ಒಂದಷ್ಟು ಪ್ರಯೋಗ, ಪ್ರತೀ ಹೆಜ್ಜೆಯಲ್ಲಿಯೂ ಪಡಿಮೂಡಿಕೊಳ್ಳುವ ಹೊಸತನವಿಲ್ಲದೇ ಹೋದರೆ ಚಿತ್ರರಂಗವೆಂಬುದು ಅಕ್ಷರಶಃ ನಿಂತ ನೀರಿನಂತಾಗಿ ಬಿಡುತ್ತೆ. ಖುಷಿಯ ಸಂಗತಿಯೆಂದರೆ, ಇಲ್ಲಿನ ಕ್ರಿಯಾಶೀಲ ಮನಸುಗಳು ಆಗಾಗ ಚೌಕಟ್ಟಿನಾಚೆಗೆ ಹೊರಳಿಕೊಳ್ಳುತ್ತವೆ; ಮಹತ್ತರವಾದುದೇನನ್ನೋ ಪ್ರೇಕ್ಷಕರ ಮುಂದಿಟ್ಟು ಅಚ್ಚರಿ ಮೂಡಿಸುತ್ತವೆ. ಅಂಥಾ ಕ್ರಿಯಾಶೀಲ ಮನಸುಗಳ ಯಾದಿಯಲ್ಲಿ ನಿಸ್ಸಂದೇಹವಾಗಿಯೂ ನಿರ್ದೇಶಕ ಗುರು ದೇಶಪಾಂಡೆ ಸೇರಿಕೊಳ್ಳುತ್ತಾರೆ. ಸಿನಿಮಾ ಶಾಲೆ ತೆರೆದು ಹೊಸಾ ಪ್ರತಿಭೆಗಳಿಗೆ ಅವಕಾಶ ಮಾಡಿಕೊಡುತ್ತಲೇ, ಹೊಸಾ ಆಲೋಚನೆ ಬಿತ್ತುತ್ತಿರುವ ಗುರು ದೇಶಪಾಂಡೆ ಇದೀಗ `ಪೆಂಟಗನ್’ ಅಂತೊಂದು ಅಚ್ಚರಿಯೊಂದಿಗೆ ಪ್ರೇಕ್ಷಕರನ್ನು ಮುಖಾಮುಖಿಯಾಗುವ ಸನ್ನಾಹದಲ್ಲಿದ್ದಾರೆ.
ಈಗಾಗಲೇ ಟೀಸರ್ ಮೂಲಕ ಸಂಚಲನ ಮೂಡಿಸಿರುವ ಈ ಚಿತ್ರದ ಲಿರಿಕಲ್ ವೀಡಿಯೋ ಸಾಂಗ್ ಒಂದು ಇದೀಗ ಬಿಡುಗಡೆಗೊಂಡಿದೆ. ಪ್ರತೀ ಸಿನಿಮಾಗಳಲ್ಲಿಯೂ ಹಾಡುಗಳಿಗೆ ವಿಶೇಷವಾದ ಪ್ರಾಶಸ್ತ್ಯ ಕೊಡುತ್ತಾ ಬಂದಿರುವ ಗುರು ದೇಶಪಾಂಡೆ, ಪೆಂಟಗನ್ ವಿಚಾರದಲ್ಲಿಯೂ ಅದನ್ನು ಮುಂದುವರೆಸಿದ್ದಾರೆ. `ಬಾ ಹೊರಗೆ ಬಾ’ ಅಂತ ಶುರುವಾಗೋ ಈ ಹಾಡಿನ ಸಾಹಿತ್ಯ. ಅದರ ಹಿನ್ನೆಲೆಯಲ್ಲಿ ಕದಲುವ ದೃಷ್ಯಗಳು ಮತ್ತು ಎಂಥವರನ್ನೂ ಅರೆಕ್ಷಣದಲ್ಲಿಯೇ ಆವರಿಸಿಕೊಳ್ಳಬಲ್ಲ ಸಂಗೀತವನ್ನು ಆಸ್ವಾದಿಸಿದವರೆಲ್ಲ ಥ್ರಿಲ್ ಆಗಿದ್ದಾರೆ. ಬಹುಶಃ ಅದುವೇ ಪೆಂಟಗನ್ ಬಗೆಗಿನ ನಿರೀಕ್ಷೆಯನ್ನು ಮತ್ತಷ್ಟು ತೀವ್ರವಾಗಿಸೋದರಲ್ಲಿ ಯಾವ ಸಂದೇಹವೂ ಇಲ್ಲ.
ಪ್ರತಿಯೊಂದು ವಿಚಾರದಲ್ಲಿಯೂ ಸಿನಿಮಾದ ಆಂತರ್ಯದ ಬಗ್ಗೆ ಪ್ರೇಕ್ಷಕರನ್ನು ಸೆಳೆಯುವುದು, ಕಥೆಯ ಬಗ್ಗೆ ಅನೂಹ್ಯ ಕಲ್ಪನೆಯೊಂದು ನೋಡುಗರ ಮನಸಲ್ಲಿ ತಾನೇ ತಾನಾಗಿ ಬೆಳೆಯುವಂತೆ ನೋಡಿಕೊಳ್ಳುವುದು ನಿರ್ದೇಶಕನೊಬ್ಬನ ಅಸಲೀ ಕಸುಬುದಾರಿಕೆ. ಈ ಹಾಡಿನ ವಿಚಾರದಲ್ಲಿಯೂ ಗುರು ದೇಶಪಾಂಡೆ ಅದನ್ನು ಧಾರಾಳವಾಗಿಯೇ ಪ್ರದರ್ಶಿಸಿದ್ದಾರೆ. ಯಾಕೆಂದರೆ, ಇಲ್ಲಿನ ದೃಷ್ಯಗಳೇ ಒಂದಿಡೀ ಕಥೆಯ ಆತ್ಮವನ್ನು ಬಚ್ಚಿಟ್ಟುಕೊಂಡಂತಿವೆ. ಅವುಗಳ ಮೂಲಕವೇ ಪಾತ್ರಗಳು ತೆರೆದುಕೊಳ್ಳುತ್ತವೆ. ಇದರಲ್ಲಿ ಪ್ರಕಾಶ್ ಬೆಳವಾಡಿ ನಟಿಸಿರೋ ಕಥೆಯ ಹೊಳಹುಗಳು ತೆರೆದುಕೊಳ್ಳುತ್ತವೆ. ಒಟ್ಟಾರೆಯಾಗಿ ಹಾಡು ಮುಗಿದಾಕ್ಷಣವೇ ನೋಡುಗರ ಮನಸಲ್ಲೊಂದು ಕೌತುಕದ ದೊಂದಿ ಹೊತ್ತಿಕೊಳ್ಳುತ್ತೆ. ಅದುವೇ ಈ ಲಿರಿಕಲ್ ವೀಡಿಯೋದ ನಿಜವಾದ ಸಾರ್ಥಕ್ಯ!
ಪೆಂಟಗನ್ ಎಂಬುದು ಪಕ್ಕಾ ಕಮರ್ಶಿಯಲ್ ಅಂಶಗಳನ್ನೊಳಗೊಂಡಿರುವ ಪ್ರಯೋಗಾತ್ಮಕ ಸಿನಿಮಾ. ಇದರೊಳಗೆ ಐದು ಕಥೆಗಳಿವೆ. ಅದರಲ್ಲೊಂದು ಕಥೆಯ ಸಾರಥ್ಯವನ್ನು ಖುದ್ದು ಗುರು ದೇಶಪಾಂಡೆ ಅವರೇ ವಹಿಸಿಕೊಂಡಿದ್ದಾರೆ. ಅದರಲ್ಲಿನ ಕನ್ನಡ ಪರ ಹೋರಾಟಗಾರನ ಪಾತ್ರಕ್ಕೆ ಕಿಶೋರ್ ಜೀವ ತುಂಬಿದ್ದಾರೆ. ಅದರ ಒಂದಷ್ಟು ತುಣುಕುಗಳು ಈಗಾಗಲೇ ಜಾಹೀರಾಗಿ, ವಿವಾದ ಹುಟ್ಟುಹಾಕಿದ್ದೂ ನಡೆದಿದೆ. ಇನ್ನುಳಿದಂತೆ, ಮಿಕ್ಕ ನಾಲಕ್ಕು ಭಿನ್ನ ಕಥೆಗಳನ್ನು ಶಿವಾಜಿ ಸುರತ್ಕಲ್ ಚಿತ್ರದ ಮೂಲಕ ಸದ್ದು ಮಾಡಿದ್ದ ಆಕಾಶ್ ಶ್ರೀವತ್ಸ, ಚಂದ್ರಮೋಹನ್, ರಾಘು ಶಿವಮೊಗ್ಗ ಮತ್ತು ಕಿರಣ್ ಕುಮಾರ್ ನಿರ್ದೇಶನ ಮಾಡಿದ್ದಾರೆ. ಗುರು ದೇಶಪಾಂಡೆ ತಮ್ಮ ಜಿ ಸಿನಿಮಾಸ್ ಬ್ಯಾನರಿನಡಿಯಲ್ಲಿಯೇ ಪೆಂಟಗನ್ ಅನ್ನು ನಿರ್ಮಾಣ ಮಾಡಿದ್ದಾರೆ.