವೇ ತಪ್ಪಿರುವುದರಿಂದ, ಕಥೆಯ ಬೆನ್ನ ಹುರಿಯೇ ನೆಟ್ಟಗಿಲ್ಲದಿರೋದರಿಂದ ಆ ಪ್ರಯತ್ನವೂ ವ್ಯರ್ಥ ಕಸರತ್ತಾಗಿಯಷ್ಟೇ ದಾಖಲಾಗುತ್ತದೆ!
ಅಣ್ಣನ ಸಾವಿಗೆ ಕಾರಣವಾದ ಇನ್ಸ್ಪೆಕ್ಟರನ ರುಂಡ ಚೆಂಡಾಡುವ ಮೂಲಕ ಅರ್ಕೇಶ್ವರ ಜೈಲು ಪಾಲಾಗುತ್ತಾನೆ. ಅಲ್ಲಿ ಮತ್ತೋರ್ವ ಭೀಕರ ರೌಡಿ ಟಾರ್ಗೆಟ್ ಎಂಬಾತ ಅರ್ಕನಿಗೆ ಸಿಗುತ್ತಾನೆ. ಆ ಟಾರ್ಗೆಟ್ ಎಂಬ ಪಾತ್ರ ನಿರ್ವಹಿಸಿರುವಾತ ಮಾಜಿ ಸಚಿವ ರೇವಣ್ಣನ ಮಗ ಸೂರಜ್ ರೇವಣ್ಣ. ಆ ಪಾತ್ರವಂತೂ ತೀರಾ ಬಾಲಿಷವಾಗಿದೆ. ಸೂರಜ್ ಅಬ್ಬರಿಸಿದರೆ ನಡುಕ ಹುಟ್ಟುವ ಬದಲು ನಗು ಕಿತ್ತುಕೊಳ್ಳುತ್ತೆ. ಈ ಹಿಂದೆ ಲಕ್ಷ್ಮಣ ಅಂತೊಂದು ಸಿನಿಮಾ ಮೂಲಕ ಇದೇ ಚಂದ್ರು ಸೂರಜ್ನನ್ನು ಹೀರೋ ಆಗಿಸಿದ್ದರು. ಆಗ ಮಾಡಿಕೊಂಡಿದ್ದ ಲಾಭದ ಋಣ ತೀರಿಸಲೆಂದೇ ಚಂದ್ರು ಈ ಪಾತ್ರ ಸೃಷ್ಟಿಸಿದಂತಿದೆ!
ಇಂಥಾ ಗೊಂದಲದ ಗೂಡಿನಂಥಾ, ಪೇಲವ ಪಾತ್ರಗಳೇ ತುಂಬಿರುವ ಈ ಕಥಾನಕದಲ್ಲಿ ಉಪ್ಪಿ ಕೂಡಾ ನಿರೀಕ್ಷೆಯಂತೆ ಮಿಂಚುವುದಿಲ್ಲ. ಕೆಜಿಎಫ್ನಲ್ಲಿ ಯಶ್ ಮಾಡಿದ್ದ ಪಾತ್ರದ ನೆರಳಿನಂತೆಯಷ್ಟೇ ಉಪ್ಪಿ ಪಾತ್ರ ಕಾಣಿಸಿಕೊಳ್ಳುತ್ತೆ. ಅಲ್ಲಿ ಯಶ್ ಕೈಲಿ ಸುತ್ತಿಗೆ ಇದ್ದರೆ, ಇಲ್ಲಿ ಆರ್ ಚಂದು ಉಪ್ಪಿ ಕೈಗೆ ಮಚ್ಚು ಮಡಗಿದ್ದಾರೆ. ಅವರ ಕ್ರಿಯಾಶೀಲತೆ ಅಷ್ಟಕ್ಕೆ ಮಾತ್ರವೇ ಸೀಮಿತವಾದಂತಿದೆ. ಇನ್ನು ಡೈಲಾಗುಗಳಲ್ಲಿಯೂ ಶಕ್ತಿ ಇಲ್ಲ. ಇದನ್ನು ನೋಡಿದ ಪ್ರತೀ ಪ್ರೇಕ್ಷಕರಿಗೂ, ಕಬ್ಜಾ ಎಂಬುದು ಕೆಜಿಎಫ್ನ ನೆರಳಿನಂಥಾ ಚಿತ್ರವೆಂಬುದು ಖಾತರಿಯಾಗುತ್ತದೆ. ಆದರೆ ಮೇಕಿಂಗ್ ಗುಣಮಟ್ಟವೊಂದನ್ನು ಹೊರತುಪಡಿಸಿದರೆ, ಮಿಕ್ಕ ಯಾವ ವಿಚಾರದಲ್ಲಿಯೂ ಕಬ್ಜಾ ಕೆಜಿಎಫ್ ಅನ್ನು ಸರಿಗಟ್ಟಲು ಸಾಧ್ಯವಿಲ್ಲ.
ಇತ್ತೀಚಿನವರೆಗೂ ಕನ್ನಡದ ಸಿನಿಮಾ ಮಂದಿ ಬೇರೆ ಭಾಷೆಗಳ ಸಿನಿಮಾ ನಕಲು ಮಾಡುತ್ತಾರೆಂಬ ಆರೋಪವಿತ್ತು. ಆದರೆ, ಆರ್ ಚಂದ್ರು ಅಂಥಾ ಆರೋಪದಿಂದ ಚಿತ್ರರಂಗವನ್ನು ಪಾರುಗಾಣಿಸಿದ್ದಾರೆ. ಯಾಕೆಂದರೆ, ಅವರು ಕನ್ನಡದ ಕೆಜಿಎಫ್ ಅನ್ನೇ ಕಾಪಿ ಮಾಡಿದ್ದಾರೆ. ಈ ನಕಲಿನ ವಿಚಾರದಲ್ಲಿಯೂ ದೇಸೀ ಮನಃಸ್ಥಿತಿ ಪ್ರದರ್ಶಿಸಿರುವ ಚಂದ್ರುವನ್ನು ಅಭಿನಂದಿಸಲೇಬೇಕು. ಇನ್ನುಳಿದಂತೆ, ಕೊರೋನಾ ಕಾಲದಲ್ಲಿ ಖಾಲಿ ಕುಂತಿದ್ದ ಚಂದ್ರುಗೆ ಕೆಜಿಎಫ್ ಸಿಂಡ್ರೋಮಿನಂತೆ ಕಾಡಿದಂತಿದೆ. ಅದು ಕಬ್ಜಾದ ಕ್ಲೈಮ್ಯಾಕ್ಸಿನಲ್ಲಿಯೂ ಹಣಕಿ ಹಾಕಿದೆ. ಉಪ್ಪಿಯನ್ನು ಹೊಡೆದುರುಳಿಸಲು ಪೊಲೀಸು ಪಡೆ ದಂಡೆತ್ತಿ ಬಂದಾಗ, ಏಕಾಏಕಿ ಶಿವಣ್ಣನ ಪಾತ್ರ ಎಲ್ಲವನ್ನೂ ಕಬ್ಜಾ ಮಾಡಿಕೊಂಡು ಬಿಡುತ್ತಾರೆ. ಪರದೆಯ ಮೇಲೆ ಕಬ್ಜಾ ಪಾರ್ಟ್2 ಸೂಚನೆ ಮೂಡಿಕೊಳ್ಳುತ್ತೆ. ಅದುವರೆಗಿನ ತಲೆನೋವುಗಳನ್ನು ತಡೆದುಕೊಂಡು ನಿತ್ರಾಣನಾದ ಪ್ರೇಕ್ಷಕ ಪ್ರಭುವಿನ ಸಿಟ್ಟಿಗೆ ಅದುವೇ ತುಪ್ಪ ಸುರುವುತ್ತದೆ. ಇದೆಲ್ಲದರಾಚೆಗೆ ಕಥೆ ಚಿತ್ರಕಥೆ, ಡೈಲಾಗ್ ಮುಂತಾದವುಗಳ ಬಗ್ಗೆ ಮುತುವರ್ಜಿ ವಹಸಿದ್ದರೆ ಕಬ್ಜಾ ಎಂಬುದು ಪ್ರೇಕ್ಷಕರ ಪಾಲಿಗೆ ಕಜ್ಜಾಯವಾಗುವ ಸಾಧ್ಯತೆಗಳಿದ್ದವು. ಆದರೆ, ಆ ಕಜ್ಜಾಯ ಸೀದು ಹೋದ ಕಮಟು ಮಾತ್ರವೇ ಚಿತ್ರಮಂದಿರಗಳನ್ನು ಆವರಿಸಿಕೊಂಡಿದೆ. ಆರ್ ಚಂದ್ರುವಿನ ಭಂಡ ಧೈರ್ಯಕ್ಕೊಂದು ಬಹುಪರಾಕ್ ಹೇಳುತ್ತಾ ಪ್ರೇಕ್ಷಕರು ನಿರ್ಗಮಿಸುವಲ್ಲಿಗೆ ಕಬ್ಜಾ ಕಥನ ಸಮಾಪ್ತಿಯಾಗುತ್ತೆ!