ನಮ್ಮಲ್ಲಿರೋದು ಪ್ರಜಾಪ್ರಭುತ್ವ, ಇಲ್ಲಿ ಪ್ರಜೆಗಳೇ ಪ್ರಭುಗಳು ಎಂಬಿತ್ಯಾದಿ ಸವಕಲು ಸ್ಲೋಗನ್ನುಗಳಿವೆಯಲ್ಲಾ? ಅದೇನಿದ್ದರೂ ಜನಪ್ರತಿನಿಧಿಗಳೆಂಬೋ ಫಟಿಂಗರ ನಾಲಿಗೆ ಕೆರೆತ ನಿವಾರಿಸುವ ಮೂಲಿಕೆಯಾಗಿಯಷ್ಟೇ ಬಳಕೆಯಾಗುತ್ತಿದೆ. ಜನರಿಂದ ಆಯ್ಕೆಯಾಗಿ ಅಧಿಕಾರ ಕೇಂದ್ರ ತಲುಪಿಕೊಂಡ ಖಾದಿಗಳು, ಪಟ್ಟಾಗಿ ಕೂತು ಓದಿ ಅಧಿಕಾರಿಗಳಾದವರ ಬೂಟುಗಾಲುಗಳ ಪ್ರಮುಖ ಗುರಿ ಈ ನೆಲದ ಬಾಯಿ ಸತ್ತ ಮುಗ್ಧರೇ ಎಂಬುದು ಕರಾಳ ಸತ್ಯ. ಈ ಮಾತಿಗೆ ಅಪವಾದವೆಂಬಂತಿರುವ ಜನಪ್ರತಿನಿಧಿಗಳು, ಅಧಿಕಾರಿಗಳಿರಬಹುದಾದರೂ ಅಂಥವರ ಧ್ವನಿಗೂ ಇಲ್ಲಿ ಕಿಮ್ಮತ್ತಿಲ್ಲ. ಇಂಥಾ ದುಷ್ಟ ವ್ಯವಸ್ಥೆಯ ನಗ್ನ ಸತ್ಯವೊಂದಕ್ಕೆ ದೃಷ್ಯ ರೂಪ ಬಂದಂತಿರೋ ಚಿತ್ರ `ಗೌಳಿ’. ದೊಡ್ಡ ಮಟ್ಟದಲ್ಲಿ ಭರವಸೆ ಮೂಡಿಸಿದ್ದ ಈ ಸಿನಿಮಾವೀಗ ಬಿಡುಗಡೆಗೊಂಡಿದೆ!
ಅಷ್ಟಕ್ಕೂ ಗೌಳಿ ಈ ಪರಿಯಲ್ಲಿ ನಿರೀಕ್ಷೆ ಮೂಡಿಸಿರೋದರ ಹಿಂದೆ ನಾನಾ ಕಾರಣಗಳಿದ್ದವು. ಒಂದು ಕಡೆಯಲ್ಲಿ ಬಿಸಿ ನೆತ್ತರ ಹುಡುಗ ಸೂರ, ಹಸಿ ಹಸೀ ಕಥೆಯೊಂದರ ಸಾರಥ್ಯ ವಹಿಸಿದ ಸುಳಿವು, ಆರಕ್ಕೇರದೆ ಮೂರಕ್ಕಿಳಿಯದ ಸ್ಥಿತಿಯಲ್ಲಿದ್ದ ಶ್ರೀನಗರ ಕಿಟ್ಟಿಯ ರಗಡ್ ಲುಕ್ಕು ಮತ್ತು ಒಂದೇ ಏಟಿಗೆ ಪ್ಯಾನಿಂಡಿಯಾ ಮಟ್ಟ ಮುಟ್ಟುವಂತಿದ್ದ ಮೇಕಿಂಗ್ ವೈಖರಿ… ಹೀಗೆ ಹೆಜ್ಜೆ ಹೆಜ್ಜೆಗೂ ಸಂಚಲನ ಸೃಷ್ಟಿಸುತ್ತಾ ಸಾಗಿ ಬಂದಿದ್ದ ಈ ಚಿತ್ರಕ್ಕೆ ಚೆಂದದ ಓಪನಿಂಗ್ ಸಿಕ್ಕಿದೆ. ಒಂದಷ್ಟು ಕೊರತೆಗಳಾಚೆಗೂ ಇಷ್ಟವಾಗುವಂತೆ ಮೂಡಿ ಬಂದಿರುವ ಗೌಳಿ ನೆಲದ ಘಮಲಿನ ಕಥೆಯ ಜೊತೆ ಗುಟುರು ಹಾಕಿದ್ದಾನೆ!
ಪಟ್ಟಣದ ಚಹರೆಗಳ ಸೋಂಕಿಲ್ಲದೆ ಮೈತುಂಬಿಕೊಂಡಿರುವ ಊರುಗಳು ಕರ್ನಾಟಕದಲ್ಲಿ ಸಾಕಷ್ಟಿವೆ. ಕಾಡಿಗೆ ಆತುಕೊಂಡಂತಿರುವ ಭೂಭಾಗಗಳಲ್ಲಿ ತಮ್ಮದೇ ವೃತ್ತಿ ಮಾಡುತ್ತಾ, ಬದುಕಲು ಬೇಕಾಗುವಷ್ಟೇ ಕಾಸು ಹೊಂದಿಸಿಕೊಂಡು, ಇದ್ದುದರಲ್ಲಿಯೇ ಹಸನಾಗಿ ಬದುಕೋ ಬುಡಕಟ್ಟು ಜನಾಂಗಗಳೂ ಇದ್ದಾವೆ. ಆ ಸಾಲಿನಲ್ಲಿ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಸೀಮೆಯಲ್ಲಿರುವ ಗೌಳಿಗರೂ ಸೇರಿಕೊಳ್ಳುತ್ತಾರೆ. ದನ, ಕರು, ಎಮ್ಮೆಗಳ ಸಾಕಾಣಿಕೆ ಮತ್ತು ಹಾಲು ಮಾರಾಟವೇ ಈ ಜನರ ಜೀವನದ ಮೂಲ. ಅಂಥಾ ಜನಾಂಗದ ಕಥನವನ್ನ ಮನಮುಟ್ಟುವಂತೆ ಕಟ್ಟಿ ಕೊಡುವಲ್ಲಿ ನಿರ್ದೇಶಕ ಸೂರ ಗೆದ್ದಿದ್ದಾರೆ. ಇದುವರೆಗಿನ ಕೆಲ ಸುಳಿವುಗಳ ಆಧಾರದಲ್ಲಿ ಗೌಳಿ ಎಂಬುದೊಂದು ರಗಡ್ ಕಥಾನಕ ಅಂದುಕೊಂಡು ಸಿನಿಮಾ ಮಂದಿರ ಹೊಕ್ಕವರಿಗೆ ಹಾಯಾದೊಂದು ಸರ್ಪ್ರೈಸ್ ಎದುರಾಗುತ್ತೆ. ಯಾಕೆಂದರೆ, ಕಣ್ಣಿಗೆ ಹಬ್ಬವಾಗಿ ಮನಸಿಗಿಳಿದು ಬಿಡುವ ವಾತಾವರಣದ ಹಿನ್ನೆಲೆಯಲ್ಲಿ ಸಾಂಸಾರಿಕ ಕಥೆಯೊಂದು ಗರಿಬಿಚ್ಚಿಕೊಳ್ಳುತ್ತೆ. ಗಂಡ ಹೆಂಡತಿ, ಪುಟ್ಟದೊಂದು ಕೂಸು ಮತ್ತು ಚಿಕ್ಕಪ್ಪನ ಪಾತ್ರಗಳ ಸುತ್ತ ಕದಲುವುವ ಮೊದಲಾರ್ಧ, ಅಧಿಕಾರಸ್ಥ ದುಷ್ಟರ ಕಾಕದೃಷ್ಟಿ ಬೀಳುವ ಮೂಲಕ ಮಹತ್ತರ ತಿರುವು ಪಡೆದುಕೊಳ್ಳುತ್ತೆ.
ಯಾವ ಕೆಡುಕಿನ ಪಸೆಯೂ ಇಲ್ಲದ ಆ ಊರಲ್ಲಿ ನಡೆಯೋ ಯುವತಿಯೊಬ್ಬಳ ಮೇಲಿನ ಅತ್ಯಾಚಾರ, ಪೊಲೀಸ್ ಅಧಿಕಾರಿಯ ದಬ್ಬಾಳಿಕೆ, ಗೌಳಿಯ ರೂಪವಂತ ಮಡದಿಯ ಮೇಲೇ ಕಣ್ಣಿಡುವಂಥಾ ಖಾಖಿಯೊಳಗಿನ ಕೀಚಕ ಬುದ್ಧಿ… ಒಟ್ಟಾರೆಯಾಗಿ ನೋಡ ನೋಡುತ್ತಲೇ ಕಥೆ ಮತ್ತೊಂದು ಆಯಾಮದತ್ತ ಹೊರಳಿಕೊಳ್ಳುತ್ತೆ. ತಾನಾಯಿತು ತನ್ನ ಪುಟ್ಟ ಜಗತ್ತಾಯಿತು ಎಂಬಂತಿದ್ದ ಮುಗ್ಧ ಗೌಳಿಗೆ ಗೂಳಿಯಾಗದೆ ಬೇರೆ ದಾರಿ ಉಳಿಯೋದಿಲ್ಲ. ಹಾಗೆ ಗೂಳಿಯಾದ ಗೌಳಿ ದುಷ್ಟತನದ ಪಕ್ಕೆಗೆ ಗುಮ್ಮುತ್ತಾನೆ. ಈ ಹಂತದಲ್ಲಿ ಯಥೇಚ್ಛವಾಗಿ ಮಾಸ್ ದೃಷ್ಯಾವಳಿಗಳು ರಂಗೇರುತ್ತವೆ. ಅಲ್ಲಿ ಕಣ್ಣೀರು ಜಿನುಗುತ್ತದೆ. ಅದಕ್ಕೆ ನೆತ್ತರು ಬೆರೆಯುತ್ತದೆ. ಔಭಾವ ತೀವ್ರತೆಯಲ್ಲಿ ದೃಷ್ಯಗಳು ತೋಯುತ್ತವೆ. ಅಂಥಾ ಆದ್ರ್ರ ಭಾವಗಳೆಲ್ಲವೂ ಒಂದಿನಿತೂ ಮುಕ್ಕಾಗದಂತೆ ನೋಡುಗರ ಮನಸಿಗೆ ಸೀದಾ ದಾಟಿಕೊಳ್ಳುತ್ತವೆ. ಅದನ್ನೇ ಗೌಳಿಯ ನಿಜವಾದ ಸಾರ್ಥಕತೆ ಎನ್ನಲಡ್ಡಿಯಿಲ್ಲ!
ನಿಜ, ಇಲ್ಲಿನ ಒಂದಷ್ಟು ಸನ್ನಿವೇಷಗಳನ್ನು ಬೇರೆಯದ್ದೇ ರೀತಿಯಲ್ಲಿ ನಿಭಾಯಿಸಬಹುದೆನ್ನಿಸುತ್ತೆ. ಆದರೆ ಅಂಥಾ ಕಂಪ್ಲೇಂಟುಗಳನ್ನೆಲ್ಲ ಮರೆಮಾಚುವಂತೆ ನಿರ್ದೇಶಕ ಸೂರ ಆಯಕಟ್ಟಿನ ಜಾಗಳಲ್ಲಿ ಮ್ಯಾಜಿಕ್ಕು ಮಾಡಿದ್ದಾರೆ. ಒಂದಿಡೀ ಕಥೆ ತೀವ್ರತೆ ಕಳೆದುಕೊಳ್ಳದಂತೆ ನೋಡಿಕೊಂಡಿರುವ ರೀತಿ, ಈ ಕ್ಷಣಕ್ಕೂ ಪ್ರಸ್ತುತವೆನ್ನಿಸುವಂತೆ, ಆಕ್ರೋಶವೆಂಬುದು ಪಾತ್ರಗಳ ಕಣ್ಣಿಂದ ನೋಡುಗರ ಮನಸಿಗೂ ನೇರವಾಗಿ ನಾಟಿಕೊಳ್ಳುವಂತೆ ದೃಷ್ಯ ಕಟ್ಟುವಲ್ಲಿ ನಿರ್ದೇಶಕರು ನಿಜಕ್ಕೂ ಭರವಸೆ ಮೂಡಿಸುತ್ತಾರೆ. ಮೆಚ್ಚುಗೆಗೆ ಪಾತ್ರರಾಗುತ್ತಾರೆ. ಇಲ್ಲಿನ ಪ್ರತೀ ಪಾತ್ರಗಳೂ ಕಾಡುತ್ತವೆ. ನಮ್ಮ ನಡುವಿನ ವಾಸ್ತವಿಕ ವಾತಾವರಣಕ್ಕೆ ತಾಳೆಯಾಗುತ್ತವೆ.
ಇನ್ನು ನಟನೆಯ ವಿಚಾರಕ್ಕೆ ಬಂದರೆ ಒಬ್ಬರನ್ನೊಬ್ಬರು ಮೀರಿಸುವಂತೆ ಕಲಾವಿದರೆಲ್ಲ ಅಭಿನಯಿಸಿದ್ದಾರೆ. ವಿಶೇಷವಾಗಿ ಶ್ರೀನಗರ ಕಿಟ್ಟಿ ಹೇಗೆ ನಟಿಸಿರಬ ಹುದೆಂಬ ಕುತೂಹಲ ಎಲ್ಲರಲ್ಲಿತ್ತು. ಅವರೊಳಗಿನ ನಿಜವಾದ ಕಲಾವಿದನಿಲ್ಲಿ ಮುಗ್ದ ಗೌಳಿಯಾಗಿ ಮನಗೆಲ್ಲುತ್ತಾನೆ. ಥೇಟು ಗೂಳಿಯಂತೆ ಅಬ್ಬರಿಸಿ ಅಚ್ಚರಿ ಮೂಡಿಸುತ್ತಾನೆ. ಒಂದಷ್ಟು ಕಾಲದಿಂದ ಮರೆಗೆ ಸರಿದಂತಿದ್ದ ಕಿಟ್ಟಿ ಪಾಲಿಗೆ ಇದೊಂದು ಮಹತ್ವದ ಚಿತ್ರ. ಅವರು ದೊಡ್ಡ ಮಟ್ಟದಲ್ಲಿಯೇ ಗೌಳಿಯ ನಂತರ ಮಿಂಚುವ ಎಲ್ಲ ಲಕ್ಷಣಗಳೂ ಗೋಚರಿಸುತ್ತಿವೆ. ಇನ್ನುಳಿದಂತೆ ಪೊಲೀಸ್ ಅಧಿಕಾರಿಯಾಗಿ ನಟಿಸಿರುವ ಶರತ್ ಲೋಹಿತಾಶ್ವರದ್ದೂ ಕೂಡಾ ಗಮನಾರ್ಹ ನಟನೆ. ಕಳೆದೇ ಹೋದಂತಿದ್ದ ಪಾವನಾಗಿಲ್ಲಿ ಒಂದೊಳ್ಳೆ ಪಾತ್ರ ಸಿಕ್ಕಿದೆ. ಅದನ್ನಾಕೆ ಚೆಂದಗೆ ನಟಿಸಿದ್ದಾಳೆ. ಗೌಳಿಯ ಚಿಕ್ಕಪ್ಪನಾಗಿ ನಟಿಸಿದ ರಂಗಾಯಣ ರಘು ಬಹು ಕಾಲದ ನಂತರ ಹೊಸಾ ಲುಕ್ಕಿನಲ್ಲಿ ಮತ್ತೆ ಪ್ರೇಕ್ಷಕರ ಮನಗೆದ್ದಿದ್ದಾರೆ.
ಒಟ್ಟಾರೆಯಾಗಿ, ಒಂದಷ್ಟು ಅತೀ ಅನ್ನಿಸುವಂಥಾ ಅಬ್ಬರ, ತರ್ಕಕ್ಕೆ ನಿಲುಕದ ಕೆಲವಾರು ಸಂಗತಿಗಳಾಚೆಗೂ ಗೌಳಿ ಇಷ್ಟವಾಗುವಂತಿದೆ. ಥಿಯೇಟರ್ ಫೀಲ್ ಅನ್ನು ಮೊಗೆಮೊಗೆದು ಕೊಡುವಂತಿರುವ ಗೌಳಿ ಮೇಕಿಂಗ್ನಲ್ಲೂ ಗಮನ ಸೆಳೆಯುತ್ತದೆ. ಅದರ ಸಂಪೂರ್ಣ ಕ್ರೆಡಿಟ್ಟು ನಿರ್ಮಾಪಕ ರಘು ಸಿಂಗಂ ಅವರಿಗೆ ಸಲ್ಲುತ್ತದೆ. ಒಳ್ಳೆ ಕಲಾವಿದನಾದರೂ ಸರಿಯಾದ್ದೊಂದು ಬ್ರೇಕ್ ಸಿಗದೆ ಪರಿತಪಿಸುತ್ತಿದ್ದವರು ಶ್ರೀನಗರ ಕಿಟ್ಟಿ. ಅವರ ನಸೀಬು ಗೌಳಿಯ ಮೂಲಕ ಕಳೆಗಟ್ಟಿಕೊಂಡರೆ ಅದರಲ್ಲಿ ಅಚ್ಚರಿಯೇನೂ ಇಲ್ಲ. ನವ ನಿರ್ದೇಶಕ ಸೂರಾ ಕೂಡಾ ಕನ್ನಡ ಚಿತ್ರರಂಗಕ್ಕೆ ಹೊಸಾ ದಿಕ್ಕು ತೋರಬಲ್ಲ ಪ್ರತಿಭೆ ಎಂಬುದೂ ಈ ಮೂಲಕ ಸಾಬೀತಾಗಿದೆ. ಎಲ್ಲ ವರ್ಗದ ಪ್ರೇಕ್ಷಕರಿಗೂ ಇಷ್ಟವಾಗಬಲ್ಲ ಗೌಳಿಯನ್ನು ನೀವೂ ಒಮ್ಮೆ ಕಣ್ತುಂಬಿಕೊಳ್ಳಿ!