ಬೇಸಿಗೆಯ ಸುಡು ಪಾದಗಳು ಊರುಗಳ ಎದೆ ಮೆಟ್ಟುತ್ತಲೇ ಚಿರತೆ, ಹುಲಿ, ಆನೆಯಂಥಾ ಕಾಡುಪ್ರಾಣಿಗಳು ಊರಿಗೆ ಲಗ್ಗೆಯಿಡುವ ಸುದ್ದಿಗಳು ಹರಡಿಕೊಳ್ಳುತ್ತವೆ. ಅವುಗಳಿಂದಾಗುವ ನಾಶಗಳ ಬಗ್ಗೆ ಪುಂಖಾನುಪುಂಖವಾಗಿ ಎದುರುಗೊಳ್ಳೋ ಸುದ್ದಿಗಳು, ಅವುಗಳ ನೆಮ್ಮದಿ ನಾಶವಾಗಿದ್ದರ ಬಗ್ಗೆ ಕುರುಡಾಗುತ್ತವೆ. ಕಾಡುಗಳ ನಾಶದಿಂದಾಗಿ ಕುಡಿಯಲು ನೀರಿಲ್ಲದೆ, ಆಹಾರವಿಲ್ಲದೆ ಇಂಥಾ ಪ್ರಾಣಿಗಳು ನಾಡಿಗೆ ಲಗ್ಗೆಯಿಡುತ್ತಿರೋದು ವಾಸ್ತವ. ಇನ್ನೂ ಒಂದಷ್ಟು ಪಕ್ಷಿಗಳು, ಪ್ರಾಣಿಗಳು ನಗರದ ಜನರೊಂದಿಗೆ ಹೊಂದಿಕೊಂಡು ಬದುಕಲು ಪ್ರಯಾಸ ಪಡುತ್ತಿವೆ. ಆದರೆ ಈ ಜಗತ್ತಿನಲ್ಲಿ ಅವುಗಳಿಗೂ ನೆಮ್ಮದಿ ಎಂಬುದಿಲ್ಲ!
ಹಾಗೆ ಮನುಷ್ಯರ ಕಣ್ಣಳತೆಯಲ್ಲೇ ನರರಗಳಲ್ಲಿಯೂ ಬದುಕುತ್ತಿರುವ ಜೀವಿಗಳಲ್ಲಿ ಪಾರಿವಾಳಗಳೂ ಸೇರಿಕೊಳ್ಳುತ್ತವೆ. ಆದರೆ, ಕಿಟಕಿಗಳೂ ಸೇರಿದಂತೆ ಕಂಡಲ್ಲಿ ಗೂಡು ಕಟ್ಟಿಕೊಂಡು, ಅಲ್ಲಿಯೇ ಸಂತಾನಾಭಿವೃದ್ಧಿ ಮಾಡಿಕೊಂಡು ಬದುಕೋ ಪಾರಿವಾಳಗಳು ಒಂದಷ್ಟು ರೇಜಿಗೆ ಹುಟ್ಟಿಸೋದೂ ಇದೆ. ಅದೆಲ್ಲದರಾಚೆಗೆ ತಮ್ಮ ಸುತ್ತಲಿರುವ ಪಾರಿವಾಳಗಳಿಗೆ ಒಂದಷ್ಟು ಆಹಾರ, ಕಾಳು ಕಡ್ಡಿ ಹಾಕುವ ಜೀವ ಪರ ಮನಸುಗಳೂ ಇಲ್ಲಿವೆ. ಅವರ ದಯೆಯಿಂದಲೇ ಆ ಜೀವಿಗಳು ಹೇಗೋ ಬದುಕಿಕೊಂಡಿವೆ. ಮಹಾರಾಷ್ಟ್ರದ ಥಾಣೆಯಲ್ಲಿಯೂ ಇಂಥವೇ ಒಂದಷ್ಟು ಪಾರಿವಾಳಗಳಿವೆ. ಆದರೆ, ಅವುಗಳಿಗೆ ಕಾಳು ಹಾಕಿದರೆ, ಐನೂರು ರೂಪಾಯಿ ದಂಡ ವಿಧಿಸಿ ಶಿಕ್ಷೆಗೊಳಪಡಿಸುವ ಕ್ರೂರ ನಿಯಮವೊಂದನ್ನು ಅಲ್ಲಿನ ನರಸಭೆ ಹೊರಡಿಸಿದೆ!
ಪಾರಿವಾಳದ ಹಿಕ್ಕೆಗಳಿಂದ ಅನೇಕ ಸಾಂಕ್ರಾಮಿಕ ರೋಗಗಳು ಹರಡುತ್ತವಾದ್ದರಿಂದ, ಅವುಗಳ ಸಂತಾನ ಬೆಳೆಯದಂತೆ ನೋಡಿಕೊಳ್ಳುವ ತೀರ್ಮಾನಕ್ಕೆ ಅಲ್ಲಿನ ನಗರಸಭೆಯ ಕಮಿಷನರ್ ಬಂದಿದ್ದಾನೆ. ಆದ್ದರಿಂದಲೇ ಪಾರಿವಾಳಗಳಿಗೆ ಯಾರಾದರೂ ಕಾಳು ಹಾಕಿದರೆ ದಂಡ ವಿಧಿಸುವ ಫರ್ಮಾನು ಹೊರಡಿಸಿದ್ದಾನೆ. ಇದರ ವಿರುದ್ಧ ಈಗಾಗಲೇ ಅಲ್ಲಿನ ಪಕ್ಷಿ ಪ್ರಿಯರು ಧ್ವನಿಯೆತ್ತಿದ್ದಾರೆ. ಒಂದು ವೇಳೆ ಪಾರಿವಾಳದ ಹಿಕ್ಕೆಗಳಿಂದ ರೋಗಗಳು ಹರಡಿದರೆ ಸ್ವಚ್ಛತೆಯತ್ತ ಗಮನ ಹರಿಸಬೇಕು. ಅದು ಬಿಟ್ಟು ಪಾರಿವಾಳಗಳು ಆಹಾರ ಸಿಗದೆ ವಿಲಗುಟ್ಟಿ ಸಾಯುವಂತೆ ಮಾಡೋದು ಮಾನವೀಯತೆ ಅಲ್ಲ ಎಂಬಂಥಾ ಆಕ್ರೋಶಗಳೂ ಕೇಳಿ ಬರುತ್ತಿವೆ. ಒಂದು ವೇಳೆ ಮುಂದೆ ಮನುಷ್ಯರಿಂದಲೇ ಕಾಯಿಲೆ ಹರಡೋ ಸಂದರ್ಭ ಸೃಷ್ಟಿಯಾದರೆ, ಮನುಷ್ಯರನ್ನೇ ಸಾಯಿಸುವ ಕಾನೂನು ತರಲಾಗುವುದಿಲ್ಲವಲ್ಲಾ? ಅದೇ ರೀತಿ ಪಾರಿವಾಳಗಳಿಗೂ ಬದುಕೋ ಹಕ್ಕಿದೆ ಎಂಬುದು ಪ್ರಾಣಿ ಪ್ರಿಯರ ವಾದ!