ಸದ್ಯಕ್ಕೆ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಾ, ಅತ್ಯಂತ ಬ್ಯುಸಿಯಾಗಿರುವ ನಟರಲ್ಲಿ ನೀನಾಸಂ ಸತೀಶ್ ಕೂಡಾ ನಿಸ್ಸಂದೇಹವಾಗಿ ಸೇರಿಕೊಳ್ಳುತ್ತಾರೆ. ಆರಂಭದಲ್ಲಿ ಸಣ್ಣಪುಟ್ಟ ಪಾತ್ರಗಳನ್ನು ಮಾಡುತ್ತಾ, ನೋಡ ನೋಡುತ್ತಲೇ ಮುಖ್ಯ ನಾಯಕನಾಗಿ ಬೆಳೆದು ನಿಂತ ನೀನಾಸಂ ಸತೀಶ್ರದ್ದು ಸ್ಫೂರ್ತಿದಾಯಕ ವ್ಯಕ್ತಿತ್ವವೂ ಹೌದು. ಈ ಹಾದಿಯಲ್ಲಿ ಹಿಂತಿರುಗಿ ನೋಡಲೂ ಪುರಸೊತ್ತಿಲ್ಲದಂತೆ ಬ್ಯುಸಿಯಾಗಿರುವ ಅವರೀಗ ಏಕಕಾಲದಲ್ಲಿಯೇ ಮೂರು ಚಿತ್ರಗಳಲ್ಲಿ ನಾಯಕನಾಗಿದ್ದಾರೆ. ಇದೇ ಹೊತ್ತಿನಲ್ಲಿ ನಿರ್ದೇಶಕ ದುನಿಯಾ ಸೂರಿ ಗರಡಿ ಸೇರಿಕೊಳ್ಳುವ ಮೂಲಕ ಮತ್ತೊಂದು ಮಹತ್ವದ ಚಿತ್ರ ಆರಂಭವಾಗಿರುವ ಸುಳಿವು ನೀಡಿದ್ದಾರೆ!
ನೀನಾಸಂ ಸತೀಶ್ ಸುಕ್ಕಾ ಸೂರಿಯ ಪಕ್ಕದಲ್ಲಿ ನಿಂತಿರೋ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಆ ಹಿನ್ನೆಲೆಯಲ್ಲಿ ಹತ್ತಾರು ದಿಕ್ಕಿನಿಂದ ಒಂದಷ್ಟು ಚರ್ಚೆಗಳು ಹುಟ್ಟಿಕೊಂಡಿದ್ದವು. ಕಡೇಗೂ ಈ ಬಗ್ಗೆ ಖುದ್ದು ಸತೀಶ್ ಅವರೇ ಸ್ಪಷ್ಟೀಕರಣ ಕೊಟ್ಟಿದ್ದಾರೆ. ಅದರನ್ವಯ ಹೇಳೋದಾದರೆ, ಸತೀಶ್ ಮತ್ತು ಸೂರಿ ಕಾಂಬಿನೇಷನ್ನಿನಲ್ಲೊಂದು ಸಿನಿಮಾ ಶುರುವಾಗೋದು ಪಕ್ಕಾ. ಹಾಗಂತ ಈ ಹೊಸಾ ಸಿನಿಮಾವನ್ನು ಸೂರಿ ನಿರ್ದೇಶನ ಮಾಡುತ್ತಿಲ್ಲ. ಬದಲಾಗಿ, ಅವರ ಗರಡಿಯಲ್ಲಿ ಬಹುಕಾಲದಿಂದ ಪಳಗಿಕೊಂಡಿರುವ ಪ್ರತಿಭಾನ್ವಿತ ಹುಡುಗ ಸುರೇಶ್ ನಿರ್ದೇಶನ ಮಾಡುತ್ತಿದ್ದಾರೆ. ಒಂದಿಡೀ ಚಿತ್ರ ಪಕ್ಕಾ ಸೂರಿ ಶೈಲಿಯಲ್ಲೇ ಮೂಡಿ ಬರಲಿದೆ. ಯಾಕೆಂದರೆ, ಶಿಷ್ಯನ ಸಾರಥ್ಯದ ಈ ಚಿತ್ರವನ್ನು ಪ್ರತೀ ಹಂತದಲ್ಲಿಯೂ ಜೊತೆಗಿದ್ದು ಪೊರೆಯುವ ಭರವಸೆಯನ್ನು ಸೂರಿ ಕೊಟ್ಟಿದ್ದಾರೆ.
ಹಾಗಾದರೆ, ಈ ಚಿತ್ರದ ವಿಶೇಷತೆಗಳೇನೆಂಬ ಕುತೂಹಲ ಮೂಡಿಕೊಳ್ಳೋದು ಸಹಜ. ಇದು ಪಕ್ಕಾ ರಾ ಸಬ್ಜೆಕ್ಟಿನ ಆಕ್ಷನ್ ಸಿನಿಮಾ. ನೀನಾಸಂ ಸತೀಶ್ ಪಾಲಿಗಿದು ಹೊಸಾ ಜಾನರ್. ಅವರು ಈ ಹಿಂದೆ ಎಂದೂ ಇಂಥಾ ಪಾತ್ರದಲ್ಲಿ ಕಾಣಿಸಿಕೊಂಡಿರಲಿಲ್ಲವಂತೆ. ಸೂರಿ ಫ್ಲೇವರಿನ ಈ ಕಥೆಯನ್ನು ಬಹುವಾಗಿ ಇಷ್ಟಪಟ್ಟೇ ಅವರು ನಟಿಸಲು ಒಪ್ಪಿಕೊಂಡಿದ್ದಾರೆ. ವರ್ಷದಿಂದೀಚೆಗೆ ನಟನಾಗಿ ಹೊಸಾ ಆಯಾಮಗಳತ್ತ ತೆರೆದುಕೊಳ್ಳುತ್ತಿರುವವರು ನೀನಾಸಂ ಸತೀಶ್. ಆ ಹಾದಿಯಲ್ಲವರಿಗೆ ಭರಪೂರ ಗೆಲುವು ದಕ್ಕಿದೆ. ಇದೀಗ ಸೂರಿ ನೆರಳಿನಲ್ಲಿ ಶುರುವಾಗಲಿರೋ ಈ ಸಿನಿಮಾ ಮೂಲಕ ಸತೀಶ್ ಹೊಸಾ ಲುಕ್ಕಿನಲ್ಲಿ ಪ್ರೇಕ್ಷಕರ ಮುಂದೆ ಬಂದು ಅಚ್ಚರಿ ಮೂಡಿಸಲಿದ್ದಾರೆ!