ಹದಿಹರೆಯದ ತಲ್ಲಣಗಳನ್ನು ಪಕ್ಕಾ ಬೋಲ್ಡ್ ಆಗಿ ದಾಖಲಿಸೋದರಲ್ಲಿ ನಿರ್ದೇಶಕ ಯೋಗರಾಜ ಭಟ್ ಅವರದ್ದು ಎತ್ತಿದ ಕೈ. ಭಾವ ತೀವ್ರತೆಯನ್ನೂ ಕೂಡಾ ಭೋಳೇ ಶೈಲಿಯಲ್ಲಿ ದಾಟಿಸಬಲ್ಲ ಚಾಕಚಕ್ಯತೆಯೇ ಅವರ ಗೆಲುವಿನ ಗುಟ್ಟೆಂದರೂ ಅತಿಶಯವೇನಲ್ಲ. ಅಂಥಾ ಯೋಗರಾಜ್ ಭಟ್ `ಪದವಿಪೂರ್ವ’ ಎಂಬ ಶೀರ್ಷಿಕೆಯಿಟ್ಟುಕೊಂಡು ನಿರ್ಮಾಣಕ್ಕಿಳಿದಾಗ ತಾನೇ ತಾನಾಗಿ ಅದರತ್ತ ಪ್ರೇಕ್ಷಕರ ಗಮನ ಕೇಂದ್ರೀಕರಿಸಿತ್ತು. ಆರಂಭದಲ್ಲೇ ಸುದ್ದಿಯಾಗುತ್ತಾ, ಹೆಜ್ಜೆ ಹನೆಜ್ಜೆಯಲ್ಲೂ ನಿರೀಕ್ಷೆ ಮೂಡಿಸಿದ್ದ ಈ ಚಿತ್ರ ಕಳೆದ ವರ್ಷದ ಕಡೇಯ ಭಾಗದಲ್ಲಿ ಬಿಡುಗಡೆಗೊಂಡಿತ್ತು. ಒಂದಷ್ಟು ನಿರೀಕ್ಷೆಯನ್ನೂ ಮೂಡಿಸಿತ್ತು. ಇದೀಗ ಪದವಿ ಪೂರ್ವ ಚಿತ್ರ ಸನ್ ನೆಕ್ಸ್ಟ್ ಮೂಲಕ ಓಟಿಟಿಗೆ ಲಗ್ಗೆಯಿಡುತ್ತಿದೆ!
ಇದೇ ಮಾರ್ಚ್ ಮೂರನೇ ತಾರೀಕಿನಿಂದ ಪದವಿ ಪೂರ್ವ ಚಿತ್ರ ಸನ್ ನೆಕ್ಸ್ಟ್ ಓಟಿಟಿ ಪ್ಲಾಟ್ಫಾರ್ಮಿನಲ್ಲಿ ಪ್ರದರ್ಶನ ಶುರು ಮಾಡಲಿದೆ. ಇಲ್ಲಿಯೂ ಕೂಡಾ ಪ್ರೇಕ್ಷಕರ ಕಡೆಯಿಂದ ಉತ್ತಮ ಪ್ರತಿಕ್ರಿಯೆ ಮೂಡಿಕೊಳ್ಳುವ ನಿರೀಕ್ಷೆ ಚಿತ್ರ ತಂಡದಲ್ಲಿದೆ. ಸಿನಿಮಾದಿಂದ ಸಿನಿಮಾಕ್ಕೆ ಹೊಸಾ ಕಾನ್ಸೆಪ್ಟುಗಳೊಂದಿಗೆ ಎದುರಾಗುವ ಯೋಗರಾಜ್ ಭಟ್, ನಿರ್ಮಾಪಕರಾಗಿ ಈ ಚಿತ್ರವನ್ನೂ ಕೂಡಾ ಹೊಸಾ ಬಗೆಯಲ್ಲಿ ಕಟ್ಟಿ ಕೊಟ್ಟಿದ್ದಾರೆ. ಕೇವಲ ಯುವ ಮನಸುಗಳಿಗೆ ಮಾತ್ರವಲ್ಲ; ಎಲ್ಲ ವರ್ಗದ, ಅಭಿರುಚಿಯ ಪ್ರೇಕ್ಷಕರಿಗೂ ಇಷ್ಟವಾಗುವಂತೆ ಪದವಿ ಪೂರ್ವವನ್ನು ರೂಪಿಸಿದ್ದಾರೆ.
ನಿರ್ದೇಶಕ ಹರಿಪ್ರಸಾದ್ ಪ್ರೇಕ್ಷಕರ ನಿರೀಕ್ಷೆ ಕಿಂಚಿತ್ತೂ ಮುಕ್ಕಾಗದಂತೆ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ನವ ಪ್ರತಿಭೆ ಪೃಥ್ವಿ ಶಾಮನೂರು ಈ ಸಿನಿಮಾದ ನಾಯಕನಾಗಿ ನಟಿಸಿದ್ದಾರೆ. ಇದು ಆತನ ಪಾಲಿಗೆ ಮೊದಲ ಚಿತ್ರವಾದರೂ, ಆ ಸುಳಿವು ಸಿಗದಂತೆ ನಟಿಸುವ ಮೂಲಕ ಪೃಥ್ವಿ ಸೈ ಅನ್ನಿಸಿಕೊಂಡಿದ್ದಾರೆ. ವಿಶೇಷವೆಂದರೆ ಈ ಚಿತ್ರವನ್ನು ರವಿ ಶಾಮನೂರು ಮತ್ತು ಯೋಗರಾಜ ಭಟ್ ಸಹಯೋಗದಲ್ಲಿ ನಿರ್ಮಾಣ ಮಾಡಿದ್ದಾರೆ.
ಈಗಿನಲ್ಲಿ ಭಾವನೆಗಳೆಲ್ಲವೂ ಮನಸಿನಿಂದ ಕಳಚಿಕೊಂಡು ಬೆರಳ ಮೊನೆಗೆ ಬಂದು ನಿಂತಿರುವ ಕಾಲಮಾನ. ಇಲ್ಲಿ ಪ್ರೀತಿಗೆ, ಅದು ಸ್ಫುರಿಸುವ ಪುಳಕಗಳಿಗೆಲ್ಲ ಆಯಸ್ಸು ಕಡಿಮೆಯಾಗಿದೆ. ಅವುಗಳ ವಿಚಾರದಲ್ಲಿ ತೊಂಭತ್ತರ ದಶಕದ ಮುಂಚಿನ ದಿನಗಳು ನಿಜಕ್ಕೂ ಸುವರ್ಣ ಯುಗ. ಮೊಬೈಲ್ ಎಂಬುದರ ಪರಿಚಯವೂ ಇಲ್ಲದ ಆ ಕಾಲಘಟ್ಟದಲ್ಲಿ ಘಟಿಸುವ ಕಥೆಯನ್ನು ಪದವಿ ಪೂರ್ವದ ಮೂಲಕ ಬಿಚ್ಚಿಡಲಾಗಿದೆ. ಆ ಕಾರಣದಿಂದಲೇ ಈ ಸನಿಮಾ ಪ್ರತೀ ನೋಡುಗರಿಗೂ ಇಷ್ಟವಾಗಿತ್ತು. ಇದೀಗ ಪದವಿ ಪೂರ್ವ ಓಟಿಟಿಗೆ ಆಗಮಿಸಿದೆ. ನೀವೂ ನೋಡಿ. ಹೊಸಾ ಅನುಭೂತಿಯೊಂದಕ್ಕೆ ಧಾರಾಳವಾಗಿ ಒಡ್ಡಿಕೊಳ್ಳಿ!