ಸಿನಿಮಾ ಎಂಬುದು ಅನಕ್ಷರಸ್ಥರನ್ನೂ ನೇರವಾಗಿ ತಲುಪಿಕೊಳ್ಳಬಲ್ಲ ಪರಿಣಾಮಕಾರಿ ಮಾಧ್ಯಮ. ದುರಂತವೆಂದರೆ, ಕೆಲವೊಂದಷ್ಟು ಸಿನಿಮಾಗಳ ಬಿಟ್ಟರೆ ಕನ್ನಡದಂಥಾ ಭಾಷೆಗಳ ಬಹುತೇಕ ಎಲ್ಲ ಸಿನಿಮಾಗಳೂ ಕೂಡಾ ಕಮರ್ಶಿಯಲ್ ಕಂಟೆಂಟುಗಳ ಸುತ್ತವೆ ಗಿರಕಿ ಹೊಡೆಯುತ್ತಿರುತ್ತವೆ. ಇದೆಲ್ಲದರ ನಡುವೆ ಕ್ರಾಂತಿಯಂಥಾ ಸಾಮಾಜಿಕ ಕಥನದ ಚಿತ್ರ ಬಂದರೂ ಕೂಡಾ, ಅದರ ಮೇಲೆ ನಿರೀಕ್ಷೆಯಿಟ್ಟುಕೊಂಡಿದ್ದೇ ಭ್ರಾಂತಿ ಅನ್ನಿಸಿಬಿಡುತ್ತೆ. ಇಂಥಾ ವಾತಾವರಣದಲ್ಲಿ ಚಿತ್ರವೊಂದು ಅಪ್ಪಟ ಸಾಮಾಜಿಕ ಕಥಾ ಹಂದರದೊಂದಿಗೆ ರೂಪುಗೊಂಡಿದೆಯೆಂದರೆ, ರಾಜಕಾರಣದ ಸ್ಥಿತಿಗತಿಗಳತ್ತ ಕಣ್ಣು ಹಾಯಿಸಿದೆ ಎಂದರೆ ಅಚ್ಚರಿ ಮೂಡಿಕೊಳ್ಳದಿರಲು ಸಾಧ್ಯವೇ? ಈ ಕಾರಣದಿಂದಲೇ ಒಂದಷ್ಟು ಗಮನ ಸೆಳೆದಿದ್ದ ಚಿತ್ರ `ಪ್ರಜಾರಾಜ್ಯ’.
ಒಂದು ಮಟ್ಟಿಗೆ ಸಾಮಾಜಿಕ ಕಾಳಜಿ ಹೊಂದಿರುವ ಕಥಾ ವಸ್ತುವನ್ನು ನಿರ್ದೇಶಕ ವಿಜಯ್ ಭಾರ್ಗವ್ ಮುಟ್ಟಿದ್ದಾರೆ. ಇದಕ್ಕೆ ಕಥೆ ಒದಗಿಸಿ, ಮುಖ್ಯ ಪಾತ್ರದಲ್ಲಿ ವರದರಾಜ್ ನಟಿಸಿದ್ದಾರೆ. ಈಗಿನ ಸ್ಥಿತಿಗತಿಗಳನ್ನೊಮ್ಮೆ ಗಮನಿಸಿದರೆ ಪ್ರಜಾಪ್ರಭುತ್ವದ ನೆರಳಲ್ಲಿ ಕಳ್ಳ ಕಾಕರೇ ನಾಯಕರಾಗಿ ಮೆರೆಯುತ್ತಿದ್ದಾರೆ. ಜನರಿಗೆ ವರವಾಗಬಲ್ಲ ಅಧಿಕಾರದ ಮರೆಯಲ್ಲಿ ಸಿಕ್ಕಿದ್ದನ್ನೆಲ್ಲ ಕೆರೆದು ಸ್ವಂತ ತಿಜೋರಿ ತುಂಬಿಸಿಕೊಳ್ಳುವ ಖದೀಮರೇ ಮೆರೆಯುತ್ತಿದ್ದಾರೆ. ಆಳುವವರೂ ಅಂಥವರೇ, ಅವರ ಕೈಕೆಳಗೆ ಕೆಲಸ ಮಾಡುವ ಅಧಿಕಾರಿ ವರ್ಗವೂ ಕೂಳಿಬಾಕ ಸಂತಾನವೇ. ಇಂಥಾ ವ್ಯವಸ್ಥೆಯ ಮೇಲೆ ಕನ್ನಡಿ ಹಿಡಿದಂಥಾ ಕಥೆ ಪ್ರಜಾ ರಾಜ್ಯದ್ದು.
ಈ ವ್ಯವಸ್ಥೆಯಲ್ಲಿರುವ ಲೂಪ್ಹೋಲ್ಗಳಲ್ಲಿ ನಮ್ಮೆಲ್ಲರ ಬದುಕೇ ಬರ್ಬಾದು ಸ್ಥಿತಿ ತಲುಪಿಕೊಂಡಿದೆ. ಜನಪ್ರತಿನಿಧಿಗಳು, ಅಧಿಕಾರಸ್ಥರು ಸಣ್ಣ ಸುಳಿವೂ ಕೊಡದಂತೆ ಹೆಗೆಲ್ಲಾ ಜನರನ್ನು ಯಾಮಾರಿಸುತ್ತಿದ್ದಾರೆಂಬ ಸೂಕ್ಷ್ಮಗಳೂ ಈ ಸಿನಿಮಾದಲ್ಲಿವೆ. ಅವು ನೋಡುಗರಲ್ಲಿ ಒಂದಷ್ಟು ಜಾಗೃತಿ ಮೂಡಿಸುವ ಕಳಕಳಿಯನ್ನ ಹೊಂದಿರುವಂತೆಯೂ ಭಾಸವಾಗುತ್ತದೆ. ಇಲ್ಲಿ ಜನರನ್ನು ಸಂಕಟದ ಚಕ್ರಸುಳಿಗೆ ಸಿಲುಕಿಸುತ್ತಿರುವ ಅನೇಕ ಸೂಕ್ಷ್ಮಗಳನ್ನು ದೃಷ್ಯದ ಚೌಕಟ್ಟಿಗೆ ಒಗ್ಗಿಸಲಾಗಿದೆ. ಆದರೆ, ಅದನ್ನು ಪರಿಣಾಮಕಾರಿಯಾಗಿಸುವಲ್ಲಿ ನಿರ್ದೇಶಕರು ಅಲ್ಲಲ್ಲಿ ಎಡವಿದಂತಿದೆ. ಈ ಕಾರಣದಿಂದಲೇ ಈ ಚುನಾವಣೆಯ ಹೊಸ್ತಿಲಿನಲ್ಲಿ ಸಾಮಾಜಿಕ ಕ್ರಾಂತಿಯ ಕಿಡಿ ಸೋಕಿಸಬಹುದಾಗಿದ್ದ ಪ್ರಜಾರಾಜ್ಯ ಒಂದಷ್ಟು ಪೇಲವ ಸ್ಥಿತಿಯಿಂದ ಮಂಕಾದಂತೆ ಕಾಣುತ್ತದೆ.
ದೇವರಾಜ್, ಅಚ್ಯುತ್ ಕುಮಾರ್, ಸುಧಾರಾಣಿ, ವರದರಾಜ್ ಮುಂತಾದವರು ತಂತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಒಟ್ಟಾರೆ ಸಿನಿಮಾದ ಮೇಕಿಂಗ್ ಗುಣಮಟ್ಟ, ಛಾಯಾಗ್ರಹಣ, ಸಂಗೀತವೆಲ್ಲವೂ ತಕ್ಕಮಟ್ಟಿಗಿದೆ. ಸರ್ಕಾರಿ ಆಸ್ಪತ್ರೆಯಿಲ್ಲದೆ ಅನಿವಾರ್ಯವಾಗಿ ಖಾಸಗಿ ಆಸ್ಪತ್ರೆಗೆ ದಾಖಲಾಗೋ ಬಡ ಜನರ ಸಂಕಟ, ರೈತಾಪಿಗಳ ಒಡಲ ಆರ್ತನಾದ ಸೇರಿದಂತೆ ಜನಸಾಮಾನ್ಯರಿಗೆ ನೇರವಾಗಿ ಕನೆಕ್ಟಾಗುವ ಅಂಶಗಳು ಇಲ್ಲಿವೆ. ಆದರೆ ನಿರ್ದೇಶಕರಿಗೆ ಅಲ್ಲಲ್ಲಿ ಸೂತ್ರ ತಪ್ಪಿದೆ. ಕಥೆಯನ್ನು ಬಿಗಿಯಾಗಿಸಿ, ಎಲ್ಲವನ್ನೂ ಅಚ್ಚುಕಟ್ಟಾಗಿ ನಿಭಾಯಿಸಿದ್ದರೆ ಪ್ರಜಾರಾಜ್ಯ ಪ್ರಜೆಗಳ ಮನಸು ಗೆಲ್ಲಬಹುದಿತ್ತು. ಆದರೆ, ಈ ಸಿನಿಮಾ ಅದರ ಹತ್ತಿರದ ಹಾದಿಯಲ್ಲಿಯೇ ಬಸವಳಿದು ಮಂಡಿಯೂರಿದೆ ಎಂಬಲ್ಲಿಗೆ ಪ್ರಜಾರಾಜ್ಯದ ಕಥೆ ಸಮಾಪ್ತಿಯಾಗುತ್ತೆ!