ನವರಸ ನಾಯಕ ಜಗ್ಗೇಶ್ ಸಹೋದರ ಕೋಮಲ್ ಕುಮಾರನ ಲಕ್ಕು ಕುದುರುವ ಲ್ಷಣಗಳು ಸಣ್ಣಗೆ ಹೊಳೆಯಲಾರಂಭಿಸಿವೆ. ಹಾಸ್ಯ ಕಲಾವಿದನಾಗಿ ಬಹು ಬೇಡಿಕೆಯಲ್ಲಿರುವಾಗಲೇ, ಹೀರೋ ಆಗುವ ತಲುಬು ಹತ್ತಿಸಿಕೊಂಡು ಹೊರಟಿದ್ದವರು ಕೋಮಲ್. ಆತ ಹಾಗೊಂದು ನಿರ್ಧಾರ ಪ್ರಕಟಿಸಿದಾಗ ಬಹುತೇಕರು `ಈ ಆಸಾಮಿಗಿದು ಬೇಕಿತ್ತಾ’ ಅಂದುಕೊಂಡಿದ್ದರು. ಆ ನಂತರದಲ್ಲಿ ಕೋಮಲ್ ಒಂದಷ್ಟು ಸಿನಿಮಾಗಳಲ್ಲಿ ನಟಿಸಿದ್ದರಾದರೂ ಪುಷ್ಕಳವಾದೊಂದು ಗೆಲುವು ಸಿಕ್ಕಿರಲಿಲ್ಲ. ಪ್ರೇಕ್ಷಕರು ಕೋಮಲನನ್ನು ಹೀರೋ ಆಗಿ ಅರಗಿಸಿಕೊಳ್ಳುವಂಥಾ ಮನಸು ಮಾಡಲಿಲ್ಲ. ಆ ನಂತರದ ಅಜ್ಞಾತವಾಸ, ಪಡಿಪಾಟಲುಗಳಲ್ಲಿ ಕಳೆದು ಹೋಗಿದ್ದ ಕೋಮಲ್ ಇದೀಗ ಮತ್ತೊಂದಷ್ಟು ಭರವಸೆ, ಹುರುಪು ತುಂಬಿಕೊಂಡು ಪ್ರತ್ಯಕ್ಷರಾಗಿದ್ದಾರೆ!
ಇನ್ನೇನು ನೇಪಥ್ಯಕ್ಕೆ ಸರಿದೇ ಬಿಟ್ಟರು ಎಂಬಂತಿದ್ದ ಕೋಮಲ್, ಕೊರೋನಾ ಕಾಲಘಟ್ಟದ ಒಂದಷ್ಟು ನೋವುಗಳನ್ನುಂಡು ಮತ್ತೆ ಮೇಲೆದ್ದು ನಿಂತಿದ್ದಾರೆ. ಅದರ ಭಾಗವಾಗಿಯೇ ಒಂದೆರಡು ಸಿನಿಮಾಗಳಲ್ಲಿ ಮತ್ತೆ ನಾಯಕನಾಗಿ ನಟಿಸುತ್ತಿರುವ ಅವರೀಗ, ಮತ್ತೊಂದು ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ಆ ಚಿತ್ರಕ್ಕೆ `ಯಲಾ ಕುನ್ನಿ’ ಎಂಬ ಟೈಟಲ್ ಕೂಡಾ ನಿಕ್ಕಿಯಾಗಿದೆ. ಯಲಾ ಕುನ್ನಿ ಎಂಬ ಡೈಲಾಗು ಕೇಳುತ್ತಲೇ ಥಟ್ಟನೆ ಕನ್ನಡ ಸಿನಿಮಾ ಪ್ರೇಮಿಗಳಿಗೆಲ್ಲ ವಜ್ರಮುನಿ ನೆನಪಾಗುತ್ತಾರೆ. ಅವರ ಕೆಂಡದಂಥಾ ಕಣ್ಣುಗಳು, ಅದಕ್ಕೊಪ್ಪುವ ಮುಖ ಚರ್ಯೆಗಳೆಲ್ಲ ಕಣ್ಮುಂದೆ ಹಾದು ಹೋಗುತ್ತವೆ. ಈ ಸಿನಿಮಾಕ್ಕೂ, ವಜ್ರಮುನಿಯವರಿಗೂ ಸಂಬಂಧವಿದೆಯಾ ಅನ್ನುವಾಗಲೇ `ಮೇರಾ ನಾಮ್ ವಜ್ರಮುನಿ’ ಎಂಬ ಟ್ಯಾಗ್ ಲೈನ್ ಗಮನ ಸೆಳೆಯುತ್ತದೆ.
ಅಂದಹಾಗೆ, ಇದು ಸೌಭಾಗ್ಯ ಸಿನಿಮಾಸ್ ಲಾಂಛನದಲ್ಲಿ ಮಹೇಶ್ ಗೌಡ ನಿರ್ಮಾಣ ಮಾಡುತ್ತಿರುವ ಚಿತ್ರ. ಓಂಪ್ರಕಾಶ್ ರಾವ್, ಮುಸ್ಸಂಜೆ ಮಹೇಶ್ ಮುಂತಾದ ನಿರ್ದೇಶಕರ ಜೊತೆ ಕೆಲಸ ಮಾಡಿರುವ ಎನ್.ಆರ್ ಪ್ರದೀಪ್ ಈ ಚಿತ್ರವನ್ನು ನಿರ್ದೇಶನ ಮಾಡಲಿದ್ದಾರೆ. ವಿಶೇಷವಾದ ಕಥೆ ಮತ್ತು ಈವರೆಗೆ ಮಾಡದಿರುವಂಥಾ ಪಾತ್ರ ಸಿಕ್ಕ ಖುಷಿ ಕೋಮಲ್ಗಿದೆ. ಎಂಭತ್ತರ ದಶಕದಲ್ಲಿ ನಡೆಯೋ ರೆಟ್ರೋ ಶೈಲಿಯ ಈ ಕಥೆಗಾಗಿ, ಮೈಸೂರು, ಶ್ರೀರಂಗಪಟ್ಟಣ ಮುಂತಾದೆಡೆಗಳಲ್ಲಿ ಚಿತ್ರೀಕರಣ ನಡೆಯಲಿದೆಯಂತೆ. ಮುಸುರಿ ಕೃಷ್ಣಮೂರ್ತಿ ಅವರ ಮಗ ಜಯಸಿಂಹ ಮುಸುರಿ, ಮಹಾಂತೇಶ್ ಮತ್ತು ಜಗ್ಗೇಶ್ ಕಿರಿಯ ಮಗ ಯತಿರಾಜ್ ಪ್ರಧಾನ ಪಾತ್ರಗಳಲ್ಲಿ ನಟಿಸಲಿದ್ದಾರಂತೆ. ಹೀಗೆ ವಜ್ರಮುನಿಯಾಗ ಹೊರಟಿರುವ ಕೋಮಲ್ಗೆ ಈ ಮೂಲಕವಾದರೂ ಜಯ ಸಿಗಲೆಂಬುದು ಹಾರೈಕೆ!