ಸಿಕ್ಕ ಪಬ್ಲಿಸಿಟಿ, ಯಶಸ್ಸುಗಳನ್ನು ಮೆರೆದಾಟದ ಅಸ್ತ್ರವಾಗಿಸಿಕೊಂಡ ಅನೇಕರು ನಾನಾ ಚಿತ್ರರಂಗದಲ್ಲಿ ಯಥೇಚ್ಛವಾಗಿಯೇ ಕಾಣ ಸಿಗುತ್ತಾರೆ. ಅಂಥವರೆಲ್ಲ ಹೇಳ ಹೆಸರಿಲ್ಲದಂತೆ ನೇಪಥ್ಯಕ್ಕೆ ಸರಿದಿದ್ದಾರೆ. ಆದರೆ, ಹಿಡಿತ ತಪ್ಪಿದ ಬದುಕು, ತನ್ನನ್ನೇ ಅಪಾದಮಸ್ತಕ ನುಂಗಿದಂತಿದ್ದ ನಾನಾ ಚಟಗಳು ಮತ್ತು ಅವುಗಳ ಫಲವಾಗಿಯೇ ಸಿಕ್ಕ ಜೈಲು ವಾಸ… ಇಂಥಾ ನಾನಾ ಪೆಟ್ಟುಗಳನ್ನು ಬದಲಾವಣೆಯ ಮೆಟ್ಟಿಲಾಗಿಸಿಕೊಂಡು, ಓರ್ವ ನಟನಾಗಿ ಮರುಹುಟ್ಟು ಪಡೆದುಕೊಂಡಿರುವಾತ ಸಂಜಯ್ ದತ್. ಸದ್ಯಕ್ಕೆ ವಿಲನ್ ಅವತಾರವೆತ್ತಿರೋ ಸಂಜು ಬಾಬಾಗೆ ಕನ್ನಡವೂ ಸೇರಿದಂತೆ ನಾನಾ ಭಾಷೆಗಳಲ್ಲಿ ಬೇಡಿಕೆ ತೀವ್ರಗೊಂಡಿದೆ.
ಅದಾಗಲೇ ಸಂಜುಬಾಬಾ ಯಾವ ಭಾಷೆಗಳಲ್ಲಿ ನಟಿಸಿದ್ದರೋ ಗೊತ್ತಿಲ್ಲ; ಆದರೆ ಕನ್ನಡದ ಕೆಜಿಎಫ್ನಲ್ಲಿ ಅಧೀರನ ಪಾತ್ರ ನಿರ್ವಹಿಸಿದರು ನೋಡಿ? ಆತನ ಖದರ್ ಮತ್ತಷ್ಟು ಫಳಗುಟ್ಟಲಾರಂಭಿಸಿದೆ. ವಿಶೇಷವೆಂದರೆ ಸಂಜಯ್ ದತ್ಗೆ ದಕ್ಷಿಣ ಭಾರತೀಯ ಚಿತ್ರರಂಗದಿಂದಲೇ ಹೆಚ್ಚೆಚ್ಚು ಆಫರ್ಗಳು ಬರುತ್ತಿವೆ. ಅವೆಲ್ಲವೂ ಕೂಡಾ ವಿಲನ್ಗಿರಿಯ ಪಾತ್ರಗಳೇ. ಈ ಸೆಕೆಂಡ್ ಹಾಫ್ನಲ್ಲಿ ನಾಯಕನಾಗಿ ನಟಿಸಿ, ತಕ್ಕ ಪಾತ್ರ ಸಿಗದೆ ನಗೆಪಾಟಲಿಗೀಡಾಗೋದಕ್ಕಿಂತ, ವಿಲನ್ ಪಾತ್ರಗಳನ್ನು ಮಾಡಿ ಮನಸಲ್ಲುಳಿಯೋದೇ ವಾಸಿ ಎಂಬ ತೀರ್ಮಾನಕ್ಕೆ ಸಂಜಯ್ ಬಂದಂತಿದೆ.
ಸದ್ಯದ ಮಟ್ಟಿಗೆ ವಿಲನ್ ಪಾತ್ರಗಳಲ್ಲಿಯೂ ವಿಶಿಷ್ಟವಾಗಿರುವ, ಚಾಲೆಂಜಿಂಗ್ ಅನಿಸುವ ಪಾತ್ರಗಳೇ ಸಂಜಯ್ರನ್ನು ಅರಸಿ ಬರಲಾರಂಭಿಸಿವೆ. ಈಗಾಗಲೇ ಮೂರು ಅವತರಣಿಕೆಯಲ್ಲಿ ಬಂದು ಯಶ ಕಂಡಿರುವ ಹೇರಾಫೇರಿ ಚಿತ್ರದ ನಾಲ್ಕನೇ ಆವೃತ್ತಿಯಲ್ಲಿ ಸಂಜಯ್ ದತ್ ವಿಲನ್ ಆಗಲು ಸಹಿ ಮಾಡಿದ ಸುದ್ದಿಯೊಂದು ಹೊರ ಬಿದ್ದಿದೆ. ಆ ಪಾತ್ರ ನಿಜಕ್ಕೂ ವಿಶೇಷವಾಗಿದೆಯಂತೆ. ಇನ್ನುಳಿದಂತೆ ಕೆಜಿಎಫ್ ನಂತರದಲ್ಲಿ ಕೇಡಿ ಚಿತ್ರದ ಮೂಲಕ ಸಂಜಯ್ ದತ್ ಮತ್ತೆ ವಿಲನ್ ಆಗಿ ಕನ್ನಡಕ್ಕೆ ಮರಳಲಿದ್ದಾರೆ. ನಿರ್ದೇಶಕ ಪ್ರೇಮ್ ಸಂಜುಬಾಬಾಗಾಗಿಯೇ ಚೆಂದದ್ದೊಂದು ಪಾತ್ರ ಸೃಷ್ಟಿಸಿದ್ದಾರಂತೆ. ಅಂತೂ ಸಂಜಯ್ ದತ್ ಇದೀಗ ವಿಲನ್ಗಿರಿಯ ಮೂಲಕ ಅಡಿಗಡಿಗೆ ಪ್ರೇಕ್ಷಕರನ್ನು ಮುಖಾಮುಖಿಯಾಗುತ್ತಿದ್ದಾರೆ!