ರಾಜ್ಯ ವಿಧಾನಸಭಾ ಚುನಾವಣೆ ಹತ್ತಿರಾಗಿದೆ. ಬಹುತೇಕ ಎಲ್ಲಾ ಪಕ್ಷಗಳೊಳಗೂ ಚುರುಕಿನ ವಿದ್ಯಮಾನ ಚಾಲ್ತಿಯಲ್ಲಿದೆ. ನಾಯಕರೆನ್ನಿಸಿಕೊಂಡವರ ಮುನಿಸಿ, ಕೆಸರೆರಚಾಟ, ನಾಲಿಗೆಯ ಮೇಲೆ ಕಂಟ್ರೋಲು ಕಳಕೊಂಡವರ ಮೇಲಾಟಗಳೆಲ್ಲವೂ ಸಾಂಘವಾಗಿಯೇ ನೆರವೇರುತ್ತಿದೆ. ಈ ನಡುವೆ ಒಂದಷ್ಟು ಮಹತ್ವದ ರಾಜಕೀಯ ವಿದ್ಯಮಾನಗಳು, ಗೆಲುವನ್ನೇ ಗುರಿಯಾಗಿಸಿಕೊಂಡ ಪಟ್ಟುಗಳೆಲ್ಲವೂ ಯಥೇಚ್ಚವಾಗಿಯೇ ಪ್ರದರ್ಶನಗೊಳ್ಳುತ್ತಿವೆ. ಇದೆಲ್ಲದರ ನಡುವೆ ಮಂಡ್ಯ ಕ್ಷೇತ್ರದ ಲೋಕಸಭಾ ಸದಸ್ಯೆ ಸುಮಲತಾರ ರಾಜಕೀಯ ನಡೆಯೀಗ ಒಂದಷ್ಟು ಚರ್ಚೆಗೆ, ಮತ್ತೊಂದಷ್ಟು ವಿವಾದಗಳಿಗೆ ಗ್ರಾಸವಾಗಿವೆ. ಯಾವ ಜನ ಅಂಬಿ ಮೇಲೆನ ಸೆಂಟಿಮೆಂಟಿನಿಂದ, ಅದೊಂದು ತೆರನಾದ ಅನುಕಂಪದಿಂದ ಸುಮಲತಾರನ್ನು ಪಕ್ಷಾತೀತವಾಗಿ ಗೆಲ್ಲಿಸಿದ್ದರೋ, ಅದೇ ಜನ ಈವತ್ತಿಗೆ ಸಿಟ್ಟಾಗಿ ಕುದಿಯಲಾರಂಭಿಸಿದ್ದಾರೆ!
ಅಷ್ಟಕ್ಕೂ, ಸುಮಲತಾರನ್ನು ಗೆಲ್ಲಿಸಿದ ಮಂದಿ ಅವರ ಕಡೆಯಿಂದ ನಾನಾ ನಿರೀಕ್ಷೆಗಳನ್ನಿಟ್ಟುಕೊಂಡಿದ್ದರು. ಆದರೆ ಆಕೆ ಬೆಂಗಳೂರಿಂದ ದೆಹಲಿಗೆ ಸರ್ಕೀಟು ನಡೆಸೋದರಲ್ಲಿಯೇ ಇದುವರೆಗಿನ ಅವಧಿಯನ್ನು ಸವೆಸಿದ್ದಾರೆಂಬಂಥಾ ಆರೋಪವೊಂದು ಮಂಡ್ಯ ಸೀಮೆಯಲ್ಲಿ ಹರಿದಾಡುತ್ತಿದೆ. ಕೆಲವಾರು ಸಂದರ್ಭಗಳಲ್ಲಿ ಕ್ಷೇತ್ರಕ್ಕೆ ಭೇಟಿ ಕೊಟ್ಟು, ಅದರ ಸುತ್ತ ಮಣಗಟ್ಟಲೆ ಪೋಸು ಕೊಟ್ಟಿದ್ದನ್ನು ಬಿಟ್ಟರೆ ಸುಮಲತಾರ ಕಡೆಯಿಂದ ಇದುವರೆಗೂ ಹೇಳಿಕೊಳ್ಳುವಂಥಾ ಘನಂಧಾರಿ ಕೆಲಸಗಳೇನೂ ಆಗಿಲ್ಲ. ಇಲ್ಲಿನ ಜನ ಸಾಕಷ್ಟು ಸಮಸ್ಯೆಗಳಿಂದ ತಲ್ಲಣಿಸಿದಾಗ ಸುಮತಾರ ನೆರಳೂ ಕೂಡಾ ಮಂಡ್ಯ ಭಾಗದತ್ತ ಸುಳಿದಿಲ್ಲ. ಅದೆಷ್ಟೋ ಸಂದರ್ಭಗಳಲ್ಲಿ ಈ ಬಗ್ಗೆ ವ್ಯಾಪಕ ಟೀಕೆಗಳು ಶುರುವಾದಾಗಲೇ ಸುಮಲತಾ ಒಂದು ರೌಂಡು ಅತ್ತ ಹೋಗಿ ಬಂದು ತ್ಯಾಪೆ ಹಚ್ಚುವ ವ್ಯರ್ಥ ಪ್ರಯತ್ನ ನಡೆಸಿದ್ದಾರಷ್ಟೆ.
ಪಕ್ಷೇತರರಾಗಿ ಗೆದ್ದು, ಆ ಹೊಯ್ದಾಟದಲ್ಲಿಯೇ ತಮ್ಮ ಅವಧಿಯ ಅಂಚಿಗೆ ಬಂದು ನಿಂತಿರುವವರು ಸುಮಲತಾ. ಇದೀಗ ನಿರೀಕ್ಷೆಯಂತೆಯೇ ಅವರ ರಾಜಕೀಯ ಬದುಕಿನ ಬೋಟು ಬಿಜೆಪಿಯ ಬಂದರು ಸೇರಿಕೊಂಡಿದೆ. ಪರ್ಮನೆಂಟಾಗಿ ಲಂಗರು ಹಾಕೋದಷ್ಟೇ ಬಾಕಿ ಉಳಿದಿರುವ ಕೆಲಸ. ನಿಜ, ಸುಮಲತಾರಿಗೆ ಯಾವ ಪಕ್ಷಕ್ಕಾದರೂ ಸೇರಿಕೊಳ್ಳುವ, ಯಾವ ಸಿದ್ಧಾಂತಕ್ಕಾದರೂ ಬದ್ಧವಾಗುವ ಎಲ್ಲ ಸ್ವಾತಂತ್ರ್ಯವೂ ಇದೆ. ಆದರೆ, ಈಕೆ ಬಿಜೆಪಿ ಪಾಳೆಯ ಸೇರಿಕೊಂಡಿರುವ ಈ ಕಾಲಮಾನವಿದೆಯಲ್ಲಾ? ಅದನ್ನು ಅಷ್ಟು ಸಲೀಸಾಗಿ ನಿರ್ಲಕ್ಷ್ಯ ಮಾಡಿ ಮುಂದೆ ಸಾಗಲಾಗೋದಿಲ್ಲ. ಯಾಕೆಂದರೆ, ಸುಮಲತಾ ಸೇರ್ಪಡೆಯ ಮೂಲಕ ಸೆಕ್ಯೂಲರ್, ಜೀವಪರ ನಿಲುವಿನ ಮಂಡ್ಯ ಕ್ಷೇತ್ರಕ್ಕೆ ಧರ್ಮದ ಅಫೀಮು ಹಬ್ಬಿಸಲು ಬಿಜೆಪಿ ಪಾಳೆಯ ಸನ್ನದ್ಧವಾದಂತಿದೆ!
