ಸದ್ಯದ ಮಟ್ಟಿಗೆ ಎಲ್ಲಾ ವರ್ಗದ ಪ್ರೇಕ್ಷಕರೊಳಗೂ ಕೌತುಕದ ಕಂದೀಲೊಂದನ್ನು ಆರದಂತೆ ಕಾಪಿಟ್ಟುಕೊಂಡಿರುವ ಚಿತ್ರ `ಕಡಲ ತೀರದ ಭಾರ್ಗವ’. ಸಾಮಾನ್ಯವಾಗಿ ಯಶಸ್ವೀ ಸಿನಿಮಾಗಳದ್ದೊಂದು ಅನೂಹ್ಯವಾದ ಹೆಜ್ಜೆ ಜಾಡಿರುತ್ತೆ. ಈ ಸಿನಿಮಾ ಸಾಗಿ ಬಂದ ಹಾದಿಯ ತುಂಬೆಲ್ಲ ಅದರ ಛಾಯೆಗಳು ದಟ್ಟವಾಗಿಯೇ ಗೋಚರಿಸುತ್ತವೆ. ಟೀಸರ್, ಟ್ರೈಲರ್ ಮೂಲಕವೇ ಕಡಲ ತೀರದ ಭಾರ್ಗವ ಹುಟ್ಟು ಹಾಕಿರೋ ಕ್ರೇಜ್ ಇದೆಯಲ್ಲಾ? ಅದು ಎಂಥವರನ್ನೂ ಬೆರಗಾಗಿಸುವಂತಿದೆ. ಈ ಎಲ್ಲ ಪಲ್ಲಟಗಳ ಹಿಂದೆ ಒಂದಿಡೀ ಚಿತ್ರತಂಡದ ಶ್ರಮವಿದೆ. ಅದರಲ್ಲಿಯೂ ವಿಶೇಷವಾಗಿ ಈ ಸಿನಿಮಾದ ನಿರ್ದೇಶಕ ಪನ್ನಗ ಸೋಮಶೇಖರ್ ಅವರದ್ದು ಸಿಂಹಪಾಲೆಂಬುದರಲ್ಲಿ ಯಾವ ಸಂದೇಹವೂ ಇಲ್ಲ!
ಈಗಾಗಲೇ ಟೀಸರ್, ಟ್ರೈಲರ್, ಹಾಡುಗಳು ಸೇರಿದಂತೆ ಒಂದಷ್ಟು ಬಗೆಯಲ್ಲಿ ಕಡಲ ತೀರದ ಭಾರ್ಗವ ಪ್ರೇಕ್ಷಕರನ್ನು ಸೋಕಿದ್ದಾನೆ. ಈ ಅಷ್ಟೂ ನಡೆಯಲ್ಲಿಯೂ ನಿರ್ದೇಶಕ ಪನ್ನಗ ಸೋಮಶೇಖರ್ ಅವರ ಜಾಣ್ಮೆ ಎದ್ದು ಕಾಣಿಸುತ್ತದೆ. ಪ್ರಚಾರದ ಸಂದರ್ಭದಲ್ಲಿ ಹೇಗೆಲ್ಲ ಮುಂದುವರೆಯಬೇಕೆಂಬುದೂ ಒಂದು ಕಲೆ. ಕೆಲ ಮಂದಿಗೆ ಒಂದಷ್ಟು ದೂರ ಸಾಗಿದ ನಂತರವೂ ಅದು ದಕ್ಕುವುದಿಲ್ಲ. ಆದರೆ, ಪನ್ನಗ ಸೋಮಶೇಖರ್ ಅದನ್ನು ಮೊದಲ ಹೆಜ್ಜೆಯಲ್ಲಿಯೇ ಸರಿಕಟ್ಟಾಗಿ ಪಳಗಿಸಿಕೊಂಡಿದ್ದಾರೆ. ನಿಸ್ಸಂದೇಹವಾಗಿಯೂ ಅದರಲ್ಲಿ ಯಶಸ್ವಿಯಾಗಿದ್ದಾರೆ.
ಇದೊಂದು ಸೈಕಾಲಾಜಿಕಲ್ ಥ್ರಿಲ್ಲರ್ ಜಾನರಿನ ಚಿತ್ರ. ಹಾಗಂತ ಸಿದ್ಧಸೂತ್ರಗಳಿಗೆ ಯಾವ ಕೋನದಿಂದಲೂ ಒಳಪಡಿಸುವಂತಿಲ್ಲ ಎಂಬುದು ಖುದ್ದು ನಿರ್ದೇಶಕರ ಅಭಿಪ್ರಾಯ. ಯಾಕೆಂದರೆ, ಪನ್ನಗ ಸೋಮಶೇಖರ್ ಅದೆಷ್ಟೋ ವರ್ಷಗಳಿಂದ ಧ್ಯಾನಿಸಿಯೇ ಈ ಕಥೆಗೆ ಜೀವ ತುಂಬಿದ್ದಾರೆ. ಬದುಕೆಂಬುದು ಎತ್ತೆತ್ತಲೋ ಹೊಯ್ದಾಡಿಸಿದರೂ, ಅನಿವಾರ್ಯತೆಗಳ ಸುಳಿಗೆ ಸಿಕ್ಕಿಸಿ ನಕ್ಕರೂ, ಕಡೆಗೂ ತಮ್ಮ ಗುರಿಯ ತೆಕ್ಕೆಗೆ ಬಿದ್ದು ನಸುನಕ್ಕವರು ಪನ್ನಗ ಸೋಮಶೇಖರ್. ಮಾಡಿದರೆ, ಪುಷ್ಕಳ ಗೆಲುವು ಕಂಡು ನೆನಪಲ್ಲುಳಿಯುವಂಥಾ ಸಿನಿಮಾವನ್ನೇ ಮಾಡಬೇಕೆಂದ ದೃಢ ನಿಶ್ಚಯವೇ ಅವರನ್ನು ಗುರಿಯ ನೇರಕ್ಕೆ ತಂದು ನಿಲ್ಲಿಸಿದೆ. ಹಂಬಲವೆಂಬುದು ಆತ್ಮದಿಂದಲೇ ಪಡಿಮೂಡಿಕೊಂಡರೆ, ಅದಕ್ಕೆ ಪೂರಕವಾದ ಪ್ರಯತ್ನ ಒಂದಿದ್ದರೆ ಖಂಡಿತವಾಗಿಯೂ ಒಂದಿಡೀ ವಾತಾವರಣವೇ ಸಾಥ್ ಕೊಡುತ್ತದೆ. ಪನ್ನಗ ಅವರ ಬದುಕಿನ ಮಜಲುಗಳನ್ನು ನೋಡಿದರೆ ಆ ಮಾತು ನಿಜವೆನ್ನಿಸುತ್ತೆ!
ಮೂಲತಃ ಬೆಂಗಳೂರಿಗರೇ ಆದ ಪನ್ನಗ ಸೋಮಶೇಖರ್, ಈ ಮಹಾ ನಗರಿಯ ಬೆರಗುಗಳು, ಧಾವಂತಗಳನ್ನೆಲ್ಲ ಹೊತ್ತುಕೊಂಡೇ ಬೆಳೆದವರು. ಶಾಲಾ ಕಾಲೇಜು ದಿನಗಳಿಂದಲೇ ಸಿನಿಮಾಗಳತ್ತ ಅತೀವ ಆಸಕ್ತಿ ಹೊಂದಿ, ಬುದ್ಧಿ ಬಲಿಯುತ್ತಲೇ ಸಿನಿಮಾ ರಂಗದಲ್ಲಿ ಏನಾದರೊಂದು ಸಾಧಿಸಬೇಕೆಂಬ ಛಲವನ್ನು ಸಾಕಿಕೊಂಡವರು ಪನ್ನಗ ಸೋಮಶೇಖರ್. ಆದರೆ, ಹೆಚ್ಚಿನ ಬಾರಿ ಎದೆಯೊಳಗೆ ಊಟೆಯೊಡೆಯೋ ಕನಸು, ಬದುಕಿನ ಅನಿವಾರ್ಯತೆಗಳ ಇಕ್ಕಳಕ್ಕೆ ಸಿಲುಕಿ ನರಳುತ್ತದೆ. ಹಾಗೆಯೇ ಓದು ಮುಗಿಸಿದ ಪನ್ನಗ ಅವರಿಗೆ ಸಿನಿಮಾ ಕನಸಿದ್ದರೂ, ಉದ್ಯೋಗ ಅರಸೋ ಸಂದರ್ಭ ಸೃಷ್ಟಿಯಾಗಿತ್ತು. ಮೂರು ವರ್ಷಗಳ ಕಾಲ ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಾ, ಆ ಕಂಫರ್ಟ್ ಜೋನಿನಲ್ಲಿ ಕಳೆದು ಹೋಗಿದ್ದರೆ, ಬಹುಶಃ ಕಡಲ ತೀರದ ಭಾರ್ಗವ ಎಂಬ ಅಚ್ಚರಿಯೊಂದು ಸಾಧ್ಯವಾಗುತ್ತಿರಲಿಲ್ಲವೇನೋ…
ಎಲ್ಲವೂ ಪೂರಕವಾಗಿದ್ದರೂ ಸಿನಿಮಾ ಸೆಳೆತದಿಂದ ತಪ್ಪಿಸಿಕೊಳ್ಳಲಾಗದ ಪನ್ನಗ, ಕಡೆಗೂ ಒಂದು ದಿನ ಕೆಲಸ ಬಿಟ್ಟು ಸಿನಿಮಾದತ್ತ ಹೊರಳಿಕೊಳ್ಳುವ ಗಟ್ಟಿ ನಿರ್ಧಾರ ಮಾಡಿದ್ದರು. ಇಂಥಾ ನಿರ್ಧಾರ ತೆಗೆದುಕೊಳ್ಳುವಾಗ ಮನೆ ಮಂದಿಯ ಕಡೆಯಿಂದ ಮೊದಲು ವಿರೋಧ ವ್ಯಕ್ತವಾಗುತ್ತೆ. ಆದರೆ, ಪನ್ನಗ ಅವರ ಸಿನಿಮಾಸಕ್ತಿಯ ಬಗ್ಗೆ ಅರಿವಿದ್ದ ಪೋಶಕರು ಅವರ ನಿರ್ಧಾರವನ್ನು ಬೆಂಬಲಿಸಿದ್ದರು. ಹಾಗೆ ಕೆಲಸ ಬಿಟ್ಟು ವರ್ಷಾಂತರಗಳ ಕಾಲ ಶ್ರಮ ವಹಿಸಿ, ಫೀಲ್ಡ್ ವರ್ಕ್ ಮಾಡಿ ಕಥೆ ಸಿದ್ಧಪಡಿಸಿಕೊಂಡಾಗ ನಿರ್ಮಾಪಕರನ್ನು ಹುಡುಕೋ ಸವಾಲೆದುರಾಗಿತ್ತು. ಗಮನೀಯ ಅಂಶವೆಂದರೆ, ಈ ಸಿನಿಮಾದ ಹೀರೋ ಕಂ ನಿರ್ಮಾಪಕರುಗಳಾದ ಪಟೇಲ್ ವರುಣ್ ರಾಜ್ ಮತ್ತು ಭರತ್ ಗೌಡ ಪನ್ನಗರ ಬಾಲ್ಯ ಸ್ನೇಹಿತರು. ಆ ದೆಸೆಯಿಂದಲೇ ಪನ್ನಗ ಸಿದ್ಧಪಡಿಸಿದ್ದ ವಿಶಿಷ್ಟ ಕಥೆ ನಿರ್ಣಾಯಕ ಹಂತ ತಲುಪಿಕೊಂಡಿತ್ತು.
ಅದಾಗಲೇ ನಟರಾಗಬೇಕೆಂಬ ನಿಟ್ಟಿನಲ್ಲಿ ತಯಾರಿ ಆರಂಭಿಸಿದ್ದ ಪಟೇಲ್ ವರುಣ್ ರಾಜ್ ಹಣ ಹೂಡಲು ಮುಂದಾಗಿದ್ದರು. ಭರತ್ ಕೂಡಾ ಅದಕ್ಕೆ ಸಾಥ್ ಕೊಟ್ಟಿದ್ದರು. ಹೀಗೆ ಜೀವ ಪಡೆದ ಚಿತ್ರ ಕಡಲ ತೀರದ ಭಾರ್ಗವ. ಹಾಗಾದರೆ, ಪನ್ನಗ ಸೋಮಶೇಖರ್ ಯಾವ ಕಥೆಯೊಂದಿಗೆ ಈ ಸಿನಿಮಾವನ್ನು ರೂಪಿಸಿದ್ದಾರೆ? ಅದರ ವಿಶೇಷತೆಗಳೇನು ಎಂಬಿತ್ಯಾದಿ ಪ್ರಶ್ನೆಗಳು ಮೂಡಿಕೊಳ್ಳುವುದು ಸಹಜ. ಈ ಬಗ್ಗೆ ಅವರು ಒಂದಷ್ಟು ಇಂಟರೆಸ್ಟಿಂಗ್ ಆದ ವಿಚಾರಗಳನ್ನು ಬಿಚ್ಚಿಡುತ್ತಾರೆ. ಇದೊಂದು ಸೈಕಾಲಾಜಿಕಲ್ ಕಥಾ ಹಂದರದ ಚಿತ್ರವಾದ್ದರಿಂದ, ಎಲ್ಲೋ ಕುಳಿತು ಬರೆದು ಬಿಡುವ ಹಾಗಿರಲಿಲ್ಲ. ಅದಕ್ಕೊಂದಷ್ಟು ತಯಾರಿ, ಅಧ್ಯಯನ ಬೇಕಾಗಿತ್ತು. ವರ್ಷಗಳ ಕಾಲ ಶ್ರಮ ವಹಿಸಿ ಪನ್ನಗ ಅವರು ಅಂಥಾ ರೋಚಕ ಮಾಹಿತಿಗಳನ್ನು ಕಲೆ ಹಾಕಿದ್ದರು.
ಕಗ್ಗಲೀಪುರದ ಕಡಂಬಂಮ್ಸ್ ಆಸ್ಪತ್ರೆಗೆ ತೆರಳಿ, ಅಲ್ಲಿನ ವೈದ್ಯರನ್ನು ಭೇಟಿಯಾಗಿ ನಾನಾ ಆಯಾಮಗಳಲ್ಲಿ ಪನ್ನಗ ಚರ್ಚಿಸಿದ್ದರು. ರೋಗಿಗಳ ಮಾನಸಿಕ ಸ್ಥಿತಿಗತಿ ಮತ್ತು ವರ್ತನೆಗಳ ಬಗ್ಗೆ ವರ್ಷಾಂತರಗಳ ಕಾಲ ನಿಗಾ ಇಟ್ಟು ಅಧ್ಯಯನ ನಡೆಸಿದ್ದರಂತೆ. ಹಾಗೆ ಸಿಕ್ಕ ವಿವರಗಳು ಸದರಿ ಕಥೆಗೆ ಮತ್ತಷ್ಟು ಖದರ್ ತಂದುಕೊಟ್ಟಿದ್ದವು. ಇಂಥಾ ಅನೇಕ ವಿಚಾರಗಳಿಂದ ಸಿದ್ಧಗೊಂಡ ಈ ಕಥೆ ಸುಲಭಕ್ಕೆ ಕಲ್ಪನೆಗಳ ನಿಲುಕಿಗೆ ಸಿಗುವಂಥಾದ್ದಲ್ಲ. ಇಲ್ಲಿ ನಾನಾ ನಮೂನೆಗಳ ಮಾನಸಿಕ ಖಾಯಿಲೆಗಳಿದ್ದಾವೆ. ಮನಸಿಗಾದ ಗಾಯಗಳಿಗೆ ಮದ್ದು ಕೊಡೋ ಪ್ರಯತ್ನಗಳೂ ಸದಾ ಚಾಲ್ತಿಯಲ್ಲಿದೆ. ಅಂಥಾ ಊಹಾತೀತ ತುಮುಲಗಳು, ಭಾವನೆಯ ತಾಕಲಾಟಗಳು ಈ ಸಿನಿಮಾದಲ್ಲಿ ಅಡಕವಾಗಿವೆಯಂತೆ.
ಅಂದಹಾಗೆ, ಆರಂಭದಿಂದಲೇ ಕಡಲ ತೀರದ ಭಾರ್ಗವ ಎಂಬ ಶೀರ್ಷಿಕೆಯನ್ನೇ ಏಕೆ ನಿಕ್ಕಿ ಮಾಡಲಾಗಿದೆ ಅಂತೊಂದು ಪ್ರಶ್ನೆ ಪ್ರೇಕ್ಷಕರನ್ನೆಲ್ಲ ಬಿಟ್ಟೂಬಿಡದಂತೆಕಾಡಿತ್ತು. ಈ ಬಗ್ಗೆ ನಿರ್ದೇಶಕರು ನಿಖರವಾಗಿಯೇ ಸ್ಪಷ್ಟೀಕರಣ ನೀಡುತ್ತಾರೆ. ನಾಯಕ ಕಡಲ ತಡಿಯವನು ಅನ್ನುವ ಕಾರಣವನ್ನೂ ಮೀರಿಸುವ ಮತ್ತೊಂದು ಮಾಯೆ ಈ ಶೀರ್ಷಿಕೆಯ ಹಿಂದಿದೆ. ಸಾಮಾನ್ಯವಾಗಿ ಮನಸನ್ನು ಕಡಲಿಗೆ ಹೋಲಿಸಲಾಗುತ್ತೆ. ಯಾಕೆಂದರೆ, ಅಲ್ಲಿ ಏಳುವ ಅಲೆಗಳನ್ನು ಲೆಕ್ಕವಿಡಲಾಗೋದಿಲ್ಲ. ಅದರ ಮೂಲಕ್ಕೆ ಹೋದವರಿಲ್ಲ; ನಿಗೂಢಗಳಿಗೆ ಕಣ್ಣಾದವರಿಲ್ಲ. ಆದರೂ ನಿಖರವಾಗಿ ಅದೆಲ್ಲವನ್ನೂ ಗ್ರಹಿಸೋದು ಕಷ್ಟಸಾಧ್ಯ. ಹೀಗೆ ಕಡಲಿಗೂ ಮನಸಿಗೂ ಸಂಬಂಧವಿರೋದರಿಂದಲೇ ಈ ಸಿನಿಮಾಗೆ ಸದರಿ ಶೀರ್ಷಿಕೆಯನ್ನಿಡಲಾಗಿದೆಯಂತೆ. ಸಾಕಷ್ಟು ವೈಶಿಷ್ಟ್ಯಗಳನ್ನು ಒಡಲಲ್ಲಿಟ್ಟುಕೊಂಡಿರುವ, ಈಗಾಗಲೇ ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿರುವ ಕಡಲ ತೀರದ ಭಾರ್ಗವ ಈ ವಾರ ಅಂದರೆ ಮಾರ್ಚ್ 3ರಂದು ತೆರೆಗಾಣಲಿದೆ!