ಬೆಂಕಿ ಹಚ್ಚೋ ಕಥೆಯಾಗದಿರಲೆಂಬ ಹಾರೈಕೆ!
ಸ್ಯಾಂಡಲ್ವುಡ್ ಡ್ರಗ್ಸ್ ಕೇಸ್ ಮುಂಚೂಣಿಗೆ ಬಂದು ರಾಗಿಣಿ, ಸಂಜನಾರಂಥ ನಟಿಯರು ತಗುಲಿಕೊಳ್ಳಲಾರಂಭಿಸಿದರಲ್ಲಾ? ಅದರ ಆಸುಪಾಸಲ್ಲಿಯೇ ಒಂದಷ್ಟು ಪ್ರವರ್ಧಮಾನಕ್ಕೆ ಬಂದಿದ್ದಾತ ಪ್ರಶಾಂತ್ ಸಂಬರ್ಗಿ. ತನ್ನನ್ನು ತಾನು ಸಾಮಾಜಿಕ ಹೋರಾಟಗಾರ ಅಂತೆಲ್ಲ ಬಿಂಬಿಸಿಕೊಂಡು ಬಂದ ಈತನಿಗೆ ಮತ್ತೊಂದಷ್ಟು ಪಬ್ಲಿಸಿಟಿ ತಂದುಕೊಟ್ಟಿದ್ದು ಬಿಗ್ಬಾಸ್ ಶೋ. ಬಿಗ್ಬಾಸ್ ಮನೆಯೊಳಗೂ ನಾನಾ ವಿವಾದವೆಬ್ಬಿಸಿ, ಕಡೆಗೆ ಬಿಗ್ಬಾಸ್ ವಿನ್ನರ್ ಬಗ್ಗೆಯೂ ಅಸಮಾಧಾನ ತೋರ್ಪಡಿಸಿಕೊಂಡು ಒಂದಷ್ಟು ಕಾಲ ಚಾಲ್ತಿಯಲ್ಲಿದ್ದ ಸಂಬರ್ಗಿ ನಂತರ ಸವಕಲು ನಾಣ್ಯದಂತಾಗಿದ್ದರು. ಹಾಗೆ ಟಾಕ್ ಕ್ರಿಯೇಟ್ ಮಾಡಲೊಂದು ಇಶ್ಯೂ ಇಲ್ಲದೆ ಕೊರಗುತ್ತಿದ್ದ ಸಂಬರ್ಗಿಗೆ ಅಸ್ತ್ರವಾಗಿ ಸಿಕ್ಕಿದ್ದು ಹಲಾಲ್, ಜಟ್ಕಾ ವಿವಾದ. ಜಟ್ಕಾ ಕಟ್ ಮಾಂಸದ ಪರವಾಗಿ ನಿಂತು ಜಟ್ಕಾ ಹೋರಾಟಗಾರನೆಂದೇ ಖ್ಯಾತಿ ಪಡೆದುಕೊಂಡಿರುವ ಪ್ರಶಾಂತ್ ಸಂಬರ್ಗಿ ಈಗ ಮತ್ತೊಂದು ಅವತಾರವೆತ್ತಲು ಅಣಿಯಾದಂತಿದೆ!
ಗಾಂಧಿನಗರದಗುಂಟ ಗುಲ್ಲೆದ್ದಿರೋ ವಿಚಾರಗಳ ಆಧಾರದಲ್ಲಿ ಹೇಳೋದಾದರೆ, ಪ್ರಶಾಂತ್ ಸಂಬರ್ಗಿ ಇದೀಗ ತನ್ನ ಹಳೇ ಕನಸನ್ನು ನನಸು ಮಾಡಿಕೊಳ್ಳುವ ಆಲೋಚನೆಯಲ್ಲಿದ್ದಾರೆ. ಹಾಗಾದರೆ ಪ್ರಶಾಂತ್ ಈ ಸಿನಿಮಾದಲ್ಲಿ ಹೀರೋ ಆಗಿ ನಟಿಸಲಿದ್ದಾರಾ? ನಿರ್ದೇಶನ ಮಾಡಲಿದ್ದಾರಾ? ಅಂತೆಲ್ಲ ಪ್ರಶ್ನೆಗಳು ಹುಟ್ಟೋದು ಸಹಜ. ಆದರೆ ಉತ್ತರವಿನ್ನೂ ಪಕ್ಕಾ ಸಿಕ್ಕಿಲ್ಲ. ಆದರೆ, ಆತ ಸಿನಿಮಾದತ್ತ ಮತ್ತೆ ಹೊರಳಿಕೊಂಡಿರೋದಂತೂ ಸ್ಪಷ್ಟ ಎಂಬಂಥಾ ವಾತಾವರಣವಿದೆ. ಮುಗುಮ್ಮಾಗಿ ಎಲ್ಲೋ ಕೂತಿದ್ದು, ಅದ್ಯಾವುದೋ ಮಾಯಕದಲ್ಲಿ ಮಾಧ್ಯಮಗಳ ಮುಂದೆ ಬಂದು ಹ್ಞೂಂಕರಿಸೋದು ಸಂಬರ್ಗಿಯ ಸ್ಟೈಲು. ಆತ ಇನ್ನು ಕೆಲವೇ ದಿನಗಳಲ್ಲಿ ಮಾಧ್ಯಮಗಳ ಮುಂದೆ ಪ್ರತ್ಯಕ್ಷವಾಗಿ ಎಲ್ಲವನ್ನೂ ಅರುಹಬಹುದೇನೋ…
ಅಷ್ಟಕ್ಕೂ ಪ್ರಶಾಂತ್ ಸಂಬರ್ಗಿ ಸಿನಿಮಾ ರಂಗಕ್ಕೆ ಬರುತ್ತಿರೋದು ವಿಶೇಷವಾದ ಸಂಗತಿಯೇನಲ್ಲ. ಒಂದು ಕಾಲಕ್ಕೆ ಸಿನಿಮಾ ರಂಗದಲ್ಲಿ ನಾಯಕನಾಗಿ ಮೆರೆಯಬೇಕೆಂಬ ಬಯಕೆಯನ್ನಿಟ್ಟುಕೊಂಡೇ ಎಂಟ್ರಿ ಕೊಟ್ಟಿದ್ದಾತ ಸಂಬರ್ಗಿ. ಆ ನಂತರದಲ್ಲಿ ಸಿನಿಮಾ ರಂಗದಲ್ಲಿಯೇ ನಾನಾ ಅವತಾರವೆತ್ತಿದ್ದೂ ಆಗಿತ್ತು. ಅದೆಲ್ಲದರ ನಡುವೆ ಸಾಮಾಜಿಕ ಹೋರಾಟಗಾರನ ಗೆಟಪ್ಪೇ ಸಿನಿಮಾಕ್ಕಿಂತ ಬಾಬತ್ತಿನ ಸಂಗತಿ ಎಂಬ ಜ್ಞಾನೋದಯವಾಯ್ತೋ ಏನೋ; ಸಂಬರ್ಗಿ ಸಾಮಾಜಿಕ ವಿಚಾರಗಳನ್ನಿಟ್ಟುಕೊಂಡು ಸೌಂಡು ಮಾಡಲಾರಂಭಿಸಿದ್ದ. ಎಷ್ಟೆಂದರೂ ಈ ಸಿನಿಮಾ ನಿರ್ಮಾಣ, ವಿತರಣೆ ಮುಂತಾದವೆಲ್ಲ ರಿಸ್ಕಿನ ಸಂಗತಿಗಳು. ಅಲ್ಲಿ ಕಾಸು ಸುರಿದು ನಿಂತರೆ ಎಲ್ಲೆಲ್ಲಿ ಸೋರಿ ಹೋಗಿ ಲುಕ್ಸಾನು ಸಂಭವಿಸುತ್ತದೋ ಹೇಳಲು ಬರುವುದಿಲ್ಲ. ಇಂಥಾ ಬುದ್ಧಿವಂತಿಕೆಯಿಂದಲೇ ಸಾಮಾಜಿಕ ಹೋರಾಟಗಾರನ ಗೆಟಪ್ಪು ಬದಲಿಸಿದ್ದ ಸಂಬರ್ಗಿ ಇದೀಗ ಮತ್ತೆ ಸಿನಿಮಾದತ್ತ ಮುಖ ಮಾಡಿದಂತಿದೆ.
ಸಿನಿಮಾ ಎಲ್ಲರನ್ನೂ ಸೂಜಿಗಲ್ಲಿನಂತೆ ಸೆಳೆಯೋ ಮಾಯೆ. ಬಹುಶಃ ಅದರಿಂದ ತಪ್ಪಿಕೊಂಡವರೇ ವಿರಳ. ಹಾಗಿರುವಾಗಿ ಪ್ರಶಾಂತ್ ಸಂಬರ್ಗಿಯ ದೃಷ್ಟಿ ಅದರತ್ತ ನೆಟ್ಟುಕೊಂಡಿದ್ದರಲ್ಲಿ ಪವಾಡವೇನೂ ಇಲ್ಲ. ಆದರೆ, ಪ್ರಶಾಂತ್ ಈ ಸಿನಿಮಾಗೆ ಎಂಥಾ ಕಥಾ ಎಳೆಯನ್ನು ಆಯ್ಕೆ ಮಾಡಿಕೊಳ್ಳಬಹುದೆಂಬುದು ಕುತೂಹಲವೂ ಹೌದು. ಭಯವೂ ಹೌದು. ಯಾಕೆಂದರೆ, ಈ ನೆಲದ ಸೌಹಾರ್ದ ಪರಂಪರೆಗೆ ಬೆಂಕಿ ಹಚ್ಚಲು ನಿಂತವರ ಮುಖವಾಣಿಯಂತೆ ಬದಲಾಗಿರುವಾತ ಸಂಬರ್ಗಿ. ದಿನಕ್ಕೊಂದು ಗುಲ್ಲೆಬ್ಬಿಸಿ, ಜನರ ದೃಷ್ಟಿಯನ್ನು ಬೇರೆಡೆಗೆ ಹೊರಳಿಸಿ ಆಡಳಿತಾತ್ಮಕ ವೈಫಲ್ಯಗಳನ್ನು ಮುಚ್ಚಿಟ್ಟುಕೊಳ್ಳುವ ನಾಜೂಕುತನಕ್ಕೆ ಅಸ್ತ್ರವಾಗಿಯೂ ಆತ ಬಳಕೆಯಾಗುತ್ತಿದ್ದಾರೆಂಬ ಶಂಕೆಗಳಿವೆ.
ಹೀಗಿರುವಾಗ ಪ್ರಶಾಂತ್ ಸಂಬರ್ಗಿ ಕಡೆಯಿಂದ ಸಮಾಜಕ್ಕೆ ಒಳಿತಾಗುವಂಥ, ಈ ನೆಲದ ಅಸ್ಮಿತೆಯಂತಿರೋ ಸಾಮರಸ್ಯ ಬಲಗೊಳ್ಳುವಂಥಾ ಸರಕುಗಳನ್ನು ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಈಗಂತೂ ಸಿನಿಮಾ ಮಾಧ್ಯಮವನ್ನೂ ಕೂಡಾ ಆಡಳಿತಾರೂಢರು ವಶಪಡಿಸಿಕೊಂಡಿರೋ ಸನ್ನಿವೇಶಗಳಿದ್ದಾವೆ. ತಲುಪಿಸಬೇಕಾದುದನ್ನು ಸಿನಿಮಾ ಮೂಲಕವೇ ದಾಟಿಸಿ ಅಲ್ಲಿಯೂ ಜನರನ್ನು ಭಾವನಾತ್ಮಕವಾಗಿ ರೊಚ್ಚಿಗೆಬ್ಬಿಸುವ ಕೆಲಸಗಳು ನಡೆಯುತ್ತಿವೆ. ಪ್ರಶಾಂತ್ ಸಂಬರ್ಗಿ ಕಡೆಯಿಂದ ಅಂಥಾ ಅನಾಹುತಗಳಾಗದಿರಲೆಂಬುದು ಹಾರೈಕೆ!