ಇಂಥಾ ನಾನಾ ಅಜೆಂಡಾಗಳ ಭಾಗವಾಗಿ ಬಿಜೆಪಿ ಬಂದರಿನಲ್ಲಿ ನಿಂತಿರುವ ಸುಮಲತೆಯ ರಾಜಕೀಯ ಹಡಗು, ತನ್ನೊಡಲಲ್ಲಿ ಬರೀ ಸ್ವಾರ್ಥವನ್ನಷ್ಟೇ ರತುಂಬಿಕೊಂಡಂತಿದೆ. ಯಾಕೆಂದರೆ, ಕಳೆದ ಬಾರಿ ತಮ್ಮ ನಟನಾ ವೃತ್ತಿಯ ಅಷ್ಟೂ ಪಟ್ಟುಗಳನ್ನು ಪ್ರಯೋಗಿಸಿಯೇ ಸುಮಲತಾ ಮಂಡ್ಯ ಜನರನ್ನು ಸೆಳೆದುಕೊಂಡಿದ್ದರು. ಎಲ್ಲರಿಗೂ ರೇಜಿಗೆ ಹುಟ್ಟುವಂತೆ ಸ್ವಾಭಿಮಾನದ ಮಾತಾಡಿದ್ದರು. ಬಾತು ಹೋದ ಮೋರೆಯೊಂದಿಗೆ, ಸೆರಗೊಡ್ಡಿ ನಿಂತು ಮತ ಭಿಕ್ಷೆ ಬೇಡಿದ್ದರು. ಅಂಥಾ ಸ್ಥಿತಿಗೆ ಮರುಗಿದ ಮಂದಿ ಓಟು ಹಾಕಿದ್ದರಲ್ಲಾ? ಅವರೆಲ್ಲರೊಳಗೂ ಕೂಡಾ ಸುಮಲತಾ ತಮ್ಮ ಬದುಕಿಗೆ ಸಹಕಾರಿಯಾಗುವಂಥಾ ಕೆಲಸ ಕಾರ್ಯಗಳನ್ನು ಮಾಡಬಹುದೆಂಬ ನಿರೀಕ್ಷೆ ಇತ್ತು. ಯಾಕೆಂದರೆ, ಸುಮಲತಾ ರಾಜಕಾರಣಿಯಾಗಿರಲಿಲ್ಲ. ಆಕೆಗೆ ತಮ್ಮ ಕಷ್ಟಗಳಿಗೆ ಮಿಡಿಯುವ ಮನಸಿದೆ ಎಂದೇ ಜನ ಅಂದುಕೊಂಡಿದ್ದರು.
ಆದರೀಗ ಸುಮಲತಾ ಮೇಡಮ್ಮು ಪಕ್ಕಾ ರಾಜಕಾರಣಿಯಾಗಿದ್ದಾರೆ. ಮುಂದಿನ ಬಾರಿ ಮತ್ತೆ ಮೋದಿ ಸರ್ಕಾರವೇ ಅಧಿಕಾರಕ್ಕೆ ಬರೋದು ಪಕ್ಕಾ ಎಂಬಂತಿರೋದರಿಂದ, ಬಿಜೆಪಿ ಬಾಗವಾಗಲು ತುದಿಗಾಲಿನಲ್ಲಿ ನಿಂತಿದ್ದಾರೆ. ಒಂದು ವೇಳೆ ಕಾನೂನಿನ ತೊಡಕುಗಳಿಲ್ಲದೇ ಹೋಗಿದ್ದರೆ, ಆಕೆ ಮೋದಿ ಬರುವ ಮುಂಚಿನ ದಿನವೇ ಕೇಸರಿ ಶಾಲು ಧರಿಸಿ ಪೋಸು ಕೊಡುತ್ತಿದ್ದರೇನೋ… ಅಷ್ಟಕ್ಕೂ ಇಂಥಾ ರಾಜಕಾರಣಿಗಳು ಯಾವ ಪಕ್ಷದ ಬಾಲ ಹಿಡಿದು ಹೊರಟರೂ ಅಚ್ಚರಿಯೆನ್ನಿಸೋದಿಲ್ಲ. ಆದರೆ, ಆಕೆಯ ಮೂಲಕ ಮಂಡ್ಯದ ಅಸ್ಮಿತೆ ಮುಕ್ಕಾಗುತ್ತದೆಂಬ ಭವಿಷ್ಯ ನೆನೆದರೆ ಯಾರಿಗಾದರೂ ಆತಂಕವಾಗುತ್ತದೆ.
ಯಾಕೆಂದರೆ, ಈಗಾಗಲೇ ಉರಿ ಗೌಡ, ನಂಜೇಗೌಡರೆಂಬ ಕಪೋಲಕಲ್ಪಿತ ವೀರರನ್ನು ಹುಟ್ಟು ಹಾಕಿರುವ ಬಿಜೆಪಿ ಮಂದಿ ಮಂಡ್ಯ ಸೀಮೆಯ ಒಕ್ಕಲಿಗರೊಳಗೆ ಮುಸ್ಲಿಂ ವಿರೋಧಿ ಮನಃಸ್ಥಿತಿ ಮೊಳೆಯಿಸುವ ಹುನ್ನಾರ ನಡೆಸುತ್ತಿದ್ದಾರೆಂಬ ಮಾತಿದೆ. ಮಂಡ್ಯ ಎಂಬುದು ಪ್ರಜ್ಞಾವಂತರ ಜಿಲ್ಲೆ. ಶಾಂತಿ ಸಹಬಾಳ್ವೆ ಎಂಬುದು ಅಲ್ಲಿನ ಮಣ್ಣಿನ ಗುಣ. ಈ ಕಾರಣದಿಂದಲೇ ಮೈಸೂರು, ಮಂಡ್ಯ ಭಾಗಗಳಲ್ಲಿ ಬಿಜೆಪಿ ನೆಲೆ ಕಂಡುಕೊಳ್ಳಲು ತಿಣುಕುತ್ತಿದೆ. ಇಂಥಾ ಕಲ್ಪಿತ ಇತಿಹಾಸದ ಮೂಲಕ ಅಲ್ಲಿನ ಜನರನ್ನು ರೊಚ್ಚಿಗೆಬ್ಬಿಸಿ ತನ್ನ ಬೇರುಗಳನ್ನು ಇಳಿಬಿಡುವ ಹಕೀಕತ್ತು ಬೀಜೆಪಿಯದ್ದು. ಸುಮಲತಾ ಮುಂದಿನ ದಿನಗಳಲ್ಲಿ ಆ ಹುನ್ನಾರದ ದಾಳವಾದರೂ ಅಚ್ಚರಿಯೇನಿಲ್ಲ. ಹಾಗಾದರೆ ಅದು ಮಂಡ್ಯ ನೆಲಕ್ಕೆ ಮಾಡುವ ಮಹಾ ದ್ರೋಹ ಎಂಬುದರಲ್ಲಿಯೂ ಸಂಶಯವೇನಿಲ್ಲ. ಆದರೆ, ಮಂಡ್ಯ ಸೀಮೆಯಲ್ಲಿಮ ಈಗಿರುವ ಆಕ್ರೋಶ ಗಮನಿಸಿದರೆ, ಸದ್ಯಕ್ಕೆ ಬಿಜೆಪಿ ಬಂದರಿನಲ್ಲಿರುವ ಸುಮಲತಾರ ರಾಜಕೀಯ ಬೋಟು ಮಹಾ ಸೋಲಿನತ್ತ ಮುಖ ಮಾಡಿ ನಿಂತತಂತೆಯೇ ಭಾಸವಾಗುತ್ತಿದೆ!