ಭರತ್ ನಟನೆ ಕಂಡು ಅಚ್ಚರಿಗೀಡಾಗಿದ್ದರು ಅಪ್ಪು!
ಸಿನಿಮಾ ಎಂಬ ಮಾಯೆಯ ಸೆಳೆತವೇ ಅಂಥಾದ್ದು. ನಿಜವಾಗಿಯೂ ಎದೆಯೊಳಗೆ ಕಲೆಯ ಬಗ್ಗೆ ಆಸಕ್ತಿ ಅಂತೊಂದಿದ್ದರೆ, ಅದು ಅದೆಷ್ಟು ಗಾವುದ ದೂರದಲ್ಲಿದ್ದರೂ ಬರಸೆಳೆದು ಅಪ್ಪಿಕೊಳ್ಳುತ್ತೆ. ನಿಜವಾದ ಪ್ರತಿಭೆ, ಪರಿಶ್ರಮವಿದ್ದರಂತೂ ಕೊಂಚ ಕಾಡಿಸಿಕೊಂಡಾದರೂ ಗೆಲುವೆಂಬುದು ನಿಕ್ಕಿ. ನೀವೊಮ್ಮೆ ಕನ್ನಡ ಚಿತ್ರರಂಗದತ್ತ ಸೂಕ್ಷ್ಮವಾಗೊಮ್ಮೆ ಕಣ್ಣು ಹಾಯಿಸಿದರೂ ಈ ಮಾತುಗಳು ನಿಜವೆನ್ನಿಸುತ್ತೆ. ಅಂಥಾದ್ದೊಂದು ಮಾಯಕ ಅಸ್ತಿತ್ವದಲ್ಲಿಲ್ಲದೇ ಹೋಗಿದ್ದರೆ, ಅದೆಷ್ಟೋ ಪ್ರತಿಭೆಗಳು ಬದುಕಿನ ಯಾವುದೋ ಜಂಜಾಟದಲ್ಲಿ ಕಳೇದುಹೋಗಿ ಬಿಡುವ ಅಪಾಯವಿತ್ತು. ಇದೀಗ ಬಿಡುಗಡೆಗೆ ಸಜ್ಜಾಗಿ ನಿಂತಿರುವ `ಕಡಲ ತೀರದ ಭಾರ್ಗವ’ ಚಿತ್ರದ ನಿರ್ಮಾಪಕ ಕಂ ನಾಯಕ ಭರತ್ ಗೌಡರ ಬದುಕಿನ ಹಾದಿಯತ್ತ ಒಮ್ಮೆ ಕಣ್ಣು ಹಾಯಿಸಿದರೆ, ನಿಮಗೂ ಕೂಡಾ ಮೇಲ್ಕಂಡ ಮಾತುಗಳಿಗೊಂದು ಹೊಸಾ ಪುರಾವೆ ಸಿಕ್ಕಂತೆ ಭಾಸವಾದೀತು!
ಭರತ್ ಗೌಡ ಎಂಬ ಹೆಸರು ಈಗಾಗಲೇ ಚಿತ್ರರಂಗದಲ್ಲಿ ಮೆಲುವಾಗಿ ಸಂಚಲನ ಶುರುವಿಟ್ಟುಕೊಂಡಿದೆ. ಟೀಸರ್ ಮತ್ತು ಟ್ರೈಲರ್ ಮೂಲಕವೇ ಭರತ್ ಅಂಥಾದ್ದೊಂದು ಭರವಸೆಯನ್ನು ಸಿನಿಮಾ ಪ್ರೇಮಿಗಳಲ್ಲಿ ಪ್ರತಿಷ್ಟಾಪಿಸಿದ್ದಾರೆ. ಸಿನಿಮಾ ಅಂದಮೇಲೆ ಒಂದೊಂದು ಜವಾಬ್ದಾರಿಗಳನ್ನು ನಿಭಾಯಿಸೋದೇ ಕಷ್ಟ. ಅಂಥಾದ್ದರಲ್ಲಿ ನಿರ್ಮಾಣದೊಂದಿಗೆ, ನಾಯಕ ನಟನಾಗಿಯೂ ನಟಿಸೋದಿದೆಯಲ್ಲಾ? ಅದೊಂದು ಸಾಹಸ. ಅದನ್ನು ತುಸು ಪ್ರಯಾಸವೆನಿಸಿದರೂ ಲೀಲಾಜಾಲವಾಗಿ ಜಯಿಸಿಕೊಂಡ ಖುಷಿ ಭರತ್ರಲ್ಲಿದೆ. ಪ್ರಚಾರದ ಪಟ್ಟುಗಳನ್ನು ಅನುಸರಿಸದಿದ್ದರೂ ಕೂಡಾ, ತಾನೇ ತಾನಾಗಿ ಈ ಸಿನಿಮಾ ಜನಮಾನಸವನ್ನು ತಲುಪಿಕೊಂಡ ರೀತಿಯ ಬಗ್ಗೆ ಅವರಲ್ಲೊಂದು ಬೆರಗು ಬೆರೆತ ಖುಷಿಯಿದೆ. ಅದು ಒಂದಿಡೀ ಚಿತ್ರತಂಡದಲ್ಲೂ ಪ್ರತಿಫಲಿಸುತ್ತಿದೆ.
ಚಿಕ್ಕಮಗಳೂರಿನ ಮಲ್ಲೇನಹಳ್ಳಿ ಸೀಮೆಯ ರೈತಾಪಿ ಕುಟುಂಬದಿಂದ ಬಂದವರು ಭರತ್ ಗೌಡ. ಹುಟ್ಟಿದೂರು, ಮಂಗಳೂರು ಅಂತೆಲ್ಲ ವ್ಯಾಸಂಗ ಮುಗಿಸಿಕೊಂಡಿದ್ದ ಅವರಿಗೆ, ಓದಿನ ಕಾಲದಲ್ಲಿಯೇ ವಿಪರೀತ ಸಿನಿಮಾ ವ್ಯಾಮೋಹವಿತ್ತು. ಅದರ ನಡುವೆಯೇ ಬ್ಯುಸಿನೆಸ್ ನಡೆಸಿ ಯಶಸ್ವಿಯಾಗಬೇಕೆಂಬ ಆಳವಾದ ಹಂಬಲಿಕೆಯೂ ಇತ್ತು. ಓದೆಲ್ಲ ಮುಗಿಸಿಕೊಂಡ ನಂತರ ಬೆಂಗಳೂರು ಸೇರಿಕೊಂಡು, ತಮ್ಮಿಷ್ಟದ ಬ್ಯುಸಿನೆಸ್ ಕ್ಷೇತ್ರವನ್ನು ಆರಿಸಿಕೊಂಡಿದ್ದ ಭರತ್, ಶ್ರಮ ವಹಿಸಿ ಕನಸನ್ನು ನನಸಾಗಿಸಿಕೊಂಡಿದ್ದರು. ಅವರೊಳಗೆ ಬೆಚ್ಚಗಿದ್ದ ಸಿನಿಮಾ ಕನಸು ಕೂಡಾ ಆ ಹಂತದಲ್ಲಿ ಗರಿಗೆದರಲಾರಂಭಿಸಿತ್ತು. ಸಿಕ್ಕ ಪಾತ್ರಗಳನ್ನು ಬಳಸಿಕೊಂಡು ನಟನಾಗಿ ನೆಲೆ ಕಂಡುಕೊಳ್ಳಬೇಕೆಂಬ ಇರಾದೆಯಿಂದ ಅವಕಾಶದ ಬೇಟೆಗೆ ಅಣಿಯಾಗಲಾರಂಭಿಸಿದ್ದರು.
ಕಡೆಗೂ ಕನಸುಗಾರ ರವಿಚಂದ್ರನ್ ನಟನೆಯ ದಶರಥ ಸಿನಿಮಾ ಮೂಲಕ ನಟನಾಗುವ ಭರತ್ ಕನಸಿಗೆ ಗರಿ ಮೂಡಿಕೊಂಡಿತ್ತು. ಆ ಚಿತ್ರದಲ್ಲಿ ಅವರು ಪುಟ್ಟದೊಂದು ಪಾತ್ರವನ್ನು ನಿರ್ವಹಿಸಿದ್ದರು. ಅದರಲ್ಲಿಯೇ ಚೆಂದಗೆ ನಟಿಸುವ ಮೂಲಕ ಗಮನ ಸೆಳೆಯುವಲ್ಲಿಯೂ ಯಶಸ್ವಿಯಾಗಿದ್ದರು. ಆ ಪಾತ್ರದ ದೆಸೆಯಿಂದಲೇ ಮತ್ತೊಂದಷ್ಟು ನಟನೆಯ ಅವಕಾಶಗಳೂ ಅವರತ್ತ ಸಾಗಿ ಬರಲಾರಂಭಿಸಿದ್ದವು. ಈ ನಡುವೆ ಒಂದೊಳ್ಳೆ ಕಥೆ, ತಂಡ ಸಿಕ್ಕಿದರೆ ತಾವೇ ಮುಖ್ಯಪಾತ್ರದಲ್ಲಿ ನಟಸಬೇಕೆಂಬ ಬಯಕೆಯೊಂದು ಭರತ್ರೊಳಗೆ ಹಬೆಯಾಡಲಾರಂಭಿಸಿತ್ತು. ಅದಾಗಲೇ ಸ್ನೇಹಿತರಾಗಿದ್ದ ನಿರ್ದೇಶಕ ಪನ್ನಗ ಸೋಮಶೇಖರ್ ಒಂದೊಳ್ಳೆ ಕಥೆ ಮಾಡಿಕೊಂಡಿದ್ದರೂ ಕೂಡಾ, ನಿರ್ಮಾಣ ಮಾಡೋರ್ಯಾರೆಂಬ ಯಕ್ಷ ಪ್ರಶ್ನೆಯೊಂದು ಆ ಸ್ನೇಹಿತರ ಬಳಗವನ್ನು ಬಹುವಾಗಿ ಕಾಡಿತ್ತು.
ನಿಮಗೆ ಗೊತ್ತಿಲ್ಲದ ವಿಚಾರವೇನಲ್ಲ; ಹೊಸಬರ ತಂಡಗಳಖು ಅದೆಂಥಾ ಕಥೆ ರೆಡಿ ಮಾಡಿಟ್ಟುಕೊಂಡರೂ ನಿರ್ಮಾಪಕರನ್ನು ಒಲಿಸಿಕೊಳ್ಳುವುದು ಕಷ್ಟ. ಅದರ ಅರಿವು ಭರತ್ ಮತ್ತವರ ಸ್ನೇಹಿತರಿಗೂ ಆಗಿತ್ತು. ಆ ನಂತರ ತಮ್ಮ ತಂಡ ಮತ್ತು ಕಥೆಯ ಕಸುವಿನ ಮೇಲೆ ನಂಬಿಕೆಯಿಟ್ಟು ಈ ಸಿನಿಮಾಗೆ ಗೆಳೆಯ ವರುಣ್ ಜೊತೆ ಸೇರಿ ತಾವೇ ಬಂಡವಾಳ ಹೂಡಲು ಭರತ್ ತೀರ್ಮಾನಿಸಿದ್ದರು. ಆ ನಂತರದಲ್ಲಿ ನಿರ್ದೇಶಕ ಪನ್ನಗ ಸೋಮಶೇಖರ್ ಕಥೆಯನ್ನು ಮತ್ತಷ್ಟು ಬಿಗಿಯಾಗಿಸಿ, ಪಾತ್ರಗಳನ್ನು ಹೊಳಪಾಗಿಸಿ ಚಿತ್ರೀಕರಣಕ್ಕಿಳಿದಿದ್ದರು. ಈ ನಡುವೆ ಆಗಾಗ ಕೊರೋನಾ ಪೀಡೆ ಅಡ್ಡಗಾಲು ಹಾಕಿದರೂ ಲೆಕ್ಕಿಸದೆ ಒಂದಿಡೀ ಚಿತ್ರದ ಚಿತ್ರೀಕರಣ ಸುಸೂತ್ರವಾಗಿ ನಡೆದಿತ್ತು. ಈ ಮೂಲಕ ಭರತ್ ಅವರ ಬಹುಕಾಲದ ಕನಸೊಂದು ದೃಷ್ಯರೂಪ ಧರಿಸಿದಂತೆ ಕಣ್ಮುಂದೆ ನಿಂತಿತ್ತು.
ಕಡಲ ತೀರದ ಭಾರ್ಗವದಲ್ಲಿ ತಮ್ಮ ಪಾತ್ರದ ಬಗ್ಗೆ ಭರತ್ ಅವರಿಗೆ ಅತೀವ ಭರವಸೆ ಇದೆ. ಯಾಕೆಂದರೆ, ವಿಶಿಷ್ಟವಾದ ಕಥಾನಕವನ್ನೊಳಗೊಂಡಿರುವ ಈ ಚಿತ್ರದಲ್ಲಿ ಭರತ್ ಅವರ ಪಾತ್ರವೂ ಭಿನ್ನವಾಗಿದೆ. ಒಂದಷ್ಟು ತಯಾರಿಯಿಲ್ಲದೆ, ಬೇರೆಯದ್ದೇ ತೆರನಾದ ತಾಲೀಮು ನಡೆಸದೆ ಅದನ್ನು ಆವಾಹಿಸಿಕೊಳ್ಳುವುದು ಕಷ್ಟವಿತ್ತು. ಆ ಪಾತ್ರದ ರೂಪುರೇಷೆಗಳನ್ನು ಅರ್ಥ ಮಾಡಿಕೊಂಡು, ಅದಕ್ಕೆ ಬೇಕಾದಂತೆ ಒಗ್ಗಿಕೊಳ್ಳುವ ಕಸರತ್ತಿಗೆ ಒಂದಷ್ಟು ತಿಂಗಳುಗಳು ಸವೆದಿದ್ದವು. ಆ ಪರಿಶ್ರಮವೆಲ್ಲವೂ ತೆರೆ ಮೇಲೆ ಸಾರ್ಥಕ್ಯ ಕಂಡಿದೆ ಎಂಬಂಥಾ ತೃಪ್ತ ಭವವೊಂದೀಗ ಭರತ್ರಲ್ಲಿ ನೆಲೆ ನಿಂತಿದೆ. ಸೂಕ್ಷ್ಮ ಎಳೆಗಳೊಂದಿಗೆ, ಒಳಸುಳಿಗಳೊಂದಿಗೆ ಸಾಗುವ ಈ ಸೈಕಾಲಾಜಿಕಲ್ ಥ್ರಿಲ್ಲರ್ ತನ್ನ ವೃತ್ತಿ ಬದುಕಿನ ದಿಕ್ಕು ಬದಲಾಯಿಸಲಿದೆ ಎಂಬ ತುಂಬು ನಂಬುಗೆಯೂ ಅವರಲ್ಲಿದೆ.
ವಿಶೇಷವೆಂದರೆ, ಪುನೀತ್ ರಾಜ್ ಕುಮಾರ್ ಕೂಡಾ ಭರತ್ ಅವರ ನಟನೆ ನೋಡಿ ಮೆಚ್ಚಿಕೊಂಡಿದ್ದರು. ಆ ಪಾತ್ರದ ಎನರ್ಜಿ, ಹಾವಭಾವಗಳನ್ನು ಅದು ಹೇಗೆ ಕಲಿತಿರೆಂಬಂತೆ ಅಚ್ಚರಿಯಿಂದ ಅಪ್ಪು ಪ್ರಶ್ನಿಸಿದ್ದರಂತೆ. ಭರತ್ ಪಾಲಿಗೆ ಅದೊಂದು ಪ್ರಶಸ್ತಿ ಮತ್ತು ಭರವಸೆ ಇದ್ದಂತೆ. ಅಪ್ಪು ಅಭಿಪ್ರಾಯವೇ ಈ ಸಿನಿಮಾ ನೋಡಿದ ಪ್ರತೀ ಪ್ರೇಕ್ಷಕರಲ್ಲಿಯೂ ಮೂಡಿಕೊಳ್ಳಲಿದೆ ಎಂಬ ಭರವಸೆಯೂ ಅವರಲ್ಲಿದೆ. ತಮ್ಮ ಬ್ಯುಸಿನೆಸ್, ಸಿನಿಮಾಗಳ ನಡುವೆ ಫಿಟ್ನೆಸ್ನತ್ತಲೂ ಪ್ರೀತಿ ಇಟ್ಟುಕೊಂಡಿರುವ ಭರತ್, ತಮ್ಮ ದೇಹವನ್ನೂ ಹೀರೋಗಿರಿಗೆ ಒಗ್ಗಿಸಿಕೊಂಡಿದ್ದಾರೆ. ಅದು ಈ ಸಿನಿಮಾದ ಮಟ್ಟಿಗೂ ಉಪಕಾರಿಯಾಗಿದೆ. ಫಿಟ್ನೆಸ್ ಕ್ಲಾಸ್ಗಳನ್ನೂ ನಡೆಸುತ್ತಿರುವ ಭರತ್, ವ್ಯಹಾರದಾಚೆಗೆ ದೈಹಿಕ ಕಸರತ್ತುಗಳ ಅರಿವು ಮೀಡಿಸಲು ಪ್ರಯತ್ನಿಸುತ್ತಿದ್ದಾರೆ. ಇದೆಲ್ಲದರಾಚೆಗೆ ಕಡಲ ತೀರದ ಭಾರ್ಗವ ಮೂಲಕ ಅವರ ಬದುಕು ಮುಖ್ಯ ಬಿಂದುವಿನತ್ತ ಹೊರಳಿಕೊಂಡಿದೆ. ಈ ಸಿನಿಮಾ ಇದೇ ಮಾರ್ಚ್ 3ರಂದು ರಾಜ್ಯಾದ್ಯಂತ ತೆರೆಗಾಣುತ್ತಿದೆ. ಅದು ಪ್ರೇಕ್ಷಕರಿಗೆಲ್ಲ ಹಿಡಿಸಿ ಗೆಲುವಾಗಲಿ, ಭರತ್ ನಾಯಕ ನಟನಾಗಿ ನೆಲೆ ಕಂಡುಕೊಳ್ಳಲೆಂಬುದು ಸಿನಿ ಶೋಧ ಹಾರೈಕೆ!