ಅತ್ಯಂತ ಕಡಿಮೆ ಅವಧಿಯಲ್ಲಿಯೇ ಕನ್ನಡ ಚಿತ್ರರಂಗದ ಭರವಸೆಯ ನಾಯಕನಾಗಿ ಗುರುತಿಸಿಕೊಂಡಿರುವವರು ರಾಜವರ್ಧನ್. ಪ್ರಸಿದ್ಧ ಹಿರಿಯ ನಟ ಡಿಂಗ್ರಿ ನಾಗರಾಜ್ ಪುತ್ರರಾದ ರಾಜವರ್ಧನ್, ದೊಡ್ಡ ಮಟ್ಟದಲ್ಲಿ ಹೆಸರು ಸಂಪಾದಿಸಿರುವುದು ತನ್ನೊಳಗಿನ ನಟನೆಯ ಕಸುವಿನಿಂದಲೇ. ತಾನು ನಟಿಸುವ ಒಂದೊಂದು ಸಿನಿಮಾಗಳೂ ಸಂಚಲನ ಸೃಷ್ಟಿಸುವಂತಿರಬೇಕು, ಚಾಲೆಂಜಿಂಗ್ ಅನ್ನುಸುವಂಥಾ ಪಾತ್ರಗಳೇ ಬೇಕೆಂಬ ಅಪರೂಪದ ಮನಃಸ್ಥಿತಿಯನ್ನವರು ಕಾಪಿಟ್ಟುಕೊಂಡಿದ್ದಾರೆ. ಸದ್ಯಕ್ಕೆ ಏಕಕಾಲದಲ್ಲಿಯೇ ಮೂರು ಸಿನಿಮಾಗಳಲ್ಲಿ ನಾಯಕನಾಗಿ ನಟಿಸುತ್ತಿರುವ ರಾಜವರ್ಧನ್, ಅದರಲ್ಲೊಂದಾಗಿರುವ `ಪ್ರಣಯಂ’ ಮೂಲಕ ಸದ್ದು ಮಾಡಲಾರಂಭಿಸಿದ್ದಾರೆ. ಇದೀಗ ಆ ಸಿನಿಮಾದ ಟೀಸರ್ ಲಾಂಚ್ ಆಗಿದೆ.
ಟೀಸರ್, ಟ್ರೈಲರ್ ಮೂಲಕ ಒಂದಿಡೀ ಸಿನಿಮಾದ ಸಾರವನ್ನು ಕುತೂಹಲ ಹರಳುಗಟ್ಟುವಂತೆ ಕಟ್ಟಿ ಕೊಡೋದೊಂದು ಸಾಹಸ. ಅದನ್ನು ಸಾಧ್ಯವಾಗಿಸಿಕೊಂಡ ಸಿನಿಮಾಗಳು ದೊಡ್ಡ ಮಟ್ಟದಲ್ಲಿ ಗೆಲುವು ದಾಖಲಿಸಿವೆ. ಆ ಯಾದಿಯಲ್ಲಿ `ಪ್ರಣಯಂ’ ಕೂಡಾ ಸೇರಿಕೊಳ್ಳುವ ಸೂಚನೆಗಳು ದಟ್ಟವಾಗಿಯೇ ಗೋಚರಿಸಲಾರಂಭಿಸಿವೆ. ನಿಖರವಾಗಿ ಹೇಳಬೇಕೆಂದರೆ, ಈ ಟೀಸರ್ ನೋಡುಗರಲ್ಲಿ ರೋಚಕ ರೋಮಾಂಚನ ಮೂಡಿಸಿದೆ. ಶೀರ್ಷಿಕೆ ಕೇಳಿದಾಕ್ಷಣವೇ ಇದೊಂದು ಪ್ರೇಮ ಕಥೆಯ ಚಿತ್ರವೆಂಬ ಸುಳಿವು ಸಿಕ್ಕಿ ಹೋಗುತ್ತೆ. ಆದರೆ ಈ ಟೀಸರ್ ಮತ್ತೊಂದು ದಿಕ್ಕಿನತ್ತಲೂ ಪ್ರೇಕ್ಷಕರ ಕಲ್ಪನೆ ಹೊರಳಿಕೊಳ್ಳುವಂತೆ ಮಾಡಿದೆ.
ಶೀರ್ಷಿಕೆಗೆ ತಕ್ಕುದಾದಂಥಾ ಪ್ರಣಯ ಸನ್ನಿವೇಶಗಳ ಜೊತೆ ಜೊತೆಗೇ, ಪಕ್ಕಾ ಮಾಸ್ ಸನ್ನಿವೇಶಗಳೂ ಈ ಟೀಸರ್ನಲ್ಲಿ ಸುಳಿದಾಡಿವೆ. ರಾಜವರ್ಧನ್ ಇಲ್ಲಿ ನಾನಾ ಶೇಡುಗಳಿರೋ ಪಾತ್ರಕ್ಕೆ ಜೀವ ತುಂಬಿರೋ ಸೂಚನೆಗಳೂ ಧಾರಾಳವಾಗಿವೆ. ಗಾಢ ಪ್ರೇಮದಲ್ಲಿ ಮಿಂದೆದ್ದು, ಧುಮುಗುಡುವ ಮಾಸ್ ಸನ್ನಿವೇಶದಲ್ಲಿ ತೊಯ್ದಂತೆ ಭಾಸವಾಗುವ ಈ ಟೀಸರ್ ಕಂಡು ಬಹುತೇಕರು ರೋಮಾಂಚಿತರಾಗಿದ್ದಾರೆ. ಈ ಕಾರಣದಿಂದಲೇ ಹೆಚ್ಚೆಚ್ಚು ವೀಕ್ಷಣೆಗಳನ್ನು ದಾಖಲಿಸುತ್ತಾ ಸಾಗುತ್ತಿರುವ ಸದರಿ ಟೀಸರ್ಗೆ, ಮೆಚ್ಚುಗೆಯ ಮಹಾಪೂರವೇ ಹರಿದು ಬರಲಾರಂಭಿಸಿವೆ.
ಈ ಹಿಂದೆ ಕರಿಯ2, ಪಲ್ಲಕ್ಕಿ, ಗಣಪ ಮುಂತಾದ ಹಿಟ್ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದ ಪರಮೇಶ್ ಪ್ರಣಯಂಗೆ ಬಂಡವಾಳ ಹೂಡಿದ್ದಾರೆ. ಹೊಸಬರನ್ನು ಬೆಳೆಸುತ್ತಲೇ, ಹೊಸತನದ ಕಥೆಗಳಿಗೆ ಹಾತೊರೆಯುವ ಗುಣದ ಪರಮೇಶ್, ಒಂದೊಳ್ಳೆ ಕಥೆ ಸಿದ್ಧಪಡಿಸಿ ಅದರ ಸಾರಥ್ಯವನ್ನು ದತ್ತಾತ್ರೇಯರಿಗೆ ವಹಿಸಿದ್ದಾರೆ. ಈಗಾಗಲೇ ಘಟಾನುಘಟಿ ನಿರ್ದೇಶಕರೊಂದಿಗೆ ಕಾರ್ಯನಿರ್ವಹಿಸಿರುವ ದತ್ತಾತ್ರೇಯ, ಈ ಚಿತ್ರವನ್ನು ಹೇಗೆ ರೂಪಿಸಿದ್ದಾರೆಂಬುದಕ್ಕೆ ಈ ಟೀಸರ್ನಲ್ಲಿಯೇ ಪುರಾವೆಗಳು ಸಿಗುತ್ತವೆ. ನಿರ್ಮಾಪಕ ಪರಮೇಶ್ ಯಾವುದಕ್ಕೂ ಕಡಿಮೆಯಾಗದಂತೆ ಪ್ರಣಯಂ ಅನ್ನು ನಿರ್ಮಾಣ ಮಾಡಿದ್ದಾರೆ. ಆ ರಿಚ್ನೆಸ್ ಟೀಸರ್ನ ಪ್ರತೀ ಫ್ರೇಮುಗಳಲ್ಲಿಯೂ ಪ್ರತಿಫಲಿಸಿದೆ.
ಹಿರಿಯ ನಟ ಡಿಂಗ್ರಿ ನಾಗರಾಜ್ ಪುತ್ರನಾಗಿದ್ದುಕೊಂಡು, ಸಹಜವಾಗಿ ಬಂದ ಸಿನಿಮಾಸಕ್ತಿಯನ್ನು ತೀವ್ರವಾಗಿ ಹಚ್ಚಿಕೊಂಡವರು ರಾಜವರ್ಧನ್. ಸಾಮಾನ್ಯ ಹುಡುಗನಂತೆ ನಟನಾಗುವ ಹಾದಿಯಲ್ಲಿ ಸರ್ಕಸ್ಸು ನಡೆಸಿ ನಾಯಕ ನಟನಾಗಿ ಪ್ರೇಕ್ಷಕರನ್ನು ಸೆಳೆದುಕೊಂಡಿದ್ದಾರೆ. ಫ್ಲೈ ಅಂತೊಂದು ಸಿನಿಮಾ ಮೂಲಕ ನಾಯಕನಾಗಿ ಎಂಟ್ರಿ ಕೊಟ್ಟು, ಆ ನಂತರ ಹರಿ ಸಂತು ನಿರ್ದೇಶನದ ಬಿಚ್ಚುಗತ್ತಿಯ ಮೂಲಕ ಭರವಸೆ ಮೂಡಿಸಿದ್ದರು. ಆ ನಂತರದಲ್ಲಿ ಮತ್ತೊಂದು ಬಗೆಯ, ತಮ್ಮ ನೈಜ ಛಾಯೆಗೆ ಫೋಕಸ್ ಇರೋ ಪಾತ್ರಕ್ಕಾಗಿ ಹಂಬಲಿಸಿದ್ದ ಅವರಿಗೆ ಪ್ರಣಯಂ ವರದಂತೆ ಒಲಿದಿದೆ. ಈ ಚಿತ್ರದಲ್ಲಿ ನೈನಾ ಗಂಗೂಲಿ ರಾಜವರ್ಧನ್ಗೆ ನಾಯಕಿಯಾಗಿ ಜೊತೆಯಾಗಿದ್ದಾರೆ. ಈ ಟೀಸರ್ ಅಂತೂ ಭರವಸೆ ಮೂಡಿಸುವಂತಿದೆ.