ಇದೀಗ ಎಲ್ಲೆಡೆಯಲ್ಲೂ ಭಾರೀ ಸದ್ದು ಮಾಡುತ್ತಿರುವ ಚಿತ್ರ ಇನಾಮ್ದಾರ್. ಸಂದೇಶ್ ಶೆಟ್ಟಿ ಆಜ್ರಿ ನಿರ್ದೇಶನದಲ್ಲಿ ಮೂಡಿ ಬಂದಿರೋ ಈ ಚಿತ್ರದ ಟ್ರೈಲರ್ ಕಂಡವರೆಲ್ಲ, ಕಾಂತಾರದ ನಂತರ ಇದು ಮಹಾ ಗೆಲುವನ್ನು ತನ್ನದಾಗಿಸಿಕೊಳ್ಳಲಿದೆ ಎಂಬಂತೆ ಭವಿಷ್ಯ ನುಡಿಯುತ್ತಿದ್ದಾರೆ. ಆ ಟ್ರೈಲರ್ನ ಕಾವಾರುವ ಮುನ್ನವೇ, ಪಡ್ಡೆ ಹೈಕಳೊಳಗೆ ಮತ್ತೆ ಕಾವೇರಿಸುವಂಥಾ ವೀಡಿಯೋ ಸಾಂಗ್ ಲಾಂಚ್ ಆಗಿತ್ತು. ಸಿಲ್ಕು ಮಿಲ್ಕು ಎಂಬ ಟೈಟಲ್ಲಿನೊಂದಿಗೆ ಪ್ರಸಿದ್ಧಿ ಪಡೆದುಕೊಳ್ಳುತ್ತಾ ಸಾಗಿದ್ದ ಈ ವೀಡಿಯೋ ಸಾಂಗ್ ಈಗ ಎಲ್ಲ ಮನಸೆಳೆದುಕೊಂಡು, ಸೂಪರ್ ಹಿಟ್ ಆಗಿ ದಾಖಲಾಗಿದೆ!
ಶ್ರೀ ಕುಂತಿಯಮ್ಮ ಪ್ರೊಡಕ್ಷನ್ ಮತ್ತು ತಸ್ಮೈ ಪ್ರೊಡಕ್ಷನ್ಸ್ ಬ್ಯಾನರಿನಡಿಯಲ್ಲಿ ನಿರಂಜನ್ ಶೆಟ್ಟಿ ತಲ್ಲೂರು ನಿರ್ಮಾಣ ಮಾಡಿರುವ ಚಿತ್ರ ಇನಾಮ್ದಾರ್. ಟ್ರೈಲರಿನ ಚಹರೆಗಳನ್ನು ಕಂಡವರೆಲ್ಲ ಥ್ರಿಲ್ ಆಗಿ ಕಾಯುತ್ತಿರುವಾಗಲೇ, ಅಚ್ಚರಿಯೆಂಬಂತೆ ಈ ಸಿಲ್ಕು ಮಿಲ್ಕು ಹಾಡು ಬಿಡುಗಡೆಗೊಂಡಿತ್ತು. ಕುಂಟೂರು ಶ್ರೀಕಾಂತ್ ಸಾಹಿತ್ಯವಿರುವ ಈ ಹಾಡಿಗೆ ರಾಕೇಶ್ ಆಚಾರ್ಯ ಸಂಗೀತ ಸಂಯೋಜನೆ ಮಾಡಿದ್ದರು. ರವೀಂದ್ರ ಸೊರಗಾವಿ ಮತ್ತು ಇಂದೂ ನಾಗರಾಜ್ ಈ ಹಾಡನ್ನು ಚೆಂದಗೆ ಹಾಡಿದ್ದರು. ಇದೆಲ್ಲದರೊಂದಿಗೆ ಮೈ ಕೈ ತುಂಬಿಕೊಂಡು ಬಂದಿದ್ದ ಈ ಹಾಡಿಗೆ ನಾಯಕ ರಂಜನ್ ಛತ್ರಪತಿ ಮತ್ತು ಎಸ್ತರ್ ನರೋನ್ಹ ಸೊಂಟ ಬಳುಕಿಸುವ ಮೂಲಕ ಮತ್ತಷ್ಟು ಮಾದಕತೆ ಮುತ್ತಿಕೊಂಡಿತ್ತು.
ನಾನಾ ವಿಶೇಷತೆಗಳನ್ನು ಹೊಂದಿರುವ ಇನಾಮ್ದಾರ್ ಬಹುದೊಡ್ಡ ತಾರಾಗಣ ಹೊಂದಿರುವ ಚಿತ್ರ. ಕರಾವಳಿ ಮತ್ತು ಉತ್ತರ ಕರ್ನಾಟಕ ಭಾಗಗಳಿಗೆ ಬೆಸೆದುಕೊಂಡಿರುವ ರೋಚಕ ಕಥೆ ಇದರಲ್ಲಿ ಅಡಕವಾಗಿದೆ. ಹಾಗೆಂದ ಮಾತ್ರಕ್ಕೆ ಇದನ್ನು ಉತ್ತರ ಕರ್ನಾಟಕ, ಕರಾವಳಿಗೆ ಸೀಮಿತವಾದ ಸಿನಿಮಾ ಅಂದುಕೊಳ್ಳುವಂತಿಲ್ಲ. ಅಖಂಡ ಕರ್ನಾಟಕದ ಬಹುತೇಕ ಭಾಷೆಗಳೂ ಇಲ್ಲಿ ಮಿಳಿತವಾಗಿವೆ. ಅದೆಲ್ಲವನ್ನೂ ಹಾಡುಗಳ ಮೂಲಕ ಧ್ವನಿಸಲು ಪ್ರಯತ್ನಿಸಲಾಗಿದೆ. ಇನಾಮ್ದಾರ್ ಎಲ್ಲ ಭಾಗದ, ಎಲ್ಲ ವರ್ಗದ ಪ್ರೇಕ್ಷಕರಿಗೂ ಹತ್ತಿರಾಗುವಂಥಾ ಗುಣಲಕ್ಷಣ ಹೊಂದಿದೆ ಎಂಬುದು ಚಿತ್ರತಂಡದ ಅಭಿಪ್ರಾಯ. ಇದರಲ್ಲಿ ನಾಲಕ್ಕು ಹಾಡುಗಳಿವೆ. ಅವೆಲ್ಲವನ್ನೂ ಒಂದಕ್ಕಿಂತ ಒಂದನ್ನು ಭಿನ್ನವಾಗಿ ಮೇಕಿಂಗ್ ಮಾಡಲಾಗಿದೆ. ಸಿಲ್ಕು ಮಿಲ್ಕು ಎಂಬ ಈ ಹಾಡನ್ನು ಉತ್ತರ ಕರ್ನಾಟಕದ ಜವಾರಿ ಶೈಲಿಯಲ್ಲಿ, ಸಂಪೂರ್ಣವಾಗಿ ಉತ್ತರ ಕರ್ನಾಟಕ ಭಾಗದಲ್ಲಿಯೇ ಚಿತ್ರೀಕರಿಸಿಕೊಳ್ಳಲಾಗಿದೆ. ಆದ್ದರಿಂದ ಉತ್ತರ ಕರ್ನಾಟಕದ ಮಂದಿ ಥ್ರಿಲ್ ಆಗಿದ್ದಾರೆ. ಅದರಾಚೆಗೆ ಎಲ್ಲ ಭಾಗದ ಜನರೂ ಈ ಹಾಡನ್ನು ಎಂಜಾಯ್ ಮಾಡುತ್ತಿರೋದರಿಂದಲೇ ಅದು ದೊಡ್ಡ ಮಟ್ಟದಲ್ಲಿ ಹಿಟ್ ಆಗಲು ಸಾಧ್ಯವಾಗಿದೆ. ಈ ಚಿತ್ರದಲ್ಲಿ ರಂಜನ್ ಛತ್ರಪತಿ, ಪ್ರಮೋದ್ ಶೆಟ್ಟಿ, ಸಂದೇಶ್ ಶೆಟ್ಟಿ ಆಜ್ರಿ, ಚಿರಶ್ರೀ ಅಂಚನ್, ಎಸ್ತರ್ ನರೋನ್ಹ, ಶರತ್ ಲೋಹಿತಾಶ್ವ, ಎಂ.ಕೆ ಮಠ, ಅವಿನಾಶ್, ಥ್ರಿಲ್ಲರ್ ಮಂಜು, ಪ್ರಶಾಂತ್ ಸಿದ್ಧಿ, ರಘು ಪಾಂಡೇಶ್ವರ್, ಯಶ್ ಆಚಾರ್ಯ, ಕರಣ್ ಕುಂದರ್, ಚಿತ್ರಕಲಾ, ಸಂಜು ಬಸಯ್ಯ, ಮಹಾಬಲೇಶ್ವರ ಕ್ಯಾದಿಗೆ ಮುಂತಾದವರು ನಟಿಸಿದ್ದಾರೆ.
ಸಾಹಿತ್ಯದಲ್ಲಿ ಅಶ್ಲೀಲತೆ ಸುಳಿಯದಂತೆ, ಸಂಭ್ಯತೆಯ ಪರಿಧಿ ದಾಟದಂತೆ ಮೂಡಿ ಬಂದಿದ್ದ ಈ ಹಾಡೀಗ ಮೋಡಿ ಮಾಡಿದೆ. ದಿನದಿಂದ ದಿನಕ್ಕೆ ಹೆಚ್ಚೆಚ್ಚು ವೀಕ್ಷಣೆ ಪಡೆದುಕೊಳ್ಳುತ್ತಾ ಸಾಗುತ್ತಾ ಈ ವರ್ಷದ ಸೂಪರ್ ಹಿಟ್ಟ ಹಾಡುಗಳ ಪಟ್ಟಿಯಲ್ಲಿ ಜಾಗ ಗಿಟ್ಟಿಸಿಕೊಂಡಿದೆ. ಇದೂ ಕೂಡಾ ಇನಾಮ್ದಾರ್ ಸಿನಿಮಾದ ಆರಂಭಿಕ ಗೆಲುವೆಂಬುದರಲ್ಲಿ ಯಾವ ಸಂದೇಹವೂ ಇಲ್ಲ. ಅತ್ಯಂತ ಅದ್ದೂರಿಯಾಗಿ ಮೂಡಿ ಬಂದಿರುವ ಈ ಚಿತ್ರ ಕನ್ನಡದ ಮಟ್ಟಿಗೆ ತೀರಾ ಹೊಸತೆಂಬಂಥಾ ಕಥೆಯನ್ನೊಳಗೊಂಡಿದೆಯಂತೆ. ನಿರ್ದೇಶಕ ಸಂದೇಶ್ ಶೆಟ್ಟಿ ಆಜ್ರಿ ಅವರ ಅದೆಷ್ಟೋ ವರ್ಷಗಳ ಶ್ರಮ ಮತ್ತು ಏಳುಬೀಳುಗಳೆಲ್ಲವೂ ಇನಾಮ್ದಾರ್ ಮೂಲಕ ಸಾರ್ಥಕ್ಯ ಕಾಣುವ ಸಾಧ್ಯತೆಗಳಿದ್ದಾವೆ. ಅಂದಹಾಗೆ, ಇನ್ನು ಕೆಲವೇ ದಿನಗಳಲ್ಲಿ ಇನಾಮ್ದಾರ್ ಬಿಡುಗಡೆಯ ದಿನಾಂಕ ಘೋಷಣೆಯಾಗಲಿದೆ!