ಕೆಲವೊಮ್ಮೆ ಒಂದರ ಹಿಂದೊಂದರಂತೆ ಸಮಸ್ಯೆಗಳ ಅಮರಿಕೊಂಡು ಮನುಷ್ಯನನ್ನು ಹೈರಾಣು ಮಾಡಿ ಹಾಕುತ್ತವೆ. ಅದಕ್ಕೆ ಪಕ್ಕಾದವರು ಸಾಮಾನ್ಯರಿರಲಿ; ಸೆಲೆಬ್ರಿಟಿಗಳೇ ಆಗಿದ್ದರೂ ಬದುಕು ಹಠಾತ್ತನೆ ಬೀಸಿದ ಏಟಿನಿಂದ ಅಕ್ಷರಶಃ ಜರ್ಝರಿತರಾಗಿ ಬಿಡುತ್ತಾರೆ. ಸದ್ಯಕ್ಕೆ ಅಂಥಾದ್ದೊಂದು ಸರಣಿ ಆಘಾತಗಳಿಗೀಡಾಗಿ, ಮೆಲ್ಲಗೆ ಚೇತರಿಸಿಕೊಳ್ಳುತ್ತಿರುವಾಕೆ ದಕ್ಷಿಣ ಭಾರತೀಯ ಚಿತ್ರರಂಗದ ಬಹುಬೇಡಿಕೆಯ ನಟ ಸಮಂತಾ. ಅತ್ತ ಸಮಂತಾಳ ಖಾಸಗೀ ಬದುಕಿನಲ್ಲಿ ಬಿರುಗಾಳಿ ಬೀಸಿತ್ತು. ಅದರ ಮುಂದೆ ಗಂಡನೆಂಬ ಗಾಢ ಸಬಂಧವೇ ತರಗೆಲೆಯಂತೆ ದೂರ ಸರಿದಿತ್ತು. ಹಾಗೆ ಏಕಾಂಗಿಯಾಗಿ ನಿಂತ ಘಳಿಗೆಯಲ್ಲಿಯೇ ಸಮಂತಾಳನ್ನು ಮಯೋಸೈಸಿಟ್ ಎಂಬ ವಿಚಿತ್ರ ಖಾಯಿಲೆಯೊಂದು ಆವರಿಸಿಕೊಂಡಿತ್ತು. ಆ ಎಲ್ಲ ಯಾತನೆಗಳಿಂದ ಬಸವಳಿದು, ಮೆತ್ತಗೆ ಮೇಲೆದ್ದು ನಿಂತಿರುವ ಸಮಂತಾ ಈಗ, ಶಾಕುಂತಲೆಯಾಗಿ ಅಭಿಮಾನಿಗಳನ್ನು ಮುಖಾಮುಖಿಯಾಗುವ ಸಂಭ್ರಮದಲ್ಲಿದ್ದಾಳೆ!
ಸಮಂತಾ ಶಾಕುಂತಲಂ ಎಂಬೊಂದು ಚಿತ್ರದಲ್ಲಿ ನಟಿಸುತ್ತಿರುವ ಬಗ್ಗೆ ವರ್ಷಗಳ ಹಿಂದೆಯೇ ಸುದ್ದಿಯಾಗಿತ್ತು. ಅದೊಂದು ಪೌರಾಣಿಕ ಚಿತ್ರ. ಅದರಲ್ಲಿ ರಾಜಕುಮಾರಿಯಾಗಿ ಸಮಂತಾ ಮಿಂಚಿದ್ದಳು. ಆ ಸಿನಿಮಾದಲ್ಲಿನ ಕೆಲ ಮುದ್ದಾಗಿರೋ ಫೋಸ್ಟರ್, ಫಸ್ಟ್ ಲುಕ್ಕಿನ ಮೂಲಕ ಸಮಂತಾ ಕಂಗೊಳಿಸಿದ್ದಳು. ಯಾವಾ ಈ ಸಿನಿಮಾ ಚಿತ್ರೀಕರಣ ಆರಂಭವಾಗಿತ್ತೋ, ಆ ಹೊತ್ತಿನಲ್ಲಿಯೇ ಈಕೆಯ ಸಾಂಸಾರಿಕ ಬದುಕಿನಲ್ಲಿ ಅಪಸ್ವರಗಳುನ ಏಳಲಾರಂಭಿಸಿದ್ದವು. ಅದೊಂದು ತಾರ್ಕಿಕ ಅಂತ್ಯ ತಲುಪೋ ಹೊತ್ತಿಗೆಲ್ಲ ಶಾಕುಂತಲಂ ಚಿತ್ರ ಹೈರಾಣಾಗಿತ್ತು. ಯಾಕೆಂದರೆ, ಅಂಥಾ ಅಸಂದಿಗ್ಧ ಸ್ಥಿತಿಯಲ್ಲಿ ಕ್ಯಾಮೆರಾ ಎದುರಿಸಲಾಗದೆ ಸಮಂತಾ ದೂರ ಉಳಿದು ಬಿಟ್ಟಿದ್ದಳು.
ನಾಗಚೈತನ್ಯನಿಂದ ಸಮಂತಾ ದೂರಾದ ಬಳಿಕ ಪರಿಸ್ಥಿತಿ ಒಂದಷ್ಟು ತಿಳಿಯಾದಂತಿತ್ತು. ಸಮಂತಾ ಕೂಡಾ ಎಲ್ಲ ಮನೋ ವ್ಯಾಕುಲಗಳಿಂದ ಕಳಚಿಕೊಂಡು, ಮತ್ತೆ ಶಾಕುಂತಲೆಯಾಗಿ ಹೊಸಾ ಬದುಕು ಆರಂಭಿಸುವ ಉತ್ಸಾಹದಿಂದಿದ್ದಳು. ಆ ಹೊತ್ತಿನಲ್ಲಿಯೇ ಆಕೆಗೆ ಮಯೋಸೈಟಿಸ್ ಎಂಬ ಕಾಯಿಲೆ ಆವರಿಸಿಕೊಂಡಿತ್ತು. ಕೊಂಚ ಯಾಮಾರಿದರೂ ಜೀವವನ್ನೇ ಕಳೆದುಕೊಳ್ಳುವ ಅಪಾಯವನ್ನೀಗ ಆಕೆ ದಾಟಿಕೊಂಡಿದ್ದಾಳೆ. ಆ ಕಾಯಿಲೆ ಕೊಚ ತಹಬಂಧಿಗೆ ಬಂಇದೆ. ಸಮಂತಾ ಇದೀಗ ಮತ್ತೆ ಉಳಿಕೆ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾಳೆ. ಇದು ಚಿತ್ರತಂಡವನ್ನು ಖುಷಿಯಾಗಿಸಿದೆ. ಇನ್ನೇನು ಸಮಂತಾಳನ್ನು ಶಾಕುಂತಲೆಯಾಗಿ ನೋಡೋ ಕ್ಷಣಗಳು ಹತ್ತಿರದಲ್ಲಿವೆ!