ಇದೀಗ ಸಿನಿಮಾ ಪ್ರೇಕ್ಷಕರ ನಡುವೆ ಗಾಢವಾಗಿ ಚರ್ಚೆ ಹುಟ್ಟು ಹಾಕಿರುವ ಚಿತ್ರ ಯಾವುದು ಅಂತೇನಾದರೂ ಪ್ರಶ್ನೆಯೊಂದು ಎದುರಾದರೆ, ಬಹುಪಾಲು ಮಂದಿಯ ಉತ್ತರವಾಗಿ ಹೊರಹೊಮ್ಮುವ ಚಿತ್ರ ಇನಾಮ್ದಾರ್. ಬೇರೆಯದ್ದೇ ಛಾಯೆ, ಕಲ್ಪನಾ ಜಗತ್ತಿಗೆ ಕೈ ಹಿಡಿದು ಕರೆದೊಯ್ಯುವಂಥಾ ಚಹರೆಗಳ ಮೂಲಕ ಈಗಾಗಲೇ ಇನಾಮ್ದಾರ್ ಬಹುನಿರೀಕ್ಷಿತ ಚಿತ್ರವಾಗಿ ದಾಖಲಾಗಿದೆ. ಬಿಡುಗಡೆಯ ಹೊಸ್ತಿಲಲ್ಲಿರುವ ಈ ಸಿನಿಮಾವೀಗ ಸಿಲ್ಕು ಮಿಲ್ಕು ಎಂಬ ಮಾದಕವಾದ, ಉತ್ತರ ಕರ್ನಾಟಕ ಜವಾರಿ ಭಾಷಾ ಸ್ಪರ್ಶ ಹೊಂದಿರುವ ಹಾಡೊಂದರ ಮೂಲಕ ಮತ್ತೆ ಸುದ್ದಿ ಕೇಂದ್ರಕ್ಕೆ ಬಂದಿದೆ. ದೃಷ್ಯ, ಸಂಗೀತ, ಸಾಹಿತ್ಯ ಸೇರಿದಂತೆ ಎಲ್ಲದರಲ್ಲಿಯೂ ಗಮನ ಸೆಳೆಯುವಂತಿರುವ ಈ ಹಾಡೀಗ ಟ್ರೆಂಡಿಗ್ನತ್ತ ದಾಪುಗಾಲಿಡುತ್ತಿದೆ.
ಯಾವತ್ತಿದ್ದರೂ ಈ ನೆಲದ ಘಮ ಹೊದ್ದ ಬೇರೆ ಬೇರೆ ಭಾಗಗಳ ಭಾಷಾ ಶೈಲಿ ಹಾಡಾಗೋದೊಂದು ಬೆರಗು. ವಿಶೇಷವಾಗಿ ಇನಾಮ್ದಾರ್ ಕರಾವಳಿ ಮತ್ತು ಉತ್ತರಕರ್ನಾಟಕಗಳ ನಡುವೆ ಕನೆಕ್ಷನ್ನು ಹೊಂದಿರುವ ಅಪರೂಪದ ಕಥೆಯನ್ನೊಳಗೊಂಡಿದೆ. ಆ ಕಥಾ ಹಂದರಕ್ಕೆ ತಕ್ಕುದಾಗಿ ಈ ಹಾಡು ಮೂಡಿ ಬಂದಿದೆ. ಕುಂಟೂರು ಶ್ರೀಕಾಂತ್ ಬರೆದಿರೋ ಈ ಹಾಡಿಗೆ ರಾಕೇಶ್ ಆಚಾರ್ಯ ಸಂಗೀತ ಸಂಯೋಜನೆ ಮಾಡಿದ್ದಾರೆ. ರವೀಂದ್ರ ಸೊರಗಾವಿ ಮತ್ತು ಇಂದೂ ನಾಗರಾಜ್ ಧ್ವನಿಯಲ್ಲಿ ಈ ಹಾಡು ಮೂಡಿ ಬಂದಿದೆ. ಮಾದಕವಾಗಿದ್ದರೂ ಮುಜುಗರವಾಗದಂತೆ, ಸಭ್ಯತೆಯ ಎಲ್ಲೆ ಮೀರದಂತೆ ಸದರಿ ಹಾಡನ್ನು ದೃಷ್ಯೀಕರಿಸುವಲ್ಲಿ ನಿರ್ದೇಶಕರು ಗೆದ್ದಿದ್ದಾರೆ. ಈ ಮೂಲಕ ನೋಡುಗರಿಗೆಲ್ಲ ಇಷ್ಟವಾಗಿದ್ದಾರೆ.
ಈ ಹಾಡಿನ ಪ್ರಧಾನ ಆಕರ್ಷಣೆ ಎಸ್ತರ್ ನರೋನ್ಹಾ. ಇದಕ್ಕಾಗಿ ಅವರು ಪಡ್ಡೆ ಹೈಕಳ ನಿದ್ದೆಗೆಡಿಸುವಂತೆ ಮೈ ಬಳುಕಿಸಿದ್ದಾರೆ. ಪಕ್ಕಾ ಉತ್ತರ ಕರ್ನಾಟಕ ಸೀಮೆಯ ನೇಟಿವಿಟಿಗನುಸಾರವಾಗಿ, ಒಂದಷ್ಟು ರೆಟ್ರೋ ಶೈಲಿಯನ್ನೂ ಮಿಳಿತವಾಗಿಸಿಕೊಂಡ ಈ ಸಾಂಗು ಎಲ್ಲ ರೀತಿಯಲ್ಲಿಯೂ ಮೈ ಕೈ ತುಂಬಿಕೊಂಡಿದೆ; ಎಲ್ಲ ವರ್ಗದ, ಅಭಿರುಚಿಗಳ ಪ್ರೇಕ್ಷಕರಿಗೂ ಒಂದೇ ಸಲಕ್ಕೆ ಹಿಡಿಸುವಂತೆ ಮೂಡಿ ಬಂದಿದೆ. ಪ್ರಧಾನವಾಗಿ ಸಾಹಿತ್ಯ ಮತ್ತು ಅದನ್ನು ಮತ್ತಷ್ಟು ಚೆಂದಗಾಣಿಸಿರುವ ಸಂಗೀತದಿಂದಲೇ ಸಿಲ್ಕು ಸಾಂಗಿಗೆ ಮತ್ತಷ್ಟು ಮಾದಕತೆ ತಂತಾನೇ ಮೆತ್ತಿಕೊಂಡಂತೆ ಭಾಸವಾಗುತ್ತದೆ.
ಸಂದೇಶ್ ಶೆಟ್ಟಿ ಆಜ್ರಿ ನಿರ್ದೇಶನದ ಇನಾಮ್ದಾರ್ ಈ ಹಿಂದೆ ಬಿಡುಗಡೆಗೊಂಡಿದ್ದ ಟೀಸರ್ ಮೂಲಕವೇ ಸಂಚಲನ ಸೃಷ್ಟಿಸಿತ್ತು. ಅದರ ದೆಸೆಯಿಂದಲೇ ಕಥೆಯ ಬಗೆಗಿನ ಒಂದಷ್ಟು ಹೊಳಹುಗಳು ಕೂಡಾ ಜಾಹೀರಾಗಿದ್ದವು. ಅದರಲ್ಲಿಯೂ ವಿಶೇಷವಾಗಿ ಭೂತ ಕೋಲದ ಚಿತ್ರಣ, ಅದರ ಅಬ್ಬರದ ಮೂಲಕ ಮತ್ತೊಂದಷ್ಟು ನಿರೀಕ್ಷೆಯನ್ನೂ ಇನಾಮ್ದಾರ್ ಹುಟ್ಟು ಹಾಕಿತ್ತು. ಕಾಂತಾರದಂಥಾದ್ದೇ ಗೆಲುವಿಗೆ ಈ ಸಿನಿಮಾ ಮುನ್ನುಡಿ ಬರೆಯುತ್ತೆ ಅಂತೆಲ್ಲ ಸಿನಿಮಾ ಪ್ರೇಮಿಗಳೇ ಮಾತಾಡಿಕೊಂಡಿದ್ದರು. ಇದೀಗ ಸಿಲ್ಕು ಹಾಡಿನ ಮೂಲಕ ಇನಾಮ್ದಾರ್ ಚಿತ್ರ ಮತ್ತೊಂದು ಆಯಾಮದತ್ತ ಹೊರಳಿಕೊಂಡಿದೆ. ಈ ಮಾದಕ ಪ್ರಭೆಯಲ್ಲಿಯೇ ಇನಾಮ್ದಾರ್ ಚಿತ್ರ ಚಿತ್ರಮಂದಿರಗಳತ್ತ ನೆಟ್ಟುಕೊಂಡಿದೆ…