ಭಾರ್ಗವ ಪಟೇಲ್ ವರುಣ್ ರಾಜ್ ನೆಲೆ ನಿಲ್ಲೋದು ಗ್ಯಾರೆಂಟಿ!ವರ್ಷದ ಮೇಲೆ ವರ್ಷಗಳು ಮಗುಚಿಕೊಂಡರೂ, ಸಿನಿಮಾವೊಂದರತ್ತ ಕೌತುಕವೊಂದು ಮುಕ್ಕಾಗದಂತೆ ಉಳಿದುಕೊಳ್ಳೋದಿದೆಯಲ್ಲಾ? ಅದು ಅಪರೂಪದಲ್ಲೇ ಅಪರೂಪದ ವಿದ್ಯಮಾನ. ಸುಧೀರ್ಘ ಕಾಲದವರೆಗೂ ಅಂಥಾ ಭಾವವನ್ನು ಪ್ರೇಕ್ಷಕರ ಮನಸಲ್ಲಿ ಕಾಯ್ದಿಟ್ಟುಕೊಳ್ಳೋದು ಹೆಚ್ಚಿನ ಚಿತ್ರಗಳಿಗೆ ಸಾಧ್ಯವಾಗೋದಿಲ್ಲ. ಆ ದಿಸೆಯಿಂದ ನೋಡ ಹೋದರೆ ಪನ್ನಗ ಸೋಮಶೇಖರ್ ನಿರ್ದೇಶನದ `ಕಡಲ ತೀರದ ಭಾರ್ಗವ’ ಚಿತ್ರದ್ದು ನಿಜಕ್ಕೂ ಅಚ್ಚರಿದಾಯಕ ಹೆಜ್ಜೆಗಳೇ. ಟೀಸರ್, ಟ್ರೈಲರ್ನಲ್ಲಿ ಕಥೆಯ ಬಗ್ಗೆ ಸಣ್ಣ ಸುಳಿವುನ್ನೂ ಬಿಟ್ಟು ಕೊಡದೆಯೂ, ಕ್ರೇಜ್ ನಿಗಿನಿಗಿಸುವಂತೆ ಮಾಡಿದ ಹೆಗ್ಗಳಿಕೆಯೂ ಭಾರ್ಗವನಿಗೆ ಸಲ್ಲುತ್ತದೆ. ಇಂಥಾ ಚಿತ್ರವೀಗ ಬಿಡುಗಡೆಗೊಂಡಿದೆ. ಕಡಲಿನಷ್ಟೇ ಹರವುಳ್ಳ ಸಂಕೀರ್ಣ ಕಥೆಯೊಂದನ್ನು ನಿರ್ದೇಶಕರು ಈ ಮೂಲಕ ಪ್ರೇಕ್ಷಕರ ಮುಂದೆ ಹರವಿದ್ದಾರೆ…
ಅಷ್ಟಕ್ಕೂ ಮನಸಿಗೆ ಸಂಬಂಧಿಸಿದ ವಿಚಾರಗಳೇ ಇಂಟರೆಸ್ಟಿಂಗ್ ಅನ್ನಿಸಿಕೊಳ್ಳುತ್ತವೆ. ಅದರ ಒಡಲಿನಲ್ಲಿರುವ ಭಾವಗಳು, ತುಡಿತ, ಸಿಟ್ಟು ದ್ವೇಷ ಮತ್ತು ಯಾವ ನಿಲುಕಿಗೂ ಸಿಗದಂಥಾ ನಾನಾ ವ್ಯಾಧಿಗಳಿಗೆ ಕಣ್ಣಾದ ಒಂದಷ್ಟು ಚಿತ್ರಗಳು ಈವರೆಗೂ ತೆರೆಕಂಡಿವೆ. ಆದರೆ, ಕಡಲ ತೀರದ ಭಾರ್ಗವ ಚಿತ್ರದ ವಿಚಾರದಲ್ಲಿ ನಿರ್ದೇಶಕರು ಮನೋಲೋಕದಲ್ಲಿ ಆಳವಾಗಿ ಮಿಂದೆದ್ದಿದ್ದಾರೆ. ಬಹುಶಃ ಕಥೆ ಒಂದಷ್ಟು ಬಿಗುವಾಗಿದೆ ಅನ್ನಿಸಿದರೆ ಅದಕ್ಕೆ ಅಂಥಾ ಸಿದ್ಧತೆಗಳೂ ಪ್ರಧಾನ ಕಾರಣವಾಗಿದ್ದಿರಬಹುದೇನೋ. ಹಾಗಾದರೆ ಈ ಸಿನಿಮಾದ ಅಸಲೀ ಕಥೆಯೇನು? ಅದರಲ್ಲಿನ ಪಾತ್ರಗಳ ಚಹರೆಗಳು ಹೇಗಿವೆ? ಇಷ್ಟು ಕಾಲ ಅಷ್ಟೊಂದು ತನ್ಮಯತೆಯಿಂದ ಚಾಲ್ತಿಯಲ್ಲಿದ್ದ ಕಾಯುವಿಕೆಯನ್ನು ಈ ಸಿನಿಮಾ ತೃಪ್ತವಾಗಿಸುವಂತಿದೆಯಾ? ಇಷ್ಟೆಲ್ಲ ಪ್ರಶ್ನೆಗಳಿಗೆ ಕಥೆಯಷ್ಟೇ ಅಸಂಗತವೆನ್ನಿಸುವ ಉತ್ತರಗಳು ಎದುರಾಗುತ್ತವೆ.
ಕಡಲ ತಡಿಯಲ್ಲಿ ಒಬ್ಬರಿಗೊಬ್ಬರು ಆತುಕೊಂಡೇ ಬೆಳೆದ ಭರತ ಮತ್ತು ಭಾರ್ಗವರೆಂಬ ಗೆಳೆಯರ ಮೂಲಕ ಕಥೆ ತೆರೆದುಕೊಳ್ಳುತ್ತೆ. ಎಳವೆಯಿಂದಲೇ ಜೀವಕ್ಕಂಟಿಕೊಂಡಂತೆ ಬೆಳೆದ ಈ ಇಬ್ಬರೂ ಯೌವನಾವಸ್ಥೆ ತಲುಪುತ್ತಲೇ ಇಂಪನಾ ಎಂಬ ಹುಡುಗಿಯೊಬ್ಬಳ ಎಂಟ್ರಿ ಯಾಗುತ್ತೆ. ಭಾರ್ಗವ ಭರತನ ಮೇಲೆ ಅದೆಂಥಾ ಸ್ನೇಹವಿಟ್ಟುಕೊಂಡಿರುತ್ತಾನೆಂದರೆ, ಅದರ ನಡುವೆ ಯಾರೆಂದರೆ ಯಾರೂ ಬರುವುದು ಅವನಿಷ್ಟವಾಗೋದಿಲ್ಲ. ಅಂಥಾ ಸ್ನೇಹದ ನಡುವೆ ಚೆಂದದ ಹುಡುಗಿಯ ಪ್ರವೇಶವಾಗಿ, ಭರತ ಆಕೆಯೊಂದಿಗೆ ಪ್ರೀತಿಯಲ್ಲಿ ಬೀಳುವಲ್ಲಿಂದ ಕಥೆ ಬೇರೆ ಬೇರೆ ದಿಕ್ಕುಗಳತ್ತ ಹೊರಳಿಕೊಳ್ಳುತ್ತೆ. ಕಥೆಯ ಕೊಂಬೆ ಕೋವೆಗಳು ಅಚ್ಚರಿದಾಯಕವಾಗಿ ಬೆಳೆದು ನಿಲ್ಲುತ್ತವೆ.
ಆ ನಂತರದಲ್ಲಿ ಏನೇನು ಘಟಿಸುತ್ತದೆಂಬುದೇ ಚಿತ್ರದ ಜೀವಾಳ. ನಿರ್ದೇಶಕರು ಇಂಟರ್ವೆಲ್ನವರೆಗೂ ಒಂದಷ್ಟು ಗೊಂದಲಗಳ ಜೊತೆ ಆಟವಾಡುತ್ತಲೇ ಕಥೆಯನ್ನು ವಿಸ್ತರಿಸುತ್ತಾರೆ. ಇಂಟರ್ವೆಲ್ ಮುಗಿದ ನಂತರದಲ್ಲಿ ಅದೆಲ್ಲವೂ ತಾನೇತಾನಾಗಿ ಪರಿಹಾರವಾಗುತ್ತಾ ಸಾಗುತ್ತದೆ. ಅಲ್ಲಿಂದಾಚೆಗೆ ಭ್ರಮೆ, ಬದುಕು ಮತ್ತು ಪ್ರೀತಿಯ ನಡುವೆ ಕಥೆ ಚಲಿಸುತ್ತದೆ. ಆ ನಂತರದಲ್ಲಿ ಏನೇನು ಘಟಿಸುತ್ತೆ? ಹೆಜ್ಜೆ ಹೆಜ್ಜೆಗೂ ಗೆಳೆಯನ ಬೆನ್ನಿಗೆ ನಿಂತು ಬಡಿದಾಡಿ ಭೋರ್ಗರೆಯುವ ಭಾರ್ಗವ ಯಾಕೆ ಮರೆಯಾಗುತ್ತಾನೆ? ತನಗೇನೇ ಬಂದರೂ ಭಾರ್ಗವನಿದ್ದಾನೆಂಬ ನಂಬಿಕೆಯನ್ನೇ ಸಾಕಿಕೊಂಡು ಬೆಳೆದ ಭರತನ ಮನಸೇಕೆ ನಾನಾ ಮನೋ ವ್ಯಾಧಿಗಳ ಗೂಡಾಗುತ್ತೆ? ಪ್ರೀತಿ, ಬದುಕು, ದ್ವೇಷ ಮತ್ತು ಭ್ರಮೆಗಳ ಪ್ರಭಾವಳಿಯ ನಡುವೆ ಏನೇನಾಗುತ್ತದೆಂಬುದು ನಿಜವಾದ ಕುತೂಹಲ. ಅದುವೇ ಒಂದಿಡೀ ಚಿತ್ರದ ಆತ್ಮವೂ ಹೌದು!
ಮೊದಲೇ ಹೇಳಿದಂತೆ ಇದೊಂದು ಸಂಕೀರ್ಣವಾದ ಕಥೆ. ಪಾತ್ರಗಳೂ ಕೂಡಾ ಅಷ್ಟೇ ಗಟ್ಟಿಯಾಗಿವೆ. ಅದನ್ನು ನಿರ್ವಹಿಸಿದ ಕಲಾವಿದರನ್ನು ಮೆಚಿಕೊಳ್ಳದಿರಲಾಗೋದಿಲ್ಲ. ಅದರಲ್ಲಿಯೂ ವಿಶೇಷವಾಗಿ ಪ್ರಧಾನ ಪಾತ್ರಗಳಾದ ಭರತ್ ಮತ್ತು ಭಾರ್ಗವನನ್ನು ಆವಾಹಿಸಿಕೊಂಡಿರುವ ಭರತ್ ಗೌಡ ಮತ್ತು ಪಟೇಲ್ ವರುಣ್ ರಾಜ್ ಗಮನ ಸೆಳೆಯುತ್ತಾರೆ. ಮೊದಲ ಹೆಜ್ಜೆಯಲ್ಲಿಯೇ ನಟರಾಗಿ ಬಮನ ಸೆಳೆಯತ್ತಾರೆ. ಇನ್ನುಳಿದಂತೆ ಅಕ್ಷರಶಃ ಅಬ್ಬರಿಸುತ್ತಾ, ಆ ಪಾತ್ರವೇ ತಾನಾದಂತೆ ನಟಿಸಿರುವ ಪಟೇಲ್ ವರುಣ್ ರಾಜ್ ಅಂತೂ ಪ್ರೇಕ್ಷಕರನ್ನು ಹಿಡಿದಿಡುತ್ತಾರೆ. ಸಿನಿಮಾ ಮುಗಿಯುವ ಹೊತ್ತಿಗೆಲ್ಲ ನೋಡುಗರ ಮನಸಲ್ಲಿ ಈತ ನಾಯಕನಾಗಿ ನೆಲೆ ಕಂಡುಕೊಳ್ಳುತ್ತಾನೆಂಬ ಭಾವನೆ ಚಿಗಿತುಕೊಳ್ಳುತ್ತದೆ. ಅಷ್ಟರ ಮಟ್ಟಿಗೆ ಅವರ ನಟನೆ ಪರಿಣಾಮಕಾರಿಯಾಗಿದೆ.
ಇನ್ನುಳಿದಂತೆ ಶ್ರುತಿ ಪ್ರಕಾಶ್ ಇಲ್ಲಿ ಇಂಪನಾ ಎಂಬ ಪಾತ್ರವನ್ನು ನಿಭಾಯಿಸಿದ್ದಾರೆ. ಬಹುಕಾಲದ ನಂತರ ಅವರು ಈ ಪಾತ್ರವಾಗಿ ಪ್ರೇಕ್ಷಕರನ್ನು ಮುಖಾಮುಖಿಯಾಗಿದ್ದಾರೆ. ಆಕೆ ಬರೀ ಸೌಂದರ್ಯದಲ್ಲಿ ಮಾತ್ರವಲ್ಲದೇ, ನಟನೆಯ ವಿಚಾರದಲ್ಲಿಯೂ ಗಮನ ಸೆಳೆಯುತ್ತಾರೆ. ರಾಘವ್ ನಾಗ್ ಕೂಡಾ ಅಚ್ಚುಕಟ್ಟಾಗಿ ನಟಿಸಿದ್ದಾರೆ. ಶ್ರೀಧರ್, ಅಶ್ವಿನ್ ಹಾಸನ್ ಪಾತ್ರವೂ ಇಷ್ಟವಾಗುವಂತಿವೆ. ನಿರ್ದೇಶನದ ವಿಚಾರಕ್ಕೆ ಬರುವುದಾದರೆ, ಪನ್ನಗ ಭರಣ ಕೂಡಾ ಒಂದಷ್ಟು ಭರವಸೆ ಮೂಡಿಸುತ್ತಾರೆ. ಇಂಟರ್ವಲ್ಗೂ ಮುನ್ನ ಗೊಂದಲ ಸೃಷ್ಟಿಸಿ ಕುತೂಹಲ ಕಾಯ್ದುಕೊಳ್ಳುವ ಪನ್ನಗ, ಆ ಬಳಿಕ ಒಂದಷ್ಟು ಗೊಂದಲಗಳನ್ನು ಪರಿಹರಿಸುತ್ತಾರಾದರೂ, ಮತ್ತೊಂದಷ್ಟು ಗೋಜಲುಗಳು ಯಥಾ ಸ್ಥಿತಿಯಲ್ಲಿ ಉಳಿದು ಬಿಡುತ್ತವೆ. ಕೆಲ ದೃಷ್ಯಗಳು ತರ್ಕಕ್ಕೆ ನಿಲುಕದ ಪ್ರಶ್ನೆಗಳಾಗಿಯೇ ಉಳಿದು ಹೋಗುತ್ತವೆ. ವರು ಕೊಂಚ ಎಚ್ಚರ ವಹಿಸಿದ್ದರೂ ಈ ಚಿತ್ರ ಮತ್ತೊಂದು ಎತ್ತರಕ್ಕೇರಬಹುದಿತ್ತು. ಇದೆಲ್ಲದರಾಚೆಗೆ ಕಡಲ ತೀರದ ಭಾರ್ಗವ ಹಲವು ಪ್ರಯೋಗಾತ್ಮಕ ಗುಣಗಳೊಂದಿಗೆ, ಭಿನ್ನ ಕಥೆಯ ಕಾರಣಕ್ಕೆ ಈ ಚಿತ್ರ ವೀಶೇಷ ಅನ್ನಿಸಿಕೊಳ್ಳುವಂತಿದೆ!