ಇದು ಹೇಳಿಕೇಳಿ ಪ್ಯಾನಿಂಡಿಯಾ ಸಿನಿಮಾಗಳ ಜಮಾನ. ಬರೀ ಬಾಯಿಮಾತಿಗೆ ಸೀಮಿತವಾಗದೆ ಕಂಟೆಂಟಿನ ಕಸುವಿನಿಂದಲೇ ಇಂಥಾ ಅರ್ಹತೆ ಪಡೆದುಕೊಂಡ, ದೇಶ ಮಟ್ಟದಲ್ಲಿ ಬಿಡುಗಡೆಗೆ ಸಜ್ಜುಗೊಂಡಿರುವ ಒಂದಷ್ಟು ಸಿನಿಮಾಗಳಿದ್ದಾವೆ. ಆ ಸಾಲಿಗೆ ಸೇರ್ಪಡೆಗೊಳ್ಳುವ ಚಿತ್ರ ಗದಾಯುದ್ಧ. ಪ್ರಚಾರದ ಪಟ್ಟುಗಳಿಲ್ಲದೆ, ತನ್ನ ಆಂತರ್ಯದ ವೈಶಿಷ್ಟ್ಯದ ಸುಳಿವುಗಳಿಂದಲೇ ಈ ಚಿತ್ರ ಒಂದಷ್ಟು ಚರ್ಚೆ ಹುಟ್ಟು ಹಾಕಿದೆ. ಈ ಮೂಲಕ ಸಿನಿಮಾಸಕ್ತರ ಗಮನ ಗದಾಯುದ್ಧದತ್ತ ಹೊರಳಿಕೊಂಡಿದೆ. ಗದಾಯುದ್ಧವೆಂಬುದು ಚಿರಪರಿಚಿತ ವಿಚಾರ. ಅಂಥಾದ್ದೊಂದು ಪರಿಚಿತ ಶೀರ್ಷಿಕೆಯಡಿಯಲ್ಲಿ ಯಾವ ಥರದ ಕಥೆ ಹೇಳಲಾಗಿದೆ? ಒಟ್ಟಾರೆ ಚಿತ್ರದ ರೂಪುರೇಷೆಗಳೇನು, ವಿಶೇಷತೆಗಳೇನು? ಎಂಬಿತ್ಯಾದಿ ಪ್ರಶ್ನೆಗಳಿಗೆ ಒಂದಷ್ಟು ಸ್ವಾರಸ್ಯಕರ ಉತ್ತರಗಳು ಎದುರುಗೊಳ್ಳುತ್ತವೆ!
ಅಂದಹಾಗೆ, ಗದಾಯುದ್ಧ ಶ್ರೀವತ್ಸ ನಿರ್ದೇಶನದಲ್ಲಿ ಮೂಡಿ ಬಂದಿರುವ ಚಿತ್ರ. ಎರಡು ದಶಕಗಳಿಗೂ ಹೆಚ್ಚು ಕಾಲ ಕಿರುತೆರೆ ಮತ್ತು ಚಿತ್ರರಂಗದ ಭಾಗವಾಗಿದ್ದ ಶ್ರೀವತ್ಸ, ಹಲವು ಘಟಾನುಘಟಿ ನಿರ್ದೇಶಕರುಗಳ ಗರಡಿಯಲ್ಲಿ ಪಳಗಿಕೊಂಡಿದ್ದಾರೆ. 2015ರಲ್ಲಿ ಪ್ರಜ್ವಲ್ ದೇವರಾಜ್ ನಾಯಕನಾಗಿ ನಟಿಸಿದ್ದ ಮೃಗಶೀರ ಅಂತೊಂದು ಸಿನಿಮಾ ತೆರೆಗಂಡಿತ್ತಲ್ಲಾ? ಅದನ್ನು ನಿರ್ದೇಶನ ಮಾಡಿದ್ದವರು ಇದೇ ಶ್ರೀವತ್ಸ. ನಾನಾ ದಿಕ್ಕಿನಲ್ಲಿ ಗಮನ ಸೆಳೆದಿದ್ದ, ಮೆಚ್ಚುಗೆ ಗಳಿಸಿಕೊಂಡಿದ್ದ ಆ ಚಿತ್ರದ ಮೂಲಕ ಶ್ರೀವತ್ಸ ಸ್ವತಂತ್ರ ನಿರ್ದೇಶಕರಾಗಿದ್ದರು. ಆ ನಂತರ ಸುಧೀರ್ಘ ಕಾಲಾವಧಿಯಲ್ಲಿ, ಸಕಲ ತಯಾರಿಗಳನ್ನೂ ಮಾಡಿಕೊಂಡೇ ಅವರು ಗದಾಯುದ್ಧವನ್ನು ರೂಪಿಸಿದ್ದಾರೆ.
ಹಾಗಾದರೆ, ಗದಾಯುದ್ಧ ಯಾವ ಜಾನರಿನ ಚಿತ್ರ? ಎಂಬ ಪ್ರಶ್ನೆಯೊಂದು ಸಹಜವಾಗಿಯೇ ಮೂಡಿಕೊಳ್ಳುತ್ತದೆ. ಈ ವಿಚಾರದಲ್ಲಿ ನಿರ್ದೇಶಕರು ಒಂದಷ್ಟು ಆಸಕ್ತಿಕರವಾದ ವಿಚಾರಗಳನ್ನು ಬಿಚ್ಚಿಡುತ್ತಾರೆ. ಆ ಪ್ರಕಾರವಾಗಿ ಹೇಳುವುದಾದರೆ, ಇದೊಂದು ಸೈನ್ಸ್ ಫಿಕ್ಷನ್ ಚಿತ್ರ. ವಾಮಾಚಾರ, ಕೊಲೆ ಮುಂತಾದವುಗಳ ಸುತ್ತ ಸುತ್ತುವ ಭಿನ್ನ ಕಥಾನಕ ಗದಾಯುದ್ಧದಲ್ಲಿದೆ. ವಾಮಾಚಾರವೆಂಬುದೇ ಒಂದು ಮೌಢ್ಯ ಎಂಬಂತೆ ಬಿಂಬಿತವಾಗಿದೆ. ಆದರೆ, ಈ ಸಿನಿಮಾದಲ್ಲಿ ವಾಮಾಚಾರದಲ್ಲಿರುವ ವೈಜ್ಞಾನಿಕ ಸತ್ಯಗಳಿಗೂ ಕನ್ನಡಿ ಹಿಡಿಯಲಾಗಿದೆಯಂತೆ!
ಸುಮಿತ್ ಎಂಬ ಹೊಸಾ ಪ್ರತಿಭೆ ಗದಾಯುದ್ಧದ ಮೂಲಕ ನಾಯಕನಾಗಿ ಎಂಟ್ರಿ ಕೊಡಲಿದ್ದಾನೆ. ಈಗಾಗಲೇ ಒಂದಷ್ಟು ಸಿನಿಮಾಗಳಲ್ಲಿ ನಟಿಸಿರುವ ದಿಶಾ ಪೂವಯ್ಯ ನಾಯಕಿಯಾಗಿ ನಟಿಸಿದ್ದಾಳೆ. ಈಕೆ ಎಡು ಶೇಡುಗಳಿರುವ ಭಿನ್ನವಾದ ಪಾತ್ರಕ್ಕೆ ಜೀವ ತುಂಬಿದ್ದಾಳಂತೆ. ಇನ್ನುಳಿದಂತೆ ವಿಶಿಷ್ಟವಾದ ಪಾತ್ರಗಳಿಗೆ ಘಟಾನುಘಟಿ ಕಲಾವಿದರು ಜೀವ ತುಂಬಿದ್ದಾರೆ. ಇದೀಗ ಗದಾಯುದ್ಧ ಸಂಪೂರ್ಣವಾಗಿ ಬಿಡುಗಡೆಗೆ ತಯಾರಾಗಿ ನಿಂತಿದೆ. ಕಬ್ಜಾ ಚಿತ್ರ ಬಿಡುಗಡೆಯಾದ ನಂತರ ಒಂದೊಳ್ಳೆ ಮುಹೂರ್ತ ನೋಡಿ ಗದಾಯುದ್ಧವನ್ನು ತೆರೆಗಾಣಿಸಲು ಆಲೋಚಿಸಲಾಗಿದೆ. ಅಂತೂ ಪ್ಯಾನಿಂಡಿಯಾ ಲೆವೆಲ್ಲಿನ ಕಬ್ಜಾದ ಬೆನ್ನಲ್ಲಿಯೇ ಮತ್ತೊಂದು ಪ್ಯಾನಿಂಡಿಯಾ ಚಿತ್ರ ಗದಾಯುದ್ಧ ಆರ್ಭಟಿಸಲಿರೋದು ಗ್ಯಾರೆಂಟಿ!