ಇತ್ತೀಚೆಗಂತೂ ಧರ್ಮ, ದೇವರು, ಬಣ್ಣಗಳನ್ನು ಸಾರಾಸಗಟಾಗಿ ಗುತ್ತಿಗೆಗೆ ತೆಗೆದುಕೊಂತಾಡುವವರ ಹಾವಳಿ ವಿಪರೀತಕ್ಕಿಟ್ಟುಕೊಂಡಿದೆ. ಹೀಗೆ ಕೆದರಿಕೊಂಡಿರುವ ಧರ್ಮದ ಪಿತ್ಥವೆಂಬುದು ದಿನ ದಿನಕ್ಕೂ ರೂಪಾಂತರ ಹೊಂದುತ್ತಾ ಮುಂದುವರೆಯುತ್ತಿದೆ. ಈಗ್ಗೆ ಒಂದಷ್ಟು ಕಾಲದಿಂದ ಶುರುವಾಗಿರುವ ಸಿನಿಮಾ ಬಾಯ್ಕಾಟ್ ಪ್ರವೃತ್ತಿ ಎಂಬುದು ಆ ಧರ್ಮದಮಲಿನ ಕೂಸೆಂಬುದರಲ್ಲಿ ಯಾವ ಸಂದೇಹವೂ ಇಲ್ಲ. ಬೆನ್ನ ಹುರಿಯೇ ನೆಟ್ಟಗಿಲ್ಲದ ಕೆಲ ಚಿತ್ರಗಳ ನೆಲಕಚ್ಚುತ್ತಲೇ ಈ ಬಾಯ್ಕಾಟ್ ವೀರರು ಅದು ನಮ್ಮದೇ ಪ್ರಭಾವ ಎಂಬಂತೆ ಕಾಲರ್ ಎಗರಿಸುತ್ತಾ ಬಂದಿದ್ದಾರೆ. ಆದರೆ ಶಾರೂಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ನಟಿಸಿದ್ದ `ಪಠಾಣ್’ ವಿಚಾರದಲ್ಲಿ ಮಾತ್ರ ಬಾಯ್ಕಾಟ್ ಕಲ್ಚರಿನ ಅಸಲೀ ಶಕ್ತಿ ಜಗಜ್ಜಾಹೀರಾಗಿಬಿಟ್ಟಿದೆ!
ನಿಮಗೆ ಮರೆತು ಹೋಗಿರಲಿಕ್ಕಿಲ್ಲ; ಪಠಾಣ್ ವಿರುದ್ಧ ಸಮರ ಸಾರಲು ತುದಿಗಾಲಲ್ಲಿ ನಿಂತು ಕಾಯುತ್ತಿದ್ದವರಿಗೆ, ಆ ಸಿನಿಮಾ ಕಡೆಯಿಂದಲೇ ಒಂದು ಸರಿಕಟ್ಟಾದ ಸರಕು ಸಿಕ್ಕಂತಾಗಿತ್ತು. ಅದರ ಬೇಷರಮ್ ರಂಗ್ ಎಂಬ ವೀಡಿಯೋ ಸಾಂಗ್ ಹೊರ ಬಂದಿದ್ದೇ ಈ ಪಟಾಲಮ್ಮು ಮಗಿಬಿದ್ದುಬಿಟ್ಟಿತ್ತು. ಆ ಹಾಡಿನಲ್ಲಿ ಎಂದಿನಂತೆ ಶರ್ಟು ಬಿಚ್ಚಿ ನಿಂತಿದ್ದ ಶಾರೂಖ್ ಖಾನ್, ಲಂಗೋಟಿಯಂಥಾದ್ದೊಂದು ಬಟ್ಟೆ ಧರಿಸಿ ಶಾರೂಕ್ನನ್ನು ತಬ್ಬಿಕೊಂಡ ದೀಪಿಕಾ ಪಡುಕೋಣೆ… ಇಷ್ಟಾಗಿದ್ದರೆ ಮತ್ತೆ ಮತ್ತೆ ನೋಡಿ ಸುಖಿಸುತ್ತಿತ್ತೇನೋ ಆ ಪಟಾಲಮ್ಮು… ಆದರೆ, ಆ ಸಾಂಗಿನಲ್ಲಿ ದೀಪಿಕಾ ಧರಿಸಿದ್ದ ಲಂಗೋಟಿಯ ಬಣ್ಣ ಕೇಸರಿ ಎಂಬುದೇ ಅವುಗಳ ಆರ್ತನಾದಕ್ಕೆ ಕಾರಣವಾಗಿತ್ತು.
ಆ ನಂತರ ಏನೇನಾಗಿತ್ತೆಂಬುದೆಲ್ಲ ಕಣ್ಣ ಮುಂದಿದೆ. ಆದರೆ ಅಷ್ಟೆಲ್ಲ ಅಪಪ್ರಚಾರಗಳು ನಡೆದರೂ ಕೂಡಾ ದೀಪಿಕಾಪಡುಕೋಣೆ ಏನೆಂದರೆ ಏನೂ ತಲೆ ಕೆಡಿಸಿಕೊಂಡಂತಿರಲಿಲ್ಲ. ಈ ಪಲ್ಲಟದ ಬಗ್ಗೆ ಪ್ರತಿಕ್ರಿಯೆ ಕೊಡುವ ಗೋಜಿಗೂ ಹೋಗಿರಲಿಲ್ಲ. ಇದೀಗ ಪಠಾಣ್ ದೊಡ್ಡ ಮಟ್ಟದಲ್ಲಿ ಗೆದ್ದ ನಂತರ ಪ್ರತಿಕ್ರಿಯಿಸಿದ್ದಾಳೆ. ನಾವು ನಮ್ಮ ಮನೆಯಲ್ಲಿ ಕಲಿಸಿದ ಸಂಸ್ಕøತಿಯನ್ನು ಮೈಗೀಡಿಸಿಕೊಂಡಿದ್ದೇವೆ. ಕಷ್ಟಪಟ್ಟು ಬಂದು, ಒಂದಷ್ಟು ಮೌಲ್ಯಗಳೊಂದಿಗೆ ಬದುಕುತ್ತಿದ್ದೇವೆ. ಅದರ ಮುಂದೆ ಮಿಕ್ಕೆಲ್ಲವೂ ಗೌಣ ಎಂಬರ್ಥದಲ್ಲಿ ಮಾರ್ಮಿಕವಾಗಿ ಮಾತಾಡಿದ್ದಾಳೆ. ವಿಶೇಷವೆಂದರೆ, ಬಾಯ್ಕಾಟ್ಗೆ ಗುರಿಯಾಗಿದ್ದ ಪಠಾಣ್ ಇದೀಗ ಸಾವಿರ ಕೋಟಿಯ ಕ್ಲಬ್ ಸೇರಿಕೊಂಡಿದೆ